ಡೀಸೆಲ್‌ಗೂ ಎಥೆನಾಲ್‌ ಮಿಶ್ರಣ ದೂರವಿಲ್ಲ - ಸದ್ಯ ಡೀಸೆಲ್‌ಗೆ ನೇರವಾಗಿ ಎಥೆನಾಲ್ ಮಿಶ್ರಣ ಕಷ್ಟ

Published : Nov 13, 2026, 12:19 PM IST
Ethanol

ಸಾರಾಂಶ

ಎಥೆನಾಲ್ ಅನ್ನು ಪ್ರಸ್ತುತ ಪೆಟ್ರೋಲ್‌ನಲ್ಲಿ ಮಾತ್ರ ಮಿಶ್ರಣ ಮಾಡಲಾಗುತ್ತಿದೆ. ಪೆಟ್ರೋಲ್‌ನಲ್ಲಿ ಸುಲಭವಾಗಿ ಹೊಂದಿಕೊಳ್ಳುವ ಎಥೆನಾಲ್‌ನಂತೆ ಡೀಸೆಲ್‌ನಲ್ಲಿ ನೇರವಾಗಿ ಎಥೆನಾಲ್ ಮಿಶ್ರಣ ಮಾಡಲು ಸಾಧ್ಯವಾಗುತ್ತಿಲ್ಲ

ಎಥೆನಾಲ್ ಅನ್ನು ಪ್ರಸ್ತುತ ಪೆಟ್ರೋಲ್‌ನಲ್ಲಿ ಮಾತ್ರ ಮಿಶ್ರಣ ಮಾಡಲಾಗುತ್ತಿದೆ. ಪೆಟ್ರೋಲ್‌ನಲ್ಲಿ ಸುಲಭವಾಗಿ ಹೊಂದಿಕೊಳ್ಳುವ ಎಥೆನಾಲ್‌ನಂತೆ ಡೀಸೆಲ್‌ನಲ್ಲಿ ನೇರವಾಗಿ ಎಥೆನಾಲ್ ಮಿಶ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಪೆಟ್ರೋಲ್ ಮತ್ತು ಎಥೆನಾಲ್ ನಡುವಿನ ಹೊಂದಾಣಿಕೆಗೆ ಹೋಲಿಸಿದರೆ ಡೀಸೆಲ್ ಮತ್ತು ಎಥೆನಾಲ್‌ನ ನಡುವೆ ಗುಣಲಕ್ಷಣಗಳು ಹಾಗೂ ಸಾಂದ್ರತೆಯ ವ್ಯತ್ಯಾಸವಿದೆ. ಅಮೆರಿಕದಲ್ಲಿ ಈ ಸಂಬಂಧ ಪ್ರಯೋಗಗಳು ನಡೆದಿವೆ. ಮುಂದಿನ 1 ಅಥವಾ 2 ವರ್ಷಗಳಲ್ಲಿ ಡೀಸೆಲ್‌ನಲ್ಲಿಯೂ ಮಿಶ್ರಣಕ್ಕೆ ಅವಕಾಶಗಳು ರೂಪುಗೊಳ್ಳಬಹುದು. ಒಂದು ವೇಳೆ ಈ ಸಂಶೋಧನೆಗಳು ಯಶಸ್ವಿಯಾದರೆ ಇಂಧನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯಾದರೂ ಅಚ್ಚರಿಯಿಲ್ಲ.

ಮುರುಗೇಶ್‌ ನಿರಾಣಿ, ಮಾಜಿ ಸಚಿವ

ಎಥೆನಾಲ್ ಉತ್ಪಾದನೆ ಮತ್ತು ಬಳಕೆ ಹೊಸ ತಂತ್ರಜ್ಞಾನವಲ್ಲ. ಸುಮಾರು 100 ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಎಥೆನಾಲ್ ಉತ್ಪಾದನೆಗೆ ಚಾಲನೆ ನೀಡಲಾಗಿತ್ತು. ವಾಹನಗಳ ಎಂಜಿನ್ ವಿನ್ಯಾಸಕ್ಕೆ ಅನುಗುಣವಾಗಿ ಇಂಧನ ಮಿಶ್ರಣದ ಪ್ರಮಾಣ ನಿರ್ಧರಿಸಲಾಗುತ್ತದೆ. ಇತ್ತೀಚೆಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್‌ಗೆ ಹಾನಿಯಾಗುತ್ತಿದೆ ಹಾಗೂ ಮೈಲೇಜ್ ಕಡಿಮೆಯಾಗುತ್ತಿದೆ ಎಂಬ ಸಚಿವ ರಿಜ್ವಾನ್ ಅರ್ಷದ್ ಅವರ ಆರೋಪ ಸತ್ಯಕ್ಕೆ ದೂರವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಮೈಸೂರಿನಲ್ಲಿ ದಿನಕ್ಕೆ 30 ಸಾವಿರ ಲೀಟರ್‌ ಎಥೆನಾಲ್ ಉತ್ಪಾದಿಸುವ ಕಾರ್ಖಾನೆ ಸ್ಥಾಪಿಸಲಾಗಿತ್ತು. ಆಗ ಪೆಟ್ರೋಲ್ ಚಾಲಿತ ಬಸ್‌ಗಳ ಬಳಕೆ ಸೀಮಿತವಾಗಿದ್ದ ಕಾರಣ, ಮುಂಬೈನಲ್ಲಿ ಇಂಧನ ಮಿಶ್ರಣ ಮಾಡಿ ಬಸ್‌ಗಳನ್ನು ಓಡಿಸಲಾಗುತ್ತಿತ್ತು. ಸ್ವಾತಂತ್ರ್ಯಾ ನಂತರ ಈ ಪ್ರಯತ್ನ ಮುಂದುವರಿಯಲಿಲ್ಲ.

ಬ್ರೆಜಿಲ್‌ ಸುಮಾರು 80 ವರ್ಷಗಳಿಂದ ಎಥೆನಾಲ್ ಬಳಕೆ ಅಳವಡಿಸಿಕೊಂಡಿದೆ. ಅಲ್ಲಿ ಪೆಟ್ರೋಲ್, ಡೀಸೆಲ್ ಜೊತೆಗೆ ಎಥೆನಾಲ್ ಆಧಾರಿತ ವಾಹನಗಳೂ ಬಳಕೆಯಲ್ಲಿವೆ. ಎಥೆನಾಲ್ ಮಿಶ್ರಣದ ವಿವಿಧ ಪ್ರಮಾಣಗಳಿಗೆ ಅನುಗುಣವಾಗಿ ವಾಹನಗಳ ಎಂಜಿನ್‌ಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಇ-10 ಎಂದರೆ ಶೇ.10 ಎಥೆನಾಲ್ ಮತ್ತು ಶೇ.90 ಪೆಟ್ರೋಲ್, ಇ- 20 ಎಂದರೆ ಶೇ.20 ಎಥೆನಾಲ್ ಹಾಗೂ ಶೇ.80 ಪೆಟ್ರೋಲ್. ಇದೇ ರೀತಿ ಇ-30ಯಲ್ಲಿ ಶೇ.30 ಎಥೆನಾಲ್ ಮತ್ತು ಶೇ.70 ಪೆಟ್ರೋಲ್ ಇರುತ್ತದೆ. ಇ- 85 ಮಾದರಿಯಲ್ಲಿ ಶೇ.85 ಎಥೆನಾಲ್ ಹಾಗೂ ಶೇ.15 ಪೆಟ್ರೋಲ್ ಬಳಸಲಾಗುತ್ತದೆ. ಇಂತಹ ಇಂಧನ ಬಳಕೆಗೆ ಅನುಕೂಲವಾಗುವ ವಾಹನಗಳನ್ನು ಕೆಲವು ಕಂಪನಿಗಳು ಪರಿಚಯಿಸಿವೆ. ಇ-100 ಮಾದರಿಯನ್ನೂ ಪರಿಚಯಿಸಲಾಗಿದೆ.

ಬೇಡಿಕೆಗಿಂತ ಉತ್ಪಾದನೆ ಹೆಚ್ಚು

ದೇಶದಲ್ಲಿ ಎಥೆನಾಲ್ ಉತ್ಪಾದನೆ ಮತ್ತು ಬಳಕೆ ಒಂದಕ್ಕೊಂದು ಹೆಚ್ಚು ಕಡಿಮೆ ಇದೆ. ಒಂದು ರೀತಿಯಲ್ಲಿ ಬೇಡಿಕೆಗಿಂತಲೂ ಹೆಚ್ಚು ಎಥೆನಾಲ್‌ ಉತ್ಪಾದನೆ ಇದೆ. ವರ್ಷಕ್ಕೆ ಸುಮಾರು 2,200 ಕೋಟಿ ಲೀಟರ್‌ ಎಥೆನಾಲ್ ಉತ್ಪಾದನೆಯಾಗುತ್ತಿದೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳ ಬಳಕೆ ಸುಮಾರು 1,200 ಕೋಟಿ ಲೀಟರ್‌ ಇದೆ. ಹೀಗಾಗಿ ಸಾವಿರ ಕೋಟಿ ಲೀ. ಎಥೆನಾಲ್‌ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚು ಉತ್ಪಾದನೆ ಇದೆ. ರಿಲಯನ್ಸ್, ಎಸ್ಸಾರ್ ಮತ್ತು ನಯಾರಾ ಸೇರಿ ಇತರೆ ಖಾಸಗಿ ಕಂಪನಿಗಳ ಬಳಕೆ ಸುಮಾರು 200ರಿಂದ 250 ಕೋಟಿ ಲೀಟರ್‌ ಇದೆ. ಹೀಗಾಗಿ ದೇಶದಲ್ಲಿ ಬೇಡಿಕೆ ಮತ್ತು ಪೂರೈಕೆ ಪರಿಗಣಿಸಿದರೆ ಉತ್ಪಾದನೆ ಹೆಚ್ಚಾಗಿದೆ ಎಂಬುವುದು ಸ್ಪಷ್ಟವಾಗುತ್ತದೆ.

ಎಥೆನಾಲ್ ಉತ್ಪಾದನೆಗೆ ಕಬ್ಬು, ಮೊಲಾಸಿಸ್, ಅಕ್ಕಿ, ಮೆಕ್ಕೆಜೋಳ ಸೇರಿ ವಿವಿಧ ಆಹಾರ ಧಾನ್ಯ ಬಳಸಬಹುದು. ಕೃಷಿ ತ್ಯಾಜ್ಯ, ಕಬ್ಬಿನ ಸಿಪ್ಪೆ ಹಾಗೂ ಇತರೆ ಜೈವಿಕ ಅವಶೇಷಗಳಿಂದಲೂ ಎಥೆನಾಲ್ ಉತ್ಪಾದಿಸುವ ಸಾಧ್ಯತೆ ಇದೆ. ಕಬ್ಬು, ಮೆಕ್ಕೆಜೋಳ ಮತ್ತು ಆಹಾರ ಧಾನ್ಯಗಳಿಂದ ಉತ್ಪಾದಿಸುವ ಎಥೆನಾಲ್ ಅನ್ನು ಮೊದಲನೇ ತಲೆಮಾರಿನ (1ಉ) ಎಥೆನಾಲ್ ಎಂದು ಕರೆಯಲಾಗುತ್ತದೆ. ಕಬ್ಬಿನ ಸಿಪ್ಪೆ ಹಾಗೂ ಕೃಷಿ ತ್ಯಾಜ್ಯಗಳಿಂದ ಉತ್ಪಾದಿಸುವುದನ್ನು ಎರಡನೇ ತಲೆಮಾರಿನ (2ಉ) ಎಥೆನಾಲ್ ಎಂದು ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ 3ನೇ ತಲೆಮಾರಿನ ಎಥೆನಾಲ್ ಉತ್ಪಾದನೆ ಕುರಿತು ಪ್ರಯತ್ನಗಳು ನಡೆಯುತ್ತಿವೆ.

 ಡೀಸೆಲ್‌ನಲ್ಲಿ ಎಥೆನಾಲ್ ಮಿಶ್ರಣಕ್ಕೆ ಸಂಶೋಧನೆ 

ಎಥೆನಾಲ್ ಅನ್ನು ಪ್ರಸ್ತುತ ಪೆಟ್ರೋಲ್‌ನಲ್ಲಿ ಮಾತ್ರ ಮಿಶ್ರಣ ಮಾಡಲಾಗುತ್ತಿದೆ. ಇದಕ್ಕೆ ಸರಿ ಹೊಂದುವ ವಾಹನಗಳ ಎಂಜಿನ್‌ಗಳನ್ನೇ ಸಿದ್ಧಪಡಿಸಲಾಗಿದೆ. ಆದರೆ, ಪೆಟ್ರೋಲ್‌ನಲ್ಲಿ ಸುಲಭವಾಗಿ ಹೊಂದಿಕೊಳ್ಳುವ ಎಥೆನಾಲ್‌ನಂತೆ ಡೀಸೆಲ್‌ನಲ್ಲಿ ನೇರವಾಗಿ ಎಥೆನಾಲ್ ಮಿಶ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಪೆಟ್ರೋಲ್ ಮತ್ತು ಎಥೆನಾಲ್ ನಡುವಿನ ಹೊಂದಾಣಿಕೆಗೆ ಹೋಲಿಸಿದರೆ ಡೀಸೆಲ್ ಮತ್ತು ಎಥೆನಾಲ್‌ನ ನಡುವೆ ಗುಣಲಕ್ಷಣಗಳು ಹಾಗೂ ಸಾಂದ್ರತೆಯ ವ್ಯತ್ಯಾಸವಿದೆ. ಹೀಗಾಗಿ ಎರಡೂ ಪ್ರತ್ಯೇಕ ಆಗುವ ಸಾಧ್ಯತೆ ಇದೆ. ದೇಶದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಡೀಸೆಲ್ ಬಳಕೆಯು ಪೆಟ್ರೋಲ್‌ಗಿಂತ ಸುಮಾರು 4 ಪಟ್ಟು ಹೆಚ್ಚಿದೆ. ಹೀಗಾಗಿ ಹೆಚ್ಚುವರಿ ಎಥೆನಾಲ್ ಅನ್ನು ಡೀಸೆಲ್ ಬಳಕೆಯಲ್ಲೂ ಬಳಸುವ ಉದ್ದೇಶದಿಂದ ಸಂಶೋಧನೆಗಳು ನಡೆಯುತ್ತಿವೆ.

ಇದಕ್ಕಾಗಿ ಐಸೊಬ್ಯುಟನಾಲ್‌ನಂತಹ ಪರ್ಯಾಯ ಇಂಧನಗಳ ಬಗ್ಗೆಯೂ ಅಧ್ಯಯನ ಮಾಡಲಾಗುತ್ತಿದೆ. ಅಮೆರಿಕದಲ್ಲಿ ಈ ಸಂಬಂಧ ಪ್ರಯೋಗಗಳು ನಡೆದಿವೆ. ಆದರೆ ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ಇಂತಹ ಇಂಧನಗಳ ಬೆಲೆ ಸಾಮಾನ್ಯ ಡೀಸೆಲ್‌ಗಿಂತ ಹೆಚ್ಚಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಡೀಸೆಲ್ ಲೀಟರ್‌ಗೆ 80 ರು.ನಿಂದ 90 ರು.ಆಸುಪಾಸಿನಲ್ಲಿದ್ದರೆ, ಪರ್ಯಾಯ ಇಂಧನದ ವೆಚ್ಚ 120 ರು.ವರೆಗೆ ತಲುಪುವ ಸಾಧ್ಯತೆ ಇದೆ. ಬ್ಲೆಂಡಿಂಗ್ ಏಜೆಂಟ್‌ಗಳ ಬಳಕೆಯ ವೆಚ್ಚ ಹೆಚ್ಚಿಸುತ್ತದೆ. ಈ ಕುರಿತು ಸಂಶೋಧನೆ ಮುಂದುವರಿದಿದ್ದು, ಮುಂದಿನ 1 ಅಥವಾ 2 ವರ್ಷಗಳಲ್ಲಿ ಡೀಸೆಲ್‌ನಲ್ಲಿಯೂ ಮಿಶ್ರಣಕ್ಕೆ ಅವಕಾಶಗಳು ರೂಪುಗೊಳ್ಳಬಹುದು. ಒಂದು ವೇಳೆ ಈ ಸಂಶೋಧನೆಗಳು ಯಶಸ್ವಿಯಾದರೆ ಇಂಧನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯಾದರೂ ಅಚ್ಚರಿಯಿಲ್ಲ.

ಎಥೆನಾಲ್ ಮಿಶ್ರಿತ ಇಂಧನ ಕುರಿತು ಚರ್ಚಿಸುವಾಗ ವಾಹನಗಳ ಎಂಜಿನ್ ವಿನ್ಯಾಸ, ಇಂಧನದ ಗುಣಮಟ್ಟ, ಮಿಶ್ರಣದ ಪ್ರಮಾಣ ಹಾಗೂ ದೇಶದ ಕೃಷಿ ಉತ್ಪಾದನೆಯ ಪರಿಸ್ಥಿತಿ ಸಮಗ್ರವಾಗಿ ಪರಿಗಣಿಸಬೇಕಾಗುತ್ತದೆ.

 ಇ85, ಇ100 ವಾಹನಗಳ ತಯಾರಾಗಲಿ 

ದೇಶದಲ್ಲಿ ಇಥೆನಾಲ್ ಉತ್ಪಾದನೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇ-85 ಮತ್ತು ಇ-100 ಮಾದರಿ ವಾಹನಗಳನ್ನು ಪರಿಚಯಿಸುವಂತೆ ಎಥೆನಾಲ್ ಉತ್ಪಾದಕರ ಸಂಘಟನೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಬ್ರೆಜಿಲ್‌ನಲ್ಲಿ ಈಗಾಗಲೇ ಇಂತಹ ವಾಹನಗಳು ಬಳಕೆಯಲ್ಲಿವೆ. ಈ ಮನವಿಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ದೇಶದಲ್ಲಿ ಎಥೆನಾಲ್ ಬಳಕೆಗೆ ಅನುಗುಣವಾಗಿ ವಾಹನಗಳ ಲಭ್ಯತೆಯೂ ಹೆಚ್ಚಾಗಬೇಕು.

 ಕಬ್ಬು ಉತ್ಪಾದನೇಲಿ ಏರಿಳಿತದ ಆತಂಕ 

ಮಳೆ ಕೊರತೆಯಿಂದ ಕಬ್ಬು ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ವರ್ಷ ಕಬ್ಬಿನ ಉತ್ಪಾದನೆ ಸುಮಾರು ಶೇ.30ರಷ್ಟು ಕಡಿಮೆ ಆಗುವ ಅಂದಾಜಿದೆ. ಮುಂದಿನ ವರ್ಷಗಳಲ್ಲಿ ಬರಗಾಲ ಪರಿಣಾಮ ಇನ್ನಷ್ಟು ಹೆಚ್ಚಾಗಿ 2026-27 ಮತ್ತು 2027-28ನೇ ಸಾಲಿನಲ್ಲಿ ಕಬ್ಬಿನ ಉತ್ಪಾದನೆ ಶೇ.50ಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆ ಇದೆ. ಉತ್ತಮ ಮಳೆಯಾದ ನಂತರ ರೈತರು ಕಬ್ಬು ಬೆಳೆಯಲು ಮುಂದಾಗುವುದರಿಂದ 2028-29ರ ವೇಳೆಗೆ ಉತ್ಪಾದನೆ ಮತ್ತೆ ಹೆಚ್ಚಾಗಬಹುದು. ಕಬ್ಬು ವಾಣಿಜ್ಯ ಬೆಳೆ ಆಗಿರುವುದರಿಂದ ರೈತರು ಮಳೆಯ ಪರಿಸ್ಥಿತಿಗೆ ಅನುಗುಣವಾಗಿ ಬೆಳೆಯುತ್ತಾರೆ. ಕಳೆದ ಹಲವು ದಶಕಗಳ ಬೆಳೆ ಮಾದರಿ ಗಮನಿಸಿದರೆ ಕೆಲವು ವರ್ಷ ಉತ್ಪಾದನೆ ಹೆಚ್ಚಾಗುತ್ತದೆ. ಮತ್ತೆ ಕೆಲವು ವರ್ಷ ಕಡಿಮೆಯಾಗುತ್ತದೆ. ಇದು ಬೆಳೆಗಳ ಸ್ವಾಭಾವಿಕ ಏರಿಳಿತದ ಭಾಗವಾಗಿದೆ.

PREV
Read more Articles on

Recommended Stories

ಮತಪಟ್ಟಿಯ ಶುದ್ಧೀಕರಣ ವೋಟ್‌ಚೋರಿ ಹೇಗಾದೀತು?
ಮರ್ಸಿಡಿಸ್‌ ಬೆನ್ಜ್‌ ಎಲೆಕ್ಟ್ರಿಕ್‌ ಜಿಎಲ್‌ಸಿ ಎಸ್‌ಯುವಿ ಮಾರುಕಟ್ಟೆಗೆ