ಮಯೂರ್ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರುಪಹಲ್ಗಾಂ ಉಗ್ರ ದಾಳಿ ಹಿನ್ನೆಲೆಯಲ್ಲಿ ಕಾಶ್ಮೀರದಿಂದ ಡ್ರೈ ಫ್ರೂಟ್ಸ್ ಸಾಗಾಟ ಬಹುತೇಕ ಸ್ಥಗಿತಗೊಂಡಿರುವ ಪರಿಣಾಮ ಒಂದೇ ವಾರದಲ್ಲಿ ಇಲ್ಲಿನ ಶಿವಾಜಿನಗರದ ರಸೆಲ್ ಸೇರಿ ಇತರ ಡ್ರೈಫ್ರೂಟ್ಸ್ ಮಾರುಕಟ್ಟೆಗೆ ಬಿಸಿ ತಟ್ಟಿದ್ದು, ದರ ದುಬಾರಿಯಾಗಿದೆ.
ಪ್ರಮುಖವಾಗಿ ಕಾಶ್ಮೀರದಿಂದ ಬರುವ ಕೇಸರಿ, ಏಪ್ರಿಕಾಟ್, ವಾಲ್‌ನಟ್, ವಾಲ್‌ನಟ್ ಎಣ್ಣೆ, ಶಿಲಾಜಿತ್, ಗುಲ್ಕನ್, ಚಿಕ್ಕ ಬಾದಾಮಿ, ಜೇನುತುಪ್ಪ ಸೇರಿ ಇತರೆ ಪ್ಲಮ್ ಡ್ರೈಫ್ರೂಟ್ ಉತ್ಪನ್ನಗಳ ಸಾಗಾಟದಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಬೆಂಗಳೂರಿನ ಹೋಲ್‌ಸೆಲ್ ಡ್ರೈಫ್ರೂಟ್ಸ್ ವ್ಯಾಪಾರಸ್ಥರಿಗೆ ಇವುಗಳ ಪೂರೈಕೆ ಆಗುತ್ತಿಲ್ಲ ಎಂದು ವರ್ತಕರು ತಿಳಿಸಿದ್ದಾರೆ.ಜತೆಗೆ ಅಫ್ಘಾನಿಸ್ತಾನದಲ್ಲಿ ಈಗ ಅಂಜುರ ಡ್ರೈಫ್ರೂಟ್ ಸೀಸನ್ ಜೋರಾಗಿದೆ. ಅಲ್ಲಿಂದ ಒಣಹಣ್ಣು ತರುವ ಸುಮಾರು 300 ಗೂಡ್ಸ್‌ಗಳು ಅಟಾರಿ ಗಡಿಯಲ್ಲಿ ನಿಂತಿವೆ. ಇದರಿಂದಲೂ ಸಮಸ್ಯೆ ಆಗುವ ಸಾಧ್ಯತೆಯಿದೆ. ಡ್ರೈಫ್ರೂಟ್‌ಗಳಿಗೆ ಸ್ಟಾರ್ ಹೊಟೆಲ್‌ಗಳಿಂದ ಹೆಚ್ಚಿನ ಬೇಡಿಕೆಯಿದೆ. ಕೇಸರಿಯನ್ನು ಗರ್ಭಿಣಿಯರು ಬಳಸುತ್ತಾರೆ. ಹೃದಯ ಸಂಬಂಧಿ ಕಾಯಿಲೆ ಇರುವವರು ಕಾಶ್ಮೀರಿ ಗಾರ್ಲಿಕ್ ಬಳಸುತ್ತಾರೆ. ಅದೇ ರೀತಿ ಆರೋಗ್ಯ ಕಾಪಾಡಿಕೊಳ್ಳಲು ಬಳಸುವ ಶಿಲಾಜಿತ್ ಸೇರಿದಂತೆ ಕಾಶ್ಮೀರದಿಂದ ಬರುವ ಎಲ್ಲ ಡ್ರೈಫ್ರೂಟ್‌ಗಳ ಬೆಲೆ ಏರಿಕೆಯಾಗಿದೆ.
ಮಾರ್ಚ್‌ನಿಂದ ಜೂನ್‌ವರೆಗೆ ಈ ಡ್ರೈಪ್ರೂಟ್‌ಗಳ ಸೀಸನ್ ಹೆಚ್ಚು. ಪಾಂಪೂರ್‌ನ ಪ್ರಮುಖ ಬೆಳೆ ಕೇಸರಿ ಸೇರಿದಂತೆ ಪಹಲ್ಗಾಂ, ಶ್ರೀನಗರದ ರೈತರ ಜಮೀನುಗಳು ಬೆಟ್ಟಗಳ ಹೈವೇ ಪಕ್ಕದಲ್ಲಿವೆ. ಇದೇ ಸಂದರ್ಭದಲ್ಲಿ ಉಗ್ರ ದಾಳಿ ಆಗಿರುವುದರಿಂದ ವಾಹನಗಳ ಓಡಾಟ ಈ ಭಾಗದಲ್ಲಿ ತಡೆಹಿಡಿಯಲಾಗಿದ್ದು, ಇವುಗಳ ಸಾಗಾಟ ಸಂಪೂರ್ಣ ನಿಂತಿದೆ.ಸಾಗಾಟ ವೆಚ್ಚ ಹೆಚ್ಚಳ:
ಕಾಶ್ಮೀರದ ಡ್ರೈಫ್ರೂಟ್ ಜಮ್ಮುವಿಗೆ ತೆರಳಿ ಅಲ್ಲಿರುವ ದೊಡ್ಡ ಪ್ರಮಾಣದಿಂದ ಸಗಟು ವರ್ತಕರು ದೆಹಲಿಗೆ ತಲುಪಿಸುತ್ತಾರೆ. ಬಳಿಕ ಬೆಂಗಳೂರು ಸೇರಿ ದೇಶದ ವಿವಿಧ ರಾಜ್ಯಗಳಿಗೆ ಪೂರೈಕೆ ಆಗುತ್ತದೆ. ಆದರೆ, ಈಗ ಕಾಶ್ಮೀರದಲ್ಲೇ ಸರಕು ಲೋಡಿಂಗ್ ಆಗದೆ ಉಳಿದಿದೆ. ಕೆಲವರು ಚಿಕ್ಕ ವಾಹನಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಾಗಾಟ ಮಾಡುತ್ತಿದ್ದಾರೆ. ಈ ಹಂತದಲ್ಲಿ ಸಾಗಾಟ ವೆಚ್ಚ ಅಧಿಕವಾಗಿದೆ. ದೆಹಲಿಗೆ ತಲುಪಿ ಅಲ್ಲಿಂದ ರೈಲಿನ ಮೂಲಕ ಬರುತ್ತದೆ. ದೆಹಲಿಯಲ್ಲೂ ಮಧ್ಯವರ್ತಿಗಳು ದರ ಹೆಚ್ಚಿಸುವುದು, ವಿವಿಧ ನಗರಗಳ ಬೇಡಿಕೆಗೆ ತಕ್ಕ ಪೂರೈಕೆ ಇಲ್ಲದಿರುವುದು ದರ ಹೆಚ್ಚಾಗಲು ಕಾರಣ ಎಂದು ತಿಳಿಸಿದರು.ಯಾವ್ಯಾವ ಡ್ರೈಫ್ರೂಟ್ಸ್ ದರ ಏರಿಕೆ?:
ಕಳೆದ ತಿಂಗಳು ಕೇಸರಿ ಒಂದು ಕೇಜಿಗೆ ₹3ಲಕ್ಷ ಇತ್ತು. ಈಗ ಕೇಜಿಗೆ ₹4ಲಕ್ಷ ಆಗಿದ್ದು, ಗ್ರಾಂ ಲೆಕ್ಕದಲ್ಲಿ ಗ್ರಾಹಕರು ಖರೀದಿ ಮಾಡುವಾಗ 1ಗ್ರಾಂ ₹ 400 ಆಗಲಿದೆ. ಏಪ್ರಿಕಾಟ್ ₹ 480- ₹ 500 ಇದ್ದು, ಈಗಲೇ ದರ ಹೆಚ್ಚಾಗಿ ₹700 ತಲುಪಿದೆ. ಕಾಶ್ಮೀರಿ ಗಾರ್ಲಿಕ್ 1ಕೇಜಿ 1800 ಇದ್ದುದು ₹2500 ಆಗಿದೆ. ಕಾಶ್ಮೀರ ವಾಲ್‌ನಟ್ ಕೇಜಿಗೆ ₹500 ಇದ್ದುದು ₹800 ಆಗಿದೆ. ಕಾಶ್ಮೀರ ಅಂಜುರ ₹1200 ಇದ್ದುದು ₹ 1800 ಆಗಿದೆ ಎಂದು ತಿಳಿಸಿದರು. ಮಾಮ್ರಾ ಬಾದಾಮ್ ₹1200 ಇದ್ದುದು 1800 ಆಗಿದೆ. 600-700 ಗ್ರಾಂ ಗುಲ್ಕನ್ ಹನಿ ₹200 ಇದ್ದುದು ಈಗ ₹300 , ಶಿಲಾಜಿತ್ 1ಗ್ರಾಂ ₹ 400 ಇದ್ದುದು ಈಗ ₹900 ಆಗಿದೆ. ಪೂರೈಕೆ ವ್ಯತ್ಯಯ ಮುಂದುವರಿದರೆ ದರ ಇನ್ನಷ್ಟು ಹೆಚ್ಚಾಗಲಿದೆ ಎಂದು ವರ್ತಕರು ತಿಳಿಸಿದರು.ಕಾಶ್ಮೀರದಿಂದ ಬರುವ ಒಣಹಣ್ಣುಗಳ ಪೂರೈಕೆ ಸ್ಥಗಿತವಾಗಿದೆ. ಇದರಿಂದ ಒಂದೇ ವಾರದಲ್ಲಿ ಡ್ರೈಫ್ರೂಟ್ಸ್‌ಗಳ ದರ ಏರಿಕೆಯಾಗಿದ್ದು, ವರ್ತಕರು, ಗ್ರಾಹಕರಿಗೆ ತೊಂದರೆಯಾಗಿದೆ.
-ಮಹ್ಮದ್ ಇದ್ರಿಸ್ ಚೌಧರಿ, ರಸೆಲ್ ಮಾರುಕಟ್ಟೆ ಸಂಘದ ಪ್ರಧಾನ ಕಾರ್ಯದರ್ಶಿ