;Resize=(412,232))
ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಕಚ್ಚಾತೈಲ ಬೆಲೆ ಅಧಿಕವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣದುಬ್ಬರ ಉಂಟಾಗಿರುವುದು ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಗೆ ಪ್ರಮುಖ ಕಾರಣ. ಜೊತೆಗೆ, ಅಮೆರಿಕದಲ್ಲಿ ಬಡ್ಡಿ ದರಗಳ ಏರಿಕೆ, ಡಾಲರ್ ಎದುರು ರುಪಾಯಿ ಮೌಲ್ಯದ ಚೇತರಿಕೆ, ಪ್ರಧಾನಿ ಮೋದಿ ಅವರ ‘ಚಿನ್ನ ಖರೀದಿ ಮುಂದೂಡಿ’ ಹೇಳಿಕೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದೂ ಚಿನ್ನ ಮತ್ತು ಬೆಳ್ಳಿ ಬೆಲೆ ಗಣನೀಯವಾಗಿ ಕಡಿಮೆಯಾಗಲು ಕಾರಣವಾಗಿವೆ.
ಕೆಲ ತಿಂಗಳಿನಿಂದ ಏರುಮುಖ ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ದರಗಳು ಇತ್ತೀಚೆಗೆ ಇಳಿಕೆಯಾಗಿರುವುದಕ್ಕೆ ಹಲವು ಕಾರಣಗಳಿವೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿವೆ. ಇದರ ಜತೆಗೆ ಅಂತಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಡ್ಡಿ ದರವೂ ಅಧಿಕವಾಗುತ್ತಿರುವುದು ಹಣದುಬ್ಬರಕ್ಕೆ ಕಾರಣವಾಗುತ್ತಿದೆ. ಇದೆಲ್ಲದರ ಪರಿಣಾಮ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಫೆಬ್ರವರಿ ತಿಂಗಳಲ್ಲಿದ್ದ ಚಿನ್ನದ ಬೆಲೆಗೆ ಹೋಲಿಸಿದರೆ ಈಗಿನ ದರ ಶೇ.35ರಷ್ಟು ಕುಸಿತವಾಗಿದೆ. ಬೆಳ್ಳಿ ಬರೋಬ್ಬರಿ ಶೇ.65 ರಷ್ಟು ಕುಸಿತ ಕಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಬೇರೆ ದೇಶಗಳ ಕರೆನ್ಸಿಗೆ ಹೋಲಿಸಿದರೆ ಅಧಿಕವಾಗಿದೆ. ಆದರೆ ಡಾಲರ್ ಎದುರು ರುಪಾಯಿ ಮೌಲ್ಯ ಮಾತ್ರ ಚೇತರಿಕೆ ಕಂಡಿದೆ. ಕೆಲ ಸಮಯದ ಹಿಂದೆ ಡಾಲರ್ ಎದುರು 97 ರಿಂದ 98 ರುಪಾಯಿ ಇದ್ದ ಮೌಲ್ಯ ಇದೀಗ 92.50 ರುಪಾಯಿಗೆ ಬಂದಿದೆ. ಇದರಿಂದಾಗಿ ಚಿನ್ನ ಮತ್ತು ಬೆಳ್ಳಿ ಆಮದು ಮಾಡಿಕೊಳ್ಳುವಾಗ ಕಡಿಮೆ ಹಣ ಪಾವತಿ ಮಾಡುತ್ತಿರುವುದೂ ಬೆಲೆ ಇಳಿಕೆಗೆ ಕಾರಣವಾಗಿದೆ.
ಹಣದುಬ್ಬರ ನಿಯಂತ್ರಿಸಲು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಡ್ಡಿ ದರ ಹೆಚ್ಚಳ ಮಾಡುತ್ತಿರುವುದೂ ಚಿನ್ನ ಮತ್ತು ಬೆಳ್ಳಿ ಬೆಲೆ ಮೇಲೆ ಪರಿಣಾಮ ಬೀರಲಿದೆ. ಡಿ.9 ರಿಂದ ಅಮೆರಿಕ ಬಡ್ಡಿ ದರವನ್ನು ಶೇ.0.25 ಹೆಚ್ಚಳ ಮಾಡುವುದಾಗಿ ಈಗಾಗಲೇ ಘೋಷಿಸಿದೆ. ಭಾರತದ ವಿಷಯಕ್ಕೆ ಬರುವುದಾದರೆ, ಈ ಹಿಂದೆ ಬಡ್ಡಿ ದರವನ್ನು ಶೇ.0.25ರಷ್ಟು ಹೆಚ್ಚಳ ಮಾಡಲಾಗಿದೆ. ನಮ್ಮಲ್ಲಿ ಈಗ ಶೇ.6.09 ರಷ್ಟು ಹಣದುಬ್ಬರವಿದ್ದು, ಇದು ಶೇ.6 ರೊಳಗೆ ಇರಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಯಸುತ್ತಿದೆ. ಇದರಿಂದಾಗಿ ನಮ್ಮಲ್ಲೂ ಡಿಸೆಂಬರ್ನಲ್ಲಿ ಬಡ್ಡಿ ದರ ಶೇ.0.25 ರಷ್ಟು ಹೆಚ್ಚಳವಾಗುವ ಸಂಭವವಿದೆ. ಯಾವಾಗ ಬಡ್ಡಿ ದರ ಏರಿಕೆಯಾಗುತ್ತದೆಯೋ ಆಗ ಚಿನ್ನದ ಬೆಲೆ ಇಳಿಕೆಯಾಗುತ್ತದೆ. ಬಡ್ಡಿ ದರ ಹೆಚ್ಚಳವಾದಾಗಲೆಲ್ಲ, ವಿದೇಶಿ ಸಂಸ್ಥೆಗಳು ಸೇರಿ ದೊಡ್ಡ ದೊಡ್ಡ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಇದರಿಂದಾಗಿಯೂ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗುತ್ತದೆ. ಕಳೆದ 10 ದಿನದಲ್ಲಿ 80 ಸಾವಿರ ಕೋಟಿ ರು. ವಿದೇಶಿ ಹೂಡಿಕೆ ಷೇರುಪೇಟೆಗೆ ಬಂದಿದೆ. ಇದರಿಂದಲೂ ರುಪಾಯಿ ಮೌಲ್ಯ ಡಾಲರ್ ಎದುರು ಚೇತರಿಕೆ ಕಂಡಿದೆ.
ವಿದೇಶಿ ವಿನಿಮಯದ ದೃಷ್ಟಿಯಿಂದ ಚಿನ್ನದ ಖರೀದಿ ಮುಂದೂಡಿ ಎಂದು ಮೇ 10 ರಂದು ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಬಹಿರಂಗ ಕರೆ ನೀಡಿದ್ದರು. ಈ ಅಂಶವೂ ಸಹ ಕೆಲಸ ಮಾಡಿದೆ. ಆಗ ಒಂದು ಡಾಲರ್ಗೆ 95 ರು. ಮೌಲ್ಯವಿತ್ತು. ಒಂದೊಮ್ಮೆ ಚಿನ್ನದ ಖರೀದಿ ಮುಂದೂಡದಿದ್ದರೆ ವಿದೇಶಿ ವಿನಿಮಯದ ಕೊರತೆ ಉಂಟಾಗಿ ಒಂದು ಡಾಲರ್ ಮೌಲ್ಯ 100 ರಿಂದ 110 ರುಪಾಯಿಗೆ ತಲುಪುತ್ತಿತ್ತು. ಇದಾದ ಬಳಿಕ ಚಿನ್ನದ ಮೇಲಿನ ಆಮದು ಶುಲ್ಕವನ್ನು ಕೇಂದ್ರ ಸರ್ಕಾರ ಶೇ.5 ರಿಂದ 15ಕ್ಕೆ ಹೆಚ್ಚಳ ಮಾಡಿತು. ರುಪಾಯಿ ಮೌಲ್ಯ ಕುಸಿಯುವುದನ್ನು ತಡೆಗಟ್ಟಲು ಮೋದಿ ಅವರು ಮಾಡಿದ ಈ ರೀತಿ ಕಾರ್ಯ ಫಲಪ್ರದವಾಗಿದೆ. ಇದರಿಂದಾಗಿ ಚಿನ್ನ ಮತ್ತು ಬೆಳ್ಳಿ ಆಮದು ಶೇ.40 ರಷ್ಟು ಕಡಿಮೆಯಾಗಿದೆ. 2025 ಏಪ್ರಿಲ್ನಿಂದ 2026 ಮಾರ್ಚ್ವರೆಗೂ ಭಾರತದಿಂದ 85 ಬಿಲಿಯನ್ ಡಾಲರ್ನಷ್ಟು ಚಿನ್ನ ಖರೀದಿಸಲಾಗಿತ್ತು. ಮೋದಿ ಕರೆ ನಂತರ 2026 ಏಪ್ರಿಲ್ನಿಂದ ಅಕ್ಟೋಬರ್ವರೆಗೂ 45 ಬಿಲಿಯನ್ ಡಾಲರ್ ಮೌಲ್ಯದಷ್ಟು ಚಿನ್ನ ಮಾತ್ರ ಖರೀದಿಸಲಾಗಿದೆ.
ಚಿನ್ನದ ಮೇಲಿನ ಹೂಡಿಕೆಗೆ ಸಕಾಲ
ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಆಗಿರುವುದರಿಂದ ಈಗ ಹೂಡಿಕೆಗೆ ಪ್ರಶಸ್ತ ಕಾಲವಾಗಿದೆ. ಆದರೆ ಕಳೆದ ವರ್ಷ ಚಿನ್ನ, ಬೆಳ್ಳಿಯಿಂದ ಸಿಕ್ಕಷ್ಟು ಭಾರೀ ಪ್ರಮಾಣದ ಲಾಭ ಈಗ ಸಿಗುವುದಿಲ್ಲ. ಆದ್ದರಿಂದ ಎಲ್ಲಾ ಹಣ ಚಿನ್ನ ಮತ್ತು ಬೆಳ್ಳಿ ಮೇಲೆ ಹೂಡಿಕೆ ಮಾಡಬೇಡಿ. ಸದ್ಯ ಚಿನ್ನದ ಬಾಂಡ್ನಲ್ಲಿ ಹೂಡಿಕೆ ಉತ್ತಮ ಆಯ್ಕೆಯಾಗಿದೆ. ಜೊತೆಗೆ ರಿಯಲ್ ಎಸ್ಟೇಟ್, ಷೇರುಪೇಟೆಯಲ್ಲೂ ಹೂಡಿಕೆ ಮಾಡಬಹುದಾಗಿದೆ.