ಹೆಗ್ಗೋಠಾರ-ಮೇಗಲಹುಂಡಿ ರಸ್ತೆಯಲ್ಲಿರುವ ಬಿಲ್ವ ಗ್ರಾನೈಟ್ ಕಂಪನಿಯ ಉದ್ಘಾಟನೆ । ನನ್ನ ಸೋಲಿಗೆ ನಮ್ಮವರೇ ಕಾರಣವೆಂದ ಮಾಜಿ ಸಚಿವ
ಕನ್ನಡಪ್ರಭ ವಾರ್ತೆ ಚಾಮರಾಜನಗರಸ್ಧಳೀಯರು ಉದ್ಯಮಿಗಳಾಗಿ ಹೆಚ್ಚು- ಹೆಚ್ಚು ಉದ್ಯೋಗ ನೀಡುವಂತಾಗಬೇಕು ಎಂದು ಮಾಜಿ ಸಚಿವ ವಿ. ಸೋಮಣ್ಣ ತಿಳಿಸಿದರು.
ಹೆಗ್ಗೋಠಾರ-ಮೇಗಲಹುಂಡಿ ರಸ್ತೆಯಲ್ಲಿರುವ ಬಿಲ್ವ ಗ್ರಾನೈಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ಚಾಮರಾಜನಗರದ ಜಿಲ್ಲೆಯಲ್ಲಿ ಸಂಪನ್ಮೂಲ ಹೇರಳವಾಗಿದ್ದು, ಹೊರಗಿನವರು ಉದ್ಯಮ ಸ್ಥಾಪನೆ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದ್ದರು. ಸ್ಧಳೀಯರು ಭೂಮಿ ಕಳೆದುಕೊಂಡು, ಉದ್ಯೋಗವಿಲ್ಲದೆ ಅಲೆದಾಡುವಂತಹ ಪರಿಸ್ಧಿತಿ ನಿರ್ಮಾಣವಾಗಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಾನು ಉಸ್ತುವಾರಿ ಸಚಿವನಾಗಿದ್ದಾಗ ಕೈಗಾರಿಕೆ ಪ್ರದೇಶ ಸ್ಧಾಪನೆಗೆ ಒತ್ತು ನೀಡುವ ಮೂಲಕ ಸ್ಧಳೀಯರು ಉದ್ಯಮ ಸ್ಥಾಪನೆ ಮಾಡುವಂತೆ ಸಲಹೆ ನೀಡಿದ್ದೆನು. ಪರಿಣಾಮ ಹಲವರು ಉದ್ಯಮ ಸ್ಧಾಪಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸ್ಧಳೀಯರು ಉದ್ಯಮಿಗಳಾದರೆ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಹೆಚ್ಚಿನ ಉದ್ಯೋಗ ಸ್ಧಳೀಯರಿಗೇ ದೊರಕುವಂತಾಗುತ್ತದೆ. ಈ ನಿಟ್ಟಿನಲ್ಲಿ ಸ್ಧಳೀಯರು ಮತ್ತಷ್ಟು ಉದ್ಯಮ ಸ್ಧಾಪಿಸಬೇಕು. ಉದ್ಯಮ ಸ್ಥಾಪಿಸುವುದರ ಜೊತೆಗೆ ಅದನ್ನು ಕಟ್ಟಿ ಬೆಳೆಸುವಲ್ಲಿ ಜಾಣ್ಮೆ ಪ್ರದರ್ಶನ ಮಾಡಬೇಕಿದೆ ಎಂದು ಸಲಹೆ ನೀಡಿದರು.ಚಾಮರಾಜನಗರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಮೊದಲು ಈ ಭಾಗದ ರೈತರು ತೀವ್ರ ಸಂಕಷ್ಟದಲ್ಲಿದ್ದರು. ಕೆರೆಗಳು ತುಂಬಿದ ಪರಿಣಾಮ ಬರಗಾಲದಲ್ಲೂ ಒಂದಿಷ್ಟು ಹಸಿರು ಕಾಣುವಂತಾಗಿದ್ದು, ಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ನಾವು ಹಾಕಿದ ಶ್ರಮದ ಸಾರ್ಥಕವೆಸಿದೆ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಕೆಎಸ್‌ಎಫ್‌ಸಿ ಉಪ ಮಹಾಪ್ರಬಂಧಕ ಎ.ಟಿ. ನಟರಾಜ್, ಉದ್ಯಮಿ ಸುದೀಪ್, ಬಿಲ್ವ ಗ್ರಾನೈಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಪಾಲುದಾರರಾದ ಚಿನ್ನಸ್ವಾಮಿ ವಡ್ಡಗೆರೆ, ಬಿಲ್ವ ಮಹೇಶ್, ಶಶಾಂಕ್ ಸ್ವಾಮಿ ಮತ್ತಿತರರಿದ್ದರು.-------
ಕೋಟ್..ನಾನು ಉಸ್ತುವಾರಿ ಸಚಿವರಾಗಿದ್ದ ವೇಳೆ ಗಣಿ ಮಾಲೀಕರು ನನ್ನ ಮನೆಗೆ ಮೂಟೆಗಟ್ಟಲೇ ಹಣ ತಂದಿದ್ದರು, ನನಗೇನು ನಿಮ್ಮ ದುಡ್ಡು ಬೇಡ, ನೀವು ಗಣಿಗಾರಿಕೆ ನಡೆಸುವ ಊರಿನ ಶಾಲೆಗಳಿಗೆ, ರಸ್ತೆಗಳಿಗೆ ಈ ಹಣ ವಿನಿಯೋಗಿಸಿ ಎಂದು ವಾಪಾಸ್ ಕಳುಹಿಸಿದ್ದೆ. ಸಿಕ್ಕ ಕಡಿಮೆ ಅವಕಾಶದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ, ಕೆರೆಗೆ ನೀರು ತುಂಬುವ ಯೋಜಿಸುವಾಗ ನನ್ನನ್ನು ಹುಚ್ಚ ಎಂದಿದ್ದರು. ಆದರೆ ಈಗ ನನ್ನ ಕೆಲಸ ನೆನಪಾಗುತ್ತದೆ.-ವಿ. ಸೋಮಣ್ಣ, ಮಾಜಿ ಸಚಿವ
---23ಸಿಎಚ್‌ಎನ್10
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ-ಮೇಗಲಹುಂಡಿ ರಸ್ತೆಯಲ್ಲಿರುವ ಬಿಲ್ವ ಗ್ರಾನೈಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಗುರುವಾರ ಮಾಜಿ ಸಚಿವ ವಿ. ಸೋಮಣ್ಣ ಉದ್ಘಾಟಿಸಿದರು. ಚಿನ್ನಸ್ವಾಮಿ ವಡ್ಡಗೆರೆ, ಬಿಲ್ವ ಮಹೇಶ್, ಶಶಾಂಕ್ ಸ್ವಾಮಿ ಇದ್ದಾರೆ.