ಪದೇ ಪದೇ ಅತಿವೃಷ್ಟಿ, ಅನಾವೃಷ್ಟಿ - ಇದು ಯಾರ ಸೃಷ್ಟಿ ?

Published : Mar 22, 2026, 10:56 AM IST
Western Ghat

ಸಾರಾಂಶ

ಪಶ್ಚಿಮ ಘಟ್ಟದ ಹುಲ್ಲುಗಾವಲು ಪ್ರದೇಶವು ಮಳೆಗಾಲದ ಅಗಾದ ಮಳೆ ನೀರನ್ನು ಬೆಟ್ಟಗಳ ಒಳಗಿನ ಜಲ ನಾಡಿಗಳಲ್ಲಿ ಶೋಲಾ ಕಣಿವೆಗೆ ಸಾಗಿಸಿ ಹೊಳೆಗಳು ಸದಾ ಜೀವಂತವಿರಲು ತಮ್ಮ ಪಾತ್ರ ವಹಿಸುತ್ತವೆ. ಹುಲ್ಲುಗಾವಲು ಮತ್ತು ಶೋಲಾ ಅಡವಿಯ ಜೀವಂತಿಕೆಯನ್ನು ಅಲ್ಲಿನ ಪ್ರಾಣಿ, ಪಕ್ಷಿಗಳು ಕಾರ್ಯ ನಿರ್ವಹಿಸುತ್ತವೆ.

 -ದಿನೇಶ್ ಹೊಳ್ಳ. ಪರಿಸರವಾದಿ, ಮಂಗಳೂರು.

(ಮಾ.21 ಅಡವಿ ದಿನಾಚರಣೆ, ಮಾ.22 ವಿಶ್ವ ಜಲ ದಿನಾಚರಣೆ) 

ಒಂದು ಮನೆ ಅಂದರೆ ಅಲ್ಲಿ ಮನೆಯವರು, ಬಂದು ಹೋಗುವ ಸಂಬಂಧಿಕರು, ನೆಂಟರು, ಸ್ನೇಹಿತರು ಬರುವುದು, ಹೋಗುವುದು ಇರಲೇಬೇಕು. ಆಗ ಆ ಮನೆಗೆ ಒಂದು ಸ್ಥಾನಮಾನ. ಅದೇ ರೀತಿ ಕಾಡು ಅಂದರೆ ಅಲ್ಲಿ ಮರ, ಗಿಡಗಳು ಎಷ್ಟು ಮುಖ್ಯವೋ ಅದೇ ರೀತಿ ಪ್ರಾಣಿ, ಪಕ್ಷಿಗಳು ಕೂಡಾ ಇದ್ದರೆ ಮಾತ್ರ ಆ ಕಾಡಿನ ಜೀವಂತಿಕೆ ಸಹಜವಾಗಿರುತ್ತದೆ. ಪಶ್ಚಿಮ ಘಟ್ಟದ ಗಿರಿ, ವನ, ಕಣಿವೆಗಳಲ್ಲಿ ಹುಲ್ಲಿನಿಂದ ಬಾನಿಗೆ ಚುಚ್ಚುವ ಮರದವರೆಗೆ, ಇರುವೆಯಿಂದ ಆನೆಯವರೆಗೆ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ಒಂದು ಜೀವ ಪ್ರಭೇಧಕ್ಕೆ ಸಮಸ್ಯೆ ಆದರೆ ಇನ್ನೊಂದು ಜೀವ ಪ್ರಬೇಧದ ಬದುಕಿಗೆ ಕಂಟಕವಾಗುತ್ತದೆ. ಪಶ್ಚಿಮ ಘಟ್ಟದ ಹುಲ್ಲುಗಾವಲು ಪ್ರದೇಶವು ಮಳೆಗಾಲದ ಅಗಾದ ಮಳೆ ನೀರನ್ನು ಬೆಟ್ಟಗಳ ಒಳಗಿನ ಜಲ ನಾಡಿಗಳಲ್ಲಿ ಶೋಲಾ ಕಣಿವೆಗೆ ಸಾಗಿಸಿ ಹೊಳೆಗಳು ಸದಾ ಜೀವಂತವಿರಲು ತಮ್ಮ ಪಾತ್ರ ವಹಿಸುತ್ತವೆ. ಹುಲ್ಲುಗಾವಲು ಮತ್ತು ಶೋಲಾ ಅಡವಿಯ ಜೀವಂತಿಕೆಯನ್ನು ಅಲ್ಲಿನ ಪ್ರಾಣಿ, ಪಕ್ಷಿಗಳು ಕಾರ್ಯ ನಿರ್ವಹಿಸುತ್ತವೆ.

ಪರಿಸರ ರಕ್ಷಣೆಯ ಅಸಮತೋಲನ:

ಆನೆ, ಕಾಡುಕೋಣ, ಕಡವೆ, ಜಿಂಕೆಗಳಂತಹ ಪ್ರಾಣಿಗಳು ಹುಲ್ಲು, ಸೊಪ್ಪುಗಳನ್ನು ಮತ್ತು ಪಕ್ಷಿಗಳು ಹಣ್ಣು, ಬೀಜಗಳನ್ನು ತಿಂದು ಬೀಜ ಪಸರಣ ಪ್ರಕ್ರಿಯೆಗಳ ಮೂಲಕ ಕಾಡು ಬೆಳೆಯುವಲ್ಲಿ, ಅದೇ ರೀತಿ ಇರುವೆಗಳು, ಗೆದ್ದಲುಗಳು, ಜೇನು ಹುಳಗಳು, ಕೀಟಗಳು ಕೂಡಾ ಕಾಡಿನ ವಿಕಸನಕ್ಕೆ ಕೊಡುಗೆ ನೀಡುತ್ತವೆ. ಹುಲಿ, ಚಿರತೆಗಳು ಸಸ್ಯ ಪ್ರಬೇಧ ಪ್ರಾಣಿಗಳನ್ನು ತಿಂದು ಕಾಡಿನ ಸಮತೋಲನ ಕಾಪಾಡುತ್ತವೆ. ಆದುದರಿಂದ ಪಶ್ಚಿಮ ಘಟ್ಟದ ಕಾಡು, ಗಿರಿ, ಕಣಿವೆ ಸುರಕ್ಷಿತವಾಗಿರುವುದೇ ಅಲ್ಲಿನ ವನ್ಯಜೀವಿಗಳಿಂದ. ಆದರೆ ಇಂದು ಪಶ್ಚಿಮ ಘಟ್ಟದ ಯಾವ ಅಡವಿ ವಲಯ ವ್ಯಾಪ್ತಿಯಲ್ಲಿ ಯಾವ ಪ್ರಾಣಿಗಳು ಇರಬೇಕಿತ್ತೋ ಅವುಗಳು ತೀರಾ ಕಡಿಮೆ ಪ್ರಮಾಣದಲ್ಲಿವೆ. ಪ್ರಾಣಿ, ಪಕ್ಷಿಗಳ ಆವಾಸ ತಾಣಗಳು ಕಡಿತವಾಗುತ್ತಿವೆ.

ಸರ್ಕಾರಿ ಯೋಜನೆಗಳ ಅಡ್ಡಕತ್ತರಿ:

ಸರಕಾರದ ಯಾವುದೋ ಅಸಂಬದ್ಧ ಯೋಜನೆಗಳ ಮೂಲಕ, ಅಕ್ರಮ ರೆಸಾರ್ಟು ನಿರ್ಮಾಣ, ಅಡವಿಯ ಸೂಕ್ಷ್ಮ ಪರಿಸರದಲ್ಲಿ ರಸ್ತೆ ನಿರ್ಮಾಣ, ಜಲ ವಿದ್ಯುತ್ ಯೋಜನೆಗಳು, ಅಡವಿ ಅತಿಕ್ರಮಣ, ಒತ್ತುವರಿ, ಗಣಿಗಾರಿಕೆ, ಟಿಂಬರ್ ಮಾಫಿಯಾ, ಬೇಟೆ ಇತ್ಯಾದಿ ಮೂಲಕ ಅಡವಿಯನ್ನು ಸಂರಕ್ಷಣೆ ಮಾಡಬೇಕಾದ ವನ್ಯ ಜೀವಿಗಳು, ಮರ, ಗಿಡ, ಬೇರು, ಬಳ್ಳಿಗಳ ನೆಮ್ಮದಿಗೆ ಭಂಗವಾಗುತ್ತಿವೆ. ಇದೇ ಕಾರಣದಿಂದ ಪಶ್ಚಿಮ ಘಟ್ಟದ ಹಸಿರು ಚಾದರ, ಹಂದರ ಬಡಕಲಾಗುತ್ತಿದೆ, ನದಿ ಮೂಲಗಳ ಸೂಕ್ಷ್ಮ ತಾಣಗಳಿಗೆ ಬಿಕ್ಕಟ್ಟು ನಿರ್ಮಾಣವಾಗಿ ನದಿಗಳ ಹರಿವು ಬರಿದಾಗುತ್ತಿದೆ. ಎಷ್ಟೇ ವಿಪರೀತ ಮಳೆ ಸುರಿದರೂ ಮಳೆ ಮುಗಿದ ಕೂಡಲೇ ಬರಗಾಲದ ಕೊಡುಗೆಯನ್ನು ಅನುಭವಿಸಬೇಕಾಗುತ್ತದೆ. ವರ್ಷದಿಂದ ವರ್ಷಕ್ಕೆ ಮಾನವ ನಿರ್ಮಿತ ಕಾಡ್ಗಿಚ್ಚು ಮಿತಿ ಮೀರಿ ಅತಿಯಾಗುತ್ತಿದೆ. ಮಳೆಗಾಲದಲ್ಲಿ ಯಾವ ಅಡವಿ ಪ್ರದೇಶದಲ್ಲಿ ಭೂಕುಸಿತವಾಗುವುದೋ ಎಂಬ ಆತಂಕಗಳು ಹೆಚ್ಚಾಗುತ್ತಿವೆ. ಮಳೆ ಮುಗಿದ ಕೂಡಲೇ ಊರಿಗೆ ಊರೇ ಬರಗಾಲದ ಛಾಯೆಯಲ್ಲಿ ನೀರಿನ ಸಮಸ್ಯೆ, ತಾಪ ಹೆಚ್ಚಳ, ಉರಿ ಬಿಸಿಲಿನ ಶಾಖವನ್ನು ಅನುಭವಿಸುವಂತಾಗಿದೆ.

ಹಾಗಾದರೆ ಈ ಪ್ರಾಕೃತಿಕ ದುರಂತಗಳಿಗೆ ಕಾರಣಕರ್ತರು ಯಾರು? ಎಂಬ ಪ್ರಶ್ನೆ ಉತ್ತರವಿಲ್ಲದೆ ಉಳಿದು ಬಿಡುತ್ತದೆ. ಪಶ್ಚಿಮ ಘಟ್ಟವೆಂದರೆ ಇಡೀ ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪಶ್ಚಿಮ ಘಟ್ಟದ ಫಲಾನುಭವಿಗಳು. ಪಶ್ಚಿಮ ಘಟ್ಟಕ್ಕೆ ಸಮಸ್ಯೆಯಾದರೆ ಅದು ನಮ್ಮ ಬದುಕಿಗೂ ಸಮಸ್ಯೆ ಎಂದು ನಾವು ಕೂಡಾ ಅದರ ರಕ್ಷಣೆಗೆ ಜಾಗೃತರಾಗಬೇಕಿತ್ತು, ಗಿರಿ, ವನ, ನದಿಗಳ ರಕ್ಷಣೆಗೆ ಪಾತ್ರ ವಹಿಸುವುದು ಬಿಟ್ಟು ಪಶ್ಚಿಮ ಘಟ್ಟವನ್ನು ವ್ಯಾವಹಾರಿಕ ದೃಷ್ಟಿ ಕೋನದಲ್ಲಿ ಕಂಡುಕೊಂಡು, ಅಲ್ಲಿ ರೆಸಾರ್ಟುಗಳಲ್ಲಿ ಮೋಜು, ಮಸ್ತಿ, ವನ್ಯ ಜೀವಿಗಳ ಮೇಲೆ ನಾಲಿಗೆ ಚಪಲ, ನದಿಗಳೆಂದರೆ ಕಸದ ತೊಟ್ಟಿ, ಅಡವಿಯ ನಡುವೆ ಡಿಜೆ, ಕಿರಿಕ್ ನೃತ್ಯ, ಮರಗಳ ಮೌಲ್ಯ ಲೆಕ್ಕಾಚಾರ.

ರಾಜಕೀಯದ ‘ಅಭಿವೃದ್ಧಿ’ ಲೇಪನ:

ಇಂತಹ ‘ಧನಾತ್ಮಕ’ ಚಿಂತನೆಗಳು ಪಶ್ಚಿಮ ಘಟ್ಟದ ಸಂರಕ್ಷಣೆಗೆ ಶೂನ್ಯ ಪಾತ್ರ ವಹಿಸಿದವು.

ಇನ್ನು ನಮ್ಮ ರಾಜಕೀಯ ವ್ಯವಸ್ಥೆ ಪಶ್ಚಿಮ ಘಟ್ಟ ಸಂರಕ್ಷಣೆ, ಅದಕ್ಕೆ ವ್ಯವಸ್ಥಿತ ಕಾರ್ಯಕ್ರಮಗಳು, ಯೋಜನೆಗಳನ್ನು ಮಾಡುತ್ತಾ ‘ಅಭಿವೃದ್ಧಿ’ ಎಂಬ ಲೇಪನದಿಂದ ಯಾವ ಪಶ್ಚಿಮ ಘಟ್ಟವನ್ನು ರಕ್ಷಣೆ ಮಾಡುತ್ತೇವೆ ಎಂದು ಹೇಳುತ್ತಾ ಬಂದರೋ ಅದೇ ಪಶ್ಚಿಮ ಘಟ್ಟವನ್ನು ಹಂತ, ಹಂತವಾಗಿ ಕತ್ತರಿಸಿ ಮುಕ್ಕಿ ತಿಂದದ್ದು ಅವರಿಗೆ ಮತ ನೀಡಿದ ಜನತೆಗೆ ಅರ್ಥವಾಗಲೇ ಇಲ್ಲ. ಒಂದು ವೇಳೆ ಅರ್ಥವಾದರೂ ಅದು ನಮ್ಮ ಪಕ್ಷ, ನಮ್ಮ ಜನಪ್ರತಿನಿಧಿ, ನಮ್ಮವರು ಎಂಬ ‘ಬ್ರಾಂಡ್’ನಲ್ಲಿ ಅಡವಿ, ನದಿಗಳನ್ನು ಕಬಳಿಸಿ ಮುಕ್ಕುವವರೇ ಇಲ್ಲಿ ‘ಹೀರೋ’ಗಳಾಗುತ್ತಾ ಬಂದರೇ ವಿನಃ ಅಡವಿ ಭಕ್ಷಣೆ ಮಾಡುವವರೇ ರಕ್ಷಣೆ ಮಾಡುವವರು ಎಂಬ ಛಾಪು, ಹೊಳಪು ಶಾಶ್ವತವಾಯಿತು.

ಯಾವುದೋ ಊರಿನ ನೀರಿನ ಸಮಸ್ಯೆಗೆ ಯಾವುದೋ ನದಿಯನ್ನು ತಿರುಗಿಸುತ್ತಾರೆ, ಯಾವುದೋ ನದಿಯನ್ನು ಜೋಡಿಸುತ್ತಾರೆ ಎಂದು ಬೃಹತ್ ಯೋಜನೆಗಳನ್ನು ಮಾಡಿ ಅದು ವಿಫಲವಾದರೂ ಜೈಕಾರ ಹಾಕುವುದೆಂದರೆ ಇದು ಯಾವ ನದಿಯ ಫಲಾನುಭವಿಗಳೋ ಅದೇ ಬುದ್ಧಿವಂತ ಜನರು ತಮ್ಮ ರಾಜಕೀಯ ಪ್ರತಿನಿಧಿಗೋಸ್ಕರ ತಮ್ಮದೇ ಭದ್ರ ನೆಲೆಯನ್ನು ಕಳೆದುಕೊಳ್ಳಲು ಅಣಿ ಆಗಿರುತ್ತಾರೆ ಎಂದರೆ ಇಂತಹವರಿಂದ ಯಾವ ರೀತಿಯ ಪರಿಸರ ಸಂರಕ್ಷಣೆಯನ್ನು ನಿರೀಕ್ಷಿಸಬಹುದು?

ನಾಳೆಗಾಗಿ ಘಟ್ಟ ರಕ್ಷಣೆ ಅಗತ್ಯ:

ಪಶ್ಚಿಮ ಘಟ್ಟವನ್ನು ನಾವು, ನೀವು ರಕ್ಷಿಸಬೇಕಾದದ್ದು ನಮ್ಮ ಮುಂದಿನ ಭವಿಷ್ಯದ ಭದ್ರತೆಗೆ ಎಂಬದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

ಮಾರ್ಚ್ ತಿಂಗಳಲ್ಲೇ 40 ಡಿಗ್ರಿ ತಾಪ ಮೀರುತ್ತಿದೆ, ದೇಶಕ್ಕೆ ದೇಶವೇ ಬರಗಾಲವನ್ನು ಹೊದ್ದು ಮಲಗುತ್ತಿದೆ, ಎಲ್ಲೆಲ್ಲೂ ನೀರಿನ ಸಮಸ್ಯೆ, ಮಳೆಗಾಲದಲ್ಲಿ ನಮಗೆ ಭದ್ರವಾಗಿರುವ ಪಶ್ಚಿಮ ಘಟ್ಟ ಭೂ ಕುಸಿತವಾಗಿ ಛಿದ್ರವಾಗುತ್ತಿದೆ ಎಂಬ ಘಟನೆಗಳನ್ನು ಅನುಭವಿಸಿಯೂ ಇನ್ನು ಕೂಡಾ ನಾವು ಸಂರಕ್ಷಣೆಯ ಬಗ್ಗೆ ಜಾಗೃತರಾಗದೇ ಇರುವುದು ಇದು ಆ ಎಲ್ಲಾ ನೈಸರ್ಗಿಕ ದುರಂತಗಳಿಗಿಂತಲೂ ಘೋರ ದುರಂತ!

PREV
Read more Articles on

Recommended Stories

ರಣರಂಗದಲ್ಲಿ ಟ್ರಂಪ್‌ಸೆಟ್ - ಗಳಿಗೆಗೊಂದು ಯಡವಟ್ಟಿನ ಮಾತು
ಇರಾನ್‌ ಯುದ್ಧದಿಂದ ರಷ್ಯಾಕ್ಕೆ ಭರಪೂರ ಲಾಭ