ಬೆಂಗಳೂರು : ನಿಲ್ದಾಣದಲ್ಲಿ ಸೈಕಲ್‌ಗಳಿಗೆ ಉಚಿತ ಪಾರ್ಕಿಂಗ್ - ಮೆಟ್ರೋ ರೈಲು ನಿಗಮ ಹೊಸ ನೀತಿ

| N/A | Published : Feb 03 2025, 01:16 AM IST / Updated: Feb 03 2025, 05:09 AM IST

ಸಾರಾಂಶ

ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್‌ ಶುಲ್ಕ ಪಾವತಿಗೆ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ನೊಂದಿಗೆ ಲಿಂಕ್, ಸೈಕಲ್‌ಗೆ ಉಚಿತ ಪಾರ್ಕಿಂಗ್ ಮತ್ತು ಅಂಗವಿಕಲರಿಗೆ ವಿಶೇಷ ಸ್ಥಳವನ್ನು ಒದಗಿಸುವುದು ಸೇರಿ ಹಲವು ಅಂಶವನ್ನು ಒಳಗೊಂಡ ಹೊಸ ಪಾರ್ಕಿಂಗ್‌ ನೀತಿ ಅಂತಿಮ 

 ಬೆಂಗಳೂರು : ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್‌ ಶುಲ್ಕ ಪಾವತಿಗೆ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ನೊಂದಿಗೆ (ಎನ್‌ಸಿಎಂಸಿ) ಲಿಂಕ್, ಸೈಕಲ್‌ಗೆ ಉಚಿತ ಪಾರ್ಕಿಂಗ್ ಮತ್ತು ಅಂಗವಿಕಲರಿಗೆ ವಿಶೇಷ ಸ್ಥಳವನ್ನು ಒದಗಿಸುವುದು ಸೇರಿ ಹಲವು ಅಂಶವನ್ನು ಒಳಗೊಂಡ ಹೊಸ ಪಾರ್ಕಿಂಗ್‌ ನೀತಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ತನ್ನ ಪಾರ್ಕಿಂಗ್ ನೀತಿ ಅಂತಿಮಗೊಳಿಸಿದ್ದು, ಅನುಮೋದನೆಗೆ ನಗರಾಭಿವೃದ್ಧಿ ಇಲಾಖೆಗೆ ಶೀಘ್ರ ಕಳುಹಿಸಲಿದೆ.

77 ಕಿ.ಮೀ. ಮಾರ್ಗದಲ್ಲಿ 53ಕ್ಕೂ ಅಧಿಕ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳಗಳಿವೆ. ಪಾರ್ಕಿಂಗ್‌ ದರ ನಿಗದಿ, ಮೆಟ್ರೋಗೆ ಪ್ರಯಾಣಿಕರನ್ನು ಸೆಳೆಯುವುದು, ಸುರಕ್ಷತೆ ಸೇರಿ ಇತರೆ ಉದ್ದೇಶಗಳಿಂದ ಮೆಟ್ರೋ ಪಾರ್ಕಿಂಗ್‌ ನೀತಿ ರೂಪಿಸಲಾಗಿದೆ. ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡದಿದ್ದರೂ ನಮ್ಮ ಮೆಟ್ರೋ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ಕಾರು, ಬೈಕು ನಿಲ್ಲಿಸಿ ಬೇರೆಡೆ ತೆರಳುವವರಿದ್ದು, ಇಂತವರಿಗೆ ದಂಡ ವಿಧಿಸುವಂತ ವಿಶೇಷ ನೀತಿಗಳನ್ನೂ ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಪರಿಸರ ಸ್ನೇಹಿ ಸಾರಿಗೆ ಉತ್ತೇಜಿಸಲು, ಸೈಕಲ್‌ಗಳಿಗೆ ಉಚಿತ ಪಾರ್ಕಿಂಗ್ ಮತ್ತು ಅಂಗವಿಕಲರಿಗೆ ವಿಶೇಷ ಸ್ಥಳವನ್ನು ಒದಗಿಸುವ ವ್ಯವಸ್ಥೆ ಇದರಲ್ಲಿದೆ ಎಂದು ಮೆಟ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋದ ನೂತನ ಪಾರ್ಕಿಂಗ್‌ ನಿಯಮವನ್ನು ಕಳೆದ 2024ರ ಅಕ್ಟೋಬರ್‌ನಲ್ಲಿ ಬಿಎಂಆರ್‌ಸಿಎಲ್‌ ಸಿದ್ಧಪಡಿಸಿದೆ. ಇದರ ಬಗ್ಗೆ ಸಾರ್ವಜನಿಕ ಪ್ರತಿಕ್ರಿಯೆ ಪಡೆಯಲಾಗಿದೆ. ಬಳಿಕ ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ಪ್ರತಿಕ್ರಿಯೆ ಕೂಡ ಪಡೆಯಲಾಗಿದೆ.

ಮೆಟ್ರೋದಲ್ಲಿ ಪಾರ್ಕಿಂಗ್‌ ಸ್ಥಳಗಳನ್ನು ನಿರ್ಮಿಸುವುದು, ಅಭಿವೃದ್ಧಿಪಡಿಸುವುದು ಹಾಗೂ ನಿರ್ವಹಣೆ ಮಾಡಲು ಪಿಪಿಪಿ ಮಾದರಿ ಅನುಸರಣೆ ಮಾಡುವ ಅಂಶಗಳು ಇದರಲ್ಲಿವೆ. ಪ್ರಮುಖವಾಗಿ ರಾತ್ರಿ ವೇಳೆ ಕಾನೂನುಬಾಹಿರ ಚಟುವಟಿಕೆ ತಪ್ಪಿಸಲು ಪಾರ್ಕಿಂಗ್‌ ಸ್ಥಳಗಳಲ್ಲಿ ಸಾಕಷ್ಟು ವಿದ್ಯುತ್‌ ಬೆಳಕಿರುವಂತೆ ನೋಡಿಕೊಳ್ಳಬೇಕು. ಸಿಸಿಟಿವಿ ಮೂಲಕ ಪಾರ್ಕಿಂಗ್‌ ಗುತ್ತಿಗೆದಾರರ ನಡವಳಿಕೆ ಮೇಲ್ವಿಚಾರಣೆ ಮಾಡುವುದನ್ನು ನೀತಿ ಒಳಗೊಂಡಿದೆ.