ಮೆಟ್ರೋ ವಯಡಕ್ಟ್‌ ಬಿದ್ದು ಆಟೋಚಾಲಕ ಬಲಿಯಾಗಿರುವುದಕ್ಕೆ ರೈಲು ನಿಗಮದ ನಿರ್ಲಕ್ಷ್ಯ ಕಾರಣ : ಸಾರ್ವಜನಿಕರ ಕಿಡಿ

| N/A | Published : Apr 17 2025, 12:49 AM IST / Updated: Apr 17 2025, 04:31 AM IST

Namma Metro
ಮೆಟ್ರೋ ವಯಡಕ್ಟ್‌ ಬಿದ್ದು ಆಟೋಚಾಲಕ ಬಲಿಯಾಗಿರುವುದಕ್ಕೆ ರೈಲು ನಿಗಮದ ನಿರ್ಲಕ್ಷ್ಯ ಕಾರಣ : ಸಾರ್ವಜನಿಕರ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮೆಟ್ರೋ ವಯಡಕ್ಟ್‌ ಬಿದ್ದು ಆಟೋಚಾಲಕ ಬಲಿಯಾಗಿರುವುದಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮದ ನಿರ್ಲಕ್ಷ್ಯ ಕಾರಣ ಎಂದು ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. ಶಿಷ್ಟಾಚಾರದ ಪ್ರಕಾರ ಪರಿಹಾರ ನೀಡುವುದಾಗಿ ಬಿಎಂಆರ್‌ಸಿಎಲ್‌ ತಿಳಿಸಿದೆ.

 ಬೆಂಗಳೂರು : ಮೆಟ್ರೋ ವಯಡಕ್ಟ್‌ ಬಿದ್ದು ಆಟೋಚಾಲಕ ಬಲಿಯಾಗಿರುವುದಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮದ ನಿರ್ಲಕ್ಷ್ಯ ಕಾರಣ ಎಂದು ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. ಶಿಷ್ಟಾಚಾರದ ಪ್ರಕಾರ ಪರಿಹಾರ ನೀಡುವುದಾಗಿ ಬಿಎಂಆರ್‌ಸಿಎಲ್‌ ತಿಳಿಸಿದೆ.

ವಾಡಿಯಾರ್‌ಪುರ ಕಾಸ್ಟಿಂಗ್ ಯಾರ್ಡ್‌ನಿಂದ ಗರ್ಡರ್ ಅನ್ನು ಲಾಂಗ್ ಕ್ಯಾರಿಯರ್ ಟ್ರಕ್ ಸಾಗಿಸುತ್ತಿತ್ತು. ಗರ್ಡರ್‌ನ ಸರಂಜಾಮು ಟ್ರಕ್ ತಿರುವು ಪಡೆಯುವಾಗ ತುಂಡಾಗಿ, ಗರ್ಡರ್ ಆಟೋರಿಕ್ಷಾದ ಮೇಲೆ ಬಿದ್ದು ಚಾಲಕ ಸಾವನ್ನಪ್ಪಿದ್ದಾನೆ. ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ಆಟೋರಿಕ್ಷಾ ಚಾಲಕನ ಶವವನ್ನು ಕ್ರೇನ್‌ ಬಳಸಿ ಹೊರ ತೆಗೆಯಲಾಗಿದೆ. ಬಿಎಂಆರ್‌ಸಿಎಲ್‌ ಅಗತ್ಯ ಸುರಕ್ಷತಾ ಕ್ರಮ ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ.

ಪರಿಹಾರ:

ಮೆಟ್ರೋ ಶಿಷ್ಟಾಚಾರದ ಪ್ರಕಾರ ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡಲಾಗುವುದು. ಆದರೆ ಎಷ್ಟು ಮೊತ್ತ ಎಂಬುದನ್ನು ನಿಖರವಾಗಿ ಹೇಳಿಲ್ಲ. ಕಾರ್ಯಾಚರಣೆ ಅಥವಾ ನಿರ್ಮಾಣದಲ್ಲಾಗಲಿ, ಸಾರ್ವಜನಿಕರ ಸುರಕ್ಷತೆ ಬಿಎಂಆರ್‌ಸಿಎಲ್‌ ಅದ್ಯತೆ ನೀಡುತ್ತಿದ್ದು, ಭವಿಷ್ಯದಲ್ಲಿ ಇಂತಹ ಘಟನೆ ಸಂಭವಿಸದಂತೆ ಅಗತ್ಯವಿರುವ ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನಿಗಮ ಹೇಳಿದೆ.---

ತಾಯಿ-ಮಗು ಸಾವು:

2023ರ ಜ.10ರಂದು ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಳೆ ತಾಯಿ-ಮಗು ಸಾವು ಈವರೆಗಿನ ಭೀಕರ ದುರಂತ ಎನ್ನಿಸಿದೆ. ನಾಗವಾರ ಮುಖ್ಯರಸ್ತೆ ಹೆಣ್ಣೂರು ಸಮೀಪ ನಿರ್ಮಾಣ ಹಂತದ 40 ಅಡಿ ಎತ್ತರದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿದು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದವರ ಮೇಲೆ ಬಿದ್ದಿತ್ತು. ಪತ್ನಿಯನ್ನು ಕಚೇರಿಗೆ ಬಿಡಲು ಹೊರಟಿದ್ದ ಪತಿ ಲೋಹಿತ್ ಕುಮಾರ್ ಬಚಾವಾದರೆ ಪತ್ನಿ ತೇಜಸ್ವಿನಿ, ಅವರ ಎರಡೂವರೆ ವರ್ಷದ ಪುತ್ರ ವಿಹಾನ್ ಮೃತಪಟ್ಟಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ನಿಗಮ ನಾಮ್‌ ಕೇ ವಾಸ್ತೆ ಎಂಬಂತೆ ಮೂವರು ಕಿರಿಯ ಎಂಜಿನಿಯರ್‌ಗಳನ್ನು ಅಮಾನತ್ತು ಮಾಡಿತ್ತು. ಕುಟುಂಬ ಪರಿಹಾರವನ್ನು ನಿರಾಕರಿಸಿತ್ತು.

ಕಾಮಗಾರಿಗೆ ಪ್ರಾಣ ತೆತ್ತವರು 39

ನಮ್ಮ ಮೆಟ್ರೋ ಕಾಮಗಾರಿ ವೇಳೆ (2011ರಿಂದ) 2023ರ ಫೆಬ್ರವರಿವರೆಗೆ ಸಂಭವಿಸಿದ ಅವಘಡದಲ್ಲಿ 38 ಜನ ಪ್ರಾಣ ಕಳೆದುಕೊಂಡಿದ್ದರು. ಈಗ ಇನ್ನೊಂದು ಜೀವ ಬಲಿಯಾದಂತಾಗಿದೆ. ಮೆಟ್ರೋ ನಿಗಮ ಈವರೆಗೆ ₹3.15 ಕೋಟಿ ಪರಿಹಾರ ವಿತರಿಸಿದೆ. ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ₹1.77 ಕೋಟಿ ದಂಡ ವಿಧಿಸಲಾಗಿತ್ತು. ಮೆಟ್ರೋ ಹಳಿಗೆ ಹಾರಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.---

ಸಾವಿನ ಆಡಿಟ್‌ ಮಾಡಿಸಿ: ಎಂಪಿ

ಅವಘಡಕ್ಕೆ ಬಿಎಂಆರ್‌ಸಿಎಲ್‌ ಸಂಪೂರ್ಣ ಹೊಣೆ ಹೊರಬೇಕು. ಕಾಮಗಾರಿಯ ಗುತ್ತಿಗೆ ಪಡೆದವರ ವಿರುದ್ಧ ಪ್ರಕರಣ ದಾಖಲಿಸಿ ಅಮಾನತ್ತುಪಡಿಸಬೇಕು. ನಮ್ಮ ಮೆಟ್ರೋದಿಂದ ಸಂಭವಿಸುತ್ತಿರುವ ಅವಘಡಗಳ ಬಗ್ಗೆ ಆಡಿಟ್‌ ಮಾಡಿಸಬೇಕು ಎಂದು ಸಂಸದ ಪಿ.ಸಿ.ಮೋಹನ್‌ ‘ಎಕ್ಸ್‌’ನಲ್ಲಿ ಒತ್ತಾಯಿಸಿದ್ದಾರೆ.