ರಣರಂಗದಲ್ಲಿ ಟ್ರಂಪ್‌ಸೆಟ್ - ಗಳಿಗೆಗೊಂದು ಯಡವಟ್ಟಿನ ಮಾತು

Published : Mar 22, 2026, 10:46 AM IST
Donald Trump

ಸಾರಾಂಶ

2025ರಲ್ಲಿ 8 ಯುದ್ಧ ನಿಲ್ಲಿಸಿದ್ದೇ ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಾವೇ ಇರಾನ್‌ ಮೇಲೆ ಯುದ್ಧ ಸಾರಿ 3 ವಾರ ಕಳೆದರೂ ಅದರಿಂದ ಹೊರಬರಲಾಗದೇ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಸಮರದಲ್ಲಿ ಟ್ರಂಪ್‌ ವರಸೆ

2025ರಲ್ಲಿ 8 ಯುದ್ಧ ನಿಲ್ಲಿಸಿದ್ದೇ ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಾವೇ ಇರಾನ್‌ ಮೇಲೆ ಯುದ್ಧ ಸಾರಿ 3 ವಾರ ಕಳೆದರೂ ಅದರಿಂದ ಹೊರಬರಲಾಗದೇ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸ್ವದೇಶ, ಸ್ವಪಕ್ಷೀಯರು ಸೇರಿ ಜಗತ್ತಿನಾದ್ಯಂತ ಬಹುತೇಕ ದೇಶಗಳ ಟೀಕೆಗೆ ಗುರಿಯಾದ ಈ ದಾಳಿ ಬಗ್ಗೆ ಟ್ರಂಪ್‌ ದಿನಕ್ಕೊಂದು ಹೇಳಿಕೆ ಮೂಲಕ ತಮ್ಮ ಮೂಲ ಉದ್ದೇಶ ಏನು ಎಂಬುದನ್ನು ಮರೆತಿರುವುದನ್ನು ಸಾಬೀತುಪಡಿಸಿದ್ದಾರೆ. ಹಾಗಿದ್ರೆ ಟ್ರಂಪ್‌ 22 ದಿನದಲ್ಲಿ ಯಾವೆಲ್ಲ ಹೇಳಿಕೆ ನೀಡುತ್ತಾ ಸುದ್ದಿಯಾಗಿದ್ದಾರೆ ಎನ್ನುವುದರ ಝಲಕ್‌ ಇಲ್ಲಿದೆ.

ಫೆ. 28

ಇರಾನ್‌ ಯುದ್ಧ ಶುರುವಾಗಿದೆ

ಇರಾನ್‌ನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆ ಆರಂಭವಾಗಿದೆ. ನಾವು ಮುಗಿಸಿದ ನಂತರ ನಂತರ ನಿಮ್ಮ ಸರ್ಕಾರವನ್ನು ವಶಪಡಿಸಿಕೊಳ್ಳಿ. ಅದು ನಿಮ್ಮದು ಇರಾನ್‌ ಕ್ಷಿಪಣಿ ಉದ್ಯಮವನ್ನು ಸಂಪೂರ್ಣವಾಗಿ ನಾಶಪಡಿಸುತ್ತೇವೆ. ಪೂರ್ಣವಾಗ ನಿರ್ನಾಮಗೊಳಿಸುತ್ತೇವೆ. ಮಧ್ಯಪ್ರಾಚ್ಯದಾದ್ಯಂತ ಶಾಂತಿ ಸ್ಥಾಪಿಸಲು ವಾರವಿಡೀ ಅಥವಾ ಅಗತ್ಯವಿದ್ದಷ್ಟು ಕಾಲ ಮುಂದುವರೆಯುತ್ತದೆ..

ಮಾ.1

ದಾಳಿ ಮುಂದುವರೆಸಿದರೆ ಹುಷಾರ್‌

ನಮ್ಮ ಮೇಲಿನ ಆಕ್ರಮಣವನ್ನು ತೀವ್ರಗೊಳಿಸುವುದಾಗಿ ಇರಾನ್‌ ಸರ್ಕಾರ ಘೋಷಿಸಿದೆ. ಆದರೆ ಅವರು ಹಾಗೆ ಮಾಡದಿದ್ದರೆ ಒಳಿತು. ಕಾರಣ, ಅದಕ್ಕೆ ಪ್ರತಿಯಾಗಿ ನಾವು ಕಂಡುಕೇಳರಿಯದ ದಾಳಿ ನಡೆಸುತ್ತೇವೆ. ಇದಲ್ಲದೆ ಮುಂದಿನ ದಿನಗಳ ಕಾಲ ಸೀಮಿತ ದಾಳಿ ಮುಂದುವರೆಯಲಿದೆ

ಮಾ.2

4- 5 ವಾರ ಮುಂದುವರೆಯಬಹುದು

ಇರಾನ್‌ ಮೇಲಿನ ಯುದ್ಧ ಅಂದಾಜು 4-5 ವಾರಗಳ ಕಾಲ ಇರಬಹುದು. ಆದರೆ ಅಮೆರಿಕಗೆ ಅದಕ್ಕಿಂತ ದೀರ್ಘಕಾಲ ಹೋರಾಡುವ ಸಾಮರ್ಥ್ಯವಿದೆ. ಇರಾನ್‌ ಜತೆಗಿನ ಮುಂದಿನ ಮಾತುಕತೆಗೆ ಮುಕ್ತ. ಆದರೆ ಯಾವಾಗ ಎನ್ನುವುದಕ್ಕೆ ಸ್ಪಷ್ಟತೆ ಇಲ್ಲ. ಅವರು ಮಾತನಾಡುವುದಕ್ಕೆ ಮುಂದಾಗಿದ್ದರು. ಆದರೆ ನಾನೇ ಈ ವಾರ ಅಲ್ಲ ನೀವು ಕಳೆದ ವಾರ ಮಾತನಾಡಬೇಕಿತ್ತು ಎಂದು ತಿಳಿಸಿದ್ದೆ.

ಮಾ.4

ಹೋರ್ಮುಜ್‌ನಲ್ಲಿ ಹಡಗಿಗೆ ಕಾವಲು

ಅಗತ್ಯವಿದ್ದಲ್ಲಿ ಆದಷ್ಟು ಬೇಗ ಹೋರ್ಮುಜ್‌ನಲ್ಲಿ ಸಾಗುವ ನೌಕೆಗಳ ರಕ್ಷಣೆಗೆ ನಮ್ಮ ನೌಕಾಪಡೆಯನ್ನು ಕಳಿಸುತ್ತೇನೆ. ಏನೇ ಆದರೂ ವಿಶ್ವಕ್ಕೆ ತೈಲ ಪೂರೈಕೆ ಮುಕ್ತವಾಗಿ ಆಗುವಂತೆ ಅಮೆರಿಕ ನೋಡಿಕೊಳ್ಳುತ್ತದೆ. ಅಮೆರಿಕದ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯು ಭೂಮಿಯ ಮೇಲೆ ಅತ್ಯಂತ ಬಲಶಾಲಿ.

ಮಾರ್ಚ್‌ 6

ಶರಣಾಗತಿ ಬಿಟ್ಟರೆ ಇರಾನ್‌ಗೆ ಆಯ್ಕೆಯಿಲ್ಲ

ಇರಾನ್ ಮುಂದೆ ಇರುವುದು ಬೇಷರತ್ತಾದ ಶರಣಾಗತಿಯ ಮಾರ್ಗವೊಂದೇ. ಇರಾನ್ ಜೊತೆ ಬೇರಾವುದೇ ಒಪ್ಪಂದ ಸಾಧ್ಯವಿಲ್ಲ . ಟೆಹ್ರಾನ್ ಜೊತೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ, ಶರಣಾಗತಿ ಮಾತ್ರ ಅವರ ಮುಂದೆ ಉಳಿದಿರುವ ಆಯ್ಕೆ.

ಮಾ. 7

ನೆರೆ ದೇಶಗಳಿಗೆ ಇರಾನ್‌ ಈಗಾಗಲೇ ಶರಣು

ಇರಾನ್‌ ಈಗಾಗಲೇ ನೆರೆಯ ದೇಶಗಳಿಗೆ ಶರಣಾಗಿದೆ. ಇದು ನಮ್ಮ ಒತ್ತಡ ಬಳಿಕವಷ್ಟೇ ಸಾಧ್ಯವಾಗಿದ್ದು. ಇರಾನ್‌ ಮಧ್ಯಪ್ರಾಚ್ಯದ ಹಲವು ದೇಶಗಳ ಕ್ಷಮೆಯಾಚಿಸಿದೆ. ಅಮೆರಿಕ ಮತ್ತು ಇಸ್ರೇಲ್‌ ನಿರಂತರವಾಗಿ ಮಿಲಿಟರಿ ಒತ್ತಡ ಹಾಕಿದ ಬಳಿಕವೇ ಈ ನಿರ್ಧಾರಕ್ಕೆ ಬಂದಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್‌ ಇದೀಗ ಪ್ರಬಲ ಶಕ್ತಿಯಾಗಿ ಉಳಿದಿಲ್ಲ

ಮಾ.9

ಇರಾನ್‌ ಶರಣಾದರಷ್ಟೇ ದಾಳಿ ಸ್ಥಗಿತ

ಯುದ್ಧದ ಅಂತಿಮ ನಿರ್ಧಾರ ನನ್ನದಾಗಿರುತ್ತದೆ. ಇರಾನ್‌ ಸಂಪೂರ್ಣವಾಗಿ ಶರಣಾಗುವವರೆಗೂ ದಾಳಿ ನಿಲ್ಲುವುದಿಲ್ಲ. ಒಂದು ವೇಳೆ ಅಮೆರಿಕ ಇರಾನ್‌ ಮೇಲೆ ದಾಳಿ ಮಾಡದಿದ್ದರೆ ಇರಾನ್‌ ಇಸ್ರೇಲ್‌ನ್ನು ಸಂಪೂರ್ಣವಾಗಿ ನಾಶಪಡುತ್ತಿತ್ತು. ಮಧ್ಯಪ್ರಾಚ್ಯದ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿತ್ತು. ಇಸ್ರೇಲ್‌ ಅನ್ನು ನಕ್ಷೆಯಿಂದ ನಾಶ ಪಡಿಸುವುದಕ್ಕೆ ಮುಂದಾಗಿದ್ದ ದೇಶದ ಅಸ್ತಿತ್ವವನ್ನೇ ಈಗ ನಾಶ ಪಡಿಸಿದ್ದೇವೆ.

ಮಾ.11

ಇರಾನ್‌ಗೆ ಅಣ್ವಸ್ತ್ರ ನಿರಾಕರಣೆ ನಮ್ಮ ಗುರಿ

ಮುಂದಿನ ವಾರ ಇರಾನ್ ಮೇಲೆ ಭಾರಿ ದಾಳಿ ಮಾಡುತ್ತೇವೆ. ನಾವೂ ತೈಲ ಸಂಪದ್ಭರಿತ ದೇಶ. ತೈಲ ದರ ಏರಿದರೆ ನಮಗೆ ಹೆಚ್ಚು ಹಣ ಬರುತ್ತದೆ.ಅಧ್ಯಕ್ಷನಾಗಿ ನನಗೆ ತೈಲಕ್ಕಿಂತ ಹೆಚ್ಚಿನ ಆಸಕ್ತಿ ಮತ್ತು ಪ್ರಾಮುಖ್ಯತೆಯೆಂದರೆ, ದುಷ್ಟ ಸಾಮ್ರಾಜ್ಯವಾದ ಇರಾನ್ ಅಣ್ವಸ್ತ್ರ ಹೊಂದುವುದನ್ನು ಮತ್ತು ಮಧ್ಯಪ್ರಾಚ್ಯವನ್ನು ಅದು ನಾಶ ಮಾಡುವುದನ್ನು ತಡೆಯುವುದು.

ಮಾ.13

ಇರಾನ್‌ನಲ್ಲಿ ಶರಣಾಗತಿಗೂ ಜನರಿಲ್ಲ

ನಮಗೆಲ್ಲ ಬೆದರಿಕೆ ಹಾಕುತ್ತಿದ್ದ ಕ್ಯಾನ್ಸರ್‌ನಿಂದ ಮುಕ್ತಿ ನೀಡಿದ್ದೇನೆ. ಯುದ್ಧ ಮುಂದುವರಿಸಬೇಕೇ, ಬೇಡವೇ ಎಂದು ನಿರ್ಧರಿಸಲು ಇರಾನ್‌ನಲ್ಲಿ ನಾಯಕರೇ ಉಳಿದಿಲ್ಲ. ಅವರ ನಾಯಕ ಯಾರೆಂದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಅಲ್ಲಿ ಶರಣಾಗತಿಯನ್ನು ಘೋಷಿಸುವವರೇ ಇಲ್ಲ

ಮಾ.13

ಆ ದುಷ್ಟರಿಗೆ ಏನಾಗುತ್ತೆ ನೋಡಿ

ಇರಾನ್‌ನ ನೌಕಾ ಸೇನೆ, ವಾಯುಸೇನೆ ನಷ್ಟವಾಗಿದೆ. ಕ್ಷಿಪಣಿಗಳು, ಡ್ರೋನ್‌ಗಳು, ಪ್ರತಿಯೊಂದನ್ನೂ ನಾಶ ಮಾಡಲಾಗಿದೆ. ಅವರ ನಾಯಕರನ್ನು ಈ ಭೂಮಿಯಿಂದಲೇ ಅಳಿಸಿಹಾಕಲಾಗಿದೆ. ಅವರು 47 ವರ್ಷಗಳಿಂದ ವಿಶ್ವಾದ್ಯಂತ ಅಮಾಯಕರನ್ನು ಹತ್ಯೆ ಮಾಡುತ್ತಾ ಬಂದಿದ್ದಾರೆ. ಇದೀಗ ಅಮೆರಿಕದ 47ನೇ ಅಧ್ಯಕ್ಷನಾಗಿ ನಾನು ಅವರನ್ನು ಕೊಲ್ಲುತ್ತಿದ್ದೇನೆ. ಈ ರೀತಿ ಮಾಡುವುದು ದೊಡ್ಡ ಗೌರವದ ವಿಚಾರ

ಮಾ. 18

ಕೊಲ್ಲಿ ಮೇಲೆ ಇರಾನ್‌ ದಾಳಿ ಅಚ್ಚರಿ

ಕೊಲ್ಲಿ ಪ್ರದೇಶದಲ್ಲಿನ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಇರಾನ್‌ ದಾಳಿಯಿಂದ ಅಚ್ಚರಿ ಮತ್ತು ಆಘಾತ ಮೂಡಿಸಿದೆ. ಈ ದಾಳಿಯನ್ನು ನಾವ್ಯಾರೂ ಊಹಿಸಿರಲಿಲ್ಲ.

ಇರಾನ್‌ ಮಧ್ಯಪ್ರಾಚ್ಯದ ದೇಶಗಳ ಮೇಲೆ ದಾಳಿ ಮಾಡಬಾರದಿತ್ತು. ನಮಗೆ ಆಘಾತವಾಯಿತು. ತಜ್ಞರು ಸಹ ಅವರು ದಾಳಿ ಮಾಡುತ್ತಾರೆಂದು ಭಾವಿಸಿರಲಿಲ್ಲ.

ಮಾ. 20

ನ್ಯಾಟೋ ರಾಷ್ಟ್ರಗಳು ಕಾಗದದ ಹುಲಿ

ಅಮೆರಿಕ ಇಲ್ಲದೆ ನ್ಯಾಟೋ ರಾಷ್ಟ್ರಗಳು ಕಾಗದದ ಹುಲಿ ಇದ್ದಂತೆ. ಅಣುಶಕ್ತಿ ಸಜ್ಜಿತ ಇರಾನ್‌ ಅನ್ನು ತಡೆಯುವ ಸಲುವಾಗಿ ಅವರು ಯುದ್ಧದಲ್ಲಿ ಭಾಗಿಯಾಗಲು ಮುಂದಾಗಲಿಲ್ಲ. ಆದರೆ ಈಗ ನಾವು ಸೈನಿಕವಾಗಿ ಯುದ್ಧವನ್ನು ಗೆದ್ದಿರುವಾಗ, ಹೆಚ್ಚಿರುವ ತೈಲ ಬೆಲೆಯ ಬಗ್ಗೆ ದೂರುತ್ತಿದ್ದಾರೆ. ಅವರೆಲ್ಲಾ ಪುಕ್ಕಲರು. ಇದನ್ನು ನಾವು ನೆನಪಿಟ್ಟುಕೊಳ್ಳುತ್ತೇವೆ.

ಮಾ.21

ಹೋರ್ಮುಜ್‌ ಬೇರೆಯವರು ಕಾಯಲಿ

ನಾವು ಇರಾನ್‌ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ಬಹುತೇಯ ಯಶಸ್ಸು ಪಡೆದಿದ್ದೇವೆ,. ಇರಾನ್‌ನ ಕ್ಷಿಪಣಿ ಸಾಮರ್ಥ್ಯ, ಉಡಾವಣಾ ಕೇಂದ್ರಗಳನ್ನು ನಾಶಪಡಿಸಿದ್ದೇವೆ. ಇರಾನ್ ದೇಶದ ಮಿಲಿಟರಿ ಶಕ್ತಿಯನ್ನು ಕುಗ್ಗಿಸಲಾಗಿದೆ. ಆ ದೇಶದ ರಕ್ಷಣಾ ಕೈಗಾರಿಕಾ ನೆಲೆಯನ್ನೂ ಜಂಟಿ ದಾಳಿಯಲ್ಲಿ ನಾಶ ಪಡಿಸಲಾಗಿದೆ. ಇರಾನ್‌ ಎಂದಿಗೂ ಪರಮಾಣು ಸಾಮರ್ಥ್ಯಕ್ಕೆ ಹತ್ತಿರವಾಗಬಾರದು. ಒಂದು ವೇಳೆ ಆದರೆ ಅಮೆರಿಕ ಪ್ರಬಲವಾಗಿಯೇ ಪ್ರತಿಕ್ರಿಯೆ ನೀಡುತ್ತದೆ. ಮಧ್ಯಪ್ರಾಚ್ಯ ಮಿತ್ರ ರಾಷ್ಟ್ರಗಳನ್ನು ರಕ್ಷಿಸಿದ್ದೇವೆ. ಹೋರ್ಮುಜ್‌ ಜಲಸಂಧಿಯನ್ನು ಅದರ ಅಗತ್ಯವಿರುವ ರಾಷ್ಟ್ರಗಳು ಕಾವಲು ಕಾಯಬೇಕು. ಅವರಿಗೆ ಸಹಾಯ ಮಾಡುತ್ತೇವೆ. ಆದರೆ ಇರಾನ್‌ ಬೆದರಿಕೆ ನಾಶ ಮಾಡಿದ ಬಳಿಕ ಅದರ ಅಗತ್ಯವಿರುವುದಿಲ್ಲ.

PREV
Read more Articles on

Recommended Stories

ಇರಾನ್‌ ಯುದ್ಧದಿಂದ ರಷ್ಯಾಕ್ಕೆ ಭರಪೂರ ಲಾಭ
ರಷ್ಯಾ- ಉಕ್ರೇನ್‌ ಯುದ್ಧದಲ್ಲಿ ಸೋತಿದ್ದು ನ್ಯಾಟೋ!