ಕಣ್ಮನ ಸೆಳೆಯುವ ಫಲಪುಷ್ಪ ಪ್ರದರ್ಶನ : ಲಾಲ್‌ಬಾಗ್‌ನಲ್ಲಿ 218ನೇ ಶೋಗೆ ಮುಖ್ಯಮಂತ್ರಿ ಚಾಲನೆ

KannadaprabhaNewsNetwork |  
Published : Aug 08, 2025, 02:00 AM ISTUpdated : Aug 08, 2025, 05:49 AM IST
lalbagh flower 17 | Kannada Prabha

ಸಾರಾಂಶ

ಸಸ್ಯಕಾಶಿ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಆಯೋಜಿಸಿರುವ ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 218ನೇ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

  ಬೆಂಗಳೂರು : ಸಸ್ಯಕಾಶಿ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಆಯೋಜಿಸಿರುವ ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 218ನೇ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 218ನೇ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದ ಮೂಲಕ ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಲಾಗಿದೆ ಎಂದರು.

ಚೆನ್ನಮ್ಮ ಅವರು ಮೊದಲನೇ ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ, 2ನೇ ಯುದ್ಧದಲ್ಲಿ ಅವರ ಸೆರೆಯಾಯಿತು. ಅದೇ ರೀತಿ ಚೆನ್ನಮ್ಮ ಅವರ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನಿಗೆ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆ ಆಯಿತು. ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಸ್ವಾತಂತ್ರ್ಯ ಬಂದ ದಿನವಾದ ಆ.15ರಂದು, ನೇಣಿಗೆ ಹಾಕಿದ್ದು ಸಂವಿಧಾನ ಜಾರಿಗೆ ಬಂದ ದಿನವಾದ ಜ.26ರಂದು. ಇದು ಕಾಕತಾಳೀಯ ಎನ್ನಬಹುದು. ಬ್ರಿಟಿಷರ ವಿರುದ್ಧ ರಾಯಣ್ಣ ವೀರಾವೇಶದಿಂದ ಹೋರಾಡಿದ್ದರು. ಇದೀಗ ತೋಟಗಾರಿಕೆ ಇಲಾಖೆಯಿಂದ ಅವರಿಗೆ ಪುಷ್ಪ ಗೌರವ ಸಲ್ಲಿಸಲಾಗುತ್ತಿದೆ ಎಂದು ಬಣ್ಣಿಸಿದರು.

ಚೆನ್ನಮ್ಮ ಜಯಂತಿ ಘೋಷಿಸಿದ್ದು ನಾನೇ:

ಸರ್ಕಾರದಿಂದಲೇ ರಾಜ್ಯಾದ್ಯಂತ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಆಚರಣೆ ಮಾಡುವುದಾಗಿ ಘೋಷಿಸಿದ್ದು ನಾನೇ. ಅಂತೆಯೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕ್ಷೇತ್ರ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಿದ್ದು ನಾನೇ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ 2024-25ನೇ ಸಾಲಿನಲ್ಲಿ ₹15.48 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಸಂಗೊಳ್ಳಿಯಲ್ಲಿ 110 ಎಕರೆ ಜಾಗ ನೀಡಿದ್ದು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಶಾಸಕ ಉದಯ ಬಿ.ಗರುಡಾಚಾರ್‌, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್‌, ನಿರ್ದೇಶಕ ಡಾ.ರಮೇಶ್‌, ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌ ಇದ್ದರು. 

ಧರ್ಮಸ್ಥಳ ಕೇಸ್‌: ಯಾರು ಮಾಡಿದ್ದರೂ ತಪ್ಪೇ: ಸಿದ್ದು

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದೀರಿ ಎಂದು ಆರೋಪಿಸಿ ಸ್ಥಳೀಯ ಕೆಲವರು ಯೂಟ್ಯೂಬರ್‌ಗಳ ಮೇಲೆ ನಡೆಸಿದ ಹಲ್ಲೆ ಮತ್ತು ಗಲಾಟೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಪ್ಪು ಯಾರೇ ಮಾಡಿದ್ದರೂ ತಪ್ಪೇ, ಕಾನೂನು ರೀತಿಯಲ್ಲಿ ಕ್ರಮ ಆಗುತ್ತದೆ ಎಂದು ಹೇಳಿದರು.

PREV
Read more Articles on

Recommended Stories

ಸಕಲ ಭಾಗ್ಯಗಳ ಮಳೆಗರೆವ ವರಮಹಾಲಕ್ಷ್ಮೀ
ಲಾಕ್‌ಡೌನ್‌ನಿಂದಾಗಿ ಪಂಚರ್ ಅಂಗಡಿ ಮುಚ್ಚಿ ಬೆಲ್ಲದ ಉದ್ಯಮಿಯಾದರು