;Resize=(412,232))
- ಗಿರೀಶ್ ಮಾದೇನಹಳ್ಳಿ
ವಿಮಾನ ‘ಭುವಿ’ಗಿಳಿದಾಗ ಆಗಷ್ಟೇ ತಿಳಿ ಬಿಸಿಲು ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಚೆಲ್ಲಿತು. ಮಹಾಭಾರತದ ಸೂತ್ರಧಾರ ಕೃಷ್ಣನ ಭಕ್ತಿಯ ಪರಾಕಾಷ್ಠೆ ತುಂಬಿದ ನೆಲಕ್ಕೆ ಕಾಲಿಡುತ್ತಿದ್ದಂತೆ ಕಿವಿಗೆ ತಂಗಾಳಿಯಂತೆ ‘ಜೈ ಜಗನ್ನಾಥ್’ ಜೈಕಾರ ಸದ್ದು ಅಪ್ಪಳಿಸಿತು. ಅಷ್ಟರಲ್ಲಿ ವಿಮಾನದ ಆವರಣದಲ್ಲೇ ಕಲಾವಿದನ ಕೈ ಚಮತ್ಕಾರದಲ್ಲಿ ಮರಳಿನಿಂದ ಮೂಡಿದ ಬಲದೇವ, ಸುಭದ್ರ ಹಾಗೂ ಜಗನ್ನಾಥನ ಮೂರ್ತಿಗಳು ಕಣ್ಣಿಗೆ ಬಿದ್ದವು. ಪುರಿಯಲ್ಲಿ ನಡೆದ ಐತಿಹಾಸಿಕ ಜಗನ್ನಾಥನ ರಥ ಯಾತ್ರೆ ವೀಕ್ಷಣೆಗೆ ಇಸ್ಕಾನ್ ಬೆಂಗಳೂರು ಕರೆದೊಯ್ದಿದ್ದ ಕರ್ನಾಟಕದ ಪತ್ರಕರ್ತರ ತಂಡದಲ್ಲಿ ನಾನೂ ಇದ್ದೆ. ಒಂಭತ್ತು ದಿನಗಳ ಜಾತ್ರೆಯಲ್ಲಿ ಕೊನೆ ನಾಲ್ಕು ದಿನಗಳು ಆ ಜನಸ್ತೋಮದಲ್ಲಿ ಪಾಲ್ಗೊಂಡು ಕೃಷ್ಣನ ವೈಭವ ಕಣ್ತುಂಬಿಕೊಂಡಿದ್ದು ಅನಿರ್ವಚನೀಯ ಅನುಭೂತಿ. ಮಹಾಭಾರತ ಹಾಗೂ ಪುರಾಣ ಕತೆಗಳಲ್ಲಿ ಕೃಷ್ಣನ ದೈವಿಕ ಶಕ್ತಿ ತಿಳಿದಿತ್ತು. ಆದರೆ ಜನಮಾಸದಲ್ಲಿ ಡಿವೈನ್ ಫೀಲ್‌ನ ತೀವ್ರತೆ ತಾಪವು ಅಲ್ಲಿದ್ದ ಲಕ್ಷಾಂತರ ಭಕ್ತರ ಕಂಡು ವಿಸ್ಮಯವಾಯಿತು.
ಭುವನೇಶ್ವರದಿಂದ 60 ಕಿ.ಮೀ ದೂರದಲ್ಲಿರುವ ‘ಪುರಿ’ಗೆ ಸಾಗುವ ಹಾದಿಯುದ್ದಕ್ಕೂ ಜಗನ್ನಾಥನ ಲೀಲೆಗಳ ಕಥಾನಕವನ್ನು ಇಸ್ಕಾನ್ ತಂಡ ತಿಳಿಸಿತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ 1965ರಲ್ಲಿ ಅಮೆರಿಕಾದಲ್ಲಿ ಜಗನ್ನಾಥ ಯಾತ್ರೆಯನ್ನು ಆರಂಭಿಸಿದ್ದು ಇಸ್ಕಾನ್ ಸಂಸ್ಥಾಪಕ ಆಚಾರ್ಯ ಭಕ್ತಿ ವೇದಾಂತ ಸ್ವಾಮಿ ಶೀಲಾ ಪ್ರಭುಪಾದರು.
ಬುಡುಕಟ್ಟು ಸಾಂಸ್ಕೃತಿಕತೆಯು ಬೃಹತ್ ‘ಭೂಮಿ’ಕೆಯಲ್ಲಿ ಅನಾವರಣಗೊಂಡಿತ್ತು. ತಮ್ಮ ಮಾತೃ ಭಾಷೆ ಒಡಿಯಾ, ಹಿಂದಿ ಜೊತೆ ಅಲ್ಲಿನವರ ಮೇಲೆ ತೆಲುಗು ಪ್ರಭಾವವಿದೆ. ಒಡಿಶಾ ಜತೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಗಡಿ ಹಂಚಿಕೊಂಡಿರುವುದು ಇದಕ್ಕೆ ಕಾರಣ. ಕನ್ನಡ ನುಡಿ ಕೇಳಿದರೆ ಅವರು ತೆಲುಗಿನಲ್ಲಿ ಸಂಭಾಷಿಸುತ್ತಿದ್ದರು. ಅಲ್ಲಿನವರ ಮಾತಿಗಿಳಿದರೆ ನಮ್ಮ ಕನ್ನಡದ ಸ್ಟಾರ್ ಯಶ್ ನಟನೆಯ ಕೆಜಿಎಫ್, ಟಾಕ್ಸಿಕ್ ಬಗ್ಗೆ ಹೇಳುತ್ತಿದ್ದರು. ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಒಡಿಶಾ ಜನರು ಒರಟು ಸ್ವಭಾವದವರು. ಅಷ್ಟೇ ಮುಗ್ಧತೆ ಹಾಗೂ ವ್ಯವಹಾರಿಕ ಚತುರತೆ ಇದೆ.
ನಾವು ಪುರಿ ಹೋಗುವ ವೇಳೆಗೆ, ತನ್ನ ಚಿಕ್ಕಮ್ಮನ (ಗುಂಡಿಚ್ಚಾ) ಮನೆಗೆ ಸೋದರ ಬಲದೇವ, ಮುದ್ದು ತಂಗಿ ಸುಭದ್ರೆ ಜತೆ ಹೋಗಿದ್ದ ಜಗನ್ನಾಥನನ್ನು ಕರೆತರಲು ವಿಜೃಂಭಣೆಯಿಂದ ರಥೋತ್ಸವಕ್ಕೆ (ಬಹುಡಾ ಯಾತ್ರೆ)ಕ್ಕೆ ಸಿದ್ಧತೆ ನಡೆದಿತ್ತು. ಪುರಿ ಪ್ರವೇಶ ದ್ವಾರದಲ್ಲೇ ಬಂಗಾಳ ಕೊಲ್ಲಿಯಲ್ಲಿ ಅಲೆಗಳು ಅಬ್ಬರಿಸುತ್ತಿದ್ದರೆ, ಊರಿನೊಳಗೆ ನಿರ್ಮಾಣವಾಗಿದ್ದ ಭಕ್ತಿಯ ಕಡಲಿನಲ್ಲಿ ಭಕ್ತರು ಮಿಂದೇಳುತ್ತಿದ್ದರು. ಗೋಪಾಲನ ಮೇಲೆ ಪ್ರೀತಿಯ ಅಮೃತಧಾರೆ ಸುರಿಸಲು ಭಕ್ತರು ಹಾಗೂ ಬಂಗಾಳ ಕೊಲ್ಲಿಯಲ್ಲಿ ಪೈಪೋಟಿಗೆ ಬಿದ್ದಂತೆ ಅಲೆಗಳು ಬೋರ್ಗರೆಯುತ್ತಿದ್ದವು. ದೇಶ-ವಿದೇಶಗಳಿಂದ ಸಾಗರೋಪಾದಿಯಲ್ಲಿ ಹರಿದು ಬಂದ ಲಕ್ಷ ಲಕ್ಷ ಭಕ್ತರ ಸಂಗಮದಿಂದ ‘ಪುರಿ’ ಉಬ್ಬಿ ತುಳುಕುತ್ತಿತ್ತು. ಉದ್ಯಾನ ನಗರಿಯಿಂದ ನಸುಕಿನಲ್ಲಿ ಹೊರಟು ಸಂಜೆ ಹೊತ್ತಿಗೆ ಜಗನ್ನಾಥನ ನಾಡಿಗೆ ಪಯಣಿಸಿದ್ದ ನಾವು, ಹೋಟೆಲ್‌ನಲ್ಲಿ ಅರೆಕ್ಷಣ ವಿಶ್ರಾಂತಿ ಪಡೆದು ಕೃಷ್ಣನ ದರ್ಶನಕ್ಕೆ ಹೊರಟೆವು.
ಎತ್ತ ಕಣ್ಣಾಯಿಸಿದರೂ ಜನವೋ ಜನ, ‘ಮಹಾಪ್ರಭು ಜಗನ್ನಾಥ್’ ಎಂಬ ಘೋಷಣೆಗಳ ಝೋಂಕಾರ. ಆ ಊರಿನ ಗಲ್ಲಿ ಗಲ್ಲಿಯಲ್ಲಿಯೂ ಕೃಷ್ಣನ ಹೆಜ್ಜೆ ಗುರುತುಗಳು, ಲೆಕ್ಕವಿಲ್ಲದಷ್ಟು ಪೌರಾಣಿಕ ಕತೆಗಳು ಹಾಗೂ ಐತಿಹ್ಯಗಳು ಉಸಿರಾಡುತ್ತಿವೆ.
ಗುಂಡಿಚ್ಚಾದಲ್ಲಿ ಜಗನ್ನಾಥ, ಸುಭದ್ರ ಹಾಗೂ ಬಲದೇವರ ದರ್ಶನಕ್ಕೆ ಐದಾರು ಕಿ.ಮೀನಷ್ಟು ಇರುವೆ ಸಾಲಿನಂತೆ ಭಕ್ತರು ನಿಂತಿದ್ದರು. ದೇವಾಲಯ ಒಳ ಹೊಕ್ಕವರು ಜಗನ್ನಾಥ ಕಂಡ ಕೂಡಲೇ ಭಾವ ಪರವಶವಾಗಿ ಕಣ್ಣೀರಿಡುತ್ತಿದ್ದರು.
ಕಿಷ್ಕಿಂದ ಜಾಗದಲ್ಲಿರುವ ದೇವಾಲಯವು ಸಾವಿರಾರು ಜನರಿಂದ ಭರ್ತಿಯಾಗಿತ್ತು. ಆ ನೂಕು ನುಗ್ಗಲಿನಲ್ಲಿ ಸಿಲುಕಿ ಏದುಸಿರು ಬಿಡುತ್ತ ಹೊರ ಬಂದಿದ್ದೇ ದೊಡ್ಡ ಸಾಹಸವಾಯಿತು. ಆ ಕ್ಷಣವೂ ಕಾಲ್ಕುಳಿತ ದುರಂತದ ಅನುಭವವೂ ಆಗಿ ಎದೆ ಜಲ್ಲೆಂದಿತು. ಇರುಳು ಸರಿದಂತೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಲೇ ಇತ್ತು. ದೇವಾಲಯದ ಪ್ರಾಂಗಣದಲ್ಲೇ ಗೋಪಾಲನ ಸ್ಮರಿಸುತ್ತ ನಿದ್ರೆಗೆ ಜಾರಿದ್ದರು.
ಭುವನೇಶ್ವರದಲ್ಲಿ 11ನೇ ಶತಮಾನದ ಲಿಂಗರಾಜ ದೇವಾಲಯ, 12ನೇ ಶತಮಾನದಲ್ಲಿ ಕೊನಾರ್ಕ್ ಸೂರ್ಯದೇವಾಲಯ ಹಾಗೂ 13ನೇ ಶತಮಾನದ ಪುರಿಯಲ್ಲಿ ನಿರ್ಮಿಸಲಾದ ಜಗನ್ನಾಥ ದೇವಾಲಯಗಳ ಶಿಲ್ಪಕಲೆಗಳಲ್ಲಿ ಸಾಮ್ಯತೆ ಇದೆ. ಹೊರನೋಟಕ್ಕೆ ಅವುಗಳ ವಿನ್ಯಾಸವು ಒಂದೇ ರೀತಿ ಕಾಣುತ್ತವೆ. ಲಿಂಗರಾಜ ದೇವಾಲಯದಲ್ಲಿರುವ ಭುವನೇಶ್ವರಿ ದೇವಿ ಮುಂದೆ ನಿಂತಾಗ ಮನದಲ್ಲಿ ಕನ್ನಡ ಡಿಂಡಿಮ ಬಾರಿಸಿತು. ತಾಯಿ ಕನ್ನಡಾಂಬೆಯೂ ಭುವನೇಶ್ವರಿ ಎಂಬ ಆರಾಧನಾಭಾವ ಮೂಡಿತು. ಅಲರಾನಾಥ, ಸಾಕ್ಷಿಗೋಪಾಲ, ಬೇಡಿ ಹನುಮ ಹೀಗೆ ಆ ಪುರಿ ಸುತ್ತಮುತ್ತಲ ದೇವಾಲಯಗಳಲ್ಲಿ ಸುತ್ತಾಡಿದರೂ ಕೇಳಿದ್ದು ಕೃಷ್ಣನ ಸ್ಮರಣೆ, ಭಕ್ತಿಪೂರ್ವಕ ಅಸಂಖ್ಯಾತ ಕತೆಗಳು.
ಆರು ದಿನಗಳ ವಾಸ್ತವ್ಯದ ಬಳಿಕ ಚಿಕ್ಕಮ್ಮ ಮನೆಯಿಂದ ತನ್ನ ಮೂಲ ‘ನೆಲೆ’ಗೆ ಜಗನ್ನಾಥ ಹೊರಡಲಿದ್ದ. ಗುಂಡಿಚ್ಚಾದಿಂದ ಜಗನ್ನಾಥ ಪ್ರಧಾನ ದೇವಾಲಯದವರೆಗೆ 3.ಕಿ.ಮೀ ರಥ ಯಾತ್ರೆ ನಡೆಯಿತು. ವಿಸ್ತಾರವಾದ ಕಾರಿಡಾರ್‌ನ ತುಂಬಾ ಮಹಿಳೆಯರು, ಮಕ್ಕಳು, ವೃದ್ಧರು ಹೀಗೆ ವಯಸ್ಸಿನ ಹಂಗಿಲ್ಲದೆ ಜನರ ಜಮಾವಣೆ ಆಗಿತ್ತು. ಜಗನ್ನಾಥ ದರ್ಶನಕ್ಕಾಗಮಿಸಿದ ಭಕ್ತರ ಹಸಿವು ನೀಗಿಸಲು ತುಸುವು ಬಿಡುವಿಲ್ಲದೆ ಬೆಳಗ್ಗೆಯಿಂದ ರಾತ್ರಿವರೆಗೆ ಸ್ಥಳೀಯರು ಅನ್ನ ಸಂತರ್ಪಣೆ ಮಾಡಿದರು. ಜಗನ್ನಾಥನಿಗೆ ಪ್ರತಿ ದಿನ ಐದು ಬಾರಿ 56 ವಿವಿಧ ಭಕ್ಷ್ಯಗಳನ್ನು ಮಡಿಕೆಗಳಲ್ಲಿ ತಯಾರಿಸಿ ನೈವೇದ್ಯ ನಡೆಯುತ್ತದೆ. ಒಂದು ಬಾರಿ ಅಡುಗೆ ತಯಾರಿಸಿದ ಬಳಿಕ ಆ ಮಡಿಕೆಗಳನ್ನು ಒಡೆದು ಹಾಕಲಾಗುತ್ತದೆ. ನೈವೇದ್ಯ ಬಳಿಕ ಆ ಪ್ರಸಾದ ‘ಆನಂದ್ ಬಜಾರ್’ ಭಕ್ತರಿಗೆ ವಿತರಣೆಯಾಗುತ್ತದೆ.
ಅಂದಿನಿಂದ ಇಂದಿಗೂ ಜಗನ್ನಾಥನಿಗೆ ಪುರಿ ನಾಡಿನ ರಾಜವಂಶಸ್ಥರೇ ಆದ್ಯ ಸೇವಕರು. ಬಲದೇವ, ಸುಭದ್ರ ಹಾಗೂ ಸಾಂಪ್ರದಾಯಿಕವಾಗಿ ದೇವರ ಮೂರ್ತಿಗಳ ಹೊತ್ತ ರಥದ ಮುಂದೆ ಕಸ ಗುಡಿಸಿ ಧಾರ್ಮಿಕ ವಿಧಿ ವಿಧಾನ ಪೂರೈಸಿ ರಾಜ ಹಸಿರು ನಿಶಾನೆ ತೋರಿದರು. ಈ ಆಚರಣೆ ನೋಡುವಾಗ ದಸರಾದಲ್ಲಿ ಮೈಸೂರು ಒಡೆಯರ್ ಅವರ ದರ್ಬಾರ್ ನೆನಪಾಯಿತು. ರಥೋತ್ಸಕ್ಕೆ ರಾಜ ಚಾಲನೆ ನೀಡುವ ಸಮಯಕ್ಕೆ ಸೂರ್ಯಾಸ್ತ ಸಮೀಪಿಸುತ್ತಿತ್ತು.
‘ಜೈ ಜಗನ್ನಾಥ’, ‘ಬಲದೇವ, ಸುಭದ್ರ ಕೀ ಜೈ’ ಎಂದು ಒಮ್ಮೆಗೆ ಅಲ್ಲಿ ಸೇರಿದ್ದ ಲಕ್ಷಾಂತರ ಭಕ್ತರ ಉದ್ಘೋಷಕ್ಕೆ ನೇಸರನೇ ಬೆಚ್ಚಿಬಿದ್ದಂತೆ ಆಕಾಶದಿಂದ ಹನಿಗಳ ಸಿಂಚನವಾಯಿತು. ಯಾತ್ರೆಯ ಹಾದು ಹೋದ ಕಟ್ಟಡಗಳ ತುಂಬಾ ಜನರಿಂದ ತುಂಬಿ ಅಗಸದ ಚುಕ್ಕಿಗಳಂತೆ ಗೋಚರಿಸುತ್ತಿದ್ದವು. ರಥದಲ್ಲಿ ವಿರಾಜಮಾನನಾಗಿದ್ದ ಜಗನ್ನಾಥನ ಕಂಡು ರೋಮಾಂಚನಗೊಂಡ ಭಕ್ತರ ಕುಣಿತಕ್ಕೆ ಇಳೆಯೇ ಅದುರಿತು. ತನ್ನ ರಥವನ್ನು ಎಳೆಯಲು ಭಕ್ತರ ಹಗ್ಗಾಜಗ್ಗಾಟಕ್ಕೆ ಆ ಜಗನ್ನಾಥನೇ ಭೀತಿಗೊಳಗಾದಂತೆ ಭಾಸವಾಯಿತು. ರಾತ್ರಿ ಹೊತ್ತಿಗೆ ಪ್ರಧಾನ ದೇಗುಲದ ಪ್ರವೇಶ ದ್ವಾರ ತಲುಪಿ ಯಾತ್ರೆ ಸಂಪನ್ನಗೊಂಡಿತು. ಮರುದಿನ ನೂರಾರು ಕೆಜಿ ಬಂಗಾರದಲ್ಲಿ ಜಗನ್ನಾಥ, ಬಲದೇವ ಹಾಗೂ ಸುಭದ್ರೆಯನ್ನು ಸಿಂಗರಿಸಿ (ಸೊನ್ನಾವೇಶ) ದೇಗುಲಕ್ಕೆ ಉತ್ಸವದಲ್ಲಿ ಕರೆದು ಕೊಂಡು ಹೋಗಿ ಪ್ರತಿಷ್ಠಾಪಿಸಿದರು.
ಹುಲು ಮಾನವರಿಗಷ್ಟೇ ಅಲ್ಲ ಆ ಜಗನ್ನಾಥನಿಗೂ ಪತ್ನಿ ಕೋಪ ತಾಪ ತಟ್ಟಿದೆ. ತನ್ನನ್ನು ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಅಣ್ಣ ಹಾಗೂ ತಂಗಿ ಜತೆ ಜಗನ್ನಾಥ ಹೋಗಿದ್ದಾನೆ ಎಂದು ಲಕ್ಷ್ಮೀ ಕೋಪಿಸಿಕೊಂಡಿದ್ದಳಂತೆ. ಐದು ದಿನ ಪತಿ ದಾರಿ ಕಾದು ಸಹನೆ ಕಳೆದುಕೊಂಡ ಲಕ್ಷ್ಮೀ, ಬುಸುಗುಟ್ಟಲೇ ಗುಡಿಚ್ಚಾಗೆ ಹೋಗುತ್ತಾಳೆ. ಅಲ್ಲಿ ಕೃಷ್ಣನ ರಥವನ್ನು ಪುಡಿಗಟ್ಟಿ ಮನೆಗೆ ಮರಳುತ್ತಾಳೆ. ಚಿಕ್ಕಮ್ಮನ ಮನೆಯಿಂದ ಮರಳಿದಾಗ ಬಲದೇವ ಹಾಗೂ ಸುಭದ್ರೆಗೆ ಮಾತ್ರ ಲಕ್ಷ್ಮೀ ಮನೆ ಬಾಗಿಲು ತೆರೆಯುತ್ತಾಳೆ. ಆಗ ಪತ್ನಿಗೆ ರಸಗುಲ್ಲ ಕೊಟ್ಟು ಕೃಷ್ಣ ಒಲೈಸಿಕೊಂಡ ಎಂಬುದು ಪುರಾಣದ ಕತೆಯಾಗಿದೆ. ಈಗಲೂ
ರಥಯಾತ್ರೆ ಮುಗಿದ ಬಳಿಕ ರಥಗಳನ್ನು ಪುಡಿಗಟ್ಟಲಾಗುತ್ತದೆ. ಪ್ರತಿ ವರ್ಷ ಹೊಸ ರಥಗಳು ನಿರ್ಮಾಣವಾಗುತ್ತವೆ. ಅಲ್ಲದೆ ರಥ ಯಾತ್ರೆ ಅಂತಿಮ ದಿನ ದೇಗುಲಕ್ಕೆ ಜಗನ್ನಾಥ ಮರಳುವಾಗ ರಸಗುಲ್ಲ ಹಂಚಲಾಗುತ್ತದೆ. ಅಲ್ಲಿ ಲಕ್ಷ್ಮೀ ಗುಡಿಯೂ ಸಹ ಇದೆ.
ಜಗನ್ನಾಥ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಕೆಲ ಪಾಂಡಗಳ (ಆರ್ಚಕರ) ವರ್ತನೆ ಅತಿರೇಕವಾಗಿದೆ. ಅಲ್ಲಿ ಸ್ವಚ್ಛತೆ ಇಲ್ಲ ಸೌಜನ್ಯದ ನಡವಳಿಕೆಯೂ ಇಲ್ಲ. ಸಾಮಾನ್ಯ ಭಕ್ತರ ಪಾಲಿಗೆ ಪಾಂಡಗಳು ಖಳನಾಯಕರಾಗಿದ್ದಾರೆ ಎಂಬ ಆರೋಪಗಳಿವೆ.
ಯಾತ್ರೆ ಪೌರಾಣಿಕ ಕತೆ
ವಿಶ್ವಪ್ರಸಿದ್ಧ ಜಗನ್ನಾಥ ಯಾತ್ರೆಗೆ ಪೌರಾಣಿಕ ಹಿನ್ನಲೆ ಇದೆ. ಬಹಳಷ್ಟು ಕಥಾನಕಗಳಿವೆ.
- ಪ್ರತಿವರ್ಷ ಆಷಾಢ ಮಾಸದ ದ್ವಿತೀಯ ತಿಥಿಯಂದು ಯಾತ್ರೆ ಆರಂಭವಾಗುತ್ತದೆ. ತನ್ನ ಮೂಲ ಗುಡಿಯಿಂದ ಹೊರಬಂದು ಜಾತಿ, ಧರ್ಮ ಹಾಗೂ ಅಂತಸ್ತಿನ ಭೇದವಿಲ್ಲದೆ ಎಲ್ಲರಿಗೂ ಜಗನ್ನಾಥ ದರ್ಶನ ನೀಡಿ ಹರಸುತ್ತಾನೆ ಎಂಬ ದೈವಿಕ ನಂಬಿಕೆ. ತನ್ನ ಚಿಕ್ಕಮ್ಮ ಮನೆಯಲ್ಲಿ 9 ದಿನಗಳು ನೆಲೆಗೊಳ್ಳುವ ಜಗನ್ನಾಥ ಅಲ್ಲಿಂದ ಮರಳುತ್ತಾನೆ.
-13ನೇ ಶತಮಾನದಲ್ಲಿ ಜಗನ್ನಾಥ ದೇವಾಲಯ ಪುರಿ ರಾಜ ಇಂದ್ರಧುಮ್ಯ ನಿರ್ಮಿಸಿದ. ಅಂದು ರಾಣಿ ಗುಂಡಿಚ್ಚಾಗೆ ತಾನು ವರ್ಷದಲ್ಲಿ ಕೆಲ ದಿನಗಳು ನಿಮ್ಮ ಮನೆಗೆ ಬಂದು ಅತಿಥ್ಯ ಸ್ವೀಕರಿಸುತ್ತೇನೆ ಎಂದು ಕೃಷ್ಣ ವರ ಕೊಡುತ್ತಾನೆ. ಅದರಂತೆ ಗುಂಡಿಚ್ಚಾ ಮನೆಗೆ ಭಕ್ತರ ಅದ್ದೂರಿ ಮೆರವಣಿಗೆಯಲ್ಲಿ ತನ್ನ ಸೋದರ, ಸೋದರಿ ಜತೆ ಕೃಷ್ಣ ತೆರಳಿ ತಂಗುತ್ತಾನೆ ಎಂಬ ಪ್ರತೀತಿ ಇದೆ.