ವಿದ್ಯುತ್ ತಂತಿ ತುಂಡಾಗಿ ರೈತ ಸಾವು

KannadaprabhaNewsNetwork | Published : Nov 25, 2023 1:15 AM

ಸಾರಾಂಶ

ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಟ್ಟೆಕ್ಯಾತನಹಳ್ಳಿಯಲ್ಲಿ ನಡೆದಿದೆ. ತಾಲೂಕಿನ ರಾಜೇನಹಳ್ಳಿ ರೈತ ರವಿಕುಮಾರ್(43) ಮೃತ ರೈತ.ರವಿಕುಮಾರ್ ರಾಜೇನಹಳ್ಳಿಯಲ್ಲಿ ವಾಸವಿದ್ದು, ಗುರುವಾರ ಮಧಾಹ್ನ ಎರಡು ಗಂಟೆ ಸಮಯದಲ್ಲಿ ಕಟ್ಟೆಕ್ಯಾತನಹಳ್ಳಿ ಬಳಿ ಇರುವ ತಮ್ಮ ಜೀಮೀನಿನಲ್ಲಿ ಹುಲ್ಲು ಕುಯ್ಯಲು ತೆರಳಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಟಿಸಿಯಿಂದ ವಿದ್ಯುತ್ ತಂತಿ ತುಂಡಾಗಿರುವುದನ್ನು ಗಮನಿಸದೇ ಭತ್ತದ ಗದ್ದೆಯ ಬದುವಿನ ಮೇಲೆ ತೆರಳಿದಾಗ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಂಜೆಯಾದರೂ ಮನೆಗೆ ಬಾರದ ರವಿಕುಮಾರ್ ಅವರನ್ನು ಹುಡುಕಿಕೊಂಡು ಅವರ ಭಾವಮೈದುನ ಜಮೀನಿನ ಬಳಿ ಬಂದಿದ್ದಾರೆ. ಅಲ್ಲಿ ರವಿಕುಮಾರ್ ಶವ ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು, ಸೆಸ್ಕಾಂ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ತಂತಿ, ಕಂಬ ಬದಲಿಸದ ಅಧಿಕಾರಿಗಳು:

ತಾಲೂಕಿನಾದ್ಯಂತ ಸೆಸ್ಕಾಂ ಇಲಾಖೆಯವರ ನಿರ್ಲಕ್ಷ್ಯದಿಂದ ಪದೇಪದೇ ಇಂತಹ ಘಟನೆಗಳು ಸಂಭವಿಸುತ್ತಿದ್ದರೂ ಹಳೆಯ ವಿದ್ಯುತ್ ತಂತಿಗಳು ಮತ್ತು ಕಂಬಗಳನ್ನು ಬದಲಿಸುವ ಗೋಜಿಗೆ ಹೋಗದಿರುವುದು ಇಂತಹ ಘಟನೆಗಳು ನಡೆಯಲು ಕಾರಣ ಎಂದು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ದೂರಿದ್ದಾರೆ. ವಿದ್ಯುತ್ ಅವಘಡಗಳಿಂದ ಮೃತಪಟ್ಟಿರುವ ವ್ಯಕ್ತಿಗಳ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರು. ಪರಿಹಾರ ನೀಡಬೇಕು. ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪ ಮಾಡಿರುವ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

-----

24ಕೆಎಂಎನ್ ಡಿ27

ರೈತ ರವಿಕುಮಾರ್

Share this article