ದೇಶದ ಭವಿಷ್ಯ ನಿರ್ಮಿಸುವವರೇ ಶಿಕ್ಷಕರು!

Published : Sep 05, 2026, 12:48 PM IST
droupadi murmu

ಸಾರಾಂಶ

ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುತ್ತಾರೆ. ಈ ಶಿಕ್ಷಕರ ದಿನದಂದು, ನಮ್ಮ ಕೋಟ್ಯಂತರ ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನ, ಕೌಶಲ್ಯ, ಮೌಲ್ಯ, ಪ್ರೇರಣೆಯನ್ನು ತುಂಬಿದ ಎಲ್ಲಾ ಶಿಕ್ಷಕರಿಗೆ ಭಾರತೀಯರ ಪರವಾಗಿ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

-ದ್ರೌಪದಿ ಮುರ್ಮು, ರಾಷ್ಟ್ರಪತಿ

ಭಾರತದ 2ನೇ ರಾಷ್ಟ್ರಪತಿ ಡಾ। ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸಬೇಕೆಂದು ಬಯಸಿದ್ದರು. ಅವರು ಬುದ್ಧಿಜೀವಿ, ಲೇಖಕ, ರಾಜಕಾರಣಿಯಾಗಿದ್ದರು. ಆದಾಗ್ಯೂ ಅವರು ಶಿಕ್ಷಕರಾಗಿ ತಮ್ಮ ಪಾತ್ರ ಎಲ್ಲಕ್ಕಿಂತ ಮುಖ್ಯವೆಂದು ಪರಿಗಣಿಸಿದ್ದರು.

ಭಾರತದ ಅತ್ಯಂತ ಪ್ರೀತಿಯ ಮಾಜಿ ರಾಷ್ಟ್ರಪತಿಗಳಲ್ಲಿ ಒಬ್ಬರಾದ ಡಾ। ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಒಮ್ಮೆ, ಜನರು ನಿಮ್ಮನ್ನು ವಿಜ್ಞಾನಿಯಾಗಿ ಹೆಚ್ಚು ಸ್ಮರಿಸುತ್ತಾರೋ ಅಥವಾ ರಾಷ್ಟ್ರಪತಿಯಾಗಿ ನೆನಪಿಸಿಕೊಳ್ಳುತ್ತಾರೋ ನಿಮ್ಮ ಅಭಿಪ್ರಾಯವೇನು ಎಂದಾಗ, ಡಾ। ಕಲಾಂ ಅವರು ತಮ್ಮನ್ನು ಶಿಕ್ಷಕನಾಗಿ ಜನ ಸ್ಮರಿಸಬೇಕೆಂದು ಬಯಸುತ್ತೇನೆ ಎಂದು ಉತ್ತರಿಸಿದ್ದರು.

ಶಿಕ್ಷಕರ ಸಾಮರ್ಥ್ಯ, ಚಾರಿತ್ರ್ಯವು ಅವರನ್ನು ಪೂಜ್ಯರನ್ನಾಗಿ ಮಾಡುತ್ತದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸಬೇಕು. ಎಲ್ಲರನ್ನೂ ಸಮಾನವಾಗಿ, ನ್ಯಾಯಯುತವಾಗಿ ಕಾಣಬೇಕು. ತಾಳ್ಮೆ ಕಳೆದುಕೊಳ್ಳಬಾರದು, ಸಂಯಮದಿಂದಿರಬೇಕು. ವಿದ್ಯಾರ್ಥಿಗಳ ಕ್ಷೇಮವನ್ನು ಪರಮೋಚ್ಛವಾಗಿ ಪರಿಗಣಿಸಬೇಕು. ಅವರ ಕಲಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರಿಗೆ ಕಲಿಸಬೇಕೆಂದು ಪ್ರಾಚೀನ ಗ್ರಂಥಗಳು ಸೂಚಿಸುತ್ತವೆ. ಅಂತಹ ಶಿಕ್ಷಕರ ಬಗ್ಗೆ ಆಳವಾದ ಗೌರವ ಮನೋಭಾವದಲ್ಲಿ, ತೈತ್ತರೀಯ ಉಪನಿಷತ್ತಿನ ಶಿಕ್ಷಾವಲ್ಲಿಯಲ್ಲಿ ಸುಮಾರು ಮೂರು ಸಹಸ್ರಮಾನಗಳ ಹಿಂದೆ ‘ಆಚಾರ್ಯದೇವೋ ಭವ’ ಎಂಬ ಕಾಲಾತೀತ ಸಂದೇಶವನ್ನು ನೀಡಲಾಗಿದೆ.

ನನ್ನ ಶಿಕ್ಷಣದಲ್ಲಿ ಶಿಕ್ಷಕರು:

ಅನೇಕ ಬುದ್ಧಿವಂತ ಮತ್ತು ಮೆಚ್ಚಿನ ಶಿಕ್ಷಕರ ಮಾರ್ಗದರ್ಶನ ಪಡೆಯುವ ಅದೃಷ್ಟ ನನ್ನದಾಗಿತ್ತು. ಕೆಲವೊಮ್ಮೆ, ನಮ್ಮ ಶಿಕ್ಷಕರು ಶಾಲಾ ಸಮಯದ ನಂತರವೂ ತಮ್ಮ ಮನೆಗಳಲ್ಲಿ ನಮಗೆ ಕಲಿಸುತ್ತಿದ್ದರು ಮತ್ತು ಬಹಳ ಕಾಳಜಿಯಿಂದ ನಮ್ಮನ್ನು ನೋಡಿಕೊಳ್ಳುತ್ತಿದ್ದರು. ಏಳನೇ ತರಗತಿ ಮುಗಿಸಿದ ನಂತರ, ಹೆಚ್ಚಿನ ಅಧ್ಯಯನ ಮುಂದುವರಿಸಲು ನಮ್ಮ ಹಳ್ಳಿಯಿಂದ ಹೊರಬಂದ ಮೊದಲ ಹುಡುಗಿ ನಾನು. ನಂತರ, ಭುವನೇಶ್ವರದಲ್ಲಿ ಅಧ್ಯಯನ ಮಾಡುವಾಗ, ನನ್ನ ಶಿಕ್ಷಕರಿಂದ ಅಪಾರ ಪ್ರೀತಿ ಮತ್ತು ಪ್ರೋತ್ಸಾಹದ ಆಶೀರ್ವಾದ ನನಗೆ ಲಭಿಸಿತು.

ಮಕ್ಕಳನ್ನು ಪ್ರೀತಿಸುವ ಮತ್ತು ಸಮರ್ಪಿತ ಶಿಕ್ಷಕನು ವಿದ್ಯಾರ್ಥಿಯಲ್ಲಿ ಅಪರಿಮಿತ ಸಾಮರ್ಥ್ಯ ಮತ್ತು ಸ್ಫೂರ್ತಿ ಜಾಗೃತಗೊಳಿಸಬಹುದು. ಆ ಪ್ರೋತ್ಸಾಹದಿಂದ ಬಲಗೊಂಡ ವಿದ್ಯಾರ್ಥಿಗಳು ಜೀವನದ ಕಠಿಣ ಸವಾಲುಗಳನ್ನು ಎದುರಿಸುವ ಧೈರ್ಯ ಮತ್ತು ಉನ್ನತ ಗುರಿಗಳನ್ನು ಸಾಧಿಸುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ. ಶಿಕ್ಷಕರು ಪಠ್ಯಕ್ರಮದ ಜೊತೆಗೆ ಹೆಚ್ಚಿನದನ್ನೂ ಕಲಿಸುತ್ತಾರೆ. ತಮ್ಮದೇ ಆದ ನಡವಳಿಕೆ ಮತ್ತು ನಿದರ್ಶನದ ಮೂಲಕ, ಅವರು ತಮ್ಮ ವಿದ್ಯಾರ್ಥಿಗಳಿಗೆ ಫಲಪ್ರದ ಜೀವನವನ್ನು ನಡೆಸಲು ಅಗತ್ಯವಾದ ಕಲೆ ಮತ್ತು ಕೌಶಲ್ಯಗಳನ್ನು ಸಹ ಕಲಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯ ಬಯಕೆಯಲ್ಲಿ ಹಿತೈಷಿ, ಸ್ನೇಹಿತ ಮತ್ತು ಸಹ ಪ್ರಯಾಣಿಕರೂ ಆಗಿರುತ್ತಾರೆ.

ಪುರಾಣಗಳಲ್ಲೂ ಉಲ್ಲೇಖ:

ಉತ್ತಮ ಶಿಕ್ಷಕರ ಬಗ್ಗೆ ಪ್ರಾಚೀನ ಕಾಲದಿಂದ ಇರುವ ಒಳನೋಟವು ಇಂದಿಗೂ ಪ್ರಸ್ತುತ. ಶತಮಾನಗಳ ಹಿಂದೆ, ಮಹಾಕವಿ ಕಾಳಿದಾಸರು ತಮ್ಮ ನಾಟಕ ''ಮಾಳವೀಕಾಗ್ನಿಮಿತ್ರಂ'' ನಲ್ಲಿ, ಆಳವಾದ ಜ್ಞಾನವನ್ನು ಹೊಂದಿರುವ ಮತ್ತು ಆ ಜ್ಞಾನವನ್ನು ಪರಿಣಾಮಕಾರಿಯಾಗಿ ಪಸರಿಸುವ ಸಾಮರ್ಥ್ಯವನ್ನು ಹೊಂದಿರುವಾತನೇ ಉತ್ತಮ ಶಿಕ್ಷಕ ಎಂದು ಬರೆದಿದ್ದಾರೆ.

ಪ್ರಸಿದ್ಧ ಸಂಸ್ಕೃತ ಸೂತ್ರವೊಂದರ ರೀತ್ಯ: '' ಸರ್ವತ್ರ ವಿಜಯಂ ಇಚ್ಛೇತ್, ಶಿಷ್ಯಾತ್ ಇಂಚೇತ್ ಪರಾಜಯಂ'' ಎಲ್ಲೆಡೆ ವಿಜಯವನ್ನು ಬಯಸುವರೂ, ತನ್ನ ಸ್ವಂತ ಶಿಷ್ಯನಿಂದ ಪರಾಜಯ ಅನುಭವಿಸಲು ಇಚ್ಛಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಚಿಂತನೆಯನ್ನು ಉತ್ತೇಜಿಸುವುದು, ಅವರಲ್ಲಿ ಕುತೂಹಲವನ್ನು ಹುಟ್ಟುಹಾಕುವುದು, ಪ್ರಶ್ನೆಗಳನ್ನು ಕೇಳುವ ಪ್ರವೃತ್ತಿಯನ್ನು ಬೆಳೆಸುವುದು, ವಾದ-ನಿರ್ಣಯದ ಸಾಮರ್ಥ್ಯವನ್ನು ತೀಕ್ಷ್ಣಗೊಳಿಸುವುದು ಮತ್ತು ಸ್ವತಂತ್ರ ವ್ಯಕ್ತಿಗಳಾಗಿ ಬೆಳೆಯಲು ಸಹಾಯ ಮಾಡುವುದು ಇವು ಬೋಧನೆಯ ಅತ್ಯಂತ ಉಪಯುಕ್ತ ಮತ್ತು ಪ್ರಯೋಜನಕಾರಿ ಆಯಾಮಗಳಾಗಿವೆ.

ಬೋಧನೆ ಕೇವಲ ವೃತ್ತಿಯಲ್ಲ ಒಂದು ಪ್ರತಿಜ್ಞೆ. ಇದು ವೃತ್ತಿ ಅಥವಾ ಉದ್ಯೋಗಕ್ಕಿಂತ ಮಿಗಿಲಾದ್ದು. ಇದು ಮಾನವೀಯತೆಯನ್ನು ರೂಪಿಸುವ ಪವಿತ್ರ ಕಾರ್ಯವಾಗಿದೆ. ಮುಂದಿನ ಪೀಳಿಗೆಗೆ ಮಾರ್ಗವನ್ನು ಬೆಳಗಿಸುವ ಉದಾತ್ತ ಜವಾಬ್ದಾರಿಯಾಗಿದೆ.

ಬೋಧನೆಗೆ ಸಂಬಂಧಿಸಿದ ನನ್ನ ನೆನಪುಗಳು ನನಗೆ ವಿಶೇಷ ತೃಪ್ತಿಯನ್ನು ನೀಡುತ್ತವೆ. ಒಡಿಶಾದ ರಾಯರಂಗಪುರದ ಶ್ರೀ ಅರಬಿಂದೋ ಇಂಟಿಗ್ರಲ್ ಸ್ಕೂಲ್ ನಲ್ಲಿ ನಾನು ಮಕ್ಕಳಿಗೆ ಕಲಿಸುತ್ತಿದ್ದೆ. ಅವರಿಗೆ ವಿವಿಧ ವಿಷಯಗಳನ್ನು ಕಲಿಸುವುದರ ಜೊತೆಗೆ, ಮಕ್ಕಳಿಗೆ ಸಂಗೀತ ಪ್ರದರ್ಶನಗಳು, ಕ್ರೀಡಾ ಚಟುವಟಿಕೆಗಳು ಮತ್ತು ನಾಟಕಗಳಿಗೆ ತಯಾರಿ ಮಾಡಲು ಸಹಾಯ ಮಾಡುವಲ್ಲಿ ನಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದೆ. ಇಂದಿಗೂ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ನಮ್ಮ ಸಿದ್ಧತೆಗಳು ಮತ್ತು ಸಮಾರಂಭಗಳಲ್ಲಿ ಮಕ್ಕಳ ಸಂತೋಷದ ಉತ್ಸಾಹವನ್ನು ನೆನಪಿಸಿಕೊಳ್ಳುವುದು ನನಗೆ ಸಂತೋಷ.

ಸುಂದರವಾದ ನೈಸರ್ಗಿಕ ಪರಿಸರ ಪ್ರವಾಸಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುವುದು ಮತ್ತು ಆಟ ಹಾಗೂ ಪರಿಶೋಧನೆಯ ಮೂಲಕ ಪ್ರಾಣಿಗಳು, ಪಕ್ಷಿಗಳು, ಮರಗಳು ಮತ್ತು ಸಸ್ಯಗಳ ಜಗತ್ತಿಗೆ ಅವರನ್ನು ಪರಿಚಯಿಸುವ ಮೂಲಕ ನಾನು ಹೆಚ್ಚಿನ ತೃಪ್ತಿ ಮತ್ತು ಅರ್ಥವನ್ನು ಕಂಡುಕೊಂಡಿದ್ದೆ.

ಶಾಲೆಯಿಂದ ಹೊರಬಂದ ನಾನು ಶಾಲೆಯನ್ನು ಬಿಟ್ಟ ಹಲವು ವರ್ಷಗಳ ನಂತರವೂ ನನ್ನ ವಿದ್ಯಾರ್ಥಿಗಳು ನನ್ನನ್ನು ತಮ್ಮ ಕುಟುಂಬದ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಾರೆ. ನನ್ನ ಅನೇಕ ವಿದ್ಯಾರ್ಥಿಗಳ ಹೆಸರುಗಳು ಮಾತ್ರವಲ್ಲದೆ ನಾವು ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದ ಅಡ್ಡ ಹೆಸರುಗಳನ್ನು ಸಹ ನಾನು ಸ್ಪಷ್ಟವಾಗಿ ನೆನಪಿಟ್ಟುಕೊಂಡಿದ್ದೇನೆ. ನಾನು ಕಲಿಸಿದ ವಿದ್ಯಾರ್ಥಿಗಳಿಂದ ನಾನು ಬಹಳಷ್ಟು ಕಲಿತಿದ್ದೇನೆ. ಶಿಕ್ಷಕರು ಸಹ ಮಕ್ಕಳ ಸ್ವಾಭಾವಿಕತೆ ಮತ್ತು ಕುತೂಹಲದಿಂದ ಬಹಳಷ್ಟು ಕಲಿಯುತ್ತಾರೆ ಎಂದು ನಾನು ಭಾವಿಸುತ್ತೇನೆ.

ನನ್ನ ಶಾಲೆಯ ನೆನಪುಗಳು:

ಸುಮಾರು ಹನ್ನೊಂದು ವರ್ಷಗಳ ಹಿಂದೆ, ನಾನು ನನ್ನ ಹಳ್ಳಿಯ ಮನೆಯಲ್ಲಿ ವಸತಿ ಶಾಲೆಯನ್ನು ಸ್ಥಾಪಿಸಿದೆ. ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಕಳೆದುಕೊಂಡ ಮಕ್ಕಳು ಆ ಶಾಲೆಯಲ್ಲಿ ಅಧ್ಯಯನ ಮಾಡುತ್ತಾರೆ. ಈ ವರ್ಷ, ಜೂನ್ 20 ರಂದು, ನನ್ನ ಜನ್ಮದಿನದಂದು ಮಕ್ಕಳನ್ನು ಭೇಟಿಯಾಗಿದ್ದು ನನಗೆ ಸಂತೋಷವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ನನ್ನೊಂದಿಗೆ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ಪೋಷಕರು, ಪಾಲಕರು ತಮ್ಮ ಮಕ್ಕಳನ್ನು ಅಧ್ಯಯನಕ್ಕೆ ಕಳುಹಿಸಿದಾಗ ಶಿಕ್ಷಕರ ಮೇಲೆ ಹೆಚ್ಚಿನ ನಂಬಿಕೆಯನ್ನು ಹೊಂದಿರುತ್ತಾರೆ. ಶಿಕ್ಷಕರು ಮಕ್ಕಳನ್ನು ತಮ್ಮವರಂತೆ ಕಾಣುತ್ತಾರೆ ಎಂದು ಭಾವಿಸುತ್ತಾರೆ. ಶಿಕ್ಷಕರ ವರ್ತನೆ, ನಡವಳಿಕೆ ಮಕ್ಕಳಲ್ಲಿ ಭಯ, ಆತಂಕ ಉಂಟುಮಾಡಬಾರದು, ಅವರ ನೈತಿಕ ಸ್ಥೈರ್ಯವನ್ನು ಕುಂದಿಸಬಾರದು ಅಥವಾ ಕೀಳರಿಮೆಯ ಭಾವನೆಯನ್ನು ಬೆಳೆಸಲು ಅವಕಾಶ ನೀಡಬಾರದು. ಉತ್ತಮ ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ತಮ್ಮಂತೆಯೇ ಅತ್ಯುತ್ತಮರಾಗಲು ನೆರವಾಗುತ್ತಾರೆ.

ತಮ್ಮ ವಿದ್ಯಾರ್ಥಿಗಳು ಉತ್ತಮ ಮನುಷ್ಯರಾಗುವಂತೆ ಮಾರ್ಗದರ್ಶನ ಮಾಡುವುದು ಶಿಕ್ಷಕರ ಪವಿತ್ರ ಕರ್ತವ್ಯವಾಗಿದೆ. ತಮ್ಮ ಆಲೋಚನೆಗಳು ಮತ್ತು ಕಾರ್ಯಗಳಲ್ಲಿ ನೈತಿಕತೆ ಉಳಿಸಿಕೊಂಡು ಸಮೃದ್ಧಿ ಮತ್ತು ವೈಭವವನ್ನು ಸಾಧಿಸುವ ವಿದ್ಯಾರ್ಥಿಗಳು ಶಿಕ್ಷಕರ ಯಶಸ್ಸಿನ ಜೀವಂತ ಸಾಕಾರರೂಪವಾಗಿರುತ್ತಾರೆ.

ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಂಡು ಮಾನವತೆಯ ಕಲ್ಯಾಣಕ್ಕಾಗಿ ಶ್ರಮಿಸುವ, ಅಂತ್ಯೋದಯದ ಆದರ್ಶವನ್ನು ಎತ್ತಿಹಿಡಿಯುವ; ಪರಿಸರ ಮತ್ತು ಎಲ್ಲಾ ಜೀವಿಗಳನ್ನು ರಕ್ಷಿಸುವ; ವೈಯಕ್ತಿಕ ಮತ್ತು ಸಾಮೂಹಿಕ ಉತ್ಕೃಷ್ಟತೆಗಾಗಿ ಶ್ರಮಿಸುವ ಮತ್ತು ''ರಾಷ್ಟ್ರ ಮೊದಲು'' ಎಂಬ ಮನೋಭಾವದಿಂದ ಮುಂದುವರಿಯುವ ತಲೆಮಾರುಗಳ ವಿದ್ಯಾರ್ಥಿಗಳನ್ನು ನಮ್ಮ ಶಿಕ್ಷಕರು ರೂಪಿಸಬೇಕೆಂದು ನಾನು ಬಯಸುತ್ತೇನೆ. ಪ್ರತಿಯೊಬ್ಬ ನಾಗರಿಕನಿಗೂ ನಾನು ಮನವಿ ಮಾಡುತ್ತೇನೆ: ಸದಾ ನಮ್ಮ ಬದ್ಧತೆ ಮತ್ತು ಪ್ರಾಮಾಣಿಕ ಶಿಕ್ಷಕರನ್ನು ಅತ್ಯುನ್ನತ ಗೌರವದಿಂದ ನೋಡಿ. ನಮ್ಮ ಸಮರ್ಪಿತ ಶಿಕ್ಷಕರ ಕೊಡುಗೆಯೊಂದಿಗೆ, ಭಾರತವು ಕಲಿಕೆ ಮುಂದುವರಿಸಲಿ ಮತ್ತು ಮುನ್ನಡೆಯಲಿ.

PREV
Read more Articles on

Recommended Stories

ದೇಶಾದ್ಯಂತ 1.6 ಲಕ್ಷಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗ ಸೃಷ್ಟಿಸಿದ ಅಮೆಜಾನ್ ಇಂಡಿಯಾ
ಇನ್ನೂ ಕತ್ತಲಲ್ಲೇ ಇರುವ ಪತ್ರಿಕಾ ವಿತರಕ