;Resize=(412,232))
ಮಧ್ಯಪ್ರಾಚ್ಯ ಯುದ್ಧ 3 ವಾರ ಪೂರೈಸಿದೆ. ಯುದ್ಧಕ್ಕಾಗಿ ಅಮೆರಿಕ-ಇಸ್ರೇಲ್ ಹಾಗೂ ಇರಾನ್ ಸಾವಿರಾರು ಕೋಟಿ ಹಣ ವ್ಯಯಿಸುತ್ತಿದ್ದರೆ, ಅತ್ತ ಅಮೆರಿಕ ಸ್ನೇಹಿ ಕೊಲ್ಲಿ ರಾಷ್ಟ್ರಗಳು ಇರಾನ್‌ನ ಭೀಕರ ದಾಳಿಗೆ ನಲುಗುತ್ತಿವೆ. ಸಮರದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಲ್ಲೋಕ ಕಲ್ಲೋಲ ಸೃಷ್ಟಿಯಾಗಿದ್ದು, ಜಗತ್ತಿನ ಬಹುತೇಕ ರಾಷ್ಟ್ರಗಳು ಇದರ ಬಿಸಿಯನ್ನು ಅನುಭವಿಸುತ್ತಿವೆ. ಈ ನಡುವೆ ಅಮೆರಿಕದ ಕಡುವೈರಿ ರಾಷ್ಟ್ರವಾಗಿದ್ದ ರಷ್ಯಾ ದೂರದಲ್ಲಿ ಕುಳಿತೇ, ಯುದ್ಧದಿಂದ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದೆ. ಹಾಗಾದರೆ ಸಮರದಿಂದ ರಷ್ಯಾಕ್ಕೆ ಆಗುತ್ತಿರುವ ಲಾಭವಾದರೂ ಏನು? ಇಲ್ಲಿದೆ ಮಾಹಿತಿ.
-ದಿವ್ಯಾ ಹೆಗಡೆ ಕಬ್ಬಿನಗದ್ದೆ
ರಷ್ಯಾ ವಿಶ್ವದ ಅತಿ ದೊಡ್ಡ ತೈಲ ಉತ್ಪಾದಕ ಮತ್ತು ರಫ್ತುದಾರ ದೇಶಗಳಲ್ಲಿ ಒಂದು. ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ದೇಶಗಳ ಪೈಕಿ ರಷ್ಯಾಕ್ಕೆ 6ನೇ ಸ್ಥಾನವಿದೆ. ರೋಸ್ನೆಫ್ಟ್, ಲುಕಾಯಿಲ್, ಗಾಝ್‌ಪ್ರಾಮ್ ನೆಫ್ಟ್ ಮುಂತಾದ ದೈತ್ಯ ಕಂಪನಿಗಳು ಇಲ್ಲಿ ತೈಲ ಸಾಮ್ರಾಜ್ಯ ನಿರ್ಮಿಸಿವೆ. 2022ರಲ್ಲಿ ಉಕ್ರೇನ್ ವಿರುದ್ಧ ಯುದ್ಧ ಆರಂಭವಾಗುವವರೆಗೆ ರಷ್ಯಾ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ರಫ್ತುದಾರನಾಗಿತ್ತು. ಆದರೆ ಉಕ್ರೇನ್ ಮೇಲೆ ಆಕ್ರಮಣದ ನಂತರ ಅಮೆರಿಕ, ಯುರೋಪಿಯನ್ ಒಕ್ಕೂಟ, ಜಿ7 ದೇಶಗಳು ರಷ್ಯಾ ಮೇಲೆ ತೀವ್ರ ನಿರ್ಬಂಧಗಳನ್ನು ಹೇರಿದವು. ರಷ್ಯಾದ ತೈಲ ಆಮದು ಸಂಪೂರ್ಣ ನಿಷೇಧಿಸಿದ್ದಲ್ಲದೆ, ಪ್ರತಿ ಬ್ಯಾರೆಲ್‌ಗೆ $60 ಬೆಲೆ ಮಿತಿಗೊಳಿಸಿದವು. ಇದರಿಂದ ಯುರೋಪ್‌ಗೆ ರಷ್ಯಾದ ರಫ್ತು 175 ಮಿಲಿಯನ್ ಟನ್‌ನಿಂದ 25 ಮಿಲಿಯನ್ ಟನ್‌ಗೆ ಕುಸಿಯಿತು. ಆದರೆ ಅದು ರಫ್ತನ್ನು ಯುರೋಪ್‌ನಿಂದ ಏಷ್ಯಾದ ಕಡೆಗೆ ತಿರುಗಿಸಿತು. 2025ರಲ್ಲಿ ರಫ್ತಿನ ಸುಮಾರು ಶೇ.80ನ್ನು ಚೀನಾ ಮತ್ತು ಭಾರತಕ್ಕೆ ಕಳಿಸಿತು. ಇದನ್ನೂ ವಿರೋಧಿಸಿ ಟ್ರಂಪ್ ಭಾರತ ಹಾಗೂ ಚೀನಾ ಮೇಲೆ ಕಠಿಣ ತೆರಿಗೆ ಹೇರಿದ ಬಳಿಕ ಮತ್ತೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು.
1. ಕೊಲ್ಲಿ ಯುದ್ಧ ಆರಂಭದ ವೇಳೆ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ 70 ಡಾಲರ್ ಆಸುಪಾಸು ಇತ್ತು. ಆದರೆ ರಿಯಾಯಿತಿ ದರದಲ್ಲಿ ರಷ್ಯಾ ಆಯ್ದ ದೇಶಗಳಿಗೆ ತೈಲ ಮಾರಾಟ ಮಾಡುತ್ತಿತ್ತು. ಬೇಡಿಕೆಯೂ ಕಡಿಮೆ ಇತ್ತು. ಆದರೆ ಕೊಲ್ಲಿ ಯುದ್ಧ ಆರಂಭವಾಗಿ ಹೋರ್ಮುಜ್ ಜಲಸಂಧಿ ಮುಚ್ಚಿದ ಬೆನ್ನಲ್ಲೇ ರಷ್ಯಾ ತೈಲಕ್ಕೆ ಬೇಡಿಕೆ ಕುದುರಿ ಅದರ ಆದಾಯ ದಿಢೀರನೆ ಹೆಚ್ಚಾಯಿತು.
2. ಯುದ್ಧ ಆರಂಭದ ಬಳಿಕ ಕಚ್ಚಾತೈಲದ ಬೆಲೆ 70 ಡಾಲರ್‌ನಿಂದ 120 ಡಾಲರ್‌ವರೆಗೂ ಏರಿದ ಕಾರಣ, ತಾನು ಪೂರೈಸುತ್ತಿದ್ದ ಕಚ್ಚಾತೈಲದ ಬೆಲೆ ಅನಾಯಾಸವಾಗಿ ಏರಿ, ರಷ್ಯಾದ ಆದಾಯದಲ್ಲಿ ಭರ್ಜರಿ ಶೇ.60ರಷ್ಟು ಏರಿಕೆ ಕಂಡುಬಂತು.
3. ಅಮೆರಿಕ ನಿರ್ಬಂಧಕ್ಕೂ ಮುನ್ನ ತನ್ನ ತೈಲ ಮಾರಾಟಕ್ಕೆ ರಷ್ಯಾ ಸಾಕಷ್ಟು ರಿಯಾಯ್ತಿ ನೀಡುತ್ತಿತ್ತು. ಆದರೆ ಇತ್ತೀಚೆಗೆ ತೈಲ ಬೆಲೆ ಕೊರತೆ ನೀಗಿಸುವ ನಿಟ್ಟಿನಲ್ಲಿ ರಷ್ಯಾ ತೈಲ ಖರೀದಿಗೆ ಹೇರಿದ್ದ ನಿರ್ಬಂಧವನ್ನು ಅಮೆರಿಕ 30 ದಿನಗಳಿಗೆ ತೆಗೆದ ಬೆನ್ನಲ್ಲೇ, ರಷ್ಯಾ ರಿಯಾಯ್ತಿ ಕಡಿತಗೊಳಿಸಿದೆ ಇಲ್ಲವೇ ರದ್ದುಪಡಿಸಿದೆ. ಇದರ ಮೂಲಕವೂ ರಷ್ಯಾ ಭರ್ಜರಿ ಆದಾಯ ಸಂಗ್ರಹಿಸುತ್ತಿದೆ.
ಇರಾನ್ ಯುದ್ಧ ಆರಂಭವಾದ ಕೇವಲ ಮೂರು ವಾರಗಳಲ್ಲೇ ತೈಲ, ಅನಿಲ, ಪಿಎನ್‌ಜಿ ಮಾರಾಟದ ಮೂಲಕ ರಷ್ಯಾ ಹೆಚ್ಚುವರಿಯಾಗಿ 1.35 ಲಕ್ಷ ಕೋಟಿ ರು. ಆದಾಯ ಸಂಗ್ರಹಿಸಿದೆ ಎನ್ನಲಾಗಿದೆ.
ಉಕ್ರೇನ್ ವಿರುದ್ಧ ಸಮರಕ್ಕೂ ಬಲ!
ಕೊಲ್ಲಿ ಯುದ್ಧ ಆರಂಭದ ಬಳಿಕ ಉಕ್ರೇನ್‌ಗೆ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವನ್ನು ಅಮೆರಿಕ ಬಹುತೇಕ ಸ್ಥಗಿತಗೊಳಿಸಿದೆ. ಇದು ಹಲವು ರೀತಿಯಲ್ಲಿ ರಷ್ಯಾಕ್ಕೆ ಆರ್ಥಿಕವಾಗಿ ಲಾಭ ಮಾಡಿಕೊಟ್ಟಿದೆ. ಅಮೆರಿಕ ನೆರವು ಕಡಿತಗೊಂಡ ಬಳಿಕ ರಷ್ಯಾದ ಮೇಲಿನ ಉಕ್ರೇನ್ ದಾಳಿ ಬಹುತೇಕ ಸ್ಥಗಿತಗೊಂಡಿದೆ. ಹೀಗಾಗಿ ದಾಳಿ ತಡೆಯುವ ವೆಚ್ಚ ರಷ್ಯಾಕ್ಕೆ ಉಳಿದಿದೆ. ಮತ್ತೊಂದೆಡೆ ಈ ಬೆಳವಣಿಗೆ ಉಕ್ರೇನ್ ಅನ್ನು ಮತ್ತಷ್ಟು ದುರ್ಬಲಗೊಳಿಸಿದ್ದು, ಆ ದೇಶದ ಮೇಲಿನ ದಾಳಿ ಸುಲಭಗೊಳಿಸಿದೆ. ಜೊತೆಗೆ ಉಕ್ರೇನ್ ದಾಳಿಯಿಂದ ಆಗುತ್ತಿದ್ದ ಸಾವು ನೋವು ಕಡಿಮೆ ಆಗಿದೆ. ಇದು ಉಕ್ರೇನ್ ಮೇಲೆ ಮತ್ತಷ್ಟು ದೀರ್ಘಕಾಲ ದಾಳಿ ಮುಂದುವರಿಸಲು ರಷ್ಯಾಕ್ಕೆ ಶಕ್ತಿ ಮತ್ತು ಆತ್ಮವಿಶ್ವಾಸ ಎರಡನ್ನೂ ಕೊಟ್ಟಿದೆ.
ರಾಜಕೀಯವಾಗಿಯೂ ರಷ್ಯಾಕ್ಕೆ ಲಾಭ
ಕೊಲ್ಲಿ ಯುದ್ಧದಲ್ಲಿ ನ್ಯಾಟೋ ದೇಶಗಳ ಭಿನ್ನಮತ ಅತ್ಯಂತ ಸ್ಪಷ್ಟವಾಗಿ ಬಹಿರಂಗವಾಗಿದೆ. ಕೇವಲ ಅಮೆರಿಕದ ಆಶಯ, ಆಸೆಗೆ ತಾವು ಬಲಿಯಾಗುವುದಿಲ್ಲ ಎಂದು ನ್ಯಾಟೋ ದೇಶಗಳು ಸ್ಪಷ್ಟಪಡಿಸಿವೆ. ಇದು ಮುಂದಿನ ದಿನಗಳಲ್ಲಿ ನ್ಯಾಟೋ ಒಕ್ಕೂಟವನ್ನೇ ದುರ್ಬಲಪಡಿಸಬಹುದು. ಹೀಗಾದರೆ ಆ ವಲಯದಲ್ಲಿ ರಷ್ಯಾದ ಪ್ರಭಾವ ಮತ್ತಷ್ಟು ಹೆಚ್ಚಲಿದೆ. ಮಧ್ಯಪ್ರಾಚ್ಯದಲ್ಲಿಯೂ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ರಷ್ಯಾಕ್ಕೆ ನೆರವಾಗಲಿದೆ.
ನ್ಯಾಟೋಗೆ ಉಕ್ರೇನ್ ಸೇರ್ಪಡೆಗೂ ತಡೆ
ನ್ಯಾಟೋ ಕೂಟಕ್ಕೆ ಉಕ್ರೇನ್ ಅನ್ನು ಸೇರ್ಪಡೆ ಮಾಡುವ ಪ್ರಸ್ತಾವವನ್ನು ಅಮೆರಿಕ ಮುಂದಿಟ್ಟಿದೆ. ಆದರೆ ರಷ್ಯಾ ಇದನ್ನು ವಿರೋಧಿಸುತ್ತಾ ಬಂದಿದೆ. ಒಂದು ವೇಳೆ ನ್ಯಾಟೋದಲ್ಲಿ ಅಮೆರಿಕದ ಪ್ರಭಾವ ಕಡಿಮೆ ಆದರೆ, ಉಕ್ರೇನ್ ಸೇರ್ಪಡೆಯ ಅಮೆರಿಕ ಪ್ರಸ್ತಾವಕ್ಕೆ ಅಡ್ಡಿಯಾಗಬಹುದು. ಇಲ್ಲಿಯೂ ರಷ್ಯಾಕ್ಕೆ ಅತಿದೊಡ್ಡ ಲಾಭವಾಗುವ ಸಾಧ್ಯತೆಯಿದೆ.