ನಿರೂಪಕ ಧ್ವನಿವರ್ಧಕದ ಮುಂದೆ ಬಂದು ಇನ್ನೇನು ಕೆಲವೇ ನಿಮಿಷಗಳಲ್ಲಿ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ ಎಂದರು. ಆದರೂ ಉಪನ್ಯಾಸ ಮುಂದುವರೆಯಿತು. ಆತ್ಮಬಂಧುಗಳೇ, ಮುಖ್ಯಮಂತ್ರಿಗಳು ಬರುತ್ತಿದ್ದಾರಂತೆ, ಬರಲಿ ಒಳ್ಳೆಯದು ಎಂದು ಭಾಷಣ ಮುಂದುವರೆಸುವುದೇ!

ಕೆಲವರಿಗೆ ಮೈಕ್‌ ಸಿಕ್ಕರೆ ಅತಿಥಿಗಳು ಹಾಗೂ ಕೇಳುಗರ ತಾಳ್ಮೆ ಪರೀಕ್ಷೆ ಮಾಡುವಷ್ಟು ಮಾತನಾಡುತ್ತಾರೆ, ಮುಂದೆ ಕುಳಿತಿದ್ದ ಸಾರ್ವಜನಿಕರು, ವೇದಿಕೆ ಮೇಲಿದ್ದ ಗಣ್ಯರು ಹೇಳಿದರೂ ಕೇಳದೇ ಓತಪ್ರೋತವಾಗಿ ಭಾಷಣ ಮಾಡತೊಡಗಿದಾಗ ಏನು ಮಾಡಬೇಕೆಂದು ತೋಚದ ಸ್ಥಿತಿ ನಿರೂಪಕರದ್ದಾಗಿತ್ತು.

ಇಂತಹ ಪ್ರಸಂಗ ಮೈಸೂರಿನಲ್ಲಿ ಇತ್ತೀಚೆಗೆ ಕೃತಿ ಬಿಡುಗಡೆ ಸಮಾರಂಭದಲ್ಲಿ ನಡೆಯಿತು. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶಯ ಭಾಷಣದ ಜವಾಬ್ದಾರಿಯನ್ನು ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಧಾರ್ಮಿಕ ಪ್ರವಚನಕಾರರೊಬ್ಬರಿಗೆ ನೀಡಲಾಗಿತ್ತು.

“ಆತ್ಮಬಂಧುಗಳೇ”... ಎಂದು ತಮ್ಮ ಆಶಯ ಭಾಷಣ ಶುರು ಮಾಡಿದ ಅವರು ಒಂದು ಗಂಟೆಯಾದರೂ ಮಾತನಾಡುವುದು ನಿಲ್ಲಿಸಲಿಲ್ಲ. ಮಾತು ಮಾತಿಗೂ ಆತ್ಮಬಂಧುಗಳೇ, ಆತ್ಮಬಂಧುಗಳೇ ಎಂದು ಸಂಬೋಧಿಸುತ್ತ ಮಾಡಿದ ಭಾಷಣ ಎಲ್ಲರ ಆತ್ಮವನ್ನೇ ಅಲುಗಾಡಿಸುವಂತಿತ್ತು.

ಸಮಯದ ಪರಿವಿಲ್ಲದೆ ಮಾತನಾಡುತ್ತಾ ಅತಿಥಿಗಳ ತಾಳ್ಮೆ ಕೆಣಕಿದರು. ಕೃತಿ ಕುರಿತು ಮಾತನಾಡಬೇಕಿದ್ದ ವಿಶ್ರಾಂತ ಕುಲಪತಿಗಳ ಕಾರ್ಯವನ್ನೂ ಇವರೇ ಮಾಡುವಂತಿದ್ದರು. ಮೂರ್ನಾಲ್ಕು ಬಾರಿ ಚೀಟಿ ಕಳುಹಿಸಲಾಯಿತು. ಸಭಿಕರೊಬ್ಬರು ಸಾಕು ಬಿಡಿ ಸ್ವಾಮಿ ಎಂದರು. ಆದರೂ ಬಿಡಲಿಲ್ಲ. ಕಡೆಗೆ ತಾಳ್ಮೆ ಕಳೆದುಕೊಂಡ ವೇದಿಕೆ ಮೇಲಿದ್ದ ಶ್ರೀಗಳು ಸಾಕು ನಿಲ್ಲಿಸಿ ಎಂದು ಹೇಳಿ ನಿರೂಪಕರಿಗೆ ನಿಮ್ಮ ನಿರೂಪಣೆ ಮುಂದುವರೆಸವಂತೆ ಸೂಚಿಸಿದರು.

ನಿರೂಪಕ ಧ್ವನಿವರ್ಧಕದ ಮುಂದೆ ಬಂದು ಇನ್ನೇನು ಕೆಲವೇ ನಿಮಿಷಗಳಲ್ಲಿ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ ಎಂದರು. ಆದರೂ ಉಪನ್ಯಾಸ ಮುಂದುವರೆಯಿತು. ಆತ್ಮಬಂಧುಗಳೇ, ಮುಖ್ಯಮಂತ್ರಿಗಳು ಬರುತ್ತಿದ್ದಾರಂತೆ, ಬರಲಿ ಒಳ್ಳೆಯದು ಎಂದು ಭಾಷಣ ಮುಂದುವರೆಸುವುದೇ!

ಬಳಿಕ ಶ್ರೀಗಳೇ ಸಾಕು ಬಿಡಿ ಎಂದ ಮೇಲೆ ತಮ್ಮ ಭಾಷಣಕ್ಕೆ ಸಮಾಪ್ತಿ ಹೇಳಿದರು.

 ಮಿನಿಸ್ಟರ್‌ಗೆ ಡಿಜಿಟಲ್‌ ಅರೆಸ್ಟ್‌ ಮಾಡಲೆತ್ನಿಸಿದ ಭೂಪರು!

ಸೈಬರ್ ವಂಚಕರಿಗೆ ಯಾರ ಭೇದ-ಭಾವವಿರುವುದಿಲ್ಲ, ಎಲ್ಲೂ ಕುಳಿತು ಫೋನ್‌ ಮಾಡಿ ಹೆದರಿಸುವುದು, ವಂಚಿಸಲು ಯತ್ನಿಸುವುದು, ಅಮಾಯಕರಾದರೆ ಸಲೀಸಾಗಿ ದುಡ್ಡು ಸುಲಿಗೆ ಮಾಡುವುದು ಮಾಮೂಲಿಯಾಗಿದೆ ಬಿಡಿ...

ಆದರೆ ಈ ರೀತಿ ಹೆದರಿಸಿ ನಮ್ಮ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ಅವರಿಗೇ ಸುಲಿಗೆ ಮಾಡಲು ಯತ್ನಿಸಿದ ಪ್ರಸಂಗ ಅನೇಕರಿಗೆ ಗೊತ್ತಿರಲಿಕ್ಕಿಲ್ಲ.

ತಮಗೆ ಸೈಬರ್‌ ವಂಚಕರು ನಡೆಸಿದ ಪ್ರಯತ್ನವನ್ನು ಸಚಿವ ಡಾ.ಎಂ.ಬಿ.ಪಾಟೀಲರು ಇತ್ತೀಚೆಗೆ ಬಾಯ್ಬಿಟ್ಟಿದ್ದಾರೆ. ಸಚಿವನಾಗಿ ನನಗೆ ಈ ಜಾಲವನ್ನು ಬೇಧಿಸುವುದು ಆಗಲಿಲ್ಲ. ನಾನು ಮಿನಿಸ್ಟರ್‌ ಎಂದು ಹೇಳಿದರೂ ಬಿಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಪರೇಡ್ ಮೈದಾನದಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಪತ್ತೆಯಾಗಿರುವ ಸ್ವತ್ತುಗಳನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಬಿ.ಪಾಟೀಲರು ವ್ಯಕ್ತಿಯೋರ್ವ ಕರೆ ಮಾಡಿ ನಾನು ಸಿಬಿಐ, ಇ.ಡಿ ಇಲಾಖೆಯಿಂದ ಮಾತನಾಡುತ್ತಿರುವೆ ಎಂದ. ತಲೆಬುಡವಿಲ್ಲದ ರೀತಿ ಪ್ರಶ್ನೆಗಳನ್ನು ಕೇಳಲು ಆರಂಭಿಸಿ, ಮುಂಬೈನ ಏರ್‌ಪೋರ್ಟ್‌ ಪಕ್ಕದ ಠಾಣೆಯಲ್ಲಿ ನಿಮ್ಮ ಮೇಲೆ ದೂರಿದೆ ಎಂದು ಹೇಳಿದ. ಅದಕ್ಕೆ ನಾನು ಮಿನಿಸ್ಟರ್‌ ಎಂದು ಹೇಳಿದರೂ ಕೇಳದೇ ಪ್ರಶ್ನಿಸಿ ನನಗೂ ಡಿಜಿಟಲ್ ಅರೆಸ್ಟ್ ಮಾಡಲು ಮುಂದಾಗಿದ್ದ ಎಂದು ಹೇಳಿದರು.

ಬಳಿಕ ಇದು ಫೇಕ್ ಕಾಲ್ ಎಂಬುದು ಗೊತ್ತಾಗಿ ಅಧಿಕಾರಿಗಳ ಮೂಲಕ ಟ್ರ್ಯಾಪ್ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಎಲ್ಲಿಯೋ ಕುಳಿತು ಈ ಜಾಲ ಆಪರೇಟ್ ಮಾಡುತ್ತಾರೆ. ಹೀಗಾಗಿ ಈ ಎಲ್ಲದರ ಬಗ್ಗೆ ಜಾಗೃತಿ ಅಗತ್ಯ ಎಂದರು.

--------------

ಸಾಮಾನ್ಯ ಜನರಿಗೆ ಅಷ್ಟೇ ದಂಡ ಹಾಕಬೇಕಾ..!

ವಿಷಯ ಹಳೆಯದಾಗಿದ್ದರೂ ಈಗಿನ ಕಾಲಕ್ಕೆ ಹೆಚ್ಚು ಪ್ರಸ್ತುತ. ರಾಜಕಾರಣಿಗಳು, ಅಧಿಕಾರದಲ್ಲಿರುವವರ ಹಿಂದೆ-ಮುಂದೆ ಸುತ್ತಾಡುವ ಕೆಲವರು ಮಾತ್ರ ತಮಗೆ ಯಾವುದೇ ಕಾನೂನು ಅನ್ವಯಿಸಲ್ಲ, ತಪ್ಪು ಮಾಡಿದರೆ ದಂಡ ಹಾಕಬಾರದು, ಪ್ರಶ್ನಿಸಬಾರದು ಎಂಬ ಉದ್ಧಟತನ ತೋರಿಸುವ ಪ್ರಸಂಗಳೇ ಹೆಚ್ಚು. ಕೆಲವೊಮ್ಮೆ ತಮ್ಮನ್ನು ಪ್ರಶ್ನಿಸಿದ ಅಧಿಕಾರಿ ವಿರುದ್ಧವೇ ದೂರು ನೀಡುವುದು ಕಾಮನ್‌. ಆದರೆ ಕಾನೂನು ಪಾಲಿಸಿದ ಅಧಿಕಾರಿ ವಿರುದ್ಧ ಕಂಪ್ಲೈಟ್‌ ಮಾಡಿದ ಚೇಲಾನನ್ನೇ ಅಧಿಕಾರಸ್ಥರು ತರಾಟೆಗೆ ತೆಗೆದುಕೊಂಡ ಪ್ರಸಂಗಗಳು ಮಾತ್ರ ಬಹಳ ಕಡಿಮೆ.

ಆದರೆ ರಾಜ್ಯದ ಹಿರಿಯ ಮುತ್ಸದ್ದಿ ದಿವಂಗತ ಕೆ.ಎಚ್‌.ರಂಗನಾಥ್‌ ಅವರು ಇದಕ್ಕೆ ಅಪವಾದವಾಗಿದ್ದರು ಎಂದು ಪ್ರಸ್ತುತ ಕರ್ನಾಟಕದ ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾನಿರ್ದೇಶಕರಾಗಿರುವ ಅಲೋಕ್‌ಕುಮಾರ್‌ ಸ್ಮರಿಸಿಕೊಂಡರು.

ಬಹಳ ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಗೆ ಅಲೋಕ್ ಕುಮಾರ್ ಅವರು ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದರು. ಯುವ ಎಸ್ಪಿ ಅವರಿಗೆ ಹುಮ್ಮುಸ್ಸು ಇತ್ತು. ಕಟ್ಟುನಿಟ್ಟಿನ ಕಾನೂನು ಪಾಲನೆಯಿಂದ ಜಿಲ್ಲೆಯಲ್ಲಿ ಅವರು ಸಂಚಲನ ಮೂಡಿಸಿದ್ದರು. ಕಾನೂನು ಉಲ್ಲಂಘಸಿದರೆ ಯಾರಿಗೂ ಡೋಂಟ್ ಕೇರ್ ಎನ್ನದೆ ಬಿಸಿ ಮುಟ್ಟಿಸುತ್ತಿದ್ದರು. ಹೀಗೆ ಒಂದು ದಿನ ಚಿತ್ರದುರ್ಗ ನಗರದ ಪ್ರಮುಖ ರಸ್ತೆಯಲ್ಲಿ ಆಗಿನ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕ ಕಾರು ನಿಲ್ಲಿಸಿದ್ದರಿಂದ ನಾಗರಿಕರ ಓಡಾಟಕ್ಕೆ ತೊಂದರೆಯಾಗಿತ್ತು. ಅದೇ ವೇಳೆ ಆ ರಸ್ತೆಯಲ್ಲಿ ಬಂದ ಅಲೋಕ್ ಕುಮಾರ್ ಅವರ ಕಣ್ಣಿಗೆ ಕಾಂಗ್ರೆಸ್ ನಾಯಕನ ಕಾರು ಬಿತ್ತು. ಕೂಡಲೇ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರನ್ನು ಕರೆದು ಆ ಕಾರಿನ ಮಾಲಿಕನಿಗೆ ನೋ ಪಾರ್ಕಿಂಗ್‌ ಪ್ರದೇಶದಲ್ಲಿ ಕಾರು ನಿಲ್ಲಿಸಿದ್ದಕ್ಕೆ ದಂಡ ವಿಧಿಸಿ ಪ್ರಕರಣ ದಾಖಿಲಿಸುವಂತೆ ಹುಕುಂ ಹೊರಡಿಸಿದರು. ತನ್ನ ಕಾರನ್ನೇ ಟೋಯಿಂಗ್ ಮಾಡಿ ದಂಡ ವಿಧಿಸಿದ್ದಕ್ಕೆ ಕಾಂಗ್ರೆಸ್ ಮುಖಂಡನಿಗೆ ಉರಿದು ಹೋಗಿತ್ತು. ಅದೇ ದಿನ ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ ರಂಗನಾಥ್ ಅವರನ್ನು ಐಬಿಯಲ್ಲಿ ಅಲೋಕ್ ಕುಮಾರ್ ಭೇಟಿಯಾದರು. ಆಗ ಅಲ್ಲೇ ಇದ್ದ ಕಾಂಗ್ರೆಸ್‌ ಮುಖಂಡ ಮಂತ್ರಿ ಸಮ್ಮುಖದಲ್ಲೇ ಎಸ್ಪಿ ದಂಡದ ಹಾಕಿದ ಬಗ್ಗೆ ದೂರು ಕೊಟ್ಟರು. ಈ ಮಾತಿಗೆ ಪ್ರತಿಕ್ರಿಯಿಸಿದ ರಂಗನಾಥ್, ‘ಅಲ್ಲಯ್ಯ ಸಾಮಾನ್ಯ ಜನರಿಗೆ ಮಾತ್ರ ದಂಡ ಹಾಕಬೇಕಾ? ನೀನು ಯಾಕೆ ಕಾನೂನು ಉಲ್ಲಂಘಿಸಿದೆ’ ಎಂದು ಪ್ರಶ್ನಿಸಿ ತಮ್ಮ ಪಕ್ಷದ ನಾಯಕನಿಗೆ ಬುದ್ಧಿ ಹೇಳಿದರಂತೆ. ತನಗೆ ಬೆಂಬಲಿಸಿ ಎಸ್ಪಿಗೆ ತರಾಟೆ ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿದ್ದ ಆ ಕೈ ಮುಖಂಡ ಸಚಿವರ ಮಾತನಿಂದ ಸಪ್ಪಗಾದರಂತೆ.

----------------

-ಮಹೇಂದ್ರ ದೇವನೂರು

-ಶಶಿಕಾಂತ ಮೆಂಡೆಗಾರ

-ಗಿರೀಶ್‌ ಮಾದೇನಹಳ್ಳಿ