ವಯಸ್ಸನ್ನು ದೃಢಪಡಿಸುವ ಬೇರೆ ದಾಖಲೆಗಳಿಲ್ಲದ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ನಮೂದಿಸಿರುವ ವಯಸ್ಸು ಆಧರಿಸಿ ಅಪಘಾತ ಪರಿಹಾರದ ಲೆಕ್ಕಾಚಾರ ಹಾಕಬಹುದು ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ

ಬೆಂಗಳೂರು : ಆಧಾರ್‌ ಕಾರ್ಡ್‌ ಗುರುತಿನ ದಾಖಲೆಯೇ ಹೊರತು ವಯಸ್ಸು ದೃಢಪಡಿಸುವ ಪುರಾವೆಯಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ವಯಸ್ಸನ್ನು ದೃಢಪಡಿಸುವ ಬೇರೆ ದಾಖಲೆಗಳಿಲ್ಲದ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ನಮೂದಿಸಿರುವ ವಯಸ್ಸು ಆಧರಿಸಿ ಅಪಘಾತ ಪರಿಹಾರದ ಲೆಕ್ಕಾಚಾರ ಹಾಕಬಹುದು ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೇಸ್ತ್ರಿಯ ಕುಟುಂಬಕ್ಕೆ ಹೆಚ್ಚುವರಿ 1.95 ಲಕ್ಷ ರು. ಪರಿಹಾರ ಮಂಜೂರು ಮಾಡಿದೆ.

ಮೃತ ಷರೀಫ್‌ ಅಲಿಯಾಸ್‌ ಶರೀಫ್‌ ಪತ್ನಿ ಸಕೀನಾ, ಅಪ್ರಾಪ್ತ ಪುತ್ರಿ ಸನಾ ಫಾತಿಮಾ ಹಾಗೂ ತಾಯಿ ಸಫಿಯಾ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಕೆ.ಎಸ್‌.ಭರತ್‌ ಕುಮಾರ್‌ ಅವರಿದ್ದ ಏಕಸದಸ್ಯಪೀಠ ಮಂಗಳೂರಿನ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ನೀಡಿದ್ದ ತೀರ್ಪನ್ನು ಮಾರ್ಪಡಿಸಿದೆ.

ಹೆಚ್ಚುವರಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ದಿನದಿಂದ ಹಣ ಪಾವತಿಯಾಗುವವರೆಗೆ ವಾರ್ಷಿಕ ಶೇ.6ರಷ್ಟು ಬಡ್ಡಿ ನೀಡಬೇಕು ಮತ್ತು ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ ಕಂಪನಿಯು ತೀರ್ಪಿನ ದಿನದಿಂದ ಆರು ವಾರಗಳೊಳಗೆ ಮೊತ್ತ ಠೇವಣಿ ಇಡಬೇಕು ಎಂದು ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ಆಧಾರ್‌ ಕಾರ್ಡ್‌ ಗುರುತಿನ ಪುರಾವೆಯಾಗಿ ಬಳಕೆಯಾಗಬಹುದಾದರೂ, ಅದೇ ಸ್ವತಃ ಜನ್ಮದಿನಾಂಕ ಅಥವಾ ವಯಸ್ಸಿನ ಪುರಾವೆಯಾಗುವುದಿಲ್ಲ. ವಯಸ್ಸು ನಿರ್ಧರಿಸುವಾಗ ಅದನ್ನು ದೃಢಪಡಿಸುವ ಇತರ ದಾಖಲೆಗಳಿಗೆ ಆದ್ಯತೆ ನೀಡಬೇಕು. ಆ ಹಿನ್ನೆಲೆಯಲ್ಲಿ ಷರೀಫ್‌ ಅವರ ವಯಸ್ಸು ನಿರ್ಧರಿಸಲು ಆಧಾರ್‌ ಕಾರ್ಡ್‌ನ ವಿವರ ಅವಲಂಬಿಸಲಾಗದು ಎಂದು ಹೇಳಿದೆ.

ಪ್ರಕರಣದ ವಿವರ:

2021ರಲ್ಲಿ ಷರೀಫ್‌ ಇತರರೊಂದಿಗೆ ಕಾರಿನಲ್ಲಿ ಮೈಸೂರಿನಿಂದ ಗುರುವಾಯನಕೆರೆ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಬೇಲೂರು-ಮೂಡಿಗೆರೆ ರಸ್ತೆಯ ನವಿಲಹಳ್ಳಿ ಗ್ರಾಮದ ಸಮೀಪ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿತ್ತು. ತೀವ್ರ ಗಾಯಗೊಂಡ ಷರೀಫ್‌ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದರು. ಮೃತರು ಮೇಸ್ತ್ರಿ ಕೆಲಸ ಮಾಡಿ ದಿನಕ್ಕೆ 1,000 ಗಳಿಸುತ್ತಿದ್ದರು ಮತ್ತು ಕುಟುಂಬ ನಿರ್ವಹಣೆಗೆ ಆದಾಯ ನೀಡುತ್ತಿದ್ದರು ಎಂದು ಪತ್ನಿ, ಪುತ್ರಿ ಹಾಗೂ ತಾಯಿ ಪರಿಹಾರ ಅರ್ಜಿಯಲ್ಲಿ ತಿಳಿಸಿದ್ದರು.

ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಹಾಗೂ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ 2024ರಲ್ಲಿ ಕುಟುಂಬಕ್ಕೆ 26,73,100 ರು. ಪರಿಹಾರ ನೀಡಿತ್ತು. ಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ಕುಟುಂಬದವರು ಮೋಟಾರು ವಾಹನ ಕಾಯಿದೆಯ ಸೆಕ್ಷನ್‌ 173(1)ರ ಅಡಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

35 ವರ್ಷ ಎಂದು ಪರಿಗಣಿಸಬೇಕಿತ್ತು

ಮೃತರ ವಯಸ್ಸು ನಿರ್ಧರಿಸುವುದು ಮತ್ತು ಅದರ ಆಧಾರದಲ್ಲಿ ಪರಿಹಾರ ಲೆಕ್ಕಾಚಾರ ಹಾಕಿರುವುದು ಮೇಲ್ಮನವಿಯ ಪ್ರಮುಖ ಪ್ರಶ್ನೆಯಾಗಿತ್ತು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಷರೀಫ್‌ ಅವರ ವಯಸ್ಸನ್ನು 32 ವರ್ಷ ಎಂದು ನಮೂದಿಸಲಾಗಿತ್ತು. ಆದರೆ, ಆಧಾರ್‌ ಕಾರ್ಡ್‌ನ ವಿವರಗಳ ಪ್ರಕಾರ ಅಪಘಾತ ಸಂಭವಿಸಿದ ದಿನ ಅವರ ವಯಸ್ಸು 35 ವರ್ಷ, 7 ತಿಂಗಳು, 25 ದಿನ ಆಗಿತ್ತು. ನ್ಯಾಯಮಂಡಳಿ ಮೃತರ ವಯಸ್ಸನ್ನು 36 ವರ್ಷ ಎಂದು ಪರಿಗಣಿಸಿ ಪರಿಹಾರ ನಿಗದಿ ಮಾಡಿತ್ತು, ಅದನ್ನು ಪ್ರಶ್ನಿಸಿದ ಕುಟುಂಬದವರು ಮೃತರು 36 ವರ್ಷ ಪೂರ್ಣಗೊಳಿಸಿರಲಿಲ್ಲ. ಆದ್ದರಿಂದ 35 ವರ್ಷ ಎಂದು ಪರಿಗಣಿಸಬೇಕಿತ್ತು ಎಂದು ವಾದಿಸಿದ್ದರು.