‘ಕೊಲೆ ಆಗಿದ್ದ’ ಬಾಲಕ ತಾನು ಬದುಕಿದ್ದೇನೆ ಎಂದ!

KannadaprabhaNewsNetwork |  
Published : Nov 12, 2023, 01:00 AM ISTUpdated : Nov 12, 2023, 01:01 AM IST

ಸಾರಾಂಶ

ಬಾಲಕ ಶುಕ್ರವಾರ ಸುಪ್ರೀಂ ಕೋರ್ಟ್‌ ಮುಂದೆ ಹಾಜರಾಗಿ ತಾನು ಬದುಕಿದ್ದೇನೆ ಎಂದು ಹೇಳಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾನೆ.

ಸುಪ್ರೀಂ ಕೋರ್ಟ್‌ ಮುಂದೆ ಹಾಜರಾಗಿ ‘ಜೀವಂತ ಸಾಕ್ಷ್ಯ’!

ಕೊಲೆ ಆರೋಪ ಹೊತ್ತಿದ್ದ ಅಜ್ಜ, ಮಾವಂದಿರು ನಿರಾಳ!

ಉತ್ತರ ಪ್ರದೇಶದ ಪೀಲಿಭೀತ್‌ನಲ್ಲಿ ವಿಚಿತ್ರ ಘಟನೆ

ನವದೆಹಲಿ: ಇದೊಂದು ವಿಚಿತ್ರ ಘಟನೆ. ಉತ್ತರ ಪ್ರದೇಶದ ಪೀಲಿಭೀತ್‌ನ 11 ವರ್ಷದ ಬಾಲಕನೊಬ್ಬ ಕೊಲೆ ಆಗಿದ್ದಾನೆ ಎಂದು ಹಲವು ವರ್ಷಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಆದರೆ ಅದೇ ಬಾಲಕ ಶುಕ್ರವಾರ ಸುಪ್ರೀಂ ಕೋರ್ಟ್‌ ಮುಂದೆ ಹಾಜರಾಗಿ ತಾನು ಬದುಕಿದ್ದೇನೆ ಎಂದು ಹೇಳಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾನೆ. ಆದರೆ ಕೊಲೆ ಆರೋಪ ಹೊತ್ತಿದ್ದ ಆತನ ಅಜ್ಜ ಹಾಗೂ ಮಾವಂದಿರು ಇದರಿಂದ ನಿರಾಳರಾಗಿದ್ದಾರೆ.

ಸಂತ್ರಸ್ತ ಬಾಲಕನ ಹೆಸರು ಅಭಯ್‌ ಸಿಂಗ್‌. ಈತನ ತಂದೆಯ ಮನೆಯವರು ಅಭಯ್‌ನ ಅಮ್ಮನನ್ನು ವರದಕ್ಷಿಣೆಗಾಗಿ ಪೀಡಿಸಿ ಹೊಡೆಯುತ್ತಿದ್ದರು. ಹೀಗಾಗಿ ಈತ ತಂದೆ ಮನೆಯಲ್ಲಿರದೇ 2013ರಿಂದ ತಾಯಿಯ ತವರು ಮನೆಯಲ್ಲೇ ಅಜ್ಜ-ಅಜ್ಜಿಯೊಂದಿಗೆ ವಾಸಿಸುತ್ತಿದ್ದ. ಇದರ ನಡುವೆ ಈತನ ತಾಯಿ ಕೆಲವು ವರ್ಷದ ಹಿಂದೆ ತೀರಿ ಹೋಗಿದ್ದರು. ಹೀಗಾಗಿ ತಾಯಿಯ ಮನೆ ಕಡೆಯವರು, ಅಭಯ್‌ನ ತಂದೆ ಮೇಲೆ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಅಭಯ್‌ನ ಕೊಲೆ ಕತೆ ಸೃಷ್ಟಿಸಿ, ಆತನ ಅಜ್ಜ ಹಾಗೂ ಸೋದರ ಮಾವಂದಿರ ವಿರುದ್ಧ ಕೊಲೆ ಕೇಸು ದಾಖಲಿಸಿದ್ದ.

ಆದರೆ ಇದರ ವಿರುದ್ಧ ಬಾಲಕ ಹಲವು ಬಾರಿ ಕೆಳ ನ್ಯಾಯಾಲಯದಲ್ಲಿ ತಾನು ಬದುಕಿದ್ದೇನೆ. ತನ್ನ ಕೊಲೆ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ. ಆದರೂ ಅವು ಈತನ ವಾದ ಮನ್ನಿಸಿರಲಿಲ್ಲ. ಹೀಗಾಗಿ ವಿಧಿಯಿಲ್ಲದೆ ಈತ ಈಗ ಸುಪ್ರೀಂ ಕೋರ್ಟ್‌ನ ಮುಂದೆ ಹಾಜರಾಗಿ ತಾನು ಬದುಕಿರುವುದಾಗಿ ತಿಳಿಸಿ, ತನ್ನ ಕೊಲೆ ಪ್ರಕರಣವನ್ನು ವಜಾಗೊಳಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾನೆ.

ಹೀಗಾಗಿ ಕೋರ್ಟು, ಈತನ ಅಜ್ಜ/ಮಾವಂದಿರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಪೀಲಿಭೀತ್‌ ಪೊಲೀಸರಿಗೆ ಸೂಚಿಸಿ ಜನವರಿಗೆ ವಿಚಾರಣೆ ಮುಂದೂಡಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಹಳದಿ ಮಾರ್ಗ ಮೆಟ್ರೋಗೆ ಆ.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ