ಹವಾನಿಯಂತ್ರಿತ ಪಾಲಿಕೆ ಬಜಾರ್‌ಗೆ ಗ್ರಹಣ : 8 ತಿಂಗಳಾದರೂ ಬಳಕೆಯಾಗದ ಮಾರುಕಟ್ಟೆ

KannadaprabhaNewsNetwork | Updated : Apr 29 2025, 07:45 AM IST

ಸಾರಾಂಶ

ವಿಜಯನಗರದಲ್ಲಿ ಬಿಬಿಎಂಪಿಯು ನಿರ್ಮಿಸಿದ ದಕ್ಷಿಣ ಭಾರತದ ಮೊಟ್ಟಮೊದಲ ಅಂಡರ್‌ ಗ್ರೌಂಡ್‌ನ ಹವಾನಿಯಂತ್ರಿತ ಮಾರುಕಟ್ಟೆಯಾದ ಶ್ರೀ ಕೃಷ್ಣದೇವರಾಯ ಪಾಲಿಕೆ ಬಜಾರ್‌ ಉದ್ಘಾಟನೆಯಾಗಿ ಎಂಟು ತಿಂಗಳು ಕಳೆದರೂ ಸಾರ್ವಜನಿಕ ಬಳಕೆಗೆ ಲಭಿಸಿಲ್ಲ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ವಿಜಯನಗರದಲ್ಲಿ ಬಿಬಿಎಂಪಿಯು ನಿರ್ಮಿಸಿದ ದಕ್ಷಿಣ ಭಾರತದ ಮೊಟ್ಟಮೊದಲ ಅಂಡರ್‌ ಗ್ರೌಂಡ್‌ನ ಹವಾನಿಯಂತ್ರಿತ ಮಾರುಕಟ್ಟೆಯಾದ ಶ್ರೀ ಕೃಷ್ಣದೇವರಾಯ ಪಾಲಿಕೆ ಬಜಾರ್‌ ಉದ್ಘಾಟನೆಯಾಗಿ ಎಂಟು ತಿಂಗಳು ಕಳೆದರೂ ಸಾರ್ವಜನಿಕ ಬಳಕೆಗೆ ಲಭಿಸಿಲ್ಲ.

ಮಾರುಕಟ್ಟೆಯ ನಿರ್ಮಾಣ ಆರಂಭದಿಂದಲೂ ಒಂದಲ್ಲಾ ಒಂದು ಅಡೆತಡೆಗಳು ಎದುರಿಸಿ 8 ವರ್ಷದ ಬಳಿಕ ಪೂರ್ಣಗೊಂಡು ಕಳೆದ ಆ.25 ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆಗೊಂಡಿತ್ತು. ಅದಾದ ಬಳಿಕವೂ ಈ ಪಾಲಿಕೆ ಬಜಾರ್‌ಗೆ ಹಿಡಿದ ಗ್ರಹಣ ಬಿಟ್ಟಂತೆ ಕಾಣುತ್ತಿಲ್ಲ. ಕಳೆದ ಎಂಟು ತಿಂಗಳಿನಿಂದ ಖಾಲಿ ಖಾಲಿಯಾಗಿರುವ ಮಳಿಗಳು ಅನಧಿಕೃತ ಬಳಕೆದಾರರ ಪಾಲಾಗಿದೆ.

ಬರೋಬ್ಬರಿ ₹13 ಕೋಟಿ ವೆಚ್ಚದಲ್ಲಿ ಒಟ್ಟು 79 ಅಂಗಡಿ ಮಳಿಗೆ ಸ್ಥಾಪಿಸಲಾಗಿದೆ. ದ್ವಾರಗಳಲ್ಲಿ ಸೆನ್ಸಾರ್‌ ಹೊಂದಿದ 3 ಗ್ಲಾಸ್ ಸ್ಲೈಡಿಂಗ್ ಡೋರ್‌ಗಳು, 2 ಎಸ್ಕಲೇಟರ್‌ಗಳು ಮತ್ತು ಗೂಡ್ಸ್ ಲಿಫ್ಟ್ ಸೌಲಭ್ಯವನ್ನು ಹೊಂದಿದ್ದು, 26 ಒಳಾಂಗಣ, 5 ಹೊರಾಂಗಣ ಎಸಿ ಯೂನಿಟ್ಸ್ ಒಳಗೊಂಡದಂತೆ ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅಷ್ಟೇ ಅಲ್ಲದೇ 1 ಎಲೆಕ್ಟ್ರೀಕಲ್ ರೂಂ, 1 ಸ್ಟೋರ್ ಹಾಗೂ ಆಫೀಸ್ ರೂಂ ಸೇರಿ ಒಟ್ಟು 8 ಎಂಟ್ರಿ- ಎಕ್ಸಿಟ್ ಪಾಯಿಂಟ್‌ಗಳಿದ್ದು, ಪ್ರತಿ ಅಂಗಡಿಗಳಲ್ಲೂ ಅಗ್ನಿ ನಿಯಂತ್ರಕಗಳ ವ್ಯವಸ್ಥೆ ಮಾಡಲಾಗಿದೆ. ಆದರೆ, ಈ ಎಲ್ಲಾವೂ ಇದೀಗ ಧೂಳು ಹಿಡಿದ ಸ್ಥಿತಿಯಲ್ಲಿವೆ.

ಕೆಲವು ದ್ವಾರಗಳನ್ನು ಮುಚ್ಚಲಾಗಿದೆ. ಇನ್ನು ಕೆಲವು ದ್ವಾರಗಳ ತೆರೆದಿವೆ. 1 ಎಸ್ಕಲೇಟರ್‌ ಕಾರ್ಯ ನಿರ್ವಹಿಸುತ್ತಿದ್ದು, ಮತ್ತೊಂದು ಎಸ್ಕಲೇಟರ್‌ ಹಾಗೂ ಲಿಫ್ಟ್‌ ಬಂದ್‌ ಆಗಿದೆ. ಎಸ್ಕಲೇಟರ್‌ ಪಕ್ಕದಲ್ಲಿ ಅಳವಡಿಕೆ ಮಾಡಲಾದ ಗ್ರಿಲ್‌ಗಳು ಶಕ್ತಿ ಕಳೆದುಕೊಂಡು ಅವಸಾನದ ಅಂಚಿಗೆ ಬಂದಿವೆ. ಮಳೆ ಬಂದಾಗ ಕೆಲವು ಮಳಿಗೆಗಳಲ್ಲಿ ನೀರು ಸೋರುತ್ತಿದೆ. ನೀರಿನ ಟ್ಯಾಂಕ್‌ ಪಾಚಿಗಟ್ಟಿದೆ.

ಅನಧಿಕೃತ ವ್ಯಾಪಾರ:

ಬಿಬಿಎಂಪಿಯು ಪಾಲಿಕೆ ಬಜಾರ್‌ನಲ್ಲಿ ಸ್ಥಾಪಿಸಲಾಗಿರುವ 79 ಮಳಿಗೆಗಳಿಗೆ ಟೆಂಡರ್ ಆಹ್ವಾನಿಸಿ ಮಳಿಗೆಗಳಿಗೆ ಬಾಡಿಗೆ ನಿಗದಿ ಪಡಿಸಬೇಕಾಗಿದೆ. ಆದರೆ, ನ್ಯಾಯಾಲಯದಲ್ಲಿ ಕೆಲವು ಪ್ರಕರಣ ದಾಖಲಿಸಿರುವುದರಿಂದ ಅದು ಸಾಧ್ಯವಾಗಿಲ್ಲ. ಈ ನಡುವೆ ಕೆಲವು ವ್ಯಾಪಾರಿಗಳು ಅನಧಿಕೃತವಾಗಿ ಮಳಿಗೆ ಒಳಗೆ ಸೇರಿಕೊಂಡಿದ್ದು, ಅವರಿಗೂ ವ್ಯಾಪಾರವಿಲ್ಲ. ಕೆಲವರು ಈ ಮಳಿಗೆಗಳನ್ನು ಗೋದಾಮುಗಳಾಗಿ ಮಾಡಿಕೊಂಡಿದ್ದು, ಬೆಳಗ್ಗೆ ಇಲ್ಲಿಂದ ಮಾರಾಟದ ವಸ್ತುಗಳನ್ನು ತೆಗೆದುಕೊಂಡು ಹೋಗಿ ಸಂಜೆ ಉಳಿದ ವಸ್ತುಗಳನ್ನು ತಂದು ಇಡುತ್ತಾರೆ.

ಮಧ್ಯದ ಪ್ಯಾಕೇಟ್‌, ಧೂಳು, ಕಸದ ರಾಶಿ:

ಪಾಲಿಕೆ ಬಜಾರ್‌ನಲ್ಲಿ ನಿರ್ವಹಣೆ ಇಲ್ಲದೇ ಧೂಳು ತುಂಬಿಕೊಂಡಿದೆ. ಅಲ್ಲಲ್ಲಿ ಕಸದ ರಾಶಿಯನ್ನು ಕಾಣಬಹುದಾಗಿದೆ. ಜತೆಗೆ, ಮಧ್ಯದ ಪ್ಯಾಕೇಟ್‌ ಬಿದ್ದಿರುವ ದೃಶ್ಯಗಳು ಕಂಡು ಬಂದಿವೆ. ನಿರ್ವಹಣೆ ಮಾಡಬೇಕಾದ ಬಿಬಿಎಂಪಿಯ ಎಂಜಿನಿಯರಿಂಗ್‌ ಹಾಗೂ ಮಾರಕಟ್ಟೆ ವಿಭಾಗದ ಅಧಿಕಾರಿಗಳು ಪರಸ್ಪರ ದೂರು ಹೇಳಿಕೊಂಡು ಓಡಾಡುತ್ತಿದ್ದಾರೆ.

ಪಾಲಿಕೆ ಅಧಿಕಾರಿಗಳೂ ಶಾಮೀಲು?:

ಹಲವು ತಿಂಗಳಿನಿಂದ ಅಕ್ರಮವಾಗಿ ಕೆಲವರು ಮಳಿಗಳನ್ನು ಬಳಕೆ ಮಾಡಿಕೊಂಡಿರುವುದು ಬಿಬಿಎಂಪಿಯ ಅಧಿಕಾರಿಗಳಿಗೆ ತಿಳಿದಿದ್ದರೂ ಪಾಲಿಕೆ ಅಧಿಕಾರಿಗಳು ಸುಮ್ಮನಿದ್ದಾರೆ. ಅಕ್ರಮವಾಗಿ ಬಳಕೆಯಾಗುತ್ತಿರುವ ಮಳಿಗೆಗಳ ವಿದ್ಯುತ್‌ ಬಿಲ್ಲು ಪಾವತಿ ಮಾಡುವಂತೆ ಆ ವ್ಯಾಪಾರಿಗಳಿಗೆ ಅಧಿಕಾರಿಗಳೇ ಸೂಚಿಸಿರುವುದು ತಿಳಿದು ಬಂದಿದೆ. ಅದರಂತೆ ಕೆಲವರು ಪ್ರತಿ ತಿಂಗಳು ಪಾವತಿ ಮಾಡುತ್ತಿದ್ದು, ಕೆಲವರು ಪಾವತಿ ಮಾಡುತ್ತಿಲ್ಲ. ಉಳಿದಂತೆ ಎಸ್ಕಲೇಟರ್‌, ವಿದ್ಯುತ್‌ ದೀಪ ಸೇರಿದಂತೆ ಮೊದಲಾದ ವಿದ್ಯುತ್‌ನ ಬಿಲ್ಲು ಅನ್ನು ಪಾಲಿಕೆಯೇ ಪಾವತಿ ಮಾಡುತ್ತಿದೆ.

ಎಲ್ಲೆಡೆ ಕೃಷ್ಣಪ್ಪ ಆ್ಯಂಡ್‌ ಸನ್ಸ್‌ ಪೋಟೋ:ಸರ್ಕಾರ ಹಾಗೂ ಬಿಬಿಎಂಪಿಯ ಅನುದಾನದಲ್ಲಿ ನಿರ್ಮಾಣಗೊಂಡಿರುವ ಪಾಲಿಕೆ ಬಜಾರ್‌ನ ಕೆಲವು ಮಳಿಗೆಗಳನ್ನು ಸ್ಥಳೀಯ ಶಾಸಕ ಕೃಷ್ಣಪ್ಪ ಅವರು ತಮಗೆ ಬೇಕಾದವರಿಗೆ ಅಕ್ರಮವಾಗಿ ವ್ಯಾಪಾರ ಮಾಡಿಕೊಳ್ಳುವುದಕ್ಕೆ ಅವಕಾಶ ಕೊಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದಕ್ಕೆ ಪುಷ್ಠಿ ಎಂಬಂತೆ ಬಾಗಿಲು ತೆರೆದಿರುವ ಎಲ್ಲಾ ಮಳಿಗೆಗಳ ಒಳಗೆ ಶಾಸಕ ಕೃಷ್ಣಪ್ಪ ಆ್ಯಂಡ್‌ ಸನ್ಸ್‌ ಅವರಗಳ ಫೋಟೋಗಳು ಕಣ್ಣಿಗೆ ರಾಚುತ್ತವೆ.

Share this article