ಕನ್ನಡಪ್ರಭವಾರ್ತೆ ಬೆಂಗಳೂರು
ಈ ಮಹತ್ವದ ಸ್ವಾಧೀನದ ಮೂಲಕ ಐಡಿಬಿಐ ಬ್ಯಾಂಕ್ ಅನ್ನು ಬ್ಯಾಂಕಿಂಗ್, ವಿಮೆ, ಹೂಡಿಕೆ ಬ್ಯಾಂಕಿಂಗ್ ಹಾಗೂ ಸಂಪತ್ತು ನಿರ್ವಹಣೆ ಸೇರಿದಂತೆ ವಿವಿಧ ಹಣಕಾಸು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಬೃಹತ್ ಸಮಗ್ರ ಹಣಕಾಸು ಸಂಸ್ಥೆಯಾಗಿ ರೂಪಿಸಲು ಫೇರ್ಫ್ಯಾಕ್ಸ್ ಮುಂದಾಗಿದೆ.
ಕೋಟ್ಯಧಿಪತಿ ಹೂಡಿಕೆದಾರ ಪ್ರೇಮ್ ವತ್ಸಾ ನೇತೃತ್ವದ ಫೇರ್ಫ್ಯಾಕ್ಸ್ ಸಂಸ್ಥೆಯು ಐಡಿಬಿಐ ಬ್ಯಾಂಕ್ನ ಶೇ. 60.72ರಷ್ಟು ನಿಯಂತ್ರಣ ಪಾಲನ್ನು ₹52,878 ಕೋಟಿಗೆ ಖರೀದಿಸಲಿದೆ. ಸರ್ಕಾರ ಪ್ರತಿ ಷೇರಿಗೆ ₹75.99 ಮಾನದಂಡ ಮೌಲ್ಯ ನಿಗದಿಪಡಿಸಿದ್ದರೆ, ಫೇರ್ಫ್ಯಾಕ್ಸ್ ಪ್ರತಿ ಷೇರಿಗೆ ₹81ರಂತೆ ಬಿಡ್ ಸಲ್ಲಿಸಿದೆ. 2026ರ ಮಾ. 31ರ ಅನ್ವಯ ಬ್ಯಾಂಕ್ನ ಪ್ರತಿ ಷೇರಿನ ಬುಕ್ ವ್ಯಾಲ್ಯು ₹51.85 ಇದ್ದು, ಇದಕ್ಕಿಂತ ಶೇ. 56ರಷ್ಟು ಹೆಚ್ಚಿನ ದರಕ್ಕೆ ಫೇರ್ಫ್ಯಾಕ್ಸ್ ಖರೀದಿಗೆ ಮುಂದಾಗಿದೆ.ಈ ಸ್ವಾಧೀನದ ಬಳಿಕ ಬ್ಯಾಂಕ್ನ ಆಡಳಿತ ನಿರ್ವಹಣೆ ಫೇರ್ಫ್ಯಾಕ್ಸ್ ಕೈಸೇರಲಿದ್ದು, ಕೇಂದ್ರ ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಒಟ್ಟಾಗಿ ಶೇ. 34ರಷ್ಟು ಪಾಲನ್ನು ಉಳಿಸಿಕೊಂಡು ಬ್ಯಾಂಕ್ನ ಮುಂದಿನ ಬೆಳವಣಿಗೆಯಲ್ಲಿ ಭಾಗಿಯಾಗಲಿವೆ.
ಹಿಂದೊಮ್ಮೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಐಡಿಬಿಐ ಬ್ಯಾಂಕ್, 2017ರ ಮೇನಿಂದ 2021ರ ಮಾರ್ಚ್ವರೆಗೆ ಆರ್ಬಿಐನ ತ್ವರಿತ ಸುಧಾರಣಾ ಕ್ರಮಗಳ (ಪಿಸಿಎ) ಚೌಕಟ್ಟಿನಲ್ಲಿತ್ತು. ಸರ್ಕಾರ ಮತ್ತು ಎಲ್ಐಸಿ ನೀಡಿದ ಬಂಡವಾಳ ನೆರವಿನಿಂದ ಚೇತರಿಸಿಕೊಂಡಿರುವ ಬ್ಯಾಂಕ್, ಕಳೆದ ಹಣಕಾಸು ವರ್ಷದಲ್ಲಿ ₹9,000 ದಿಂದ ₹10,000 ಕೋಟಿವರೆಗೆ ಲಾಭ ದಾಖಲಿಸಿ ಗಮನ ಸೆಳೆದಿದೆ.
‘ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಭಾರತದ ಅತ್ಯುತ್ತಮ ಸಮಗ್ರ ಬ್ಯಾಂಕ್ ಆಗುವ ಸಾಮರ್ಥ್ಯ ಐಡಿಬಿಐ ಬ್ಯಾಂಕ್ಗಿದೆ. ಈ ನಡೆಯು ಸಾಮಾನ್ಯ ಜನರ ಆರ್ಥಿಕ ಜೀವನದಲ್ಲೂ ದೊಡ್ಡ ಪರಿವರ್ತನೆ ತರಲಿದೆ’ ಎಂದು ಫೇರ್ಫ್ಯಾಕ್ಸ್ ಅಧ್ಯಕ್ಷ ಹಾಗೂ ಸಿಇಒ ಪೀಟರ್ ಕ್ಲಾರ್ಕ್ ಹೇಳಿದ್ದಾರೆ.