ಸಂಪತ್ ತರೀಕೆರೆ
ಬೆಂಗಳೂರು : ಆರ್ಥಿಕ ಸಂಕಷ್ಟದಿಂದ ಸಂಸ್ಥೆಯ ನಿವೃತ್ತ ನೌಕರರಿಗೆ ಗ್ರಾಚ್ಯುಟಿ ನೀಡಲು ಸಾಧ್ಯವಾಗ ಪರಿಸ್ಥಿತಿ ಎದುರಿಸುತ್ತಿರುವ ಹಾಪ್‌ಕಾಮ್ಸ್‌ಗೆ ₹15 ಕೋಟಿ ಅನುದಾನ ನೀಡಲು ರಾಜ್ಯಸರ್ಕಾರ ಮುಂದಾಗಿದೆ.
ಹಣಕಾಸು ನೆರವಿನ ಕುರಿತ ಹಾಪ್‌ಕಾಮ್ಸ್ ಪ್ರಸ್ತಾವನೆಗೆ ಈಗಾಗಲೇ ರಾಜ್ಯ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಈ ಬಾರಿಯ ಬಜೆಟ್‌ನಲ್ಲಿ ₹15 ಕೋಟಿ ಅನುದಾನ ಘೋಷಿಸುವ ಸಾಧ್ಯತೆ ಇದೆ. ಸರ್ಕಾರ ನೀಡುವ ಈ ಅನುದಾನವನ್ನು ಸಂಸ್ಥೆಯ ಅಭಿವೃದ್ಧಿಗೆ ಬಳಸಿಕೊಂಡು ಬಂದ ಲಾಭದಲ್ಲಿ ಗ್ರಾಚ್ಯುಟಿ ನೀಡಲು ಚಿಂತನೆ ನಡೆಸಲಾಗಿದೆ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಗೋಪಾಲಕೃಷ್ಣ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಹಾಪ್‌ಕಾಮ್ಸ್ ಪುನಶ್ಚೇತನಕ್ಕೆ ಅನುಕೂಲವಾಗುವಂತೆ ₹12 ಕೋಟಿ ಬಡ್ಡಿ ಸಹಿತ ಮತ್ತು ₹20 ಕೋಟಿ ಬಡ್ಡಿ ರಹಿತ ಸಾಲವಾಗಿ ನೀಡುವಂತೆ ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ ಸಂಸ್ಥೆ ಮನವಿ ಮಾಡಿಕೊಂಡಿತ್ತು. ಸರ್ಕಾರ ಕೂಡ ₹12 ಕೋಟಿ ಬಡ್ಡಿ ಸಹಿತ ಸಾಲ ಕೊಡಲು ಅನುಮೋದನೆ ನೀಡಿತ್ತಾದರೂ ತಾಂತ್ರಿಕ ಕಾರಣಗಳನ್ನೊಡ್ಡಿ ಅನುಮೋದನೆಗೊಂಡಿದ್ದ ಸಾಲವನ್ನು ಬಿಡುಗಡೆ ಮಾಡಲಿಲ್ಲ. ಅಂತೆಯೇ ಬಡ್ಡಿ ರಹಿತ ಸಾಲವೂ ಮಂಜೂರಾಗಿರಲಿಲ್ಲ.
ಗ್ರಾಚ್ಯುಟಿಗೂ ಹಣವಿಲ್ಲ:
ಸಂಸ್ಥೆಯಲ್ಲಿ ಈಗಾಗಲೇ ನಿವೃತ್ತಿ ಹೊಂದಿರುವ 200ಕ್ಕೂ ಹೆಚ್ಚು ನೌಕರರಿಗೆ ಗ್ರಾಚ್ಯುಟಿ ಹಣ ಕೊಡಲು ₹8 ರಿಂದ ₹10 ಕೋಟಿಗೂ ಹೆಚ್ಚು ಹಣದ ಅವಶ್ಯಕತೆ ಇದೆ. ಪ್ರತಿ ವರ್ಷವೂ ಸಿಬ್ಬಂದಿಯಲ್ಲಿ ಕೆಲವರು ನಿವೃತ್ತಿ ಹೊಂದುತ್ತಿರುವುದರಿಂದ ಸಮಸ್ಯೆ ಹೆಚ್ಚುತ್ತಲೇ ಇದೆ. ಆದ್ದರಿಂದ ಗ್ರಾಚ್ಯುಟಿಗೆಂದು ಅನುದಾನ ಕೊಡುವಂತೆ ಹಾಪ್‌ಕಾಮ್ಸ್ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಗ್ರಾಚ್ಯುಟಿ ಕೊಡಲು ಯಾವುದೇ ಅನುದಾನ ಒದಗಿಸಲು ಅವಕಾಶ ಇಲ್ಲ ಎಂಬುದನ್ನು ಸರ್ಕಾರ ಮನವರಿಕೆ ಮಾಡಿಕೊಟ್ಟಿದೆ.
ಲಾಭದಲ್ಲಿ ಗ್ರಾಚ್ಯುಟಿ ಹಂಚಿಕೆ:
ಆದರೂ, ₹15 ಕೋಟಿಗಳನ್ನು ಇಡುಗಂಟಾಗಿ ಕೊಟ್ಟು ಸಂಸ್ಥೆಯ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡುವಂತೆ ಸೂಚನೆ ನೀಡಿದೆ. ಈ ಹಣದಿಂದ ಬಂದ ಲಾಭ ಮತ್ತು ಇತರೆ ಮೂಲಗಳಿಂದ ಬರುವ ಸಂಪನ್ಮೂಲವನ್ನು ಗ್ರಾಚ್ಯುಟಿ ನೀಡಲು ಸಂಸ್ಥೆ ತೀರ್ಮಾನಕೈಗೊಂಡಿದೆ. ಏಕಕಾಲದಲ್ಲಿ ಎಲ್ಲರಿಗೂ ಗ್ರಾಚ್ಯುಟಿ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಈ ವರ್ಷ 50ರಿಂದ 60 ಜನರಿಗೆ ಗ್ರಾಚ್ಯುಟಿ ಕೊಡಲು ನಿರ್ಧರಿಸಿದೆ.
ಹೀಗೆ ಹಂತ ಹಂತವಾಗಿ ಎಲ್ಲರಿಗೂ ಗ್ರಾಚ್ಯುಟಿ ನೀಡಲಾಗುವುದು ಎಂದು ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ. ಹಾಪ್‌ಕಾಮ್ಸ್ ಮೂಲಗಳ ಮಾಹಿತಿ ಪ್ರಕಾರ 2019ರಿಂದ ಈವರೆಗೆ 200ಕ್ಕೂ ಹೆಚ್ಚಿದೆ. ಪ್ರಸ್ತುತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ 350ಕ್ಕೂ ಹೆಚ್ಚು ಇದೆ. ಪ್ರತಿ ತಿಂಗಳು ₹1.40 ಕೋಟಿಗೂ ಅಧಿಕ ಹಣವನ್ನು ಸಂಬಳಕ್ಕಾಗಿ ವಿನಿಯೋಗಿಸಲಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಕೋರಲಾಗಿದೆ ಎಂದು ಹಾಪ್‌ಕಾಮ್ಸ್ ಅಧಿಕಾರಿಗಳು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ನೀಡಲಿರುವ 15 ಕೋಟಿ ರು.ಗಳಲ್ಲಿ ರೈತರಿಗೆ, ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ಬಾಕಿ ಇರುವ ಅಂದಾಜು 10 ಕೋಟಿ ರು.ಗಳನ್ನು ಕೊಡಬೇಕಿದೆ. ಸರ್ಕಾರಕ್ಕೂ ಕೂಡ ಈ ವಿವರಗಳನ್ನು ನೀಡಲಾಗಿದೆ. ಉಳಿದ ಹಣವನ್ನು ಸಂಸ್ಥೆ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು.
-ಗೋಪಾಲಕೃಷ್ಣ, ಅಧ್ಯಕ್ಷರು, ಹಾಪ್‌ಕಾಮ್ಸ್