ಸ್ಯಾಟಲೈಟ್‌ ಫೋಟೋದಾಗ ಕಲಬುರಗಿ ಹಸಿರು!

Published : Sep 07, 2026, 11:54 AM IST
Dairy

ಸಾರಾಂಶ

ಕೇಂದ್ರದ ಡ್ರಾಟ್‌ ಮ್ಯಾನುವಲ್‌ (ಬರಗಾಲ ಸೂಚಿ ಮಾನದಂಡ) ಆಧರಿಸಿ ಬರಗಾಲ ಪಟ್ಟಿ ಸಿದ್ಧಪಡಸ್ಯಾರಂತ್ರಿ, ಸ್ಯಾಟಲೈಟ್ ಟೆಕ್ನಾಲಜಿಯಿಂದ್ಲೇ ನಮ್ಮೂರ ಹೊಲಗದ್ದಿ ಫೋಟೋ ತಗೊಂಡಾರ, ಸ್ಯಾಟಲೈಟ್‌ ಫೋಟೋದಾಗ ಕಲಬುರಗಿ ಹಚ್ಚಗ (ಹಚ್ಚ ಹಸಿರು) ಕಾಣಸ್ಯದಂತ, ಅದ್ಕೇ ಇಲ್ಲಿನ ಯಾವ ತಾಲೂಕೂ ಬರಗಾಲ ಪಟ್ಟಿ ಸೇರಿಲ್ಲ.

ಇದು ಟೆಕ್ನಾಲಜಿ ಯುಗ, ಎಲ್ಲದಕ್ಕೂ ತಂತ್ರಜ್ಞಾನ ಬಳಸೋ ಕಾಲದಲ್ಲಿ ನಾವಿರೋವಾಗಲೇ ಬರಗಾಲದಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿರೋ ಕಲಬುರಗಿ ರೈತರ ಪಾಲಿಗೆ ಈ ಟೆಕ್ನಾಲಜಿಯೇ ಕೈ ಕೊಟ್ಟಿದೆಯಾ...? ಇಂಥ ಅನುಮಾನ ಈಗ ಜಿಲ್ಲೆಯ ಜನರಲ್ಲಿ ಮೂಡಿದೆ.

ಮಳೆ ಕೊರತೆಯಾಗಿ ಭೀಕರ ಬರಗಾಲದ ದವಡೆಗೆ ಸಿಲುಕಿರುವಾಗ ರಾಜ್ಯ ಸರ್ಕಾರ ಘೋಷಿಸಿರೋ ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ 11 ತಾಲೂಕುಗಳಲ್ಲಿ ಒಂದೂ ಸೇರದೆ ಹೋಗಿರೋದು ಇಲ್ಲಿನ ಜನರನ್ನು, ರೈತರನ್ನು ಕೆರಳಿಸಿದೆ.

ಅದರ ಪರಿಣಾಮ ಈಚೆಗಿನ ಯಾವುದೇ ಸಮಾರಂಭದ ವೇದಿಕೆ ಇರಲಿ, ಅಲ್ಲಿ ಬರಗಾಲದ್ದೇ ಮಾತು. ಎಲ್ಲೇ ಹೋರಾಟಗಳು ನಡೆಯಲಿ, ಬರಗಾಲ ಘೋಷಿಸದ ಸರ್ಕಾರ ವಿರುದ್ಧ ಧಿಕ್ಕಾರ ಕೂಗಲಾಗ್ತಿದೆ. ಮೊನ್ನೆ ಹೀಂಗೆ ಆಯ್ತು, ಹೆದ್ದಾರಿ ಪ್ರಾಧಿಕಾರದವರು 7 ಕೊಳವೆ ತುಂಡರಿಸಿದ್ದರಿಂದ ಬೋರಿ ಹಳ್ಳದಿಂದ ಅಫಜಲ್ಪುರ ಹಾಗೂ ಆಳಂದ ಕೆರೆ, ಕಟ್ಟೆ ತುಂಬಿಸೋ ಯೋಜನೆಗೆ ಆಘಾತವಾಗಿದೆ ಎಂದು ಬಡದಾಳ-ಅರ್ಜುಣಗಿ ಬಳಿ ಕಲಬುರಗಿ ಹಾಲು ಒಕ್ಕೂಟದ ಅಧ್ಯಕ್ಷ ಆರ್‌.ಕೆ.ಪಾಟೀಲ್‌ ನೇತೃತ್ವದ ಧರಣಿ ವೇಳೆ ಬರಗಾಲ ಪಟ್ಟಿಯಿಂದ ಕಲಬುರಗಿ ಔಟ್‌ ಆಗಿರೋ ವಿಷಯ, ಯಾಕೆ ಹಿಗಾಯ್ತೆಂದು ಸ್ವಾರಸ್ಯಕರ ಚರ್ಚೆಗೆ ವೇದಿಕೆಯಾಯ್ತು.

ಹೋರಾಟ ಬೆಂಬಲಿಸಲು ಬಂದಿದ್ದ ಆತನೂರ್‌-ಅಂಕಲಗಿ ಮಠದ ಗುರುಬಸವ ಶಿವಾಚಾರ್ಯರು, ಕಲಬುರಗ್ಯಾಗ ಶೇ.50 ಕ್ಕಿಂತ ಅಧಿಕ ಮಳೆ ಕೊರತೆ ಕಾಡಿದ್ರೂ ಉಪಗ್ರಹ ಫೋಟೋದಾಗ ಕಲಬುರಗಿ ಹೊಲಗದ್ದಿ ಎಲ್ಲಾ ಹಚ್ಚ ಹಸಿರು ಕಂಡಾವಂತ, ಅದ್ಕೇ ಇಲ್ಲೆಲ್ಲಿದೆ ಬರಗಾಲ ಎಂದು ಕೇಳ್ತಾ ಆಫೀಸರ್‌ ಮಂದಿ ಬರಗಾಲ ಪಟ್ಟಿಯಿಂದ ಕಲಬುರಗಿ ಜಿಲ್ಲಾ ದೂರ ಇಟ್ಟಾರಂತ ಹೇಳಾಕತ್ತಾರ್ರಿ, ನಮಗ ಮನಷ್ಯಾರಷ್ಟೇ ಕೈ ಕೊಡ್ತಾರ ಅಂದ್ಕೊಂಡಿದ್ವಿ, ಈಗ ನೋಡಿದ್ರ ಕಲಬುರಗಿ ಪಾಲಿಗೆ ಟೆಕ್ನಾಲಜಿನೂ ಕೈ ಕೊಟ್ಟದ ನೋಡ್ರಿ ಅಂದ್ರು!

ಕೇಂದ್ರದ ಡ್ರಾಟ್‌ ಮ್ಯಾನುವಲ್‌ (ಬರಗಾಲ ಸೂಚಿ ಮಾನದಂಡ) ಆಧರಿಸಿ ಬರಗಾಲ ಪಟ್ಟಿ ಸಿದ್ಧಪಡಸ್ಯಾರಂತ್ರಿ, ಸ್ಯಾಟಲೈಟ್ ಟೆಕ್ನಾಲಜಿಯಿಂದ್ಲೇ ನಮ್ಮೂರ ಹೊಲಗದ್ದಿ ಫೋಟೋ ತಗೊಂಡಾರ, ಸ್ಯಾಟಲೈಟ್‌ ಫೋಟೋದಾಗ ಕಲಬುರಗಿ ಹಚ್ಚಗ (ಹಚ್ಚ ಹಸಿರು) ಕಾಣಸ್ಯದಂತ, ಅದ್ಕೇ ಇಲ್ಲಿನ ಯಾವ ತಾಲೂಕೂ ಬರಗಾಲ ಪಟ್ಟಿ ಸೇರಿಲ್ಲ. ಟೆಕ್ನಾಲಜಿ ಕೂಡಾ ಹೀಂಗ ಕಲಬುರಗಿಗೆ ಮೋಸ ಮಾಡ್ಬೇಕಾ? ಎಂದಾಗ ಸೇರಿದ್ದ ರೈತರು ತಮ್ಮ ಹಣೆಬರಹ ಹಳಿಯುತ್ತ ಹಣಿಹಣಿ ಬಡ್ಕೊಂಡ್ರು.

ದುಡ್ಡು ಕೊಡಿ, ಪ್ರೊಟೆಸ್ಟ್‌ ಮಾಡಿ...

ಸಂಬಳ ಕೊಡಿ, ಕೆಲಸ ಕೊಡಿ, ಸವಲತ್ತು ಕಲ್ಪಿಸಿ ಎಂದು ನಿರುದ್ಯೋಗಿಗಳು, ಕಡಿಮೆ ವೇತನ ಪಡೆಯುವವರು, ಗುತ್ತಿಗೆ ನೌಕರರು ಇನ್ಮುಂದೆ ಪ್ರತಿಭಟನೆ ಮಾಡುವ ಮುನ್ನ 5-10 ರುಪಾಯಿ ದೇಣಿಗೆ ಎತ್ತಿ ಸಂಗ್ರಹಿಸಿ, ಶುಲ್ಕ ಕಟ್ಟಿ ಪ್ರತಿಭಟನೆ ಮಾಡಬೇಕು. ಇಲ್ಲದಿದ್ದರೆ ಧಿಕ್ಕಾರ ಕೂಗಲೂ ಅವಕಾಶ ಸಿಗಲ್ಲ...

ಇಡೀ ರಾಜಧಾನಿಯಲ್ಲಿ ಪ್ರತಿಭಟನೆ, ಧರಣಿ ಮಾಡಲು ಇರುವ ಏಕೈಕ ಸ್ಥಳವಾದ ಸ್ವಾತಂತ್ರ್ಯ ಉದ್ಯಾನದಲ್ಲಿ ಶ್ರೀಸಾಮಾನ್ಯರು, ಬಡವರು, ಶೋಷಿತರು ಈಗ ಪ್ರತಿಭಟನೆ ಮಾಡಲು ತಮ್ಮ ಜೇಬು ನೋಡಿಕೊಳ್ಳುವ ಸ್ಥಿತಿ ಎದುರಾಗಿದೆ.

ಇಷ್ಟಕ್ಕೂ ಆಗಿದ್ದೇನೆಂದರೆ ಗ್ರೇಟ್... ಗ್ರೇಟ್ ಬೆಂಗಳೂರು ಪ್ರಾಧಿಕಾರ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ವಿವಾಹ ಪೂರ್ವ ಚಿತ್ರೀಕರಣ, ಕಿರು ಚಿತ್ರೀಕರಣ, ಧಾರಾವಾಹಿಗಳ ಚಿತ್ರೀಕರಣ ಮುಂತಾದ ಕಾರ್ಯಕ್ರಮಗಳಿಗೆ ನಿಗದಿತ ಶುಲ್ಕ ವಿಧಿಸಿದೆ. ಇತರೆ ಕಾರ್ಯಕ್ರಮಗಳಿಗೆ 10 ಸಾವಿರ ರು. ವಿಧಿಸಿದೆ. ಆದರೆ ಇತರೆ ಕಾರ್ಯಕ್ರಮಗಳ ಅಡಿ ಪ್ರತಿಭಟನೆ, ಧರಣಿಯೂ ಸೇರುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಆದರೆ ಪ್ರತಿಭಟನೆ ಮಾಡುವ ಸಂಘಟನೆಗಳು ಮಾತ್ರ ಹೊಟ್ಟೆ ತುಂಬಿದವರು ಯಾರೂ ಧರಣಿ, ಪ್ರತಿಭಟನೆ ಮಾಡಲು ಬರುವುದಿಲ್ಲ. ಹೀಗಿರುವಾಗ ಜಿಬಿಎ ಈ ರೀತಿ ಶುಲ್ಕ ವಿಧಿಸಲು ಮುಂದಾಗಿರುವುದನ್ನು ನೋಡಿದರೆ ಪರೋಕ್ಷವಾಗಿ ಪ್ರತಿಭಟನೆ ಹಕ್ಕು ಕಿತ್ತುಕೊಳ್ಳಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಮಾತ್ರ ನಿಜ.

-ಶೇಷಮೂರ್ತಿ ಅವಧಾನಿ

-ಚಂದ್ರ

PREV
Read more Articles on

Recommended Stories

ನವಯುಗದ ಆಡಳಿತ ಕ್ರಾಂತಿ ‘ಪ್ರಜಾಸೇವೆ’
ದೇಶದ ಭವಿಷ್ಯ ನಿರ್ಮಿಸುವವರೇ ಶಿಕ್ಷಕರು!