ಮೇ 15ರಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ

KannadaprabhaNewsNetwork |  
Published : May 15, 2025, 01:33 AM ISTUpdated : May 15, 2025, 05:35 AM IST
BBMP latest news today photo

ಸಾರಾಂಶ

ರಾಜಧಾನಿ ಬೆಂಗಳೂರಿನ ಆಡಳಿತ ವ್ಯವಸ್ಥೆ ಸುಧಾರಣೆ ದೃಷ್ಟಿಯಿಂದ ಗುರುವಾರದಿಂದ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ಅಸ್ತಿತ್ವಕ್ಕೆ ಬರಲಿದ್ದು, ಈ ಕುರಿತು ರಾಜ್ಯ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.

 ಬೆಂಗಳೂರು : ರಾಜಧಾನಿ ಬೆಂಗಳೂರಿನ ಆಡಳಿತ ವ್ಯವಸ್ಥೆ ಸುಧಾರಣೆ ದೃಷ್ಟಿಯಿಂದ ಗುರುವಾರದಿಂದ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ಅಸ್ತಿತ್ವಕ್ಕೆ ಬರಲಿದ್ದು, ಈ ಕುರಿತು ರಾಜ್ಯ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.

ಸರ್ಕಾರ ಹೊರಡಿಸಿರುವ ಈ ಆದೇಶದಲ್ಲಿ ಗ್ರೇಟರ್‌ ಬೆಂಗಳೂರು ಆಡಳಿತ ಅಧಿನಿಯಮ, 2024 (2025ರ ಕರ್ನಾಟಕ ಅಧಿನಿಯಮ ಸಂಖ್ಯೆ 36) ರ ಒಂದನೇ ಪ್ರಕರಣದ (3) ನೇ ಉಪ ಪ್ರಕರಣದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವೂ ಈ ಮೂಲಕ ಸದರಿ ಅಧಿನಿಯಮವನ್ನು ಎಲ್ಲಾ ಪ್ರಕರಣಗಳು ಹಾಗೂ ಉಪಬಂಧಗಳು ಗುರುವಾರದಿಂದ ಜಾರಿಗೆ ಬರತಕ್ಕದೆಂದು ಗೊತ್ತುಪಡಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಿ. ನಂದಕುಮಾರ್‌ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಗುರುವಾರ ಮುಖ್ಯ ಆಯುಕ್ತರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ. ಜತೆ ಜತೆಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಉನ್ನತ ಮಟ್ಟದ ಸಮಿತಿಯು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಚನೆಯಾಗಲಿದೆ. ಬಿಬಿಎಂಪಿಯ 225 ವಾರ್ಡ್‌ ವ್ಯಾಪ್ತಿಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿ ಎಂದು ಅಧಿಸೂಚನೆಯನ್ನು ಹೊರಡಿಸಲಾಗಲಿದೆ.

120 ದಿನದಲ್ಲಿ ಪಾಲಿಕೆ ರಚನೆ:

ಮುಖ್ಯಮಂತ್ರಿ ನೇತೃತ್ವದ ಸಮಿತಿಯು ಸಭೆ ನಡೆಸಿ ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಎಷ್ಟು ಪಾಲಿಕೆ ರಚನೆ ಆಗಬೇಕು, ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಸೇರ್ಪಡೆಗೊಳಿಸಬಹುದಾದ ಪ್ರದೇಶಗಳ ಕುರಿತು ತೀರ್ಮಾನ ಕೈಗೊಳ್ಳಲಿದೆ. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ಆಯಾ ಪಾಲಿಕೆ ವಾರು ವಾರ್ಡ್‌ ಪುನರ್‌ ವಿಂಗಡಣೆ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಉದ್ದೇಶಿತ ಪಾಲಿಕೆ ವಾರ್ಡ್‌ ವಿಂಗಡಣೆ ಸಮಿತಿಗಳ ರಚನೆ ಸೇರಿ ಮುಂದಿನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಒಟ್ಟಾರೆ ಗುರುವಾರದಿಂದ ಮುಂದಿನ 120 ದಿನದಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ.

ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಇಲ್ಲ:

ಗ್ರೇಟರ್‌ ಬೆಂಗಳೂರು ಜಾರಿಯಾಗುತ್ತಿದಂತೆ ಬಿಬಿಎಂಪಿಯ ಆಡಳಿತ ವ್ಯವಸ್ಥೆಯಲ್ಲಿ ಸದ್ಯಕ್ಕೆ ಬದಲಾವಣೆ ಇರುವುದಿಲ್ಲ. ಮೇಲಿನ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುವವರೆಗೆ ಬಿಬಿಎಂಪಿಯ 2020 ಕಾಯ್ದೆ ಹಾಗೂ ಕೆಎಂಸಿ 1976 ನಿಯಮಗಳು ಜಾರಿಯಲ್ಲಿ ಇರಲಿವೆ. ಅದರಂತೆ ಅಧಿಕಾರಿ ಮತ್ತು ಕರ್ತವ್ಯಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಚಲಾಯಿಸಲಿದ್ದಾರೆ ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

PREV

Recommended Stories

ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್‌ ಮೇಲೂ ಕೇಸ್‌ : ಸಲೀಂ
ಬೆಂಗಳೂರು ಬೀದಿನಾಯಿಗಳಿಗೆ ಈಗ ಪೊಲೀಸ್‌ ಶ್ವಾನಗಳ ರೀತಿ ಟ್ರೈನಿಂಗ್ ಭಾಗ್ಯ !