ಎರಡು ಮೂರು ರಾಷ್ಟ್ರೀಕೃತ ಬ್ಯಾಂಕ್ಗಳಿದ್ದರೂ ಸಾರ್ವಜನಿಕರಿಗೆ ಆಧಾರ ಸೇವೆ ಒದಗಿಸಲು ಮುಂದಾಗದೇ ಇರುವುದು ಶೋಚನೀಯ ಸಂಗತಿಯಾಗಿದೆ.
ಪ್ರಕಾಶ ಎಸ್. ಕೊಳಲ ಬಂಕಾಪುರ
ಬಂಕಾಪುರ ಪಟ್ಟಣದಲ್ಲಿ ನಾಡಕಚೇರಿ ಇದ್ದರೂ ಆಧಾರ ಸೇವಾ ಕೇಂದ್ರದ ಸೌಲಭ್ಯ ಇಲ್ಲದ ಕಾರಣ ಸಾರ್ವಜನಿಕರು ಪರಿತಪಿಸುವಂತಾಗಿದೆ.ಸಾರ್ವಜನಿಕರು ಆಧಾರ ಕಾರ್ಡ್ ಮಾಡಿಸಲು ಕಚೇರಿಗೆ ಹೋದರೆ ಅಲ್ಲಿನ ಸಿಬ್ಬಂದಿಗಳು ಶಿಗ್ಗಾಂವಿಗೆ ಅಥವಾ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಎಂದು ಹೇಳುತ್ತಿದ್ದಾರೆ. ಇದರಿಂದ ಜನರು ತಮ್ಮ ವೈಯಕ್ತಿಕ ಕೆಲಸಗಳನ್ನು ಬಿಟ್ಟು ಹೊಸ ಆಧಾರ ಕಾರ್ಡ್ ಹಾಗೂ ತಿದ್ದುಪಡಿ ಮಾಡಿಸಲು ಶಿಗ್ಗಾಂವ ಹಾಗೂ ಹಾವೇರಿಗೆ ಅಲೆಯುವಂತಾಗಿದೆ. ಕಚೇರಿಯಲ್ಲಿ ಆಧಾರ ಕಾರ್ಡಗೆ ಸಂಬಂಧಿಸಿದ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಜನರು ಸೂಕ್ತ ಮಾಹಿತಿ ಹಾಗೂ ಪರಿಹಾರ ದೊರೆಯದೇ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಹಾಗೂ ಬ್ಯಾಂಕ್ ಖಾತೆಗೆ ಜೋಡಿಸಲು, ಬಡ ವೃದ್ಧರಿಗೆ ಪಿಂಚಣಿ ಸಲುವಾಗಿ, ರೈತರಿಗೆ ಸರ್ಕಾರದ ಸೌಲತ್ತುಗಳನ್ನು ಪಡೆಯಲು, ಪಡಿತರ ಚೀಟಿ ಮಾಡಿಸಲು ಹಾಗೂ ರೋಗಿಗಳಿಗೆ ಆಸ್ಪತ್ರೆಯ ಆರೋಗ್ಯ ಯೋಜನೆಗಳನ್ನು ಪಡೆಯಲು ಇನ್ನು ಹಲವಾರು ಸೌಲಭ್ಯಗಳನ್ನು ಪಡೆಯಲು ಸಾರ್ವಜನಿಕರಿಗೆ ಆಧಾರ ಕಾರ್ಡನ ಅವಶ್ಯಕತೆ ಇರುತ್ತದೆ.ಬಂಕಾಪುರ ಹೋಬಳಿಯ ಹನುಮರಹಳ್ಳಿಯಂತಹ ಚಿಕ್ಕ ಗ್ರಾಮದಲ್ಲಿನ ಯುನಿಯನ್ ಬ್ಯಾಂಕಿನಲ್ಲಿ ಆಧಾರ ಸೇವೆ ಲಭ್ಯವಿದ್ದು ಪಟ್ಟಣದಲ್ಲಿ ಎರಡು ಮೂರು ರಾಷ್ಟ್ರೀಕೃತ ಬ್ಯಾಂಕ್ಗಳಿದ್ದರೂ ಸಾರ್ವಜನಿಕರಿಗೆ ಆಧಾರ ಸೇವೆ ಒದಗಿಸಲು ಮುಂದಾಗದೇ ಇರುವುದು ಶೋಚನೀಯ ಸಂಗತಿಯಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಸಿಬ್ಬಂದಿ ಹಾಗೂ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.ನಾಡಕಚೇರಿಯಲ್ಲಿ ಸುಮಾರು ವರ್ಷಗಳಿಂದ ಆಧಾರ ಕಾರ್ಡ್ ವ್ಯವಸ್ಥೆಯೇ ಇಲ್ಲ, ಜನರು ಆಧಾರ ಕಾರ್ಡ್ ಮಾಡಿಸಲು ಶಿಗ್ಗಾಂವ ಮತ್ತು ಡಿ.ಸಿ. ಆಫೀಸಿಗೆ ಅಲೆಯುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದು ಪುರಸಭೆ ನಾಮನಿರ್ದೇಶಿತ ಸದಸ್ಯ ಸೋಮಣ್ಣ ಕುರಿ ತಿಳಿಸಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣಕ್ಕೆ ಶಾಶ್ವತ ಆಧಾರ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರವನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ತಿಳಿಸುತ್ತೇನೆ ಎಂದು ಶಿಗ್ಗಾಂವ-ಸವಣೂರ ಶಾಸಕ ಯಾಸೀರಅಹ್ಮದಖಾನ ಪಠಾಣ ತಿಳಿಸಿದ್ದಾರೆ.ನಾಡಕಚೇರಿಯಲ್ಲಿ ಈಗಾಗಲೇ ಆಧಾರ ಕಾರ್ಡ ತಿದ್ದುಪಡಿ ಕಾರ್ಯ ಪ್ರಾರಂಭವಾಗಿದ್ದು, ಮೇಲಧಿಕಾರಿಗಳ ಜೊತೆ ಮಾತನಾಡಿ ಹೊಸ ಆಧಾರ ನೋಂದಣಿ ಕಾರ್ಯವನ್ನು ಪ್ರಾರಂಭ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಬಂಕಾಪುರ ಉಪತಹಸೀಲ್ದಾರ ವೆಂಕಟೇಶ ಕುಲಕರ್ಣಿ ತಿಳಿಸಿದ್ದಾರೆ.