ಕನ್ನಡಪ್ರಭ ವಾರ್ತೆ ಬೆಂಗಳೂರು
ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಆಟೋ ಪ್ರಯಾಣ ದರ ಹೆಚ್ಚಳ ಮಾಡುವಂತೆ 2023ರಿಂದ ಆಟೋ ಚಾಲಕರ ಸಂಘಗಳು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿವೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಎರಡ್ಮೂರು ಬಾರಿ ಸಭೆಯನ್ನೂ ನಡೆಸಲಾಗಿದೆ. ಅಲ್ಲದೆ, ಕಳೆದ ಮಾರ್ಚ್‌ನಲ್ಲಿಯೇ ದರ ಹೆಚ್ಚಳದ ಆದೇಶ ಮಾಡಲಾಗುತ್ತದೆ ಎಂದೂ ಹೇಳಲಾಗಿತ್ತು. ಆದರೆ, ಏಪ್ರಿಲ್ ತಿಂಗಳು ಮುಕ್ತಾಯವಾಗುತ್ತಿದ್ದರೂ ಇನ್ನೂ ದರ ಹೆಚ್ಚಳ ಮಾಡದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಆಟೋ ಚಾಲಕರು, ಶೀಘ್ರದಲ್ಲಿ ಆಟೋ ಪ್ರಯಾಣ ದರ ಹೆಚ್ಚಳದ ಆದೇಶ ಹೊರಡಿಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಟೋ ಚಾಲಕರ ಸಂಘದ ರುದ್ರಮೂರ್ತಿ, ನಿಯಮದಂತೆ ಪ್ರತಿ 3 ವರ್ಷಕ್ಕೊಮ್ಮೆ ಆಟೋ ಪ್ರಯಾಣ ದರದಲ್ಲಿ ಏರಿಕೆಯಾಗಬೇಕು. ಆದರೆ, 2021ರಿಂದ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಸದ್ಯ ಕನಿಷ್ಠ ದರ ಮೊದಲ 2 ಕಿ.ಮೀಗೆ ₹30 ಇದ್ದು, ಅದನ್ನು ₹40ಕ್ಕೆ ಹಾಗೂ ಅದಾದ ನಂತರ ಪ್ರತಿ ಕಿಮೀ ಪ್ರಯಾಣ ದರವನ್ನು ₹15 ರಿಂದ ₹20ಕ್ಕೆ ಹೆಚ್ಚಿಸುವಂತೆ ಮನವಿ ಮಾಡಲಾಗಿದೆ. ಅದರಂತೆ ದರ ಹೆಚ್ಚಳದ ಆದೇಶ ಹೊರಡಿಸಬೇಕು ಎಂದು ಹೇಳಿದ್ದಾರೆ.ಮೀಟರ್ ದರ ಬದಲು ಹೆಚ್ಚು ಹಣ: ಸಂಘರ್ಷ
ಆಟೋ ಗ್ಯಾಸ್ ಸೇರಿದಂತೆ ಇನ್ನಿತರ ಎಲ್ಲ ವಸ್ತುಗಳ ದರ ಹೆಚ್ಚಳವಾಗಿದೆ. ನಿಯಮದಂತೆ ಮೀಟರ್ ದರ ಬದಲು ಪ್ರಯಾಣಿಕರಿಂದ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಇದು ಪ್ರಯಾಣಿಕರು ಮತ್ತು ಆಟೋ ಚಾಲಕರ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತಿದೆ. ಇದನ್ನು ತಪ್ಪಿಸಲು. ಪ್ರಯಾಣ ದರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಆಟೋ ಪ್ರಯಾಣ ದರ ಹೆಚ್ಚಿಸಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಆಟೋ ಪ್ರಯಾಣ ದರ ಹೆಚ್ಚಳ ಮಾಡಬೇಕು ಎಂದು ರುದ್ರಮೂರ್ತಿ ಆಗ್ರಹಿಸಿದ್ದಾರೆ.