''ಭೈರಪ್ಪ ಅವರ ಎಲ್ಲಾ ಕಾದಂಬರಿಗಳ ಸಂಗ್ರಹ ನನ್ನಲ್ಲಿತ್ತು''

Published : Sep 25, 2025, 11:50 AM IST
SL Bhyrappa Novels

ಸಾರಾಂಶ

ನನಗೆ ಭೈರಪ್ಪ ಅವರ ಪರಿಚಯ ಬಹಳ ಚಿಕ್ಕಂದಿನಲ್ಲೇ ಆಗಿತ್ತು. ನಾನು ಆಗ ಅನಿವಾರ್ಯವಾಗಿ ಮುಂಬೈಗೆ ಹೋಗಿ ನೆಲೆಸಬೇಕಾಯಿತು. ಅಲ್ಲಿ ರಂಗಭೂಮಿ ಸಹವಾಸಕ್ಕೆ ಬಿದ್ದೆ

- ಅನಂತನಾಗ್‌

ನನಗೆ ಭೈರಪ್ಪ ಅವರ ಪರಿಚಯ ಬಹಳ ಚಿಕ್ಕಂದಿನಲ್ಲೇ ಆಗಿತ್ತು. ನಾನು ಆಗ ಅನಿವಾರ್ಯವಾಗಿ ಮುಂಬೈಗೆ ಹೋಗಿ ನೆಲೆಸಬೇಕಾಯಿತು. ಅಲ್ಲಿ ರಂಗಭೂಮಿ ಸಹವಾಸಕ್ಕೆ ಬಿದ್ದೆ. ವೆಂಕಟರಾವ್ ತಲಗೇರಿ ಮತ್ತು ಪ್ರಭಾಕರ್ ಮುದೂರ್ ಎಂಬಿಬ್ಬರು ರಂಗಕರ್ಮಿಗಳು ಸಿಕ್ಕರು. ವೆಂಕಟರಾವ್ ನಾಟಕ ನಿರ್ದೇಶನ ಮಾಡುತ್ತಿದ್ದರೆ, ಮುದೂರ್ ನಾಟಕ ರಚನೆ ಮಾಡುತ್ತಿದ್ದರು. ಒಂದು ಸಲ ವೆಂಕಟರಾವ್ ತಲಗೇರಿ ಬೆಂಗಳೂರಿಗೆ ಬಂದು ವಾಪಸ್‌ ಮುಂಬೈಗೆ ಬಂದಾಗ ಅವರಿಂದ ನಾನು ಮೊದಲ ಬಾರಿಗೆ ಭೈರಪ್ಪನವರ ಹೆಸರು ಕೇಳಿದೆ.

ವೆಂಕಟರಾವ್ ಅವರು ಗಿರೀಶ್ ಕಾರ್ನಾಡರು ಮತ್ತು ಬಿವಿ ಕಾರಂತರು ನಿರ್ದೇಶಿಸಿದ್ದ ‘ವಂಶವೃಕ್ಷ’ ಸಿನಿಮಾದಲ್ಲಿ ನಟಿಸಿ ಬಂದಿದ್ದರು. ಅವರು ಆ ಕೃತಿಯ ಕುರಿತು, ಭೈರಪ್ಪನವರ ಕುರಿತು ಬಹಳ ಒಳ್ಳೆಯ ಮಾತುಗಳನ್ನಾಡಿದರು. ಅಷ್ಟೇ ಅಲ್ಲ, ಎಸ್ ಎಲ್ ಭೈರಪ್ಪನವರ ನಾಯಿ ನೆರಳು ಕಾದಂಬರಿಯನ್ನು ತಂದು ನಾಟಕ ಬರೆಸಿದರು. ಆ ನಾಟಕದಲ್ಲಿ ನನಗೆ ಪ್ರಮುಖ ಪಾತ್ರ ಕೊಟ್ಟರು. ಪುನರ್ಜನ್ಮದ ನೆನಪಿರುವ ಹುಡುಗನ ಪಾತ್ರ. ಹಾಗೆ ನಾನು ನನ್ನ 18ನೇ ವಯಸ್ಸಿನಲ್ಲಿಯೇ ಭೈರಪ್ಪನವರ ಕೃತಿಯ ಪಾತ್ರವಾಗಿ ನಟಿಸಿದ್ದೆ.

ನನಗೆ ಭೈರಪ್ಪ ಸಿಕ್ಕಿದ್ದು ಹಾಗೆ. ಆಮೇಲೆ ಕನ್ನಡ ಸಾಹಿತ್ಯದಿಂದ ಸ್ವಲ್ಪ ದೂರಾಗಿದ್ದೆ. ಮತ್ತೆ ಬೆಂಗಳೂರಿಗೆ ಬಂದ ಮೇಲೆ ವೈಎನ್‌ಕೆ ಮತ್ತೆ ಸಾಹಿತ್ಯ ಜಗತ್ತನ್ನು ಪರಿಚಯಿಸಿದರು. ನಾನು ಮತ್ತೆ ಕನ್ನಡ ಸಾಹಿತ್ಯವನ್ನು ಓದತೊಡಗಿದೆ. ಆಗ ನಾನು ಕೆಲವು ಸಾಹಿತಿಗಳ ಎಲ್ಲಾ ಕೃತಿಗಳನ್ನು ಇಟ್ಟುಕೊಂಡಿದ್ದೆ. ಎಸ್ಎಲ್ ಭೈರಪ್ಪನವರ ಎಲ್ಲಾ ಕಾದಂಬರಿಗಳ ಸಂಗ್ರಹ ನನ್ನಲ್ಲಿತ್ತು. ಪದೇ ಪದೇ ಅವರ ಕೃತಿಗಳನ್ನು ಓದುತ್ತಿದ್ದೆ.

ನಾನು ತುಂಬಾ ಇಷ್ಟಪಟ್ಟ ಅವರ ಕೃತಿ ಯಾನ. ಗಂಡು ಮತ್ತು ಹೆಣ್ಣು ಸ್ಪೇಸ್‌ಗೆ ಹೋಗುವ ಆ ಕತೆಗೆ ವಿಜ್ಞಾನಿಯಂತೆ ಅಧ್ಯಯನ ಮಾಡಿದ್ದರು. ಅವರ ಆಲೋಚನೆಯೇ ದಿಗ್ಭ್ರಮೆ ಹುಟ್ಟಿಸುವಂತಿತ್ತು. ಬಹಳ ಕಾಡಿದ ಕಾದಂಬರಿ ಅದು. ಅಂಥದ್ದೊಂದು ಕಾದಂಬರಿ ಬರೆದ ಬೇರೊಬ್ಬ ಸಾಹಿತಿಯೇ ಇಲ್ಲ. ಭೈರಪ್ಪ ಮಾತ್ರ ಹಾಗೆ ಬರೆಯಬಲ್ಲವರಾಗಿದ್ದರು.

ಅವರ ‘ಮತದಾನ’ ಕಾದಂಬರಿಯನ್ನು ಟಿಎನ್‌ ಸೀತಾರಾಮ್‌ ಸಿನಿಮಾ ಮಾಡಿದಾಗ ನಾನು ಪ್ರಮುಖ ಪಾತ್ರ ಮಾಡಿದ್ದೆ. ಅವರ ಕಾದಂಬರಿಗಳನ್ನು ಸಿನಿಮಾ ಮಾಡುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಅಷ್ಟು ಪ್ರಖರವಾಗಿ ಬರೆಯುತ್ತಿದ್ದರು. ಪ್ರಖರವಾಗಿ ಚಿಂತಿಸುತ್ತಿದ್ದರು.

ಅಂಥಾ ಒಬ್ಬ ಶ್ರೇಷ್ಠ ಸಾಹಿತಿಗೆ ತುಂಬಾ ತಡವಾಗಿ ಪದ್ಮಭೂಷಣ ಬಂತು. ಅವರು ಭಾರತರತ್ನ ಪಡೆಯಬಹುದಾದಂತಹ ವ್ಯಕ್ತಿ. ಅಂಥವರಿಗೆ ಕಡೆಗೆ ಜ್ಞಾನಪೀಠವೂ ಕೊಡಲಿಲ್ಲ. ಅದನ್ನು ನೆನೆದಾಗ ಬೇಸರವಾಗುತ್ತದೆ.

ನಾನು ಹಲವು ಬಾರಿ ಅವರನ್ನು ಭೇಟಿ ಮಾಡಿದ್ದೇನೆ. ತುಂಬಾ ಮಿತಭಾಷಿ. ಅವರ ಜೊತೆ ಮಾತನಾಡುವುದಕ್ಕೂ ನನಗೆ ಬಾಯಿ ಕಟ್ಟುತ್ತಿತ್ತು. ಅಂಥಾ ವಿದ್ವಾಂಸ ಅವರು. ಇದೀಗ ನವರಾತ್ರಿ ಸಮಯದಲ್ಲಿ ಅವರು ನಿರ್ಗಮಿಸಿದ್ದಾರೆ. ಕನ್ನಡ ಜಗತ್ತಲ್ಲಿ ಒಂದು ಶೂನ್ಯ ಆವರಿಸಿದಂತಾಗಿದೆ.

PREV
Read more Articles on

Recommended Stories

ಎಸ್ ಎಲ್ ಭೈರಪ್ಪ ನಮ್ಮನೆಯಲ್ಲಿ ಒಂದು ವಾರ ಇದ್ದರು - ಬಾನು ಮುಷ್ತಾಕ್
ಮೈಸೂರಿನಲ್ಲಿ ಎಸ್‌.ಎಲ್. ಭೈರಪ್ಪ : ಮಿತಭಾಷಿ, ಶಿಸ್ತಿನ ಸಿಪಾಯಿ