ಸಿದ್ದಲಿಂಗಯ್ಯ ಹೆಸರಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸಿ : ನಿಡುಮಾಮಿಡಿ ಶ್ರೀ

KannadaprabhaNewsNetwork |  
Published : May 15, 2025, 01:36 AM ISTUpdated : May 15, 2025, 05:32 AM IST
KASAPA 2 | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷರೂ ಆಗಿದ್ದ ಹಿರಿಯ ಸಾಹಿತಿ ಪ್ರೊ.ಜಿ.ಎಸ್‌.ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಪರಿಷತ್‌ನಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸಬೇಕು ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಲಹೆ ನೀಡಿದರು.

 ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷರೂ ಆಗಿದ್ದ ಹಿರಿಯ ಸಾಹಿತಿ ಪ್ರೊ.ಜಿ.ಎಸ್‌.ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಪರಿಷತ್‌ನಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸಬೇಕು ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಲಹೆ ನೀಡಿದರು.

ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಸಿದ್ದಲಿಂಗಯ್ಯ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಲಿಂಗಯ್ಯ ಅವರ ಹೆಸರು ಸ್ಥಿರವಾಗಿ ಉಳಿಯಲು ಅವರ ಕುಟುಂಬದವರು, ಸ್ನೇಹಿತರು ಪರಿಷತ್‌ನಲ್ಲಿ ದತ್ತಿ ಉಪನ್ಯಾಸಕ್ಕೆ ವ್ಯವಸ್ಥೆ ಮಾಡಬೇಕು ಅಥವಾ ದತ್ತಿ ಪ್ರಶಸ್ತಿ ನೀಡಲು ಮುಂದಾಗಬೇಕು. ಇದಕ್ಕೆ ಮಠದಿಂದ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಪರಿಷತ್‌ ಅಧ್ಯಕ್ಷರಾಗಿ ಸಿದ್ದಲಿಂಗಯ್ಯ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಪರಿಷತ್‌ನಲ್ಲಿ ಶಿಸ್ತನ್ನು ತಂದು ಯಾವುದೇ ಒತ್ತಡಕ್ಕೆ ಒಳಗಾಗದೇ ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ನುಡಿ ನಮನ ಕಾರ್ಯಕ್ರಮ ಆಯೋಜಿಸುವ ಮೂಲಕ ಪರಿಷತ್‌ ತನ್ನ ಜವಾಬ್ದಾರಿಯನ್ನು ಎತ್ತಿ ಹಿಡಿದಿದೆ ಎಂದು ಬಣ್ಣಿಸಿದರು.

ಅರಳಿದ ಕುಸುಮದ ಸುಗಂಧ:

ಬೇಲಿ ಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಸಿದ್ದಲಿಂಗಯ್ಯ ಅವರು ಶರಣ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದು, ನುಡಿದಂತೆ ನಡೆದರು. ಸ್ವಸಾಮರ್ಥ್ಯದಿಂದ ಹುದ್ದೆಗಳನ್ನು ಅಲಂಕರಿಸಿದರು. ಉತ್ತಮ ಆಡಳಿತಾಧಿಕಾರಿ, ಬೋಧಕ, ಸಾಹಿತಿಯಾಗಿದ್ದರು. ಅವರ ಬರವಣಿಗೆಗಳಲ್ಲಿ ವೈಚಾರಿಕ ಚಿಂತನೆ ಇರುತ್ತಿತ್ತು. ಅವರು ಇಂದು ನಮ್ಮೊಂದಿಗೆ ಇರದಿದ್ದರೂ ಅರಳಿದ ಕುಸುಮದ ಸುಗಂಧವಾಗಿ ನಮ್ಮ ಜೊತೆ ಇದ್ದಾರೆ ಎಂದು ಸ್ಮರಿಸಿದರು.

ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಮಾತನಾಡಿ, ಸಿದ್ಧಲಿಂಗಯ್ಯನವರು ಪರಿಷತ್ತಿನ ಅಧ್ಯಕ್ಷರಾದಾಗ ಸಂದಿಗ್ಧ ಸನ್ನಿವೇಶವಿತ್ತು. ಮೊದಲ ಸಲ ಸರ್ಕಾರ ಆಡಳಿತಾಧಿಕಾರಿ ನೇಮಿಸಿತ್ತು. ಅಂತಹ ಸನ್ನಿವೇಶದಲ್ಲಿ ಅಧಿಕಾರ ಸ್ವೀಕರಿಸಿದ ಸಿದ್ದಲಿಂಗಯ್ಯ ಅವರು ‘ನಾನು ಈ ಕ್ಷಣದವರೆಗೂ ಶುದ್ಧ ವ್ಯಕ್ತಿಯಾಗಿ ನಡೆದುಕೊಂಡು ಬಂದಿದ್ದೇನೆ. ಆ ದೇವರೇ ಬಂದರೂ ನನ್ನನ್ನು ಭ್ರಷ್ಟನನ್ನಾಗಿ ಮಾಡಲಾರ’ ಎಂಬ ಘೋಷಣೆ ಮಾಡಿ ಅದರಂತೆ ನಡೆದುಕೊಂಡು ಪರಿಷತ್ತಿಗೆ ನೈತಿಕ ಶಕ್ತಿ ತುಂಬಿದರು ಎಂದು ನೆನಪಿಸಿಕೊಂಡರು.

ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ, ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ, ಬರಹಗಾರ ಪ್ರೊ.ಕೆ.ಇ.ರಾಧಾಕೃಷ್ಣ, ಕಸಾಪ ತುಮಕೂರು ಜಿಲ್ಲಾ ಅಧ್ಯಕ್ಷ ಸಿದ್ದಲಿಂಗಪ್ಪ, ಬಿಎಂಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಆರ್.ಲಕ್ಷ್ಮೀನಾರಾಯಣ ಮತ್ತಿತರರು ಮಾತನಾಡಿದರು. ಪರಿಷತ್‌ನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್‌ ಮೇಲೂ ಕೇಸ್‌ : ಸಲೀಂ
ಬೆಂಗಳೂರು ಬೀದಿನಾಯಿಗಳಿಗೆ ಈಗ ಪೊಲೀಸ್‌ ಶ್ವಾನಗಳ ರೀತಿ ಟ್ರೈನಿಂಗ್ ಭಾಗ್ಯ !