ಘಟನೆ 1: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಬಂದ ನಂತರ ಅಂತಾರಾಷ್ಟ್ರೀಯ ಆರ್ಥಿಕತೆ ಮತ್ತು ರಾಜಕಾರಣ ಎಲ್ಲವೂ ಗೊಂದಲದ ಗೂಡು. ಅಷ್ಟೇ ಅಲ್ಲ ದಶಕಗಳಲ್ಲಿ ಮೊದಲ ಬಾರಿಗೆ ಅಮೆರಿಕದ ನಾಯಕತ್ವ ತನ್ನ ಅತಿರೇಕಗಳಿಂದ ವಾಚಾಳಿ ಮತ್ತು ಅಪ್ರಬುದ್ಧ ಎನಿಸತೊಡಗಿದೆ. ಘಟನೆ 2: ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ತನ್ನ ಪಾಡಿಗೆ ತಾನು ನಡೆಯುತ್ತಿದೆ. ಆದರೆ ಅತೀ ಉತ್ಸಾಹಿಯಾದ ಪರ ಮತ್ತು ವಿರೋಧ ಇರುವವರ ಭಾಷೆ ಪದ ಬಳಕೆ ಅಯ್ಯೋ ಸಾಕಪ್ಪ ಅನ್ನಿಸತೊಡಗಿದ್ದು, ಅವಾಚ್ಯ ಶಬ್ದಗಳು, ಬೈಗುಳಗಳು ನಮ್ಮ ಸಾರ್ವಜನಿಕ ಅಭಿವ್ಯಕ್ತಿಯ ಸಹಜತೆ ಏನೋ ಅನ್ನುವ ರೀತಿಯಲ್ಲಿ ಕಿವಿಗೆ ಅಪ್ಪಳಿಸುತ್ತಿವೆ. ಆರೋಪ ಪ್ರತಿ- ಆರೋಪಗಳು ಬೈಗುಳ, ಹೊಡೆದಾಟ, ಬಡಿದಾಟದ ಸ್ವರೂಪ ಪಡೆದುಕೊಂಡಿವೆ.
ಘಟನೆ 3: ಮೊನ್ನೆ ಸದನದಲ್ಲಿ ನಡೆದ ಹಾಲಿ ಉಪ ಮುಖ್ಯಮಂತ್ರಿ ಮತ್ತು ಮಾಜಿ ಉಪ ಮುಖ್ಯಮಂತ್ರಿಗಳ ನಡುವಿನ ಮಾತಿನ ಸಮರವು ಕೂಡ ಅತಿರೇಕಕ್ಕೆ ಒಂದು ಅನ್ವರ್ಥದಂತೆ ಇತ್ತು. ಒಂದು ಕ್ಷಣ ಇಬ್ಬರೂ ಬೀದಿಯಲ್ಲಿ ನಿಂತು ಬಡಿದಾಡಿಕೊಳ್ಳುವ ರೀತಿಯಲ್ಲಿ ಪರಸ್ಪರ ನಿಂದಿಸಿಕೊಳ್ಳುತ್ತಿದ್ದರು. ಘಟಾನುಘಟಿಗಳು ಸುಮ್ಮನೆ ನೋಡುತ್ತಾ ಕುಳಿತಿದ್ದರು. ಒಂದು ಕಾಲವಿತ್ತು, ಜನ ಸಾಮಾನ್ಯರು ಆಡು ಭಾಷೆಯಲ್ಲಿ ಮಾತಾಡುವಾಗ ಆತ್ಮೀಯತೆ ಕಾರಣದಿಂದಲೋ ಏನೋ ಪರಸ್ಪರ ಸಲುಗೆಯಿಂದ ಮಾತನಾಡುತ್ತಿದ್ದರು. ಆದರೆ ವೇದಿಕೆಯಲ್ಲಿ ಬಹು ವಚನ ಪ್ರಯೋಗ ಇಲ್ಲದೇ ಮಾತನಾಡುತ್ತಿರಲಿಲ್ಲ. ಅದು ಸರಿಯಿತ್ತು. ಆದರೆ ಈಗ ನೋಡಿ ಕಾಲ ಬದಲಾಗಿದೆ. ಸಾರ್ವಜನಿಕ ವೇದಿಕೆಗಳಲ್ಲಿ ಏನೇ ವಿಷಯ ಮಾತನಾಡುವಾಗಲೂ ಬೈಗುಳ, ಏಕವಚನ, ಮನೆಯ ಹೆಣ್ಣು ಮಕ್ಕಳ ಹೆಸರು ಎಳೆದು ತರುವುದು ಅತಿಯಾಗಿ ಬಿಟ್ಟಿದೆ. ಪುಕ್ಕಟೆ ಮನರಂಜನೆ ಅಂತ ಜನ ನೋಡುತ್ತಾರೆ. ಲೈಕ್ ಒತ್ತುತ್ತಾರೆ. ಕಾಮೆಂಟ್ ಹಾಕುತ್ತಾರೆ ಅಷ್ಟೇ. ಆದರೆ ಇದರ ಒಟ್ಟು ಲಾಭ ಸಮಾಜಕ್ಕೇನು? ಯುವ ಜನತೆಯ ಮೇಲೆ ಇದರ ಪರಿಣಾಮವೇನು? ನೋಡುವವರ ಮಸ್ತಿಷ್ಕದ ಅವಸ್ಥೆ ಏನು ಎಂಬುದು ಚರ್ಚೆ ಆಗಬೇಕಿದೆ. ಶತಮಾನಗಳ ಹಿಂದೆ ಫ್ರಾನ್ಸ್‌ನ ರಾಜ 15ನೇ ಲೂಯಿಸ್ ‘ನನ್ನ ತರುವಾಯ ಜಲ ಪ್ರಳಯವಾಗಲಿ, ನನಗೇನು?’ ಎಂದು ಅನ್ನುತ್ತಿದ್ದನಂತೆ. ಬಹುತೇಕ ಇವತ್ತು ಸಾರ್ವಜನಿಕ ಜೀವನದಲ್ಲಿರುವ ಕೆಲವರು ಮಾತನಾಡುವಾಗ ಲೂಯಿಸ್ ರೀತಿಯೇ ನಾಳೆ ಜಗತ್ತೇ ಇರೋಲ್ಲವೇನೋ ಅನ್ನುವಂತೆ ಮಾತನಾಡುತ್ತಿದ್ದಾರೆ. ಸಾರ್ವಜನಿಕ ಜೀವನಕ್ಕೆ ಪ್ರವೇಶ ಮಾಡುವವರಿಗೆ ಮಾತು, ನಡವಳಿಕೆಯ Cards, ಆರೋಪ- ಪ್ರತಿ ಆರೋಪಗಳ ವ್ಯಾಪ್ತಿ ಮತ್ತು ಮಿತಿ ಏನು ಅಂತ ಗೊತ್ತಿರಬೇಕು.
-- ಡಿಕೆ ಹಿಂದುತ್ವ ಹೇಳಿಕೆಯ ಮರ್ಮ
ಯಾವುದೇ ರಾಜಕಾರಣಿ ‘ವೋಟಿನ ಆಸೆ’ ಇಲ್ಲದೆ ಯಾವುದೇ ಹೇಳಿಕೆ ನೀಡುವ ಸಾಹಸಕ್ಕೆ ಹೋಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅದಕ್ಕೆ ಮೋದಿಯಿಂದ ಹಿಡಿದು ಸಿದ್ದು, ಡಿಕೆಶಿವರೆಗೆ ಯಾರೂ ಹೊರತಲ್ಲ. ಪ್ರಯಾಗದಲ್ಲಿ ಮಹಾ ಕುಂಭ ಮೇಳ ಬಂತು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅಲ್ಲಿಗೆ ಹೋಗಲು ತಯಾರು ಇರಲಿಲ್ಲ. ಆದರೆ ಡಿ.ಕೆ. ಶಿವಕುಮಾರ್ ಅಲ್ಲಿಗೆ ಹೋದರು. ಅಷ್ಟೇ ಅಲ್ಲ, ನಾನು ಹಿಂದೂ ಎಂದು ಹೇಳಿಕೊಂಡರೆ ತಪ್ಪೇನು ಎಂದು ವ್ಯಾಖ್ಯಾನ ಕೂಡ ಮಾಡಿದರು. ಮಹಾ ಶಿವರಾತ್ರಿ ಬಂತು. ಕೊಯಮತ್ತೂರಿಗೆ ಹೋದ ಡಿಕೆಶಿ ತಥಾಕಥಿತ ಬಲ ಪಂಥದ ಜೊತೆ ಗುರುತಿಸಿಕೊಂಡಿರುವ ಸದ್ಗುರು ಜಗ್ಗಿ ವಾಸುದೇವ ಕರೆದರು ಎಂದು ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡರು. ಈಗ ಧರ್ಮಸ್ಥಳದ ಸರದಿ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರಿಗಿಂತ ದೊಡ್ಡ ಹಿಂದುತ್ವವಾದಿ ನಾನು ಎಂದು ಡಿ.ಕೆ. ಶಿವಕುಮಾರ ಹೇಳಿಕೆ ಕೊಡುತ್ತಿದ್ದಾರೆ. ಇದರ ಅರ್ಥ ಡಿಕೆ ಬಿಜೆಪಿಯತ್ತ ವಾಲುತ್ತಿದ್ದಾರೆ ಎಂದು ಹೇಳುವುದು ಬಾಲಿಶವಾದೀತು ಅಷ್ಟೇ. ಡಿಕೆಗೆ ಗೊತ್ತಿದೆ, ಮುಸ್ಲಿಂ ವೋಟು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಬೇರೆ ಪರ್ಯಾಯಗಳು ಮುಸ್ಲಿಮರಿಗೆ ಇಲ್ಲ. ಒಂದು ವೇಳೆ 2028ರಲ್ಲಿ ತನ್ನ ನೇತೃತ್ವದಲ್ಲಿ ಚುನಾವಣೆ ನಡೆದರೆ ಎಡ ವಿಚಾರಧಾರೆಯ ವೋಟುಗಳು ತನಗೆ ಬರುವುದಿಲ್ಲ. ಹೀಗಿರುವಾಗ ಬಿಜೆಪಿ ಮತಗಳು ತನ್ನ ‘ಹಿಂದುತ್ವದ ವ್ಯಾಖ್ಯೆ’ಯಿಂದ ಒಡೆದರೆ, ತನ್ನ ಕಾರಣದಿಂದ ಕಾಂಗ್ರೆಸ್ಸಿಗೆ ಬಂದರೆ ನಷ್ಟವನ್ನು ಭರಿಸಿಕೊಳ್ಳಬಹುದು ಎಂದು. ಇವೆಲ್ಲ ಸಾಧ್ಯ ಆಗುತ್ತಾ ಎಂದು ಈಗಲೇ ಹೇಳೋದು ಕಷ್ಟ. ಆದರೆ ಡಿಕೆ ತಲೆಯಲ್ಲಿ ಒಂದು ಪಕ್ಕಾ ಪ್ಲಾನ್ ಇದೆ ಅನ್ನೋದಂತೂ ಕಾಣುತ್ತದೆ.
ಹಿಟ್ ವಿಕೆಟ್ ರಾಜಣ್ಣ
ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ಪ್ರತಿಭಟನೆ ಮುಗಿಸಿ ದಿಲ್ಲಿಗೆ ಹೋದ ಮೇಲೆ ಸಂಸತ್ ಭವನಕ್ಕೆ ಮುತ್ತಿಗೆ ಹಾಕುವ ರಣತಂತ್ರ ರೂಪಿಸಲು ಇಂಡಿಯಾ ಒಕ್ಕೂಟದ ಸಭೆ ಕರೆದಿದ್ದರು. ಅಲ್ಲಿ ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರುತ್ತಿದ್ದ ರಾಜಣ್ಣ ಬೈಟ್ ತೋರಿಸಿ, ‘ನೋಡಿ, ನಿಮ್ಮವರೇ ಹಿಂಗೇ ಮಾತಾಡಿದ್ರೆ ನಾವು ಪ್ರತಿಭಟನೆಗೆ ಬರೋದು ಹೇಗೆ? ಆಡಳಿತ ಪಕ್ಷ ಬಿಜೆಪಿಗೆ ಇದೊಂದು ಅಸ್ತ್ರ ಸಾಕು’ ಎಂದಾಗ ರಾಹುಲ್ ಗಾಂಧಿ ಕ್ರುದ್ಧಗೊಂಡಿದ್ದಾರೆ. ಕೂಡಲೇ ವೇಣುಗೋಪಾಲ್‌ಗೆ ರಾಜಣ್ಣರನ್ನು ವಜಾ ಮಾಡಲು ಹೇಳಿ ಎಂದ ರಾಹುಲ್ ಗಾಂಧಿ ಪಾರ್ಲಿಮೆಂಟ್ ಗೆ ತೆರಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಫೋನ್ ಮಾಡಿದ ವೇಣುಗೋಪಾಲ್, ಪರಿಸ್ಥಿತಿಯ ಸೂಕ್ಷ್ಮತೆ ವಿವರಿಸಿದಾಗ ಮುಖ್ಯಮಂತ್ರಿಗಳು, ‘ಇಲ್ಲ, ರಾಜಣ್ಣರಿಗೆ ನಾನು ತಿಳಿಸಿಹೇಳುತ್ತೇನೆ. ಅವರ ಇಲಾಖೆಯ ಬಿಲ್‌ಗಳಿವೆ. ಅಧಿವೇಶನ ಮುಗಿಯಲಿ. ನಾನೇ ದಿಲ್ಲಿಗೆ ಕರೆದುಕೊಂಡು ಬರುತ್ತೇನೆ’ ಎಂದಾಗ ವೇಣುಗೋಪಾಲ್ ‘ನೀವು ರಾಹುಲ್ ಗಾಂಧಿ ಜೊತೆ ಒಮ್ಮೆ ಮಾತಾಡಿ’ ಅಂದಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ರಾಹುಲ್‌ರಿಗೆ ಫೋನಾಯಿಸಿದಾಗ ‘ಇಲ್ಲ, ಇವೆಲ್ಲ ಸಹಿಸಿಕೊಳ್ಳೋದು ಅಸಾಧ್ಯ. ಯಾವುದೇ ಕಾರಣಕ್ಕೂ ರಾಜೀನಾಮೆ ತಗೋಬೇಡಿ, ಕಿತ್ತು ಒಗೆಯಿರಿ’ ಎಂದು ಹೇಳಿದ್ದಾರೆ. ಆಗ ಮುಖ್ಯಮಂತ್ರಿಗಳ ಬಳಿ ರಾಜ್ಯಪಾಲರಿಗೆ ಪತ್ರ ಬರೆಯದೇ ಬೇರೆ ದಾರಿಯೇ ಇರಲಿಲ್ಲ. ಕೆಲವೊಮ್ಮೆ ಮಾತನಾಡಿದ ಮಾತಿನ ಟೈಮಿಂಗ್ ಕೆಟ್ಟದ್ದು ಆಗಿದ್ದರೆ ನಿಮ್ಮವರೇ ನಿಮ್ಮ ರಕ್ಷಣೆಗೆ ಬರಲು ಆಗೋದಿಲ್ಲ ನೋಡಿ. ರಾಜಣ್ಣ ಅವರದು ನಾಲಿಗೆಯ ಮೇಲೆ ನಿಯಂತ್ರಣ ಇಟ್ಟುಕೊಳ್ಳಲು ಆಗದೇ ಮಾಡಿದ ಸ್ವಯಂಕೃತ ಅಪರಾಧ ಅಷ್ಟೇ. ಈಗ ಚಿಂತಿಸಿ ಆರೋಪ ಮಾಡಿ ಫಲವಿಲ್ಲ. ಒಮ್ಮೊಮ್ಮೆ ರಾಜಕಾರಣದಲ್ಲಿ ವ್ಯಕ್ತಿಗಿಂತ ‘ಸಮಯ ಬಲಶಾಲಿ’ ಅಂತ ಹೇಳೋದು ಇದಕ್ಕೇ ಇರಬೇಕು. --
ಎಲ್ಲಿಂದ ಎಲ್ಲಿಗೆ ರಾಜಣ್ಣ?
ಬಿಜೆಪಿ ಹಿರಿಯ ನಾಯಕರಾಗಿದ್ದ ದಿವಂಗತ ಅನಂತ ಕುಮಾರ್ ಒಮ್ಮೆ ದಿಲ್ಲಿಯ ಪತ್ರಕರ್ತರ ಎದುರು ‘ಫೀ ಹೆಚ್ಚಳದ ವಿರುದ್ಧ ಪ್ರತಿಭಟನೆಗೆ ಹೋದಾಗ ಜೊತೆಗೆ ಹುಡುಗರು ಇದ್ದಾರೆ, ಪ್ರಚಾರ ಸಿಗುತ್ತದೆ ಎಂದು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಲು ಹೋಗುವುದು, ಹೋಟೆಲ್‌ನಲ್ಲಿ ಇಡ್ಲಿ ಬೆಲೆ ಜಾಸ್ತಿ ಆಗಿದೆ ಎಂದು ಪ್ರತಿಭಟನೆ ನಡೆಸುವುದು ನಿಷಿದ್ಧ. ಹಾಗೇ ಮಾಡಿದಲ್ಲಿ ಅದು ಎಲ್ಲಿಂದ ಎಲ್ಲಿಗೋ ಹೋಗುತ್ತದೆ’ ಎಂದು ಹೇಳುತ್ತಿದ್ದರು. ಈಗ ನಮ್ಮ ಮುತ್ಸದ್ದಿ ಅನ್ನಿಸಿಕೊಂಡ, ಕರ್ನಾಟಕ ರಾಜಕಾರಣದ ಜಾತಿ ಸಮೀಕರಣಗಳು, ಆಡಳಿತ ಹೀಗೆ ಎಲ್ಲವನ್ನೂ ಬಲ್ಲ ರಾಜಣ್ಣ ಅವರು ಕೆಪಿಸಿಸಿ ಅಧ್ಯಕ್ಷನಾಗುತ್ತೇನೆ ಎಂದು ಹೊರಟು ಇವತ್ತು ಪಾರ್ಟಿ ಇಂದಲೇ ಹೊರಗೆ ಕಾಲು ಇಡುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ಬಿಜೆಪಿಯಲ್ಲಿ ಇದೇ ತಪ್ಪನ್ನು ಬಸನಗೌಡ ಪಾಟೀಲ ಯತ್ನಾಳರು ಮಾಡಿದ್ದರು. ಅತಿಯಾಗಿ ಬೇಕಾದ್ದು, ಬೇಡ ಆದದ್ದು ಮಾತಾಡಿ ಮಾತಾಡಿ ಪಾರ್ಟಿಯಿಂದಲೇ ಉಚ್ಚಾಟನೆ ಆಗಿದ್ದರು. ಇದನ್ನು ನೋಡಿಯೂ ಪಾಠ ಕಲಿಯದ ರಾಜಣ್ಣ ಮೈಕ್ ಹಿಡಿದ ಕೂಡಲೇ ಮಾತಾಡಿ ಮಾತಾಡಿ ಮಂತ್ರಿ ಸ್ಥಾನದಿಂದ ವಜಾ ಆದರು ಅನ್ನೋದೇ ವಿಪರ್ಯಾಸ. ಮೇಲುನೋಟಕ್ಕೆ ಕಾಣುವ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ತಮ್ಮ ಗುಂಪಿನ ಪರವಾಗಿ ಮಾಧ್ಯಮಗಳ ಜೊತೆ ಮಾತಾಡಿ ಎಂದು ಹಿರಿಯರಾದ ರಾಜಣ್ಣ ಅವರಿಗೆ ಜವಾಬ್ದಾರಿ ಕೊಟ್ಟಿದ್ದರು. ಆದರೆ ತನ್ನ ಗುಂಪಿನ ಹೋರಾಟದ ಉದ್ದೇಶವನ್ನೇ ಮರೆತ ರಾಜಣ್ಣ ಅವರು ಡಿ.ಕೆ.ಶಿವಕುಮಾರ್ ಗುಂಪಿನ ವಿರುದ್ಧವಾಗಿ ಮಾತಾಡುವ ಬದಲು ಕೊನೆಗೆ ದಿಲ್ಲಿ ನಾಯಕರಾದ ರಣದೀಪ್ ಸುರ್ಜೇವಾಲಾ ಮತ್ತು ರಾಹುಲ್ ಗಾಂಧಿ ಅಭಿಯಾನದ ಬಗ್ಗೆಯೇ ಮಾತನಾಡಲು ತೊಡಗಿದರು. ಒಂದು ಕಡೆ ವಜಾಗೊಂಡ ರಾಜಣ್ಣ, ದಿಲ್ಲಿಯಲ್ಲಿ ಕುಳಿತು ಯಾರೋ ಷಡ್ಯಂತ್ರ ನಡೆಸಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ 24 ಗಂಟೆ ಚಾನೆಲ್‌ಗಳು ಇರುವಾಗ, ಕ್ಯಾಮೆರಾ ಎದುರು ನೀವೇ ಆಟ ಆಡುವ ಭರದಲ್ಲಿ ಬ್ಯಾಟ್ ಅನ್ನು ಸ್ಟಂಪ್‌ಗೆ ತಾಗಿಸಿದರೆ ಯಾರು ತಾನೇ ಏನು ಮಾಡಲು ಸಾಧ್ಯ?
-- ದಿಲ್ಲಿ ಇಷ್ಟೊಂದು ‘ಸಕ್ರಿಯ’ ಯಾಕೆ?
2013ರಿಂದ 2018ರವರೆಗೆ ಕನಾಟಕದ ಆಡಳಿತ ಪಕ್ಷದ ಸಂಘಟನೆ, ನಿರ್ಣಯಗಳು ಎಲ್ಲವನ್ನು ಗಾಂಧಿ ಕುಟುಂಬವು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಗೆ ಹೇಳುತ್ತಾರೋ ಹಾಗೇ ಅನ್ನುತ್ತಿತ್ತು. ಭಾಳ ಎಂದರೆ ಖರ್ಗೆ ಮತ್ತು ಪರಮೇಶ್ವರ ಅವರ ಅಭಿಪ್ರಾಯ ಪಡೆದು ಮುಂದೆ ಹೋಗಿ ಅನ್ನುತ್ತಿತ್ತು. ಸಹಜವಾಗಿ ದಿಲ್ಲಿ ನಾಯಕರು ಮಾಸ್ ಲೀಡರ್ ಆಗಿರುವ ಸಿದ್ದು ಎದುರು ದುರ್ಬಲರಂತೆ ಕಾಣುತ್ತಿದ್ದರು. ಆದರೆ 2023ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಏಕಾಏಕಿ ದಿಲ್ಲಿಯ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ವಿಷಯದಲ್ಲಿ ‘ನಾವು ಹೇಳಿದ್ದನ್ನು ನೀವು ಕೇಳಿ ಸಾಕು’ ಅನ್ನುತ್ತಿದೆ ಎನ್ನುವ ರೀತಿ ನಿರ್ಣಯಗಳನ್ನು ತೆಗೆದು ಕೊಳ್ಳುತ್ತಿದೆ. ಲೋಕಸಭಾ ಚುನಾವಣೆ ಆದ ಮೇಲೆ ಸಿದ್ದರಾಮಯ್ಯನವರು ಸಂಪುಟ ಪುನಾರಚನೆ ಮಾಡುತ್ತೇನೆ ಎಂದರೆ, ಹೈಕಮಾಂಡ್ ಓಕೆ ಅನ್ನಲಿಲ್ಲ. ಅಷ್ಟೇ ಅಲ್ಲ ಸತೀಶ್ ಜಾರಕಿಹೊಳಿ, ರಾಜಣ್ಣ, ಜಮೀರ್ ಅಹ್ಮದ್, ಪರಮೇಶ್ವರ್, ಎಂ.ಬಿ. ಪಾಟೀಲ್, ಮಹದೇವಪ್ಪನವರು ಹೋಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ ಜಾಗಕ್ಕೆ ಬೇರೆಯವರನ್ನು ತನ್ನಿ ಅಂದಾಗಲೂ ‘ಮುಂದಿನ ಡಿಸೆಂಬರ್‌ವರೆಗೆ ಏನಿಲ್ಲ, ಸುಮ್ಮನೆ ಇರಿ’ ಎಂದು ಹೇಳಿ ಕಳುಹಿಸಿತು.
ಕಾಲು ತುಳಿತದ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯನ್ನು ಜವಾಬ್ದಾರಿಯಿಂದ ಮುಕ್ತ ಮಾಡಿ ಎಂದು ಹೇಳಿದ ದಿಲ್ಲಿ ಹೈಕಮಾಂಡ್, ಸಿದ್ದರಾಮಯ್ಯ ಅವರ ಹೃದಯಕ್ಕೆ ಹತ್ತಿರದ ಜಾತಿ ಗಣತಿ ವಿಷಯದಲ್ಲಿ ಕಾಲು ದಾರಿಗೆ ಬಂದಿದ್ದ ಮುಖ್ಯಮಂತ್ರಿಗಳಿಗೆ ಕ್ಯಾಬಿನೆಟ್‌ನಲ್ಲೇನು ನಿರ್ಣಯ ತೆಗೆದುಕೊಳ್ಳಬೇಕು? ಹೇಗೆ ಯು ಟರ್ನ್ ಹೊಡೆಯಬೇಕು ಎಂದು ರಾಷ್ಟ್ರೀಯ ಮಾಧ್ಯಮಗಳ ಎದುರು ನಿಲ್ಲಿಸಿಕೊಂಡು ‘ಗಿಳಿ ಪಾಠ’ ಹೇಳಿ ಕಳುಹಿಸಿತು. ಈಗ ರಾಜಣ್ಣ ಸರದಿ. ಮುಖ್ಯಮಂತ್ರಿಗಳ ಪರವಾಗಿ ಪ್ರತಿದಿನ ಮಾತನಾಡುತ್ತಿದ್ದ ರಾಜಣ್ಣರನ್ನು ಸ್ವತಃ ಮುಖ್ಯಮಂತ್ರಿ ಗಳೇ ಪತ್ರ ಬರೆದು ವಜಾ ಮಾಡಿ ಅನ್ನುವ ಸ್ಥಿತಿ ಬಂದಿದ್ದು ವಿಪರ್ಯಾಸ ಅಲ್ಲದೇ ಮತ್ತೇನು? ಇವುಗಳನ್ನೆಲ್ಲ ಮಾಸ್ ಲೀಡರ್ ಆದ ಸಿದ್ದರಾಮಯ್ಯನವರು ಹೇಗೆ ಸಹಿಸಿಕೊಳ್ಳುತ್ತಾರೆ? ಎನ್ನುವ ಪ್ರಶ್ನೆಗೆ ಉತ್ತರ ಸ್ವತಃ ಮುಖ್ಯಮಂತ್ರಿಗಳಿಗೆ ಮಾತ್ರ ಗೊತ್ತು. ಮೇಲುನೋಟಕ್ಕೆ ನೋಡಿದರೆ, ರಾಜಣ್ಣ ವಿಷಯದ ಬಗ್ಗೆ ಮುಖ್ಯಮಂತ್ರಿಗಳ ಮೌನ ಗಮನಿಸಿದರೆ ‘ವಜಾ’ ಪ್ರಕರಣದಿಂದ ಅವರಿಗೆ ತುಂಬಾ ಬೇಸರ ಮುಜುಗರ ಆಗಿದೆ ಅನ್ನೋದು ಅರ್ಥ ಆಗುತ್ತದೆ ಮತ್ತು ಯಾವುದೇ ಜನ ನಾಯಕರಿಗೆ ಹೀಗೆ ಅನ್ನಿಸೋದು ಸಹಜ ಕೂಡ ಹೌದು.