ಬೆಂಗಳೂರು : ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಚಾನೆಲ್ ಮೊಟ್ಟ ಮೊದಲ ‘ರನ್‌ವೇ ಫ್ಯಾಷನ್ ವೀಕ್’ ಎಂಬ ವಿನೂತನ ಫ್ಯಾಷನ್ ಶೋ ಕಾರ್ಯಕ್ರಮ ಆಯೋಜಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಸಿನಿಮಾದ ನಾಯಕ ಸುಮುಖ್, ನಾಯಕಿ ಅಂಜಲಿ ಅನೀಶ್ ಅವರು ರನ್ ವೇ ಫ್ಯಾಷನ್ ವೀಕ್ ಲೋಗೋ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರು, ಫ್ಯಾಷನ್ ಶ್ರೀಮಂತರಿಗೆ, ಗ್ಲಾಮರ್ ಪ್ರಪಂಚಕ್ಕೆ ಮಾತ್ರ ಸೀಮಿತ ಎನ್ನುವ ಕಾಲವೊಂದಿತ್ತು. ಆದರೆ, ಇಂದು ಫ್ಯಾಷನ್ ನಿಸ್ಸಂದೇಹವಾಗಿ ನಮ್ಮ ಜೀವನವನ್ನು ಆಕ್ರಮಿಸಿಕೊಂಡಿದೆ. ಮಕ್ಕಳಿಂದ ವಯೋವೃದ್ಧರವರೆಗೂ ಫ್ಯಾಷನ್ ಒಂದು ಆಸಕ್ತಿದಾಯಕ ವಿಷಯವಾಗಿ ಪರಿಣಾಮ ಬೀರುತ್ತಿದ್ದು, ಸೃಜನಶೀಲತೆಯನ್ನು ಕೂಡ ಪ್ರಚೋದಿಸುತ್ತಿದೆ. ಎಲ್ಲ ಕ್ಷೇತ್ರವನ್ನು ಒಳಗೊಳ್ಳುತ್ತಾ ಬೆಳೆಯುತ್ತಿರುವ ನಮ್ಮ ಸುದ್ದಿ ಸಂಸ್ಥೆ ‘ಫ್ಯಾಷನ್’ ಎನ್ನುವ ವಿಷಯ ಬಿಟ್ಟಿರಲು ಸಾಧ್ಯವಿಲ್ಲ. ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ‘ಫ್ಯಾಷನ್’ ಅನ್ನು ಮುಖ್ಯ ಕಾರ್ಯಕ್ರಮವಾಗಿ ಆಯೋಜಿಸುತ್ತಿವೆ ಎಂದರು.
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಬಿಸಿನೆಸ್ ಹೆಡ್ ಅಪ್ಪಚ್ಚು ಅವರು ಮಾತನಾಡಿ, ಈವರೆಗೂ ನಮ್ಮ ಸಂಸ್ಥೆಗಳಿಂದ ಹಲವು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಫ್ಯಾಷನ್ ಶೋ ನೂತನವಾದ ಪ್ರೋಗ್ರಾಂ. ಕಾರ್ಯಕ್ರಮದ ಸಹಭಾಗಿತ್ವ ವಹಿಸಿರುವ ಸಂಸ್ಥೆಗಳು, ಫ್ಯಾಷನ್ ವೀಕ್ ಟೀಂ ಸೇರಿ ಎಲ್ಲರ ಸಹಕಾರ ಇರಬೇಕು. ನಮ್ಮ ಚಾನೆಲ್‌ನಲ್ಲಿ ಸುದ್ದಿ ಸಮಾಚಾರ, ಮನರಂಜನೆಯೊಂದಿಗೆ ಇನ್ನು ಫ್ಯಾಷನ್ ಕೂಡ ಇರಲಿದೆ ಎಂದರು.
ಏಷ್ಯಾನೆಟ್ ಸುವರ್ಣ ನ್ಯೂಸ್ ಮುಖ್ಯ ಸಂಪಾದಕ ಅಜಿತ್ ಹನಮಕ್ಕನವರ್ ಮಾತನಾಡಿ, ಯಾವಾಗಲೂ ಸುದ್ದಿಗೆ ಸಂಬಂಧಿತ ವಿಷಯಗಳಲ್ಲೇ ಮುಳುಗಿರುವ ಏಷ್ಯಾನೆಟ್ ಸುವರ್ಣನ್ಯೂಸ್ ಫ್ಯಾಷನ್‌ಗೆ ಸಂಬಂಧಿತ ಕಾರ್ಯಕ್ರಮವೊಂದನ್ನು ಮಾಡುತ್ತಿರುವುದು ಖುಷಿಯ ವಿಚಾರ ಎಂದರು.
‘ಮನದ ಕಡಲು’ ಚಿತ್ರದ ನಾಯಕಿ ಅಂಜಲಿ ಮಾತನಾಡಿ, ಫ್ಯಾಷನ್ ನಮ್ಮ ಮಾನಸಿಕ ಯೋಗಕ್ಷೇಮದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಮನಸ್ಥಿತಿ ನಿರ್ವಹಣೆ ಮತ್ತು ಆತ್ಮವಿಶ್ವಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಯಾವುದೇ ವಸ್ತ್ರಗಳನ್ನು ಇಷ್ಟಪಟ್ಟು ಧರಿಸುವುದೇ ನಿಜವಾದ ಫ್ಯಾಷನ್. ‘ರನ್‌ವೇ ಫ್ಯಾಷನ್ ವೀಕ್’ ಯಶಸ್ವಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಿರಿಯ ಉಪಾಧ್ಯಕ್ಷ ಅನಿಲ್ ಸುರೇಂದ್ರ, ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್(ಜೋಗಿ), ಜಡೆ ಕುಚಿನ್ ಡೈರೆಕ್ಟರ್ ಶ್ರೀನಿಧಿ ದತ್ತ ಸೇರಿ ಇತರರು ಉಪಸ್ಥಿತರಿದ್ದರು.
- ‘ಮನದ ಕಡಲು’ ಸಿನಿಮಾ ನಟ ಸುಮುಖ್, ನಟಿ ಅಂಜಲಿ ಅನೀಶ್‌ರಿಂದ ಬೆಂಗಳೂರಿನಲ್ಲಿ ಲೋಗೋ ಅನಾವರಣ- ಏಪ್ರಿಲ್‌ನಲ್ಲಿ ಎರಡು ದಿನ ನಡೆಯಲಿದೆ ವಿನೂತನ ‘ರನ್ ವೇ ಫ್ಯಾಷನ್ ವೀಕ್’ ಫ್ಯಾಷನ್ ಶೋ
ಏ.15, 16ರಂದು ಫ್ಯಾಷನ್ ಶೋ
ಶ್ರೀ ಸಾಯಿ ಜ್ಯುವೆಲ್ಸ್ ಪ್ಯಾಲೇಸ್, ಆಯುರ್ ಬ್ರಹ್ಮ ವೆಲ್‌ನೆಸ್ ಹಾಗೂ ನಿಟ್ಟೆ ಮೀನಾಕ್ಷಿ ಸ್ಕೂಲ್ ಆಫ್ ಫ್ಯಾಷನ್ ಡಿಸೈನ್, ಕರ್ಟನ್ ಮೀಡಿಯಾ, ಎಸ್‌ಎನ್ ಡ್ರೀಮ್ ಸ್ಟುಡಿಯೋ ಸಹಕಾರದಲ್ಲಿ ಏ.15 ಮತ್ತು 16ರಂದು ಬೆಂಗಳೂರಿನ ಹೋಟೆಲ್ ಶೆರಟಾನ್‌ನಲ್ಲಿ ‘ರನ್‌ವೇ ಫ್ಯಾಷನ್ ವೀಕ್’ ನಡೆಯಲಿದೆ.