ಪ್ರಕಾಶ್ ಕಂಬತ್ತಳ್ಳಿ ಅವರ ಅಂಕಿತ ಪುಸ್ತಕ ಅಂಗಡಿ ಹಾಗೂ ಪ್ರಕಾಶನ ಸಂಸ್ಥೆ 30ನೇ ವರ್ಷದ ಸಂಭ್ರಮದಲ್ಲಿದೆ. ಆಕಸ್ಮಿಕವಾಗಿ ಆರಂಭವಾದ ಪುಸ್ತಕ ಪ್ರಕಟಣೆ, ಮಾರಾಟದ ಕೈಂಕರ್ಯ ವಿಸ್ತೃತವಾಗಿ ಹಬ್ಬಿ ನಾಡಿನಾದ್ಯಂತ ಮನೆಮಾತಾದ ಬಗೆಯ ಜೊತೆಗೆ ತನ್ನ ಬದುಕಿನ ಕಥೆಯನ್ನೂ ಪ್ರಕಾಶ್ ಕಂಬತ್ತಳ್ಳಿ ವಿವರಿಸಿದ್ದಾರೆ.
- ಪ್ರಿಯಾ ಕೆರ್ವಾಶೆ
ಓಡಿಬಂದ ಹುಡುಗ ಮತ್ತು ಇತರ ಕಥೆಗಳು
‘ಸ್ವತಂತ್ರ್ಯವಾಗಿ ಬದುಕಬೇಕು!’
.. ಮನೆಬಿಟ್ಟು ಬೆಂಗಳೂರಿಗೆ ಓಡಿಬಂದಾಗ ಇದಷ್ಟೇ ನನ್ನ ತಲೆಯಲ್ಲಿದ್ದದ್ದು. ಪಿಯುಸಿ ಪಾಸಾಗಿದ್ದೆ. ಡಾಕ್ಟರ್ ಆಗಿದ್ದ ಅಣ್ಣ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗುವಂತೆ ಒತ್ತಾಯಿಸುತ್ತಿದ್ದರು. ಮನೆಯವರೂ ಅಣ್ಣನ ಬೆಂಬಲಕ್ಕೆ ನಿಂತಿದ್ದರು. ನನಗದು ಸುತಾರಾಂ ಸರಿ ಬರಲಿಲ್ಲ. ರಾತ್ರೋ ರಾತ್ರಿ ಮನೆಬಿಟ್ಟು ಬೆಂಗಳೂರಿಗೆ ಓಡಿಬಂದೆ.
ಮಹಾನಗರಕ್ಕೆ ಬಂದವನಿಗೆ ಮುಂದೇನು ಎಂದು ಗೊತ್ತಿಲ್ಲ. ಗಾಂಧೀನಗರದ ಸಂತೋಷ್ ಥೇಟರ್ ಎದುರಿನ ಬಸ್‌ಸ್ಟಾಂಡ್‌ನಲ್ಲಿ ಎರಡು ದಿನ ಕಳೆದೆ. ಎರಡನೇ ದಿನ ಮಧ್ಯರಾತ್ರಿ ಹನ್ನೆರಡರ ಸುಮಾರು. ಯಾರೋ ಬಂದು ಮೈಗೆ ನೀರು ಸುರಿದರು. ನೋಡಿದರೆ ಒಬ್ಬ ಆಟೋ ಡ್ರೈವರ್. ‘ಇದು ನನ್ನ ಜಾಗ, ಎದ್ದೇಳು’ ಅಂದನಾತ. ಎದ್ದೆ. ಆತ ಬೆಳಗ್ಗೆ ಎದ್ದಾಗಲೂ ಅಲ್ಲೇ ಕೂತಿದ್ದೆ. ಆತ ಕಕ್ಕಾಬಿಕ್ಕಿಯಾಗಿ ನನ್ನ ಬಗ್ಗೆ ವಿಚಾರಿಸಿದರು. ಕರುಣೆ ಬಂದಿರಬೇಕು. ಬಸವನಗುಡಿಯ ಹೊಟೇಲ್ ಒಂದಕ್ಕೆ ಕರೆದುಕೊಂಡು ಹೋಗಿ ಕ್ಲೀನರ್ ಕೆಲಸ ಕೊಡಿಸಿದರು. ಆ ಹೊತ್ತಿಗೆ ಹೊಟೇಲ್‌ನಲ್ಲಿ ಓನರ್ ಇರಲಿಲ್ಲ. ಮೂರನೇ ದಿನ ಬಂದರು. ಬಂದವರೇ, ‘ಇಲ್ಲಿ ಇದ್ದವರಿಗೇ ಕೆಲಸ ಇಲ್ಲ, ನಿನಗೆಲ್ಲಿಂದ ಕೆಲಸ ಕೊಡಲಿ’ ಅಂತ ಹೊರಹಾಕಿದರು. ಮತ್ತೆ ಪ್ರತ್ಯಕ್ಷನಾದ ಆಪದ್ಭಾಂದವ ಆಟೋ ಡ್ರೈವರ್ ನನ್ನನ್ನು ಇನ್ನೊಂದು ಹೊಟೇಲಿಗೆ ಸೇರಿಸಿದರು. ಆ ಹೊಟೇಲು ಮಾಲೀಕರು ನಾನು ಪಿಯುಸಿ ಓದಿದ್ದು ಕೇಳಿ ಸಪ್ಲೈಯರ್ ಕೆಲಸ ನೀಡಿದರು. ನನ್ನ ದುರಾದೃಷ್ಟಕ್ಕೆ ಕೆಲವೇ ದಿನಕ್ಕೆ ಮಾಲೀಕರಿಗೆ ಸಮಸ್ಯೆಯಾಗಿ ಆ ಹೊಟೇಲನ್ನೂ ಮುಚ್ಚಬೇಕಾಗಿ ಬಂತು. ಇದಾಗಿ ಮತ್ತೊಂದು ಹೊಟೇಲು ಸೇರಿಕೊಂಡೆ. ಅಲ್ಲಿಗೆ ಬರುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಸಹಾಯದಿಂದ ಫ್ಯಾಕ್ಟರಿಯಲ್ಲಿ ಕೆಲಸ ಸಿಕ್ಕಿತು. ಮಾಲೀಕರ ಸಹಾನುಭೂತಿಯಿಂದ ಫ್ಯಾಕ್ಟರಿಯಲ್ಲೂ, ಹೊಟೇಲಿನಲ್ಲೂ ಎರಡೆರಡು ಕಡೆ ಕೆಲಸ ಮಾಡಿದೆ. ಮುಂದೆ ಫ್ಯಾಕ್ಟರಿಯಲ್ಲಿ ರಾತ್ರಿ ಕೆಲಸ ಮಾಡಿ ಬೆಳಗ್ಗೆದ್ದು ಕಾಲೇಜಿಗೆ ಹೋಗತೊಡಗಿದೆ.
*
ಬಂಕ್ ಹೊಡೆದವ ಕ್ಲಾಸಿಗೇ ಫಸ್ಟ್!
ಬಿ.ಎ ಯಲ್ಲಿ ಬೆಂಗಳೂರು ಯೂನಿವರ್ಸಿಟಿ ಪ್ರೊಫೆಸರ್‌ಗಳು ಪಾಠ ಮಾಡಲು ಬರುತ್ತಿದ್ದರು. ಬರಗೂರು ರಾಮಚಂದ್ರಪ್ಪ, ಕೆ.ವಿ ನಾರಾಯಣ ಅವರಂಥಾ ಗುರುಗಳು ಸಿಕ್ಕರು. ಅಲ್ಲೊಂದು ಸ್ವಾರಸ್ಯಕರ ಪ್ರಸಂಗ. ಬಿ ಎ ಮೊದಲ ವರ್ಷ ಪಾಸಾಗಿ ಎರಡನೇ ವರ್ಷಕ್ಕೆ ಬಂದಿದ್ದೆ. ಮೊದಲ ಕ್ಲಾಸು, ಮೇಷ್ಟ್ರು ನನ್ನನ್ನು ನೋಡಿ ಗೊಂದಲದಿಂದ ವಿಚಾರಿಸಿದರು, ನಮ್ಮ ನಡುವಿನ ಸಂಭಾಷಣೆ ಹೀಗಿತ್ತು;
‘ಯಾರಪ್ಪಾ ನೀನು?’
‘ಸ್ಟೂಡೆಂಟ್ ಸಾರ್’
‘ಹೌದಾ? ನಾನು ನೋಡಿಯೇ ಇಲ್ಲವಲ್ಲ! ಲಾಸ್ಟ್ ಇಯರ್ ಎಲ್ಲಿದ್ದೆ? ಪಾಸಾಗಿದ್ದೀಯಾ?’
‘ಹೌದು ಸಾರ್, ಪಾಸಾಗಿಯೇ ಬಂದದ್ದು’.
‘ಹೌದಾ, ನಾನು ನೋಡೇ ಇಲ್ಲ..’
‘ನಾನು ನಿಮ್ಮ ಕ್ಲಾಸಿಗೆ ಬಂದೇ ಇಲ್ಲ ಸರ್’
.. ಅವರಿಗೆ ಸಿಟ್ಟು ನೆತ್ತಿಗೇರಿತು. ಸೀದ ಹೆಚ್‌ಓಡಿ ಆಗಿದ್ದ ರಂಗನಾಥ್ ಸರ್ ಚೇಂಬರಿಗೆ ಕರೆದೊಯ್ದರು. ಅಲ್ಲಿ ಮತ್ತೊಂದು ಹಂತದ ವಿಚಾರಣೆ ನಡೆಯಿತು. ನನ್ನ ಕ್ಲಾಸಿನ ಉಳಿದ ವಿದ್ಯಾರ್ಥಿಗಳನ್ನೂ ಕರೆಸಿದರು. ನಾನು ಒಂದು ಕ್ಲಾಸಿಗೂ ಬರದಿದ್ದಕ್ಕೆ ಅವರಿಗೂ ಕಸಿವಿಸಿಯಾಯ್ತು. ಕೊನೆಗೆ ಪರ್ಸಂಟೇಜ್ ಕೇಳಿದರು. ‘ನಂಗೆ 67 ಪರ್ಸೆಂಟ್ ಬಂದಿದೆ ಸರ್’ ಅಂದೆ. ಉಳಿದವರ ಬಳಿ ಕೇಳಿದರು. ಯಾರದ್ದೂ 52 ಪರ್ಸೆಂಟ್‌ಗಿಂತ ಹೆಚ್ಚಿರಲಿಲ್ಲ.
ಒಂದು ಕ್ಷಣ ಅಚ್ಚರಿಯಲ್ಲಿ ಮೌನವಾಗಿ ಕೂತ ರಂಗನಾಥ್ ಸರ್, ‘ನೀನು ಬಾಳ ಒಳ್ಳೆ ಕೆಲಸ ಮಾಡಿದೆ ಬಿಡಪ್ಪಾ. ಕ್ಲಾಸ್‌ಗೆ ಹೋಗದ ಕಾರಣ 67 ಪರ್ಸೆಂಟ್ ಬಂತು. ಹೋಗಿದ್ದರೆ ನಿಂಗೂ 50 ಪರ್ಸೆಂಟ್ ಬರುತ್ತಿತ್ತು’ ಅಂದರು.
ನನ್ನನ್ನು ಗದರಿಸಿದ್ದ ಮೇಷ್ಟ್ರು ಇತ್ತೀಚೆಗೆ ತೀರಿಕೊಂಡರು.
*
ಶಾಪ ಕೊಟ್ಟ ಜಿಎಸ್‌ಎಸ್ ಶಾಪ್ ಉದ್ಘಾಟಿಸಿದರು!
ರಾತ್ರಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಬೆಳಗ್ಗೆ ಕಾಲೇಜಿಗೆ ಹೋಗುತ್ತಿದ್ದೆ. ಕ್ಲಾಸ್‌ಗಳಿಗೆ ಕನಿಷ್ಠ ಹಾಜರಾತಿಯೂ ಇರಲಿಲ್ಲ. ಮೇಷ್ಟ್ರುಗಳು ತರಾಟೆಗೆ ತೆಗೆದುಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು. ಎಂ.ಎಯಲ್ಲೂ ಇದೇ ಮುಂದುವರಿದಿತ್ತು.
ಜಿ.ಎಸ್. ಶಿವರುದ್ರಪ್ಪ ಸಿಟ್ಟಲ್ಲಿ ಶಾಪ ಕೊಟ್ಟಿದ್ದರು, ‘ಲೈಫಲ್ಲಿ ಎಂದೆಂದೂ ಪಾಸಾಗಲ್ಲ’ ಅಂತ. ಆದರೆ ಎಂ.ಎಯಲ್ಲಿ ನನಗೆ ಗೋಲ್ಡ್ ಮೆಡಲ್ ಬಂದಿತ್ತು. ಆಗಿನ ರಾಜ್ಯಪಾಲ ಗೋವಿಂದ ನಾರಾಯಣ ಚಿನ್ನದ ಪದಕ ನೀಡಿ ಗೌರವಿಸಿದ್ದರು. ಪ್ರೀತಿಯಲ್ಲೇ ನ್ನ ಗದರುತ್ತಿದ್ದ ಜಿಎಸ್‌ಎಸ್ ಅವರೇ ಮುಂದೆ ಇತರ ಗಣ್ಯರೊಂದಿಗೆ ಅಂಕಿತ ಪುಸ್ತಕ ಮಳಿಗೆ ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು.
*
ಹಂಪಿ ವಿವಿ ದಿನಗಳು
ಎಂ.ಎ ಆಗಿ ಪಿಎಚ್‌ಡಿ ಆದ ಬಳಿಕ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ಉಪ ನಿರ್ದೇಶಕರ ಹುದ್ದೆಗೆ ಆಹ್ವಾನ ಬಂತು. ಕರೆದವರು ಡಾ. ಚಂದ್ರಶೇಖರ ಕಂಬಾರ. ಅವರು ಆಗ ಅಲ್ಲಿ ಉಪ ಕುಲಪತಿಗಳಾಗಿದ್ದರು. ನನ್ನ ಪಿಎಚ್‌ಡಿ ಗೈಡ್ ಆಗಿದ್ದ ಕೆ.ವಿ. ನಾರಾಯಣ ಅಲ್ಲಿ ರಿಜಿಸ್ಟ್ರಾರ್ ಆಗಿದ್ದರು. ಒಂದಿಷ್ಟು ಸವಾಲುಗಳ ನಡುವೆ ಅಲ್ಲಿ ಸೇರಿಕೊಂಡೆ. ಮುಂದೆ ಒಂದೇ ವರ್ಷದಲ್ಲಿ ಕಂಬಾರರ ಜೊತೆಗೆ ಭಿನ್ನಾಭಿಪ್ರಾಯ ಬಂದು ಆ ಹುದ್ದೆ ತ್ಯಜಿಸಿ ಬೆಂಗಳೂರಿಗೆ ಬಂದೆ. ಮುಂದೆ ಅಂಕಿತ ಪ್ರಕಾಶನ ಮಾಡಿದ ಮೇಲೆ ಕಂಬಾರರ 40 ಪುಸ್ತಕ ಪ್ರಕಟಿಸಿದೆ.
*
ಧಾರಾವಾಹಿಯಿಂದ ಪುಸ್ತಕದಂಗಡಿಗೆ
ಹಂಪಿ ವಿವಿಯಿಂದ ಹೊರಬಂದಮೇಲೆ ಟಿ.ಎನ್. ಸೀತಾರಾಂ ಅವರ ಜೊತೆಗೆ ಧಾರಾವಾಹಿ ತಂಡ ಸೇರಿಕೊಂಡೆ.
ಪಿ. ಶೇಷಾದ್ರಿ, ನಾನು, ನಾಗೇಂದ್ರ ಶಾ ಅವರ ಅಸಿಸ್ಟೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದೆವು. ಆದರೆ ಸೀತಾರಾಮ್ ಅವರು ಗೌರಿಬಿದನೂರಿನಿಂದ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಸೀರಿಯಲ್ ಕ್ಷೇತ್ರ ತೊರೆದರು. ಶೇಷಾದ್ರಿ ಅವರು ಸಿನಿಮಾ ರಂಗಕ್ಕೆ ಹೋದರು, ನಾಗೇಂದ್ರ ಶಾ ಸೀರಿಯಲ್‌ನಲ್ಲೇ ಮುಂದುವರಿದರು. ನಾನು ಪುಸ್ತಕದಂಗಡಿ ತೆರೆದೆ.
*
ನಾಟಕದಿಂದ ಜೀವನ ನಾಟಕ
ಪಿಎಚ್‌ಡಿಯಲ್ಲಿ ನಾನು ಬರೆದ ಮಹಾಪ್ರಬಂಧವನ್ನು ಮೆಚ್ಚಿಕೊಂಡ ಹಿರಿಯ ವಿದ್ವಾಂಸ ಶ್ರೀನಿವಾಸ ರಾಜು ಅದನ್ನು ಪ್ರಕಟಿಸಲು ಸೂಚಿಸಿದರು. ಆಗಿನ ಪ್ರಸಿದ್ಧ ಪ್ರಕಾಶಕರಲ್ಲಿ ಪ್ರಕಟಿಸುವಂತೆ ಕೇಳಿದೆ. ಅವರು ಹಸ್ತಪ್ರತಿ ತೆಗೆದುಕೊಂಡು ಕೆಲವು ದಿನ ಇಟ್ಟು ವಾಪಾಸ್ ಕೊಟ್ಟರು. ‘ನಮ್ಮಲ್ಲಿ ಈ ಥರದ ಪುಸ್ತಕ ಪ್ರಿಂಟ್ ಮಾಡಲ್ಲ’ ಅಂದುಬಿಟ್ಟರು. ಏನು ಮಾಡಲಿ ಎಂದು ಯೋಚಿಸುತ್ತಿದ್ದಾಗ ಹಿರಿಯ ಪತ್ರಕರ್ತೆ ಡಾ. ವಿಜಯಮ್ಮ, ‘ನೀವೇ ಪಬ್ಲಿಷ್ ಮಾಡಿ, ನಮ್ಮ ಇಳಾ ಪ್ರಿಂಟರ್ಸ್ ಮೂಲಕ ನಾನು ಪ್ರಿಂಟ್ ಮಾಡಿ ಕೊಡುತ್ತೇನೆ’ ಅಂದರು. ನಾನು ಒಪ್ಪಿಕೊಂಡೆ. ಅಂಕಿತ ಪ್ರಕಾಶನದ ಮೊದಲ ಕೃತಿಯಾಗಿ ‘ರಂಗವಿಹಾರ’ ಪ್ರಕಟವಾಯ್ತು. ಆಮೇಲೆ ಐದು ಪುಸ್ತಕ ಪ್ರಕಟಿಸಿದೆ. ಎಲ್ಲ ಸೇರಿ ಒಟ್ಟು ಆರು ಸಾವಿರ ಪ್ರತಿಗಳು! ಅದನ್ನು ಇಡೋದಿಲ್ಲಿ? ಪುಸ್ತಕದಂಗಡಿ ತೆರೆದರೆ ಅದರಲ್ಲಿ ಇಡಬಹುದಲ್ಲಾ ಎಂಬ ಯೋಚನೆ ಬಂತು. ಹಾಗೆ ಶುರುವಾದದ್ದು ಅಂಕಿತ ಪುಸ್ತಕ.
*
ಪ್ರಭಾ ಪರಿಣಯ
ಪ್ರಭಾ ಮತ್ತು ನನ್ನದು ಲವ್ ಮ್ಯಾರೇಜು. ಎಂ.ಎ ಓದುತ್ತಿದ್ದಾಗ ಪರಿಚಯವಾದದ್ದು, ಸ್ನೇಹವಾಯ್ತು. ಮುಂದೆ ಯೂನಿವರ್ಸಿಟಿ ಮೇಷ್ಟರೇ ಮುಂದೆ ನಿಂತು ಆರ್ಯ ಸಮಾಜದಲ್ಲಿ ನಮ್ಮಿಬ್ಬರ ಮದುವೆ ಮಾಡಿದರು.
ಕೆ.ವಿ. ನಾರಾಯಣ, ಜಿ.ಎಸ್. ಶಿವರುದ್ರಪ್ಪ, ಚಿದಾನಂದ ಮೂರ್ತಿ, ಎಚ್.ಎಸ್. ಶ್ರೀಮತಿ ಮೊದಲಾದವರೆಲ್ಲ ಮದುವೆಗೆ ಬಂದಿದ್ದರು. ಪ್ರಭಾ ನನ್ನ ಜೀವನ ಸಾಥಿಯಾಗುವ ಜೊತೆಗೆ ಅಂಕಿತ ಪುಸ್ತಕ ಯಾನದಲ್ಲೂ ಜೊತೆ ಜೊತೆಗೆ ನಡೆದುಬರುತ್ತಿದ್ದಾಳೆ. ಪುಸ್ತಕದ ವಿಚಾರಕ್ಕೆ ನಮ್ಮ ನಡುವೆ ಕೋಳಿ ಜಗಳಗಳಾಗುವುದು ಕಾಮನ್. ಸ್ನೇಹ, ಪ್ರೀತಿಯ ಜೊತೆ ಅಭಿರುಚಿಯೂ ಜೊತೆಯಾಗಿ ನಮ್ಮಿಬ್ಬರನ್ನೂ ಈವರೆಗೆ ತಂದು ನಿಲ್ಲಿಸಿದೆ.
*
ನಾಟಕ ಪ್ರೀತಿ
ನಾನು ಡಿಗ್ರಿ ಮಾಡಿದ್ದು ರಂಗಭೂಮಿಯಲ್ಲಿ. ಮುಖ್ಯಮಂತ್ರಿ ಚಂದ್ರು, ಬಿ.ವಿ. ರಾಜಾರಾಂ ಇವರೆಲ್ಲ ನನ್ನ ಕ್ಲಾಸ್‌ಮೇಟ್ಸ್. ನಾಗಾಭರಣ, ಶ್ರೀನಿವಾಸ ಪ್ರಭು ಸೀನಿಯರ್ಸ್. ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ ನನ್ನ ಜೂನಿಯರ್. ಅನೇಕ ನಾಟಕ ಕೃತಿ ಬರೆದಿದ್ದೇನೆ. ಎಲ್ಲ ನಾಟಕಗಳು ಪ್ರದರ್ಶನ ಕಂಡು ಜನಮೆಚ್ಚುಗೆ ಪಡೆದಿವೆ, ಎಲ್ಲ ನಾಟಕಗಳೂ ಚಂದನದಲ್ಲಿ ಪ್ರಸಾರ ಕಂಡಿವೆ. ‘ಅನ್ವೇಷಕರು’ ಎನ್ನುವ ನಾಟಕ 3000ಕ್ಕೂ ಅಧಿಕ ಪ್ರದರ್ಶನ ಕಂಡಿದೆ.
*
ಲೇಖಕರನ್ನು ಸಂಭಾಳಿಸುವ ಕಲೆ
ಯು.ಆರ್. ಅನಂತಮೂರ್ತಿ, ಕಾರ್ನಾಡ್, ಗೋರೂರು ರಾಮಸ್ವಾಮಿ ಅಯ್ಯಂಗಾರ್ ಸೇರಿದಂತೆ ಅನೇಕ ಲೇಖಕರು ನಮ್ಮ ಪುಸ್ತಕದಂಗಡಿ ಬರುತ್ತಿದ್ದರು. ಇಂಥವರಲ್ಲದೇ ವಿರುದ್ಧ ಮನಸ್ಥಿತಿಯ ಲೇಖಕರೂ ಬರುತ್ತಿದ್ದರು. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗ್ತಿರಲಿಲ್ಲ. ನಾನು ಇಬ್ಬರನ್ನೂ ನಿಭಾಯಿಸುತ್ತಿದ್ದೆ. ಅವರೆಲ್ಲರ ಪುಸ್ತಕ ಪ್ರಕಟ ಮಾಡುತ್ತಿದ್ದೆ. ವಿರುದ್ಧ ಮನಸ್ಥಿತಿಯ ಸಾಹಿತಿಗಳು ಭೇಟಿ ಆಗದ ರೀತಿ ಪ್ಲಾನ್ ಮಾಡುತ್ತಿದ್ದೆವು. ಅವರು ತಮಗೆ ಆಗದವರ ಬಗ್ಗೆ ವಿಚಾರಿಸುತ್ತಿದ್ದ ಬಗೆಯೂ ಮಜವಾಗಿರುತ್ತಿತ್ತು.
*
ಭಿಕ್ಷುಕ ಮತ್ತು ಕಂಬತ್ತಳ್ಳಿ
‘ಏ ಕಂಬತ್ತಳ್ಳಿ’
ಹೀಗೊಂದು ಕೂಗು ನಮ್ಮ ಅಂಗಡಿ ಮೆಟ್ಟಿಲ ಮೇಲಿಂದ ಕೇಳಿದರೆ ಸಾಕು, ನಾನು ಒಳಗೋಡಿ ಕೈಗೆ ಸಿಕ್ಕ ದುಡ್ಡನ್ನು ಆತನ ಕೈಯಲ್ಲಿಡುತ್ತಿದ್ದೆ.
ಅವನೊಬ್ಬ ಭಿಕ್ಷುಕ. ಬಹುಶಃ ಓದಿದವನಿರಬೇಕು. ಅಂಗಡಿ ಮುಂದೆ ನಿಂತು ನನ್ನ ಹೆಸರನ್ನು ಜೋರಾಗಿ ಕೂಗಿ ಭಿಕ್ಷೆ ಕೇಳುತ್ತಿದ್ದ. ಅಂಗಡಿಯಲ್ಲಿದ್ದ ಜನ ತಿರು ತಿರುಗಿ ನೋಡುತ್ತಿದ್ದರು. ಯಾವುದೋ ಕಾಲದಲ್ಲಿ ಇಬ್ಬರೂ ಭಿಕ್ಷೆ ಬೇಡ್ತಾ ಇದ್ದರು ಅನಿಸುತ್ತೆ, ಇವರೇನೋ ಹೀಗಾಗಿದ್ದಾರೆ, ಅವನು ಹಂಗೇ ಉಳ್ಕೊಂಡಿದ್ದಾನೆ ಅನ್ನೋ ಥರ ಜನ ಮುಖ ಮುಖ ನೋಡುತ್ತಿದ್ದರು.
ಕೋವಿಡ್ ಸಮಯದವರೆಗೆ ಭಿಕ್ಷುಕ ಆಗಾಗ ಬರುತ್ತಿದ್ದ. ಆಮೇಲೆ ಏಕಾಏಕಿ ನಾಪತ್ತೆಯಾದ.
*
ಲೇಖಕರನ್ನು ಅಟ್ಟಿಸಿಕೊಂಡು ಹೋದ ಓದುಗ
ತುಂಬಾ ಪುಸ್ತಕ ಓದುತ್ತಿದ್ದ ಉದ್ಯಮಿಯೊಬ್ಬರು ನಮ್ಮ ಪುಸ್ತಕದಂಗಡಿಗೆ ಆಗಾಗ ಬರುತ್ತಿದ್ದರು. ಒಮ್ಮೆ ಹೆಸರು ಮಾಡಿದ ಹಿರಿಯ ಲೇಖಕರೊಬ್ಬರು ಅಂಗಡಿಗೆ ಬಂದಿದ್ದರು. ಈ ಓದುಗರೂ ಅಲ್ಲಿದ್ದರು. ಸುಮ್ಮನಿರಲಾರದೇ ಅವರಿಬ್ಬರಿಗೂ ಪರಿಚಯ ಮಾಡಿಸಿದೆ. ಆ ಓದುಗರು ಸೌಜನ್ಯದ ಮಾತಾಡಿ ಸುಮ್ಮನಾಗ್ತಾರೆ ಅಂದುಕೊಂಡಿದ್ದೆ. ಅದರೆ ಸನ್ನಿವೇಶ ಕಂಪ್ಲೀಟ್ ಉಲ್ಟಾ ಆಯ್ತು. ‘ಯಾಕ್ ಸ್ವಾಮಿ ಅಂಥಾ ಪುಸ್ತಕಗಳನ್ನೆಲ್ಲ ಬರೀತೀರ, ಯಾವನಿಗೆ ಬೇಕಾಗಿದೆ ಆ ಥರ ಬರಹ’ ಅಂತ ನೇರವಾಗಿ ವಾಗ್ದಾಳಿ ಶುರು ಮಾಡಿದರು. ಆ ಲೇಖಕರ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬೇರೆ ಬಂದಿತ್ತು. ಅಲ್ಲಿದ್ದ ಜನರ ಮುಂದೆ ಈ ಪುಣ್ಯಾತ್ಮ ಹಾಗಂದರೆ ಲೇಖಕರಿಗೆ ಹೇಗಾಗಬೇಡ, ಅವರು ಆತನಿಂದ ತಪ್ಪಿಸಿಕೊಂಡು ಒಳಗೆ ಓಡಿದರು. ಆತ ಬಿಡಲಿಲ್ಲ, ಅವರ ಹಿಂದೆಯೇ ಹೋಗಿ ವಾಗ್ದಾಳಿ ಮುಂದುವರಿಸಿದರು. ಕೊನೆಗೆ ಆ ಲೇಖಕರು ನಾನು ಕಾಫಿ ತರಿಸುವಷ್ಟು ಹೊತ್ತೂ ಕಾಯದೇ ಅಲ್ಲಿಂದ ಹೊರಟುಬಿಟ್ಟರು.
*
ಅಂಕಿತದ ಸಿಓ ಬಗ್ಗೆ ಗೊತ್ತಾ?
ಲೇಖಕರಿಗೆ ಅಂಕಿತದ ಸಿಓ ಬಗ್ಗೆ ಗೊತ್ತಿದ್ದೇ ಇರುತ್ತದೆ. ಡುಂಡಿರಾಜ್ ಅವ್ರು ಈ ಬಗ್ಗೆ ತಮ್ಮ ಲೇಖನದಲ್ಲೂ ಬರೆದಿದ್ದರು. ಹೆಚ್‌ಎಸ್‌ವಿ ಅವರಿಗೆ ನಮ್ಮ ಪುಸ್ತಕದಂಗಡಿ ಸಿಓ ಅಂದರೆ ಭಲೇ ಪ್ರೀತಿ. ಅವರು ಬರೋ ಮುಂಚೆ ಕಾಲ್ ಬರ್ತಿತ್ತು. ‘ಬರ್ತಾ ಇದ್ದೀನಿ, ಬಂದಮೇಲೆ ಸಿಓ ತರಿಸಿ’ ಅಂತ. ಅಷ್ಟಕ್ಕೂ ಸಿಓ ಅಂದರೆ ಕಾಫಿ ಅಂತ. ಕಾಫಿಯ ಮೊದಲ ಎರಡು ಸ್ಪೆಲ್ಲಿಂಗ್ ಈ ಸಿಓ ಅಷ್ಟೇ. ನಮ್ಮಲ್ಲಿ 300 ಲೇಖಕರಿದ್ದಾರೆ. ಶೇ.90ರಷ್ಟು ಒಳ್ಳೆಯ ಸಂಬಂಧ ಉಳಿಸಿಕೊಂಡಿದ್ದೇನೆ. ಕೆಲವು ಲೇಖಕರಿಗೆ ಅಸಮಾಧಾನವೂ ಇದೆ. ಇತ್ತೀಚೆಗೆ ಪ್ರಸಿದ್ಧ ಲೇಖಕರೊಬ್ಬರು ತನ್ನ ಬಗ್ಗೆ ಬಂದ ವಿಮರ್ಶೆಯ ಪುಸ್ತಕ ಕೊಟ್ಟು ಪ್ರಕಟಿಸಲು ಹೇಳಿದರು. ಅದು 600 ಪುಟ ಇತ್ತು. ಅಂಥಾ ಪುಸ್ತಕಗಳಿಗೆ ಓದುಗರು ಸಿಗೋದು ಕಷ್ಟವಾದ ಕಾರಣ ವಿನಯದಿಂದಲೇ ನಿರಾಕರಿಸಿದೆ. ಸಿಟ್ಟಾದ ಲೇಖಕರು ಮಾತು ಬಿಟ್ಟರು.
*
ಅಂಗಡಿ ಸುಟ್ಟುಬಿಡ್ತೀವಿ ಅಂದಿದ್ದರು
ಸಾಮಾನ್ಯವಾಗಿ ನಾವು ವಿವಾದ ಹುಟ್ಟಿಸುವಂಥಾ ಪುಸ್ತಕ ಪ್ರಕಟಿಸೋದಿಲ್ಲ. ಆದರೆ ಒಂದು ಸಲ ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರ ಜೀವನಚರಿತ್ರೆ ‘ಹಳ್ಳಿ ಹಕ್ಕಿ’ ಪ್ರಕಟಿಸಿದ್ದೆವು. ಅದರಲ್ಲಿ ಅವರು ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗುವ ಮೊದಲು ಅವರಿಗೂ ಬಿ. ಸರೋಜಾ ದೇವಿ ಅವರಿಗೂ ಸಂಬಂಧ ಇತ್ತು ಎಂದು ಬರೆದಿದ್ದರು. ಅದನ್ನು ಎಸ್.ಎಂ. ಕೃಷ್ಣ ಅವರೂ ಅಲ್ಲಗಳೆದಿರಲಿಲ್ಲ. ಆದರೆ ಅವರ ಅಭಿಮಾನಿಗಳು ದೊಡ್ಡ ಗಲಾಟೆ ಎಬ್ಬಿಸಿದ್ದರು. ಮೈಸೂರಲ್ಲಿ ಆಯೋಜನೆಗೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಲಾಠಿ ಚಾರ್ಜ್ ಆಗುವ ತನಕ ಗಲಭೆ ಎಬ್ಬಿಸಿದರು. ಕೊನೆಗೆ ಕಾರ್ಯಕ್ರಮ ನಡೆಯಲಿಲ್ಲ. ಪೊಲೀಸ್ ವ್ಯಾನ್‌ನಲ್ಲಿ ನಮ್ಮನ್ನು ಶ್ರೀರಂಗಪಟ್ಟಣವರೆಗೆ ತಂದುಬಿಡಲಾಯ್ತು. ನಿಮ್ಮ ಅಂಗಡಿಗೆ ಬೆಂಕಿ ಹಾಕ್ತೀವಿ ಅಂತೆಲ್ಲ ಸಾಕಷ್ಟು ಮಂದಿ ಬೆದರಿಕೆ ಒಡ್ಡಿದ್ದರು.
*
ದತ್ತಿನಿಧಿ, ಹೊಸಬರಿಗೆ ಪ್ರೋತ್ಸಾಹ
ಕೆರೆಯ ನೀರಲು ಕೆರೆಗೆ ಚೆಲ್ಲಬೇಕು ಅನ್ನುವುದನ್ನು ಬದುಕಿನಲ್ಲಿ ಪಾಲಿಸಿಕೊಂಡು ಬಂದಿದ್ದೇನೆ. ನಾವು ದುಡಿದದ್ದರಲ್ಲಿ ಒಂದಿಷ್ಟು ಮೊತ್ತವನ್ನು ದತ್ತಿ ನಿಧಿಗೆ ನೀಡಿದ್ದೇವೆ. ಪ್ರಕಾಶಕರಿಗೆ ಪ್ರಶಸ್ತಿ ನೀಡುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ
6 ಲಕ್ಷ ರು.ಗಳ ದತ್ತಿ ನಿಧಿ ಇಟ್ಟಿದ್ದೇನೆ. ಲೇಖಕಿಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಲೇಖಕಿಯರ ಸಂಘದಲ್ಲಿ
6 ಲಕ್ಷ ರು.ಗಳ ದತ್ತಿನಿಧಿ ಇಡಲಾಗಿದೆ. ಜೊತೆಗೆ ಹೊರನಾಡ ಕನ್ನಡಿಗರಿಗೆ ಪ್ರಶಸ್ತಿ ನೀಡುವ ಸಲುವಾಗಿ 3 ಲಕ್ಷದ ದತ್ತಿ ನಿಧಿ ಇಟ್ಟಿದ್ದೇನೆ.
ಇದಲ್ಲದೇ ಅಂಕಿತ ಪುಸ್ತಕದಿಂದ ಹಲವು ಹೊಸ ಲೇಖಕರ ಪುಸ್ತಕ ಪ್ರಕಟಿಸುತ್ತೇವೆ. ಒಂದೂ ಪುಸ್ತಕ ಪ್ರಕಟವಾಗದ ಪ್ರತಿಭಾವಂತರ ಕೃತಿಗಳನ್ನು ಜೋಗಿ ಅವರ ಸಂಪಾದಕತ್ವದ ‘ಅಂಕಿತ ಪ್ರತಿಭೆ’ ಮಾಲಿಕೆಯಡಿ ಹೊರ ತರುತ್ತೇವೆ.
(ಅಂಕಿತ ಪುಸ್ತಕ ಪ್ರಕಾಶನದ 1000ನೇ ಕೃತಿ ಡಿಸೆಂಬರ್ 28ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.)
