ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಆಸ್ತಿ ಮಾಲೀಕರು ಸುಳ್ಳು ಹಾಗೂ ತಪ್ಪು ಮಾಹಿತಿ ನೀಡಿ ಆಸ್ತಿ ತೆರಿಗೆ ವಂಚನೆ ಮಾಡುವವರ ಪತ್ತೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಮನೆ ಮನೆ ಸಮೀಕ್ಷೆ ಆರಂಭಿಸಿದ್ದು, ಸುಳ್ಳು ಹಾಗೂ ತಪ್ಪು ಮಾಹಿತಿ ನೀಡಿದ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ.
ರಾಜಧಾನಿಯಲ್ಲಿ ಸುಮಾರು 22 ಲಕ್ಷ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳ್ಳಪಟ್ಟಿದ್ದು, ಆಸ್ತಿ ಮಾಲೀಕರು ಸ್ವಯಂ ಮೌಲ್ಯಮಾಪನ ಯೋಜನೆಯಡಿ (ಎಸ್‌ಎಎಸ್) ಆಸ್ತಿ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಈ ಪೈಕಿ ಹಲವು ಆಸ್ತಿ ಮಾಲೀಕರು ತಪ್ಪು ಹಾಗೂ ಸುಳ್ಳು ಮಾಹಿತಿ ನೀಡಿ ಆಸ್ತಿ ತೆರಿಗೆ ವಂಚನೆ ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನಗರದ ಪ್ರತಿಯೊಂದು ಆಸ್ತಿಯನ್ನು ಪರಿಶೀಲನೆ ನಡೆಸುವುದಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ಅಧಿಕಾರಿ ಸಿಬ್ಬಂದಿಯು ಪ್ರತಿ ಆಸ್ತಿಯ ಪರಿಶೋಧನೆಗೆ ಮುಂದಾಗಿದೆ.
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಯ 369 ವಾರ್ಡ್‌ಗಳಿದ್ದು, ಪ್ರತಿ ವಾರ್ಡ್‌ಗೆ ತಲಾ ಒಬ್ಬರಂತೆ ಸಮೀಕ್ಷೆದಾರರನ್ನು ನಿಯೋಜಿಸಲಾಗಿದ್ದು, ಮುಂದಿನ 3 ತಿಂಗಳು ಈ ಸಮೀಕ್ಷೆದಾರರು ತಮ್ಮ ತಮ್ಮ ವಾರ್ಡ್‌ನಲ್ಲಿ ಸಮೀಕ್ಷೆ ನಡೆಸಿ ಮಾಹಿತಿಯನ್ನು ದಾಖಲಿಸಲಿದ್ದಾರೆ. ಈ ಮಾಹಿತಿ ಆಧಾರದಲ್ಲಿ ಪರಿಶೀಲನಾ ತಂಡವು, ಆಸ್ತಿ ಮಾಲೀಕರು ಸರಿಯಾಗಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರಾ ಅಥವಾ ಇಲ್ಲವಾ ಎಂದು ಪರಿಶೀಲಿಸಲಿದ್ದಾರೆ. ಒಂದು ವೇಳೆ ಸುಳ್ಳು ಹಾಗೂ ತಪ್ಪು ಮಾಹಿತಿ ನೀಡಿರುವುದು ದೃಢಪಟ್ಟರೆ ಆಸ್ತಿ ಮಾಲೀಕರಿಗೆ ನೋಟಿಸ್ ನೀಡುವುದರೊಂದಿಗೆ ಬಾಕಿ ಮೊತ್ತವನ್ನು ಪಾವತಿಗೆ ಸೂಚಿಸಲಾಗುತ್ತದೆ.
ಸಮೀಕ್ಷೆಗಾಗಿ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಲಾಗಿದೆ. ಈ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಿ ದಾಖಲಿಸಲಿದ್ದಾರೆ. ಆ್ಯಪ್‌ನಲ್ಲಿ ಪ್ರತಿಯೊಂದು ಆಸ್ತಿಯ ಜಿಯೋ ಲೊಕೇಶನ್, ಆಸ್ತಿಯ ಫೋಟೋ, ಎಷ್ಟು ಮಹಡಿ ಇವೆ, ಆಸ್ತಿಯ ಬಳಕೆಯು ವಸತಿಯೇ ಅಥವಾ ವಾಣಿಜ್ಯವೇ, ಆಸ್ತಿಯ ಅಳತೆ, ಕಟ್ಟಡವಾಗಿದ್ದರೆ, ಹಳೇ ಕಟ್ಟಡದಾ ಅಥವಾ ಹೊಸ ಕಟ್ಟಡವಾ ಎಂಬ ಮಾಹಿತಿ ಸಂಗ್ರಹಿಸಲಿದ್ದಾರೆ.
ಈಗಾಗಲೇ ನಗರದ ಪ್ರತಿಯೊಂದು ಆಸ್ತಿಯ ಸ್ಯಾಟಲೈಟ್ ಚಿತ್ರಣ ಸಂಗ್ರಹಿಸಲಾಗಿದೆ. ಸಮೀಕ್ಷೆದಾರರು ನೀಡುವ ಮಾಹಿತಿ ಆಧಾರಿಸಿ ಲೆಕ್ಕಚಾರ ಮಾಡಲಾಗುತ್ತದೆ. ಬಳಿಕ ಆಸ್ತಿ ಮಾಲೀಕರು ಪಾವತಿಸುತ್ತಿರುವ ಮಾಹಿತಿ ಪರಿಶೀಲಿಸುವ ಕೆಲಸ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿನಕ್ಕೆ 18 ಸಾವಿರ ಆಸ್ತಿ ಸಮೀಕ್ಷೆ:
369 ಸಮೀಕ್ಷೆದಾರರಿಗೆ ಒಂದೊಂದು ವಾರ್ಡ್ ಹಂಚಿಕೆ ಮಾಡಲಾಗಿದೆ. ಸಮೀಕ್ಷೆದಾರರು ದಿನಕ್ಕೆ ಕನಿಷ್ಠ 50 ಆಸ್ತಿ ಸಮೀಕ್ಷೆ ನಡೆಸುವ ಗುರಿ ನೀಡಲಾಗಿದೆ. ಈ ಪ್ರಕಾರ ಮುಂದಿನ 3 ತಿಂಗಳಲ್ಲಿ ನಗರದ ಎಲ್ಲಾ ಆಸ್ತಿಯ ಸಮೀಕ್ಷೆ ನಡೆಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.
ಮಾರ್ಚ್ ಅಂತ್ಯಕ್ಕೆ ₹3 ಸಾವಿರ ಕೋಟಿ ಗುರಿ
2025-26ನೇ ಸಾಲಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಒಟ್ಟು 6700 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಈವರೆಗೆ 3760 ಕೋಟಿ ರು. ಮಾತ್ರ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಆರ್ಥಿಕ ವರ್ಷ ಪೂರ್ಣಗೊಳ್ಳುವುದಕ್ಕೆ ಕೇವಲ ಎರಡೂವರೆ ತಿಂಗಳಷ್ಟೇ ಬಾಕಿ ಇದೆ. ಈ ಅವಧಿಯಲ್ಲಿ 3 ಸಾವಿರ ಕೋಟಿ ರು. ವಸೂಲಿ ಮಾಡಬೇಕಾಗಿದೆ. ಹಾಗಾಗಿ, ಸುಳ್ಳು ಮತ್ತು ತಪ್ಪು ಆಸ್ತಿ ಘೋಷಣೆ ಮೂಲಕ ಆಸ್ತಿ ತೆರಿಗೆ ವಂಚನೆ ಮಾಡುವವರನ್ನು ಪತ್ತೆ ಮಾಡುವುದಕ್ಕೆ ಮುಂದಾಗಿದೆ.
ಶೇ.15ರಷ್ಟು ತೆರಿಗೆ ಸಂಗ್ರಹ ಕುಸಿತ
ಕಳೆದ 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಜನವರಿ ವೇಳೆಗೆ 4,448 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಆದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇವಲ 3760 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಶೇ.15 ರಷ್ಟು ಆಸ್ತಿ ತೆರಿಗೆ ಸಂಗ್ರಹವು ಕುಸಿತವಾಗಿದೆ.
ನಗರ ಪಾಲಿಕೆ ವಾರು ಆಸ್ತಿ ತೆರಿಗೆ ಸಂಗ್ರಹ ವಿವರ (ಜ.9)
ನಗರ ಪಾಲಿಕೆಗುರಿಸಂಗ್ರಹ
ಬೆಂ.ಕೇಂದ್ರ1,273.78701.11
ಬೆಂ.ಪೂರ್ವ1,673.46980.16
ಬೆಂ.ಉತ್ತರ1,242.33630.20
ಬೆಂ.ದಕ್ಷಿಣ1,228.85712.92
ಬೆಂ.ಪಶ್ಚಿಮ1,281.59733.64
ಒಟ್ಟು6,700.003,758.03
ಆಸ್ತಿ ತೆರಿಗೆ ಪಾವತಿಯನ್ನು ಪರಿಶೀಲನೆ ಕಾರ್ಯವು ನಿರಂತರವಾಗಿ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕಂದಾಯ ವಿಭಾಗದಿಂದ ಪರಿಶೀಲನೆ ನಡೆಸಲಾಗುತ್ತಿದೆ.
- ಮಹೇಶ್ವರ್ ರಾವ್, ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ