ಇದೇ ವಾರ, ಪ್ರಾಯಶಃ ಮುಂದಿನ ನಾಲ್ಕು ದಿನಗಳಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಬಹುದು ಎಂಬ ಬಲವಾದ ನಿರೀಕ್ಷೆ ಇರುವಾಗಲೇ, ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ಹಠಾತ್ ರಾಜೀನಾಮೆ ನೀಡಿರುವುದು ಹಲವು ಬಗೆಯ ಚರ್ಚೆಗಳನ್ನು ಹುಟ್ಟುಹಾಕಿದೆ. ಇದು ಸ್ವಾಭಾವಿಕ. ಗೋಯಲ್ ಅವರು 2022ರ ನ.18ರಂದು ಇದೇ ರೀತಿ ರಾಜೀನಾಮೆ ನೀಡಿದ್ದರು. ಅವರನ್ನು ಮರುದಿನವೇ ಕೇಂದ್ರ ಸರ್ಕಾರ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಅದು ಸುಪ್ರೀಂಕೋರ್ಟ್ ಕೆಂಗಣ್ಣಿಗೂ ಗುರಿಯಾಗಿತ್ತು. 2025ಕ್ಕೆ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ 2027ರವರೆಗೂ ಹಲವು ಚುನಾವಣೆಗಳನ್ನು ನಡೆಸುವ ಗುರುತರ ಹೊಣೆಗಾರಿಕೆಯನ್ನು ಅರುಣ್ ಗೋಯಲ್ ಅವರು ಹೊತ್ತಿದ್ದರು. ಆದರೆ ಅವರು ದಿಢೀರ್ ರಾಜೀನಾಮೆ ನೀಡಿದ್ದು ಏಕೆ ಎಂಬುದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ. 1985ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಗೋಯಲ್ ಅವರಿಗೆ ಇಂತಹ ಮಹತ್ವದ ಸಂದರ್ಭದಲ್ಲಿ ರಾಜೀನಾಮೆ ನೀಡಬಾರದು ಎಂದು ಗೊತ್ತಿರುವುದಿಲ್ಲವೇ? ಖಂಡಿತಾ ಗೊತ್ತಿರುತ್ತದೆ. ಹಾಗಾದರೆ ಅವರು ರಾಜೀನಾಮೆ ನೀಡಿದ್ದಕ್ಕೆ ಅಸಲಿ ಕಾರಣ ಏನಿರಬಹುದು? ಆರೋಗ್ಯ ಚೆನ್ನಾಗಿರಲಿಲ್ಲವೇನೋ ಎಂದು ಊಹಿಸುವಂತೆಯೂ ಇಲ್ಲ. ಏಕೆಂದರೆ ಅವರು ಆರೋಗ್ಯವಾಗಿ ಸಮರ್ಥರಾಗಿದ್ದಾರೆ. ಹಾಗಾದರೆ ಅಸಲಿ ಕಾರಣ ಏನು? ಹಲವಾರು ಅನುಮಾನಗಳು ಏಳುತ್ತಿವೆ.