;Resize=(412,232))
ಪರೀಕ್ಷೆಯೆಂಬುದು ದೇಶವು ಮಗುವಿಗೆ ಕೊಡುವ ವಾಗ್ದಾನ. ನೀನು ಒಬ್ಬಳೇ ಕುಳಿತು, ವರ್ಷಗಳ ಕಾಲ ಕಷ್ಟಪಟ್ಟು ಓದಿದ್ದು, ಸಂಪರ್ಕ, ಹಣ, ಪ್ರಭಾವಕ್ಕಿಂತ ಹೆಚ್ಚು ಮುಖ್ಯ ಎಂಬ ವಾಗ್ದಾನ. ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಈ ವಾಗ್ದಾನ ಭಂಗವಾಗುತ್ತದೆ. ಅದು ಆ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಇದನ್ನು ನೋಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ದೊಡ್ಡ ನಿರಾಸೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸವೇ ಕುಸಿದುಹೋಗುತ್ತದೆ.
ಆಗಿಂದಾಗೆ ನಮ್ಮ ದೇಶದಲ್ಲಿ ಒಂದೇ ಕಥೆ ಪುನರಾವರ್ತನೆಯಾಗುತ್ತದೆ. ಪರೀಕ್ಷೆಗೆ ಕೆಲವು ಗಂಟೆಗಳ ಮುಂಚೆ ಒಂದು ಮೆಸೇಜಿಂಗ್ ಆ್ಯಪ್‌ನಲ್ಲಿ ಪ್ರಶ್ನೆಪತ್ರಿಕೆ ಹೊರಬೀಳುತ್ತದೆ. ವರ್ಷಗಳ ಕಾಲ ಕಷ್ಟಪಟ್ಟು ತಯಾರಿ ನಡೆಸಿದ ಲಕ್ಷಾಂತರ ವಿದ್ಯಾರ್ಥಿಗಳ ಶ್ರಮ ಕ್ಷಣಮಾತ್ರದಲ್ಲಿ ಭಂಗವಾಗಿರುತ್ತದೆ. ಆಗ ಆಕ್ರೋಶ ಭುಗಿಲೇಳುತ್ತದೆ. ಬಂಧನಗಳಾಗುತ್ತವೆ. ವಿಚಾರಣೆ ನಡೆಯುತ್ತದೆ. ಹೊಸ ಕಾನೂನು ಅಥವಾ ಕಠಿಣ ನಿಯಮಗಳು ಬರುತ್ತವೆ. ಆದರೆ ಒಂದು ಅಥವಾ ಎರಡು ವರ್ಷದ ನಂತರ ಮತ್ತೆ ಅದೇ ಕಥೆ ಬೇರೆ ರಾಜ್ಯದಲ್ಲಿ, ಬೇರೆ ಪರೀಕ್ಷೆಯಲ್ಲಿ, ಬೇರೆ ಮಕ್ಕಳಿಗೆ ಪುನರಾವರ್ತನೆಯಾಗುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆಗಳಿಗೆ ಪ್ರತಿಕ್ರಿಯಿಸುವುದರಲ್ಲಿ ನಾವು ಪರಿಣತಿ ಪಡೆದಿದ್ದೇವೆ. ಆದರೆ ಅವು ಏಕೆ ಮತ್ತೆ ಮತ್ತೆ ನಡೆಯುತ್ತಿವೆ ಎಂಬುದನ್ನು ಗಂಭೀರವಾಗಿ ಪ್ರಶ್ನಿಸುವುದರಲ್ಲಿ ನಾವಿನ್ನೂ ಗಂಭೀರವಾಗಿಲ್ಲ.
ವಿದ್ಯಾರ್ಥಿಗಳಿಗೆ ಕೊಡುವ ವಾಗ್ದಾನ:
ಪರೀಕ್ಷೆ ಕೇವಲ ಒಂದು ಶೋಧಕ (ಫಿಲ್ಟರ್) ಅಲ್ಲ. ಇದು ದೇಶವು 15 ವರ್ಷದ ಮಗುವಿಗೆ ಕೊಡುವ ವಾಗ್ದಾನ. ಆ ವಾಗ್ದಾನ ಏನು?
ನೀನು ಒಬ್ಬಳೇ ಕುಳಿತು, ವರ್ಷಗಳ ಕಾಲ ಕಷ್ಟಪಟ್ಟು ಓದಿದ್ದು, ಸಂಪರ್ಕ, ಹಣ, ಪ್ರಭಾವಕ್ಕಿಂತ ಹೆಚ್ಚು ಮುಖ್ಯ ಎಂಬ ವಾಗ್ದಾನ. ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಈ ವಾಗ್ದಾನ ಭಂಗವಾಗುತ್ತದೆ. ಅದು ಆ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಇದನ್ನು ನೋಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ದೊಡ್ಡ ನಿರಾಸೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸ ನಾಶವಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ತೀವ್ರ ಹಾನಿಯಾಗುತ್ತದೆ.
ಒಳಗಿನಿಂದಲೇ ವ್ಯವಸ್ಥೆ ಕುಸಿತ:
ಪ್ರತಿ ಸೋರಿಕೆಯಲ್ಲಿಯೂ ಅತ್ಯಂತ ಮುಖ್ಯವಾದ ವಿಷಯವೆಂದರೆ ಬಂಧಿತರ ಗುರುತು. ಅವರು ಯಾರೋ ಹೊರಗಿನವರಲ್ಲ, ಹ್ಯಾಕರ್‌ಗಳಲ್ಲ. ಪ್ರಶ್ನೆಪತ್ರಿಕೆ ತಯಾರಿಸಿದ ಶಿಕ್ಷಕರು, ಪರೀಕ್ಷಾ ವ್ಯವಸ್ಥೆಯ ಒಳಗಿನ ಅಧಿಕಾರಿಗಳೇ ಆಗಿರುತ್ತಾರೆ. ನಂಬಿಕೆಗೆ ಅರ್ಹರು ಎಂಬ ಕಾರಣದಿಂದಲೇ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಅಂಥವರೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದರೆ ವ್ಯವಸ್ಥೆ ಹೊರಗಿನಿಂದ ವಿಫಲವಾಗಿಲ್ಲ, ಒಳಗಿನಿಂದಲೇ ಕುಸಿಯುತ್ತಿದೆ.
ಇದನ್ನು ಕೇವಲ ಭ್ರಷ್ಟಾಚಾರ ಎಂದು ಪರಿಗಣಿಸಿ ಮುಂದುವರಿಯುವುದು ಸುಲಭ. ಕಠಿಣ ಶಿಕ್ಷೆ, ಹೆಚ್ಚಿನ ನಿಗಾ ಇವೆಲ್ಲ ಮುಖ್ಯವೇ, ಸರ್ಕಾರಗಳು ಅವುಗಳನ್ನು ಬಲಪಡಿಸಬೇಕು ನಿಜ. ಆದರೆ ಪರೀಕ್ಷೆಗಳು ಇದ್ದಷ್ಟು ಕಾಲ ಸೋರಿಕೆಗಳೂ ಇರುತ್ತವೆ. ಈ ದೇಶದ ಪ್ರತಿ ರಾಜ್ಯದಲ್ಲಿ, ಪ್ರತಿ ಸರ್ಕಾರದ ಅವಧಿಯಲ್ಲಿ ಹೊಸ ಕಾನೂನುಗಳು ಬಂದಿವೆ. ಪ್ರಶ್ನೆಪತ್ರಿಕೆ ಸೋರಿಕೆಗಳು ಮುಂದುವರಿಯುತ್ತಿವೆ. ಕೇವಲ ಕಠಿಣ ಕಾನೂನಿನ ಜಾರಿಯೇ ಸಾಕಾಗಿದ್ದರೆ ಈ ಸಮಸ್ಯೆ ಬಹುಕಾಲದ ಹಿಂದೆಯೇ ನಿಂತುಹೋಗುತ್ತಿತ್ತು. ಆದರೆ ಹಾಗಾಗುತ್ತಿಲ್ಲ.
ಫಲಿತಾಂಶವನ್ನೇ ಮಾರುವ ವ್ಯವಸ್ಥೆ:
ಪ್ರಶ್ನೆಪತ್ರಿಕೆ ಸೋರಿಕೆಯೆಂಬುದು ಒಂದು ವ್ಯವಹಾರ. ವ್ಯವಹಾರಕ್ಕೆ ಬೇಡಿಕೆ ಬೇಕು. ಆ ಬೇಡಿಕೆಯನ್ನು ಕೆಲವು ವಿದ್ಯಾರ್ಥಿಗಳು ಮತ್ತು ಹೆಚ್ಚಿನ ಪೋಷಕರಲ್ಲಿ ಸುಲಭದ ಮಾರ್ಗಗಳನ್ನು ಅನುಸರಿಸುವ ಸಂಸ್ಕೃತಿ (culture of shortcuts) ಸೃಷ್ಟಿಸುತ್ತದೆ. ಕೋಚಿಂಗ್ ಆಪರೇಟರ್‌ಗಳ ವ್ಯವಸ್ಥೆ ಇದನ್ನು ಪೋಷಿಸುತ್ತದೆ. ಅವರು ಕಲಿಕೆಯನ್ನಲ್ಲ, ಫಲಿತಾಂಶಗಳನ್ನು ಮಾರಾಟ ಮಾಡುತ್ತಾರೆ. ಸಿದ್ಧತೆಯನ್ನಲ್ಲ, ಗ್ಯಾರಂಟಿ ಆಯ್ಕೆಗಳನ್ನು ಮಾರುತ್ತಾರೆ. ಅರ್ಹತೆಯನ್ನು ಅಳೆಯುವ ಪ್ರಕ್ರಿಯೆಯಲ್ಲಿ ಒಂದು ಇಡೀ ಉದ್ಯಮ ‘ನಿಶ್ಚಿತತೆ’ಯನ್ನು ಮಾರಾಟ ಮಾಡುತ್ತಿದ್ದರೆ, ಆ ಉದ್ಯಮದ ಕೆಲವು ಭಾಗಗಳು ಅನಧಿಕೃತ ಮಾರ್ಗಗಳಿಂದ ನಿಶ್ಚಿತತೆಯನ್ನು ಪಡೆಯುತ್ತವೆ. ಪ್ರಶ್ನೆಪತ್ರಿಕೆ ಸೋರಿಕೆ ಆ ಸಮಸ್ಯೆಯ ಚಿಲ್ಲರೆ ಅಂತ್ಯ.
ಕೆಲವು ದೇಶಗಳಲ್ಲಿ ಇದು ಏಕೆ ಅಪರೂಪ ಎಂದು ಕೇಳಿ. ಜಪಾನ್ ಬಗ್ಗೆ ಯೋಚಿಸುವುದು ಹೆಚ್ಚು ಸೂಕ್ತವೆನಿಸುತ್ತದೆ. ಅಲ್ಲಿ ಹೆಚ್ಚು ಕಠಿಣ ಕಾನೂನುಗಳಿಲ್ಲ, ಪರೀಕ್ಷೆಗಳ ಮೇಲೆ ಹೆಚ್ಚಿನ ನಿಗಾ ಇಡುವ ವ್ಯವಸ್ಥೆಯೂ ಇಲ್ಲ. ಆದರೆ ಶಾರ್ಟ್‌ಕಟ್ ಮೂಲಕ ಯಶಸ್ಸಿಗೆ ಹವಣಿಸುವುದೇ ನಾಚಿಕೆಯ ವಿಷಯ ಎಂಬ ಪರಿಜ್ಞಾನವಿದೆ. ಪರೀಕ್ಷಕ ಮತ್ತು ಪರೀಕ್ಷಾರ್ಥಿ ಇಬ್ಬರಲ್ಲೂ ಸಮಗ್ರತೆಯನ್ನು ನಿರೀಕ್ಷಿಸಲಾಗುತ್ತದೆ. ಮಗುವಿನ ಮೌಲ್ಯವನ್ನು ಒಂದು ಬೆಳಗಿನ ಒಂದು ಸಂಖ್ಯೆಗೆ (ಪರೀಕ್ಷಾ ಅಂಕಗಳಲ್ಲಿ) ಸಂಕುಚಿತಗೊಳಿಸುವುದಿಲ್ಲ.
ಚಿಕ್ಕ ವಯಸ್ಸಲ್ಲೇ ಅಪಾಯಕಾರಿ ಪಾಠ:
ಪ್ರಶ್ನೆಪತ್ರಿಕೆ ಸೋರಿಕೆ ನಿಜವಾಗಿಯೂ ಏನನ್ನು ಕಲಿಸುತ್ತಿದೆ ಯೋಚಿಸಿ. ಯಾರಾದರೂ ಹಣ ಕೊಟ್ಟು ಪ್ರಶ್ನೆಪತ್ರಿಕೆ ಖರೀದಿಸಿ ಪರೀಕ್ಷೆ ಬರೆದರೆ, ಅವರು ಇನ್ನೂ ಚಿಕ್ಕ ವಯಸ್ಸಿನಲ್ಲೇ ಅಂದರೆ ಪಾಠಗಳು ಶಾಶ್ವತವಾಗುವ ವಯಸ್ಸಿನಲ್ಲೇ ಒಂದು ಪಾಠ ಕಲಿಸುತ್ತಾರೆ. ಅದು ಹಣವೇ ಪ್ರಯತ್ನಕ್ಕಿಂತ ದೊಡ್ಡದು ಎಂಬ ತಪ್ಪಾದ ಪಾಠ. ಇದು ಬಹಳ ಅಪಾಯಕಾರಿ. ಈ ತಪ್ಪು ಚಿಂತನೆಯನ್ನು ಅವರು ದೊಡ್ಡವರಾದ ಮೇಲೂ ತಮ್ಮ ಜೀವನದುದ್ದಕ್ಕೂ ಹೊತ್ತುಕೊಂಡು ಹೋಗುತ್ತಾರೆ. ಡಾಕ್ಟರ್, ಇಂಜಿನಿಯರ್ ಇತ್ಯಾದಿ ವೃತ್ತಿಗಳಲ್ಲಿ, ಸಾಮರ್ಥ್ಯವನ್ನು ಬದಲಿಸಲು ಸಾಧ್ಯವಿಲ್ಲದಲ್ಲಿ ಈ ತಪ್ಪು ಚಿಂತನೆ ಬಹಳ ತೊಂದರೆ ತರುತ್ತದೆ.
ಆದರೆ ಸಣ್ಣ ಸಣ್ಣ ಊರುಗಳಲ್ಲಿ ಯಾವುದೇ ಪ್ರಭಾವ ಅಥವಾ ಧನಬಲ ಇಲ್ಲದವರಿಗೆ, ರಾತ್ರಿ ಜಾಗರಣೆ ಮಾಡಿ ಓದಿದವರಿಗೆ, ವ್ಯವಸ್ಥೆ ತನಗೆ ಅನ್ಯಾಯ ಮಾಡುವುದಿಲ್ಲ ಎಂದು ನಂಬಿದವರಿಗೆ ಇದು ಆಳವಾದ ಗಾಯವನ್ನು ಉಂಟುಮಾಡುತ್ತದೆ. ಅವರು ಆದರ್ಶವೆಂಬುದೇ ಮೂರ್ಖತನ ಎಂಬ ನಿರ್ಣಯಕ್ಕೆ ಬರುತ್ತಾರೆ. ಇಂಥ ಪರಿಸ್ಥಿತಿಯ ವಿರುದ್ಧ ನಾವು ಸಿಡಿದೇಳುವ ಅಗತ್ಯವಿದೆ.
ಸರ್ಕಾರಕ್ಕೆ ಸ್ಪಷ್ಟ ಜವಾಬ್ದಾರಿಗಳಿವೆ. ವೃತ್ತಿಪರ ಮತ್ತು ಜವಾಬ್ದಾರಿಯುತ ಪರೀಕ್ಷಾ ಏಜೆನ್ಸಿಗಳು, ಎನ್‌ಕ್ರಿಪ್ಟೆಡ್, ರ್‍ಯಾಂಡಮೈಸ್ಡ್ ಮತ್ತು ಆಡಿಟ್ ಮಾಡಬಹುದಾದ ಪ್ರಶ್ನೆಪತ್ರಿಕೆ ವಿತರಣೆ, ನಂಬಿಕೆ ದ್ರೋಹ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ, ಕೋಚಿಂಗ್ ಕಂಪನಿಗಳ ಮೇಲೆ ನಿಯಂತ್ರಣ- ಇವುಗಳಿಗಾಗಿ ನಾನು ನಿರಂತರವಾಗಿ ಧ್ವನಿಯೆತ್ತಿದ್ದೇನೆ. ಇವೆಲ್ಲ ಬೇಕು, ಆದರೆ ಸಾಕಾಗುವುದಿಲ್ಲ.
ವಂಚನೆ ಚತುರತೆಯಲ್ಲ, ಅನೈತಿಕ:
ಕಟ್ಟೆಚ್ಚರ ಇಟ್ಟ ಮಾತ್ರಕ್ಕೆ ಯಾವುದೇ ಪರೀಕ್ಷಾ ವ್ಯವಸ್ಥೆಯನ್ನು ಸೋರಿಕೆಯೇ ಇಲ್ಲದಂತೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಪ್ರತಿ ಪ್ರಕ್ರಿಯೆಯೂ ಕೊನೆಗೆ ಮಾನವ ಕೈಗಳ ಮೂಲಕ ಹಾದುಹೋಗುತ್ತದೆ. ಆ ಕೈಗಳು ಶುದ್ಧವಾಗಿರುವುದನ್ನು ನಿರ್ಧರಿಸುವುದು ಕಾನೂನು ಪುಸ್ತಕವಲ್ಲ. ಬದಲಾಗಿ ಮನೆಯಲ್ಲಿ ಕಲಿಸಿದ ಸಂಸ್ಕಾರ, ನೆರೆಹೊರೆಯ ಒಡನಾಟ ಮತ್ತು ಅಂಕಗಳೇ ಮುಖ್ಯ ಎಂಬ ಪೋಷಕರ ಮೌನ ಸಂಕೇತಗಳು. ಆದ್ದರಿಂದ ನಾವು ಪೋಷಕರು ಮತ್ತು ಶಿಕ್ಷಕರಾಗಿ ಮೊದಲು ಒಂದು ಸರಳ ವಿಷಯವನ್ನು ಒಪ್ಪಿಕೊಳ್ಳಬೇಕು. ನಮ್ಮ ಮಕ್ಕಳು ಕಠಿಣ ಪ್ರಯತ್ನ ಮತ್ತು ಸಮರ್ಪಣೆಯಿಂದ ಯಶಸ್ಸು ಪಡೆಯಲು ಅರ್ಹರಾಗಿದ್ದಾರೆಯೇ ಹೊರತು, ಶಾರ್ಟ್‌ಕಟ್‌ಗಳು ಮತ್ತು ಅಕ್ರಮ ಮಾರ್ಗಗಳಿಂದಲ್ಲ. ಅರ್ಹತೆಗೆ ಯಾವತ್ತೂ ಬೆಲೆಯಿದೆ. ವಂಚನೆ ಚತುರತೆಯಲ್ಲ, ಅದು ಅನೈತಿಕ. ಅದು ಅನೈತಿಕ ಹಾದಿ ತುಳಿಯುವ ಮಗುವಿಗೇ ಮಾರಕ.
ಯುವ ಭಾರತಕ್ಕೆ ಕರೆ:
ಶಿಕ್ಷಣ ವ್ಯವಸ್ಥೆಯ ಬಗ್ಗೆ ಈಗ ಮುಕ್ತವಾದ ಚರ್ಚೆ ನಡೆಯುತ್ತಿದೆ. ಅದು ಬಹಳ ಸಂತೋಷ ತಂದಿದೆ. ಇದು ಮುಂದುವರಿಯಬೇಕು. ಸೋರಿಕೆಗಳಿಗೆ ಅವಕಾಶ ಕೊಡುವ ವ್ಯವಸ್ಥೆ ಹಾಗೂ ಅದನ್ನು ಪೋಷಿಸುವ ಸಂಸ್ಕೃತಿ- ಎರಡೂ ಕೊನೆಯಾಗುವವರೆಗೂ ಈ ಚರ್ಚೆ ನಡೆಯುತ್ತಿರಬೇಕು. ಆದರೆ ನಾನು ಭಾರತದ ಯುವಶಕ್ತಿಗೆ ಇನ್ನೊಂದು ವಿಷಯ ಹೇಳಲಿಚ್ಛಿಸುತ್ತೇನೆ. ಇದು ಯುವ ಭಾರತಕ್ಕೆ ಅಗತ್ಯವಾದ ವಿಷಯ. ಇಂದು ಮೌಲ್ಯ ಕಳೆದುಕೊಳ್ಳುತ್ತಿರುವುದು ನಿಮ್ಮ ಪರೀಕ್ಷೆಗಳು, ನಿಮ್ಮ ಭವಿಷ್ಯ ಮತ್ತು ನಿಮ್ಮ ಅರ್ಹತೆಗಳು. ಹಿಂದೆ ಅದೆಷ್ಟೋ ತಲೆಮಾರುಗಳು ಸರಿದುಹೋಗಿವೆ, ಆದರೆ ವ್ಯವಸ್ಥೆಯನ್ನು ಸರಿಪಡಿಸಿಲ್ಲ. ನಾವು ಮಾಡಲಾಗದ ಬದಲಾವಣೆಯನ್ನು ನೀವಾದರೂ ತನ್ನಿ.