;Resize=(412,232))
ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ, ನೈಸರ್ಗಿಕ ಸಂಪನ್ಮೂಲವನ್ನು ಬರಿದು ಮಾಡುವ ಮತ್ತೊಂದು ಯೋಜನೆ ಈಗ ಮುನ್ನೆಲೆಗೆ ಬರುತ್ತಿದೆ. ಜಿಲ್ಲೆಯನ್ನು ಬರಡು ಮಾಡುವ ಅವೈಜ್ಞಾನಿಕ ಯೋಜನೆಯಿದು. ಅದುವೆ, ವರದಾ-ಬೇಡ್ತಿ ಹಾಗೂ ವರದಾ-ಧರ್ಮ-ಬೇಡ್ತಿ ನದಿ ಜೋಡಣೆ ಯೋಜನೆ.
ನಿತ್ಯ ಹರಿದ್ವರ್ಣದ ಕಾಡುಗಳ ಮಧ್ಯೆ ಪಶ್ಚಿಮಾಭಿಮುಖವಾಗಿ ಹರಿದು ಅರೇಬಿಯನ್ ಸಮುದ್ರ ಸೇರುವ ಬೇಡ್ತಿ ನದಿಯನ್ನು ತುಂಗಭದ್ರಾ ನದಿಯ ಉಪನದಿಯಾದ ವರದಾ ನದಿಯೊಂದಿಗೆ ಸಂಪರ್ಕಿಸುವ ಯೋಜನೆಯಿದು. ಅಲ್ಲಿಂದ, ಕೃಷ್ಣಾ ನದಿ ಸೇರಿ, ಮುಂದಕ್ಕೆ ಬಂಗಾಳಕೊಲ್ಲಿಗೆ ಈ ನೀರು ಸೇರುತ್ತದೆ. ಅಂದರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಯಲ್ಲಾಪುರ ಪ್ರದೇಶದಿಂದ ಶುಷ್ಕ ರಾಯಚೂರು, ಹಾವೇರಿ, ಗದಗ, ಶಿವಮೊಗ್ಗ, ಕೊಪ್ಪಳ ಸೇರಿ ಉತ್ತರ ಕರ್ನಾಟಕದ 6 ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಮತ್ತು ಅಂದಾಜು 1 ಲಕ್ಷ 6 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶಿತ ಯೋಜನೆಯಿದು.
ವರದಾ-ಬೇಡ್ತಿ ನದಿ ಜೋಡಣೆಯಿಂದ ಸುಮಾರು 10 ಟಿಎಂಸಿ ಹಾಗೂ ವರದಾ-ಧರ್ಮ-ಬೇಡ್ತಿ ನದಿ ಜೋಡಣೆಯಿಂದ ಸುಮಾರು 8 ಟಿಎಂಸಿಯಷ್ಟು ನೀರು ಸಿಗಲಿದೆ ಎಂಬುದು ಅಂದಾಜು. ಇನ್ನು, ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದು, ಅಲ್ಲಿ ಗರಿಷ್ಠ ಸಾಮರ್ಥ್ಯದಷ್ಟು ಸಂಗ್ರಹ ಸಾಧ್ಯವಿಲ್ಲ ಎಂಬುದನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿದೆ. ಹೀಗಾಗಿ, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹೀರೆವದತ್ತಿಯಲ್ಲಿ ಬೃಹತ್ ಆಣೆಕಟ್ಟು ಕಟ್ಟಿ, ಅಲ್ಲಿ ಬೇಡ್ತಿ ನದಿಯ ನೀರನ್ನು ಸಂಗ್ರಹಿಸಲಾಗುತ್ತದೆ. ಜೊತೆಗೆ, ಶಿರಸಿಯ ಮೆಣಸಗೋಡದಲ್ಲಿ ಪಟ್ಟಣಹಳ್ಳ ನದಿಗೆ ಎರಡನೇ ಆಣೆಕಟ್ಟು ನಿರ್ಮಿಸಲಾಗುತ್ತದೆ. ಬಳಿಕ, ಸುರಂಗ ಮಾರ್ಗದ ಮೂಲಕ ಈ ಎರಡೂ ಆಣೆಕಟ್ಟುಗಳಿಂದ ವರದಾ ನದಿಗೆ ನೀರನ್ನು ಕೊಂಡೊಯ್ಯಲು ಉದ್ದೇಶಿಸಲಾಗಿದೆ. ನೀರು ಇಲ್ಲಿಂದ ಕೆಂಗ್ರೆ ತಲುಪಿ, ನಂತರ, 7 ಕಿ.ಮೀ. ದೂರ ಸುರಂಗದ ಮೂಲಕ ಹಕ್ಕಲುಮನೆಗೆ ಹೋಗಿ, ಅಲ್ಲಿ ವರದಾ ನದಿಯನ್ನು ಸೇರುತ್ತದೆ.
ದಟ್ಟ ಕಾನನದ ನಡುವೆ ಹರಿದು ಅರಬ್ಬಿ ಸಮುದ್ರ ಸೇರುವ ಬೇಡ್ತಿ ನದಿ ಹುಟ್ಟುವುದು ಧಾರವಾಡ ಜಿಲ್ಲೆಯಲ್ಲಿ, ಧಾರವಾಡದ ದಕ್ಷಿಣಕ್ಕೆ, ಸೋಮೇಶ್ವರ ದೇವಸ್ಥಾನದ ಬಳಿ ಶಾಲ್ಮಲಾ ಎಂಬಲ್ಲಿ. ಅಲ್ಲಿಂದ ಪಶ್ಚಿಮಾಭಿಮುಖವಾಗಿ ಹರಿದು, ಗೋಕರ್ಣದಿಂದ ಸುಮಾರು 4 ಕಿ.ಮೀ. ದೂರದಲ್ಲಿ ಗಂಗಾ ದೇವಸ್ಥಾನದ ಬಳಿ, ಅರೇಬಿಯನ್ ಸಮುದ್ರವನ್ನು ಸೇರುತ್ತದೆ. ಈ ನದಿಯ ಬಹುಪಾಲು ಹರಿವು ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ.
152 ಕಿ.ಮೀ. ಉದ್ದ ಹರಿಯುವ ಈ ನದಿ, 4 ಸಾವಿರ ಕಿ.ಮೀ. ನಷ್ಟು ಜಲಾನಯನ ಪ್ರದೇಶವನ್ನು ಹೊಂದಿದೆ. ಹರಿವಿನ ನಡುವೆ ಯಲ್ಲಾಪುರ ಬಳಿಯ ಮಾಗೋಡು ಎಂಬಲ್ಲಿ, 600 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಾ, ಸುಂದರ ಜಲಪಾತವನ್ನು ಕೂಡ ಸೃಷ್ಟಿ ಮಾಡುತ್ತದೆ. ಜಲಪಾತದ ನಂತರ, ಉಪನದಿಯಾದ ಸೋಂದಾ ಕೂಡ ಈ ನದಿಯನ್ನು ಸೇರಿಕೊಳ್ಳುತ್ತದೆ.
ಈ ಯೋಜನೆಯನ್ನು ಜಿಲ್ಲೆಯ ಜನ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ. ಇದೊಂದು ಶುದ್ಧ ಅವೈಜ್ಞಾನಿಕ ಯೋಜನೆ ಎಂಬುದೇ ಪರಸರವಾದಿಗಳ ವಾದ.
*ಈ ಯೋಜನೆ ಜಾರಿಯಾಗಲು ಪಶ್ಚಿಮಕ್ಕೆ ಹರಿಯುವ ನದಿಯನ್ನು ಪೂರ್ವಕ್ಕೆ ಹರಿಯುವಂತೆ ಮರು ನಿರ್ದೇಶಿಸಬೇಕು. ಈ ಎರಡೂ ನದಿಗಳು ಮಳೆಯಾಶ್ರಿತ ನದಿಗಳಾಗಿದ್ದು, ಬೇಸಿಗೆಯ ಆರಂಭದಲ್ಲೇ ಒಣಗಲು ಪ್ರಾರಂಭಿಸುತ್ತವೆ. ನದಿಗಳು ವರ್ಷ ಪೂರ್ತಿ ಹರಿಯುವುದಿಲ್ಲ. ಅಲ್ಲದೆ, ವಾರ್ಷಿಕ ಮಳೆಯ ಶೇ.70-80ರಷ್ಟು ಮಳೆ, ಕೇವಲ ಮೂರು ತಿಂಗಳ (ಜುಲೈ- ಸೆಪ್ಟೆಂಬರ್) ಮಳೆಗಾಲದಲ್ಲೇ ಬೀಳುತ್ತದೆ. ಉಳಿದ ಒಂಬತ್ತು ತಿಂಗಳ ಅವಧಿಯಲ್ಲಿ ನದಿಯಲ್ಲಿ ನೀರಿನ ಅಪಾರ ಕೊರತೆ ಕಂಡು ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ‘ಹೆಚ್ಚುವರಿ ನೀರು ಲಭ್ಯವಿದೆ’ ಎಂಬ ಊಹೆ ವಾಸ್ತವಿಕತೆಗೆ ದೂರವಾದದ್ದು.
*ಯೋಜನೆಯ ಸುರಂಗ ಹಾಗೂ ಬ್ಯಾರೇಜ್ ನಿರ್ಮಾಣಕ್ಕಾಗಿ ಪಶ್ಚಿಮ ಘಟ್ಟಗಳ ದಟ್ಟವಾದ ಅರಣ್ಯವನ್ನು ಕಡಿಯಬೇಕಾಗುತ್ತದೆ, ಗುಡ್ಡ ಕತ್ತರಿಸಬೇಕಾಗುತ್ತದೆ. ಕಾಡಿನ ನಾಶದಿಂದಾಗಿ ಮಳೆ ನೀರು ಭೂಮಿಯಲ್ಲಿ ಇಂಗದೆ ನೇರವಾಗಿ ಹರಿದು ಹೋಗುವುದರಿಂದ ಅಂತರ್ಜಲ ಮರುಪೂರಣ ಪ್ರಕ್ರಿಯೆಗೆ ಧಕ್ಕೆಯಾಗುತ್ತದೆ. ಇದರಿಂದಾಗಿ, ಶಿರಸಿ-ಯಲ್ಲಾಪುರ ಭಾಗದಲ್ಲಿ ಬೇಸಿಗೆಯ ದಿನಗಳಲ್ಲಿ ತೀವ್ರ ಅಂತರ್ಜಲ ಕುಸಿತ ಉಂಟಾಗಬಹುದು.
*ನದಿಯ ಸ್ವಾಭಾವಿಕ ಹರಿವು ಕಡಿತಗೊಂಡಾಗ, ಕರಾವಳಿ ಮತ್ತು ನದಿಮುಖಜ ಭಾಗಗಳಲ್ಲಿ ಸಮುದ್ರದ ಉಪ್ಪು ನೀರು ಭೂಮಿಯ ಒಳಗಿನ ಸಿಹಿನೀರಿನ ಜಲಾಗಾರಗಳಿಗೆ ನುಗ್ಗುತ್ತದೆ. ಇದು ನದಿಯ ಕೆಳಭಾಗದ ಮತ್ತು ಕರಾವಳಿ ತೀರದ ಬಾವಿಗಳ ಅಂತರ್ಜಲವನ್ನು ಉಪ್ಪಾಗಿಸಿ, ಕುಡಿಯುವ ನೀರಿಗೆ ತತ್ವಾರ ಉಂಟುಮಾಡುವ ಅಪಾಯವಿರುತ್ತದೆ.
*ವ್ಯಾಪಕ ಅರಣ್ಯನಾಶದಿಂದ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿ, ಕಾಡುಪ್ರಾಣಿಗಳು ಕೃಷಿ ಭೂಮಿ ಮತ್ತು ವಾಸಸ್ಥಾನಗಳಿಗೆ ಪ್ರವೇಶಿಸುವ ಘಟನೆಗಳು ಇನ್ನಷ್ಟು ಹೆಚ್ಚಾಗಬಹುದು.
*ನೀರಿನ ಲಭ್ಯತೆಯನ್ನು ನಿರ್ಣಯಿಸದೆ, ಬೇಡ್ತಿ-ಅಘನಾಶಿನಿ ಮತ್ತು ವರದಾ ನದಿಗಳ ಪರಸ್ಪರ ಸಂಪರ್ಕದ ಕುರಿತು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ಅಧ್ಯಯನ ವರದಿಯನ್ನು ಉಲ್ಲೇಖಿಸದೆ, ನೀರಾವರಿ ಇಲಾಖೆಯಿಂದ ಡಿಪಿಆರ್ ರಚಿಸಲಾಗಿದ್ದು, ಈ ಡಿಪಿಆರ್ ನಿಖರವಾಗಿಲ್ಲ.
*ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ, ಬೇಡ್ತಿ ಕಣಿವೆಯನ್ನು ಸಕ್ರಿಯ ಜೀವವೈವಿಧ್ಯ ವಲಯವೆಂದು ಗುರುತಿಸಿದೆ. ಕಿರಿದಾದ ಕಮರಿಗಳು, ರಭಸದ ಹೊಳೆಗಳು, ಜಲಪಾತಗಳು ಈ ಕಣಿವೆ ಪ್ರದೇಶದಲ್ಲಿವೆ. ಮೇಲಾಗಿ, ಪಶ್ಚಿಮಘಟ್ಟಗಳ ನಿತ್ಯ ಹರಿದ್ವರ್ಣದಿಂದ ದಟ್ಟವಾದ, ಅರಣ್ಯದಿಂದ ಆವೃತವಾದ ಪರ್ವತಮಯ ಸುಂದರವಾದ ವಲಯವಿದು.
*ಯೋಜನೆ ಜಾರಿಯಿಂದ ಜಿಲ್ಲೆಯ ಸುಮಾರು 1 ಸಾವಿರ ಹೆಕ್ಟೇರ್ ಪ್ರದೇಶ ಮುಳುಗಡೆಯಾಗಲಿದ್ದು, 787 ಹೆಕ್ಟೇರ್ ಅರಣ್ಯ ಭೂಮಿ, 130 ಹೆಕ್ಟೇರ್ ಕೃಷಿಯೋಗ್ಯ ಭೂಮಿ ಮತ್ತು 88 ಹೆಕ್ಟೇರ್ ಕೃಷಿಯೇತರ ಭೂಮಿ, 967 ಜನಸಂಖ್ಯೆ ಹೊಂದಿರುವ ಒಂದು ಹಳ್ಳಿ, 2 ಸಾವಿರದಷ್ಟು ವಿವಿಧ ಬಗೆಯ ಹೂ ಬಿಡುವ ಸಸ್ಯಗಳು, 420 ಜಾತಿಯ ಪಕ್ಷಿಗಳು ಮತ್ತು ಪ್ರಾಣಿಗಳ ಉಳಿವಿಗೆ ಇದು ಸಂಚಕಾರ ತರಲಿದೆ.
*ಬೇಡ್ತಿ ಮತ್ತು ಅಘನಾಶಿನಿ ನದಿಗಳ ಕಣಿವೆ ಪ್ರದೇಶಗಳಲ್ಲಿ ವಾಸಿಸುವ ಲಕ್ಷಾಂತರ ರೈತರು, ಮೀನುಗಾರರು, ಅರಣ್ಯಾಧಾರಿತ ಸಮುದಾಯಗಳು ಹಾಗೂ ಪರಂಪರೆಯ ಸಮುದಾಯಗಳಾದ ಗೌಳಿ, ಸಿದ್ದಿ, ಒಕ್ಕಲಿಗ, ಕುಣಬಿ ಮತ್ತು ಹಾಲಕ್ಕಿ ಸಮುದಾಯಗಳ ಜೀವನೋಪಾಯ ಹಾನಿಗೊಳಗಾಗುತ್ತದೆ.
*ಪಶ್ಚಿಮಘಟ್ಟಗಳ ಈ ವಲಯ, ನೈಋತ್ಯ ಮಾನ್ಸೂನ್ ಮಾರುತಗಳನ್ನು ತಡೆ ಹಿಡಿದು, ಮುಂಗಾರು ಮಳೆ ಸುರಿಸುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಈ ಜಲಚಕ್ರಕ್ಕೆ ಅಡ್ಡಿಯಾಗಲಿದೆ.
*ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲದಲ್ಲಿ ಭೂಕುಸಿತಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಈ ಯೋಜನೆಗಳ ಅನುಷ್ಠಾನದಿಂದ ಈ ಬಗೆಯ ಭೂಕುಸಿತಗಳ ಪ್ರಮಾಣ ಮತ್ತು ತೀವ್ರತೆ ಮತ್ತಷ್ಟು ಹೆಚ್ಚಲಿದೆ.
*ಕರ್ನಾಟಕ ಸರ್ಕಾರ 2012ರ ಮೇ 22ರಂದು ಹೊರಡಿಸಿದ ಗೆಜೆಟ್ ಅಧಿಸೂಚನೆ ಹಾಗೂ 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಬೇಡ್ತಿ ಹಾಗೂ ‘ಶಾಲ್ಮಲಾ ನದಿ ತೀರದ ಪರಿಸರ ವ್ಯವಸ್ಥೆ’ಗಳು ಸಂರಕ್ಷಣಾ ಮೀಸಲು ಪ್ರದೇಶವಾಗಿವೆ. ಸಂರಕ್ಷಿತ ಅರಣ್ಯಗಳ ಸುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯ ಪ್ರದೇಶ ಹಾಗೂ ನದಿ ಇಕ್ಕೆಲಗಳ 100 ಮೀಟರ್ ವ್ಯಾಪ್ತಿಯ ನದಿತೀರದ ಕಾಡುಗಳನ್ನು ಪರಿಸರ ಸೂಕ್ಷ್ಮ ವಲಯವಾಗಿ ನಿರ್ವಹಿಸಲು ಸುಪ್ರೀಂಕೋರ್ಟ್ ನಿರ್ದೇಶನವೇ ಇದೆ.
ಇಷ್ಟೆಲ್ಲಾ ದುಷ್ಪರಿಣಾಮಗಳ ನಡುವೆಯೂ ರಾಜಕಾರಣಕ್ಕಾಗಿ, ರಾಜಕಾರಣಿಗಳು ಈ ಯೋಜನೆಯ ಜಾರಿಗೆ ಮುಂದಾಗುತ್ತಿರುವುದು ವಿಷಾದನೀಯ.