ಗುಲಾಬಿ ಮಾರ್ಗಕ್ಕಾಗಿ ಬಿಇಎಂಎಲ್‌ಗೆ ಹೆಚ್ಚುವರಿ 42 ರೈಲ್ವೆ ಬೋಗಿ (7 ರೈಲು) ಒದಗಿಸುವಂತೆ ಒಪ್ಪಂದ ಮಾಡಿಕೊಂಡಿದೆ.
ಮಯೂರ್ ಹೆಗಡೆ
ಬೆಂಗಳೂರು: ಸದ್ಯ ರೈಲುಗಳ ಕೊರತೆ ಎದುರಿಸುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) 2ನೇ ಹಂತದ ಯೋಜನೆಗಳಿಗೆ ಈ ಸಮಸ್ಯೆ ಆಗದಿರಲು ಗುಲಾಬಿ ಮಾರ್ಗಕ್ಕಾಗಿ ಬಿಇಎಂಎಲ್‌ಗೆ ಹೆಚ್ಚುವರಿ 42 ರೈಲ್ವೆ ಬೋಗಿ (7 ರೈಲು) ಒದಗಿಸುವಂತೆ ಒಪ್ಪಂದ ಮಾಡಿಕೊಂಡಿದೆ.
ಸದ್ಯ ಕಾರ್ಯಾಚರಣೆಯಲ್ಲಿರುವ ನೇರಳೆ, ಹಸಿರು ಮಾರ್ಗಕ್ಕೆ ರೈಲುಗಳ ಕೊರತೆಯಿದೆ. ರೈಲಿನ ಅಲಭ್ಯತೆ ಕಾರಣದಿಂದಲೇ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗ ಆರಂಭ ವಿಳಂಬವಾಗಿದೆ. ಗುಲಾಬಿ ಮಾರ್ಗಕ್ಕೂ ಈ ಸಮಸ್ಯೆ ಆಗಬಹುದೆಂಬ ಕಾರಣಕ್ಕೆ ಬಿಎಂಆರ್‌ಸಿಎಲ್ ಅಧಿಕ ರೈಲುಗಳನ್ನು ಈ ಮಾರ್ಗಕ್ಕಾಗಿ ಪಡೆದುಕೊಳ್ಳಲು ನಿರ್ಧರಿಸಿದೆ.
2023ರಲ್ಲಿ ಬಿಇಎಂಎಲ್ ಜೊತೆಗೆ 318 ಬೋಗಿ ಒದಗಿಸಲು ಒಪ್ಪಂದವಾದಾಗ ಅದರಲ್ಲಿನ 96 ಬೋಗಿ ಅಂದರೆ 16 ರೈಲುಗಳನ್ನು ಕಾಳೇನ ಅಗ್ರಹಾರ - ನಾಗವಾರ (21.76 ಕಿಮೀ) ಸಂಪರ್ಕಿಸುವ ಗುಲಾಬಿ ಮಾರ್ಗಕ್ಕೆ ಮೀಸಲಿಡಲು ಬಿಎಂಆರ್‌ಸಿಎಲ್ ನಿರ್ಧರಿಸಿತ್ತು. ಇದೀಗ ರೈಲುಗಳ ಕೊರತೆ ತಪ್ಪಿಸಲು ಹಿಂದಿನ ಒಪ್ಪಂದ ವಿಸ್ತರಿಸಿ ₹405 ಕೋಟಿ ಮೊತ್ತದಲ್ಲಿ 7 ರೈಲು ಒದಗಿಸಲು ಬಿಎಎಂಎಲ್‌ಗೆ ಆದೇಶ ನೀಡಿದೆ.
ಅತಿದೊಡ್ಡ ಒಪ್ಪಂದ:
ನಮ್ಮ ಮೆಟ್ರೋ 2ನೇ ಹಂತದ ಯೋಜನೆಗಳಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗ (2ಎ, 2ಬಿ) ಮತ್ತು ಗುಲಾಬಿ ಮಾರ್ಗಕ್ಕಾಗಿ 53 ರೈಲುಗಳನ್ನು (318ಬೋಗಿ) ಒದಗಿಸಲು ಬಿಎಂಆರ್‌ಸಿಎಲ್ ಆಗ ಬಿಎಎಂಎಲ್‌ಗೆ ಟೆಂಡರ್ ನೀಡಿತ್ತು. ಇದು ಬಿಎಂಆರ್‌ಸಿಎಲ್ ಮೆಟ್ರೋ ರೈಲುಗಳನ್ನು ಒದಗಿಸಲು ಮಾಡಿಕೊಂಡ ಈವರೆಗೆನ ಅತಿದೊಡ್ಡ ಒಪ್ಪಂದವಾಗಿತ್ತು. ಈ ಸಂಬಂಧ ಜಪಾನ್ ಇಂಟರ್‌ನ್ಯಾಷನಲ್ ಕಾರ್ಪೋರೇಶನ್ ಏಜೆನ್ಸಿಯು (ಜೈಕಾ) ₹3177 ಕೋಟಿ ಒದಗಿಸಿತ್ತು.
ಈ ಅತ್ಯಾಧುನಿಕ ಸಿಬಿಟಿಸಿ ತಂತ್ರಜ್ಞಾನದ ಅಂದರೆ ಚಾಲಕ ರಹಿತ ಸಾಮರ್ಥ್ಯದ ರೈಲುಗಳು 6 ಬೋಗಿಯನ್ನು ಹೊಂದಿರಲಿವೆ. ಆಸ್ಟೆನಿಟಿಕ್ ಸ್ಟೇನ್‌ಲೆಸ್ ಸ್ಟೀಲ್ ಬಳಸಿ ಬೋಗಿಯನ್ನು ನಿರ್ಮಾಣ ಮಾಡಲಾಗುತ್ತದೆ.
ಈ ರೈಲಿನ ಪ್ರತಿ ಬೋಗಿಯಲ್ಲಿ 2 ಹವಾನಿಯಂತ್ರಣ ವ್ಯವಸ್ಥೆ ಒಳಗೊಂಡಿರುತ್ತದೆ. ಪ್ರಯಾಣಿಕರ ಸುರಕ್ಷತೆ ಮತ್ತು ಪ್ರಯಾಣಿಕರ ಸೌಕರ್ಯಕ್ಕಾಗಿ ಅತ್ಯುತ್ತಮ ಒಳ ವಿನ್ಯಾಸ ಇರಲಿದೆ. ಜತೆಗೆ ಪ್ರಯಾಣಿಕರಿಗೆ ಮಾಹಿತಿ ವ್ಯವಸ್ಥೆ (ಪಿಐಎಸ್), ಪ್ರಯಾಣಿಕರ ರಕ್ಷಣೆಗೆ ಮೇಲ್ವಿಚಾರಣೆ ವ್ಯವಸ್ಥೆ (ಪಿಎಸ್‌ಎಸ್‌ಎಸ್) ಸೇರಿದಂತೆ ವಿವಿಧ ವ್ಯವಸ್ಥೆ ಇದೆ. ಎಲ್‌ಸಿಡಿ ರೂಟ್ ಮ್ಯಾಪ್ , ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳೊಂದಿಗೆ ಸಮನ್ವಯಗೊಳಿಸಲಾದ ವಿದ್ಯುತ್ ಚಾಲಿತ ಸ್ವಯಂಚಾಲಿತ ಬಾಗಿಲುಗಳು ಪ್ರಯಾಣಿಕರಿಗೆ ಮತ್ತಷ್ಟು ಸುರಕ್ಷತೆ ಒದಗಿಸಲಿದೆ ಎಂದು ಬಿಇಎಂಎಲ್ ತಿಳಿಸಿದೆ.
ಒಂದು ಬೋಗಿಗೆ ₹9.64 ಕೋಟಿ ವೆಚ್ಚ : ಹಿಂದಿನ ಒಪ್ಪಂದದಂತೆ ರೈಲ್ವೆ ಬೋಗಿ ಒದಗಿಸುವ ಜೊತೆಗೆ ಮುಂದಿನ 15 ವರ್ಷ ನಿರ್ವಹಣಾ ಸೇವೆ ಕೊಡಬೇಕಿದೆ. ಹೆಚ್ಚುವರಿಯಾಗಿ ಒದಗಿಸುತ್ತಿರುವ ಬೋಗಿ ಒಂದಕ್ಕೆ ₹9.64 ಕೋಟಿ ವೆಚ್ಚವಾಗಲಿದೆ. ಹಿಂದಿನ ಒಪ್ಪಂದದಲ್ಲಿ ₹9.99 ಕೋಟಿಗೆ ಒಂದು ಬೋಗಿ (1 ಬೋಗಿಗೆ ₹7.74 ಕೋಟಿ ಹಾಗೂ ನಿರ್ವಹಣೆಗೆ 0.13ಕೋಟಿ ನಿಗದಿಯಾಗಿತ್ತು.) ಲಭ್ಯವಾಗಿತ್ತು. ಹಿಂದೆ 318 ಕೋಚ್‌ಗಳಲ್ಲಿ ನೀಲಿ ಮಾರ್ಗದ ಎರಡು ಹಂತ ಅಂದರೆ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರದವರೆಗಿನ ( 2ಎ) 18ಕಿಮೀ ಮಾರ್ಗಕ್ಕೆ 96 ಬೋಗಿ ಹಾಗೂ ಕೆ.ಆರ್.ಪುರ - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 38 ಕಿಮೀ ಮಾರ್ಗಕ್ಕೆ 126 ಬೋಗಿ ಮೀಸಲಿಡಲು ನಿರ್ಧರಿಸಲಾಗಿದೆ.
ವಿಶೇಷವಾಗಿ ಈ ರೈಲುಗಳು ಬೆಂಗಳೂರು ಬಿಇಎಂಎಲ್ ಮೆಟ್ರೋ ರೈಲ್ವೆ ಶೆಡ್‌ನಲ್ಲಿ ನಿರ್ಮಾಣಗೊಳ್ಳಲಿವೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ರೈಲುಗಳು ಬೆಂಗಳೂರು ಮೆಟ್ರೋ ರೈಲು ನೆಟ್‌ವರ್ಕ್ ಬಲಪಡಿಸಲಿವೆ ಎಂದು ಬಿಇಎಂಎಲ್‌ನ ಚೇರ್‌ಮನ್ ಶಾಂತನು ರಾಯ್ ಹೇಳಿದ್ದಾರೆ.