ಮಾನಸಿಕ ಆರೋಗ್ಯಕ್ಕೆ ಧ್ಯಾನವೊಂದೇ ಪರಿಹಾರ

Published : Dec 21, 2025, 07:45 AM IST
Gurudev ravishankar guruji

ಸಾರಾಂಶ

‘ಜಗತ್ತಿನಲ್ಲಿರುವ ಎಲ್ಲಕ್ಕಿಂತ ಹೆಚ್ಚಾಗಿ ನೀವು ನಿಮಗೆ ಬೆಲೆ ನೀಡಬೇಕು. ಮನಸ್ಸು ಬಲವಾಗಿದ್ದರೆ, ದುರ್ಬಲ ದೇಹವನ್ನೂ ಸಹ ಅದು ನೋಡಿಕೊಳ್ಳುತ್ತದೆ. ಆದರೆ ಎಷ್ಟೇ ಬಲಿಷ್ಠ ದೇಹವಿದ್ದರೂ, ಮನಸ್ಸು ದುರ್ಬಲವಾಗಿದ್ದರೆ, ಅದನ್ನು ನಡೆಸಲು ಸಾಧ್ಯವಿಲ್ಲ.

 ‘ಜಗತ್ತಿನಲ್ಲಿರುವ ಎಲ್ಲಕ್ಕಿಂತ ಹೆಚ್ಚಾಗಿ ನೀವು ನಿಮಗೆ ಬೆಲೆ ನೀಡಬೇಕು. ಮನಸ್ಸು ಬಲವಾಗಿದ್ದರೆ, ದುರ್ಬಲ ದೇಹವನ್ನೂ ಸಹ ಅದು ನೋಡಿಕೊಳ್ಳುತ್ತದೆ. ಆದರೆ ಎಷ್ಟೇ ಬಲಿಷ್ಠ ದೇಹವಿದ್ದರೂ, ಮನಸ್ಸು ದುರ್ಬಲವಾಗಿದ್ದರೆ, ಅದನ್ನು ನಡೆಸಲು ಸಾಧ್ಯವಿಲ್ಲ. ಜೀವನದ ಬಗ್ಗೆ ನಿಮಗಿರುವ ದೃಷ್ಟಿಕೋನವನ್ನು ವಿಸ್ತರಿಸಿಕೊಳ್ಳಿ, ನಿಮ್ಮ ಆತ್ಮಶಕ್ತಿಯಲ್ಲಿ ವಿಶ್ವಾಸವನ್ನು ಇಡಿ. ಧ್ಯಾನವನ್ನು ಅಭ್ಯಾಸ ಮಾಡಿ. ಇದು ನಿಮಗೆ ಅಪಾರ ಶಕ್ತಿಯನ್ನು ನೀಡುತ್ತದೆ.’

-ರುಚಿತಾ ರಾಯ್‌, ಏಷ್ಯನ್‌ ಕಾಲೇಜ್‌ ಆಫ್‌ ಜರ್ನಲಿಸಂ, ಎನ್‌ವೈಯು.

-ಇಂದು ವಿಶ್ವ ಧ್ಯಾನ ದಿನ 

ಎಲ್ಲಾ ಬಾಗಿಲುಗಳು ಮುಚ್ಚಿದಾಗ: 

ಹೇಳಲಾಗದ ಮಾನಸಿಕ ಆರೋಗ್ಯದ ಹೊರೆಯನ್ನು ನಿಭಾಯಿಸಲು ಧ್ಯಾನವು ಯುವಜನತೆಗೆ ಹೇಗೆ ಸಹಾಯ ಮಾಡುತ್ತಿದೆ.

‘ನನಗೆ ಎಲ್ಲಾ ಬಾಗಿಲುಗಳು ಮುಚ್ಚಿಬಿಟ್ಟಂತೆ ಅನಿಸುತ್ತಿತ್ತು’ ಎಂದು ಹಿಮಾಲಿ ತಮ್ಮೊಳಗಿನ ಬಂಧಿತ ಭಾವನೆಯನ್ನು ವಿವರಿಸುತ್ತಾರೆ. ಒಂದು ಅಪಘಾತದ ಕಾರಣ, ದೀರ್ಘ ಕಾಲದವರೆಗೆ ತಮ್ಮ ಕೈಗಳನ್ನು ಬಳಸಲಾಗದ ಸ್ಥಿತಿಗೆ ತಲುಪಿದ, ವಿಡಿಯೋ ಪ್ರೊಡಕ್ಷನ್ ಕೆಲಸ ಮಾಡುತ್ತಿದ್ದ ಹಿಮಾಲಿಗೆ, ಅದರ ಜೊತೆಗೆ ವೈಯಕ್ತಿಕ ಸಂಕಷ್ಟಗಳು ಸೇರಿಕೊಂಡಾಗ ಬದುಕು ದಿಕ್ಕುತಪ್ಪಿದಂತೆ ಕಾಣಿಸತೊಡಗಿತು. ಆಕೆ ಬಹಳ ದುರ್ಬಲಳಾದಳು ಮತ್ತು ಮನಸ್ಸು ತೀವ್ರ ಅಶಾಂತಿಗೊಳಗಾಯಿತು ಮತ್ತು ಅಂತಿಮವಾಗಿ ಆತ್ಮಹತ್ಯೆಯ ಆಲೋಚನೆಗಳನ್ನೂ ಸಹ ಎದುರಿಸಬೇಕಾಯಿತು. ಈ ಪರಿಸ್ಥಿತಿಯನ್ನು ಎದುರಿಸಲು ಗೂಗಲ್ ಮೊರೆ ಹೊಕ್ಕಳು, ಹಲವು ಮನೋವೈದ್ಯರೊಂದಿಗೆ ಮಾತನಾಡಿದಳು- ಆದರೆ ಯಾವುದೂ ಹೆಚ್ಚಿನ ಮಟ್ಟಿಗೆ ಸಹಾಯ ಮಾಡಲಿಲ್ಲ. ಆದರೆ ಯಾವುದೋ ಅಚ್ಚರಿಯ ಸಂಗತಿಯೊಂದು ಆಕೆಯ ಬದುಕನ್ನು ಬದಲಿಸಲು ಆರಂಭಿಸಿತು…

ಭಾರತದ ‘ಸಿಲಿಕಾನ್ ವ್ಯಾಲಿ’ ಎನ್ನಲಾಗುವ ನಗರದ ಮೆರುಗಿನ ಹೊದಿಕೆಯೊಳಗೆ ಒಂದು ಗಂಭೀರವಾದ ಮಾನಸಿಕ ಆರೋಗ್ಯದ ಸಮಸ್ಯೆ ಮೌನವಾಗಿ ಕುದಿಯುತ್ತಿದೆ. ರಾಜ್ಯದ ಆತ್ಮಹತ್ಯೆಯ ಪ್ರಮಾಣವು (ಶೇಕಡ 20.2) ದೇಶದ ಸರಾಸರಿಗಿಂತ (12.4%) ಬಹಳ ಹೆಚ್ಚಾಗಿದೆ. 2022ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿ ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಪ್ರತಿ ವರ್ಷ 13,606 ಆತ್ಮಹತ್ಯೆಗಳು ಸಂಭವಿಸುತ್ತಿವೆ. ಮೆಗಾಸಿಟಿಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿದೆ- ಪ್ರತಿ 45 ಸೆಕೆಂಡುಗಳಿಗೊಮ್ಮೆ ವಿಶ್ವದಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಕೇವಲ ಅಂಕಿ ಅಂಶಗಳಲ್ಲ, ಇದರ ಹಿಂದೆ ಇರುವುದು ನಮ್ಮ ನಿಮ್ಮಂತಹ ನಿಜವಾದ ಜೀವಗಳು- ಹೆಚ್ಚಾಗಿ 15–29 ಮತ್ತು 30–44ರ ವಯೋಮಾನದ ಯುವಕರು. ಜೀವನಕ್ಕೆ ಅರ್ಥ ಕಾಣದಿರುವ ಭಾವನೆ, ದಣಿವು, ಒತ್ತಡ, ಬರ್ನೌಟ್, ಆರ್ಥಿಕ, ಮಾನಸಿಕ ಮತ್ತು ಭಾವನಾತ್ಮಕ ಹೋರಾಟಗಳು ಇವರನ್ನು ಕಾಡುತ್ತಿವೆ. ಈ ನೋವುಗಳನ್ನು ಹೇಳಿಕೊಳ್ಳಲು ಅನೇಕರು ಸುರಕ್ಷಿತ ಜಾಗವನ್ನು ಕಂಡುಕೊಳ್ಳಲಾಗದೆ ಒಂಟಿತನದಿಂದ ಬಳಲುತ್ತಾರೆ.

ಇವರಿಗಾಗಿ ಸುರಕ್ಷಿತ ಸ್ಥಳವನ್ನು ನಿರ್ಮಿಸಿ, ದೇಹ-ಮನಸ್ಸುಗಳನ್ನು ಕಾಪಾಡಿಕೊಳ್ಳುವಂತಹ, ಕಾಲಾಂತರದಿಂದ ಹಾಗೂ ವೈಜ್ಞಾನಿಕವಾಗಿ ಸಾಬೀತಾದ, ಪರಿಣಾಮಕಾರಿಯಾದ ಸಾಧನಗಳನ್ನು ಸಾವಿರಾರು ಜನರಿಗೆ ನೀಡುತ್ತಿರುವುದು, ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ಗುರುಗಳಾದ- ಗುರುದೇವ ಶ್ರೀ ಶ್ರೀ ರವಿ ಶಂಕರ್ ರವರು. ಇಂದು ಅವರು ವಿಶ್ವದಾದ್ಯಂತ 80 ಕೋಟಿ (800 ಮಿಲಿಯನ್‌)ಗಿಂತ ಹೆಚ್ಚು ಜನರನ್ನು ತಲುಪಿದ್ದಾರೆ. ‘ನಿಮ್ಮ ಜೀವನವು ತುಂಬಾ ಅಮೂಲ್ಯವಾದದ್ದಾಗಿದೆ’ ಎಂದು ಗುರುದೇವರು ಇತ್ತೀಚಿಗೆ ಯುವಕರೊಂದಿಗಿನ ಸಂಭಾಷಣೆಯಲ್ಲಿ ಹೇಳಿದರು. ಮುಂದುವರಿಸುತ್ತಾ, ‘ಜಗತ್ತಿನಲ್ಲಿರುವ ಎಲ್ಲಕ್ಕಿಂತ ಹೆಚ್ಚಾಗಿ ನೀವು ನಿಮಗೆ ಬೆಲೆ ನೀಡಬೇಕು. ಮನಸ್ಸು ಬಲವಾಗಿದ್ದರೆ, ದುರ್ಬಲ ದೇಹವನ್ನೂ ಸಹ ಅದು ನೋಡಿಕೊಳ್ಳುತ್ತದೆ. ಆದರೆ ಎಷ್ಟೇ ಬಲಿಷ್ಠ ದೇಹವಿದ್ದರೂ, ಮನಸ್ಸು ದುರ್ಬಲವಾಗಿದ್ದರೆ, ಅದನ್ನು ನಡೆಸಲು ಸಾಧ್ಯವಿಲ್ಲ. ಜೀವನದ ಬಗ್ಗೆ ನಿಮಗಿರುವ ದೃಷ್ಟಿಕೋನವನ್ನು ವಿಸ್ತರಿಸಿಕೊಳ್ಳಿ, ನಿಮ್ಮ ಆತ್ಮಶಕ್ತಿಯಲ್ಲಿ ವಿಶ್ವಾಸವನ್ನು ಇಡಿ. ಧ್ಯಾನವನ್ನು ಅಭ್ಯಾಸ ಮಾಡಿ. ಇದು ನಿಮಗೆ ಅಪಾರ ಶಕ್ತಿಯನ್ನು ನೀಡುತ್ತದೆ.’ ಎಂದು ಹೇಳಿದರು.

ಆಧ್ಯಾತ್ಮಿಕವಾಗಿ ಇದರ ಮೂಲ ಕಾರಣ:

ಗುರುದೇವರು ಹೇಳುವಂತೆ- ನಾವು ಮೂಲಭೂತವಾಗಿ ಜೀವನದ ಮೌಲ್ಯವನ್ನು ಮರೆತಿರುವುದೇ ಇದರ ಮೂಲಭೂತ ಕಾರಣ. ನಮ್ಮಲ್ಲಿನ ಪ್ರಾಣಶಕ್ತಿಯು ಕುಂಠಿತವಾಗುವುದೇ ಆತ್ಮಹತ್ಯೆಯ ಪ್ರವೃತ್ತಿಯು ಉಂಟಾಗುವುದಕ್ಕೆ ಮೂಲ ಕಾರಣ. ಪ್ರಾಣಶಕ್ತಿಯು ಕಡಿಮೆಯಾದಾಗ ನಮ್ಮ ಸೂಕ್ಷ್ಮ ದೇಹವು, ಸ್ಥೂಲ ದೇಹಕ್ಕಿಂತ ಚಿಕ್ಕದಾಗಿ ಕುಗ್ಗುತ್ತದೆ. ನಾವು ನಮ್ಮ ಗಾತ್ರಕ್ಕಿಂತ ಚಿಕ್ಕದಾದ ಅಂಗಿಯನ್ನು ತೊಟ್ಟಾಗ ಹೇಗೆ ಉಸಿರು ಕಟ್ಟಿದ ಅನುಭವವು ಉಂಟಾಗುತ್ತದೆಯೋ, ಅದೇ ರೀತಿ ಸೂಕ್ಷ್ಮ ದೇಹವು ಕುಗ್ಗಿದಾಗ ನಮ್ಮ ಆತ್ಮಕ್ಕೂ ಸಹ ಉಸಿರು ಕಟ್ಟಿದಂತೆ ಆಗುತ್ತದೆ. ಆಗ ಅದಕ್ಕೆ ದೇಹದಿಂದ ತಪ್ಪಿಸಿಕೊಳ್ಳಬೇಕೆಂಬ ಬಯಕೆ ಮೂಡುತ್ತದೆ. ಈ ದುಃಖ ಕ್ರಮೇಣ ಗಾಢವಾಗಿ, ಖಿನ್ನತೆಯಾಗುತ್ತದೆ ಮತ್ತು ಇದೇ ಆತ್ಮಹತ್ಯಾ ಆಲೋಚನೆಗಳಿಗೆ ಕಾರಣವಾಗುತ್ತದೆ.

ನಮ್ಮ ಮೂಲಕ್ಕೆ ಹಿಂತಿರುಗುವುದೇ ಪರಿಹಾರ:

ಹತಾಶೆಗೊಳಗಾಗಬೇಕಿಲ್ಲ. ಖಿನ್ನತೆ, ಆತಂಕ ಮತ್ತು ಇತರ ಮಾನಸಿಕ ಆರೋಗ್ಯದ ಸವಾಲುಗಳನ್ನು ಎದುರಿಸಿದ ಲಕ್ಷಾಂತರ ಮಂದಿ, ಕೆಲವು ದಶಕಗಳ ಕೆಳಗೆ ಕೇವಲ ಕೆಲವೇ ಜನರಿಗೆ ಲಭ್ಯವಿದ್ದ ಅಮೂಲ್ಯ ಆಧ್ಯಾತ್ಮಿಕ ನಿಧಿಯಾದ ಸಾಧನೆಯಿಂದ ಸಹಾಯವನ್ನು ಪಡೆದಿದ್ದಾರೆ. ಗುರುದೇವರು ಜಾಗತಿಕ ಮನೋರೋಗ ಸಮಸ್ಯೆಗೆ ಪರಿಹಾರ ನೀಡಬಲ್ಲ, ಸರಳವಾದ, ಶಕ್ತಿಯುತವಾದ ರಾಮಬಾಣದಂತಹ ಉಪಾಯಗಳನ್ನು ಜಗತ್ತಿನ ಎಲ್ಲರಿಗೂ ಮುಕ್ತವಾಗಿ ಸಿಗುವಂತೆ ಮಾಡಿದ್ದಾರೆ. ಮನುಕುಲದ ಹಿತಕ್ಕಾಗಿ ಭಾರತದ ಆಧ್ಯಾತ್ಮಿಕ ಸಾಧನವನ್ನು ಪ್ರಜಾಪ್ರಭುತ್ವಗೊಳಿಸಿದ್ದಾರೆ. ಪ್ರಾಣಾಯಾಮ, ಧ್ಯಾನ ಮತ್ತು ಉಸಿರಾಟದ ಪ್ರಕ್ರಿಯೆಗಳು- ವಿಶೇಷವಾಗಿ ಸುದರ್ಶನ ಕ್ರಿಯೆ- ಪ್ರಾಣ ಶಕ್ತಿಯನ್ನು ಹೆಚ್ಚಿಸುವಲ್ಲಿ, ನಮ್ಮ ಚೇತನವನ್ನು ಉತ್ತಮ ಸ್ಥಿತಿಗೆ ತರುವುದರಲ್ಲಿ ಮತ್ತು ಸೂಕ್ಷ್ಮದೇಹವನ್ನು ಸಹಜ ಸ್ಥಿತಿಗೆ ಮರಳಿಸಿ ಆತ್ಮಹತ್ಯಾ ಪ್ರವೃತ್ತಿಯನ್ನು ಹೋಗಲಾಡಿಸುವುದರಲ್ಲಿ ಅತ್ಯಂತ ಪರಿಣಾಮಕಾರಿಯಾದುದೆಂದು ನಿಸ್ಸಂದೇಹವಾಗಿ ಸಾಬೀತಾಗಿದೆ.

ಆರ್ಟ್ ಆಫ್ ಲಿವಿಂಗ್‌ನ ಹ್ಯಾಪಿನೆಸ್ ಪ್ರೋಗ್ರಾಂನಲ್ಲಿ ಸುದರ್ಶನ ಕ್ರಿಯೆ ಮತ್ತು ಧ್ಯಾನ ಕಲಿತ ನಂತರ ಹಿಮಾಲಿ ಹಂಚಿಕೊಂಡದ್ದು: ‘ಇದು ಮನಸ್ಸಿನ ಡಿಟಾಕ್ಸ್‌ನಂತಿತ್ತು.’ ನಿಯಮಿತ ಅಭ್ಯಾಸದಿಂದ ಅವರು ಈ ವಿಧಾನದ ಮೇಲೆ ಮತ್ತು ತಮ್ಮ ಗುರುಗಳ ಮೇಲೆ ಗಾಢವಾದ ನಂಬಿಕೆಯನ್ನು ಬೆಳೆಸಿಕೊಂಡರು. ‘ನನಗೆ ಇನ್ನು ಯಾರೂ ಇರದಿದ್ದರೂ ಪರವಾಗಿಲ್ಲ. ನನ್ನನ್ನು ನೋಡಿಕೊಳ್ಳಲು ಗುರುದೇವರು ಮತ್ತು ಧ್ಯಾನದ ಉಡುಗೊರೆ ನನ್ನ ಬಳಿ ಇದೆ. ನಾನು ಈಗ ಜೀವನವನ್ನು ವಿಭಿನ್ನವಾಗಿ ನೋಡಲು ಕಲಿತೆ’ ಎಂದು ಅವರು ಹೇಳುತ್ತಾರೆ.

ಶಿವಮೊಗ್ಗದಿಂದ ಜಗತ್ತಿಗೆ- ಗುರುದೇವರ ಧ್ಯಾನ ಚಳುವಳಿ ಜಾಗತಿಕವಾದ ಬಗೆ

ಧ್ಯಾನದೊಂದಿಗೆ ಗುರುದೇವರ ಆಳವಾದ ಸಂಬಂಧ ಅವರ ಬಾಲ್ಯದಲ್ಲೇ ಕಾಣುತ್ತಿತ್ತು. ನಾಲ್ಕನೇ ವಯಸ್ಸಿನಲ್ಲಿಯೇ ಅವರು ಆಳವಾಗಿ ಧ್ಯಾನದಲ್ಲಿ ಕುಳಿತ್ತಿರುವುದನ್ನು ಕಾಣಬಹುದಿತ್ತು. ‘ನನಗೆ ಎಲ್ಲೆಡೆಯೂ ಕುಟುಂಬದವರಿದ್ದಾರೆ. ಜನರು ನನಗಾಗಿ ಕಾಯುತ್ತಿದ್ದಾರೆ,’ ಎಂದು ಅವರು ತಮ್ಮ ಬಾಲ್ಯದಲ್ಲೇ ಹೇಳುತ್ತಿದ್ದರಂತೆ.

ಕರ್ನಾಟಕದ ಶಿವಮೊಗ್ಗದಲ್ಲಿ ಹತ್ತು ದಿನಗಳ ಕಾಲ ಮೌನವ್ರತವನ್ನು ಮಾಡುತ್ತಿದ್ದ ಸಮಯದಲ್ಲಿ ‘ಸುದರ್ಶನ ಕ್ರಿಯೆ’ ಎಂಬ ಪ್ರಬಲವಾದ ಉಸಿರಾಟದ ಪ್ರಕ್ರಿಯೆ ಅವರಿಗೆ ಗೋಚರಿಸಿತು. ಇದಾದ ಕೆಲವೇ ದಿನಗಳಲ್ಲಿ ಜಗತ್ತಿನ ನಾನಾ ಭಾಗಗಳಿಂದ ಸಾಧಕರು ಅವರ ಬಳಿಗೆ ಬಂದು ಸುದರ್ಶನ ಕ್ರಿಯೆಯ ಆಳವಾದ ಅನುಭವವನ್ನು ಪಡೆಯಲು ಆರಂಭಿಸಿದರು. 1983ರಲ್ಲಿ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಮೊದಲ ಆರ್ಟ್ ಆಫ್ ಲಿವಿಂಗ್ ಕೋರ್ಸ್ ನಡೆಸಿದ ನಂತರ ಗುರುದೇವರು 1986ರಲ್ಲಿ ಉತ್ತರ ಅಮೆರಿಕ ಪ್ರವಾಸ ಕೈಗೊಂಡರು. ಇಂದು ಈ ಯಾತ್ರೆ 180 ದೇಶಗಳಿಗೆ ವಿಸ್ತರಿಸಿ, 80 ಕೋಟಿಗಿಂತಲೂ ಹೆಚ್ಚು ಜನರು ಗುರುದೇವರಿಂದ ಧ್ಯಾನದ ಅಮೂಲ್ಯ ಕೊಡುಗೆಯನ್ನು ಪಡೆದಿದ್ದಾರೆ.

ಬೆಂಗಳೂರು ಮೂಲದ 44 ವರ್ಷದ ಒಬ್ಬ ವಾಣಿಜ್ಯ ಪದವೀಧರ, 18 ವರ್ಷಗಳ ಯಶಸ್ವೀ ವೃತ್ತಿಜೀವನದ ನಂತರ, ಕೆಲವು ಆರ್ಥಿಕವಾದ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡ ಕಾರಣ, ಭೀಕರವಾದ ಆರ್ಥಿಕ ನಷ್ಟಕ್ಕೆ ಒಳಗಾದರು. ‘ನಾನು ಇಲ್ಲದಿದ್ದರೆ ನನ್ನ ಕುಟುಂಬ ಉತ್ತಮವಾಗಿರಬಹುದು ಎಂದು ನನಗೆ ಅನ್ನಿಸುತ್ತಿತ್ತು’ ಎಂದು ಅವರು ಹೇಳಿಕೊಂಡರು. ಆರ್ಟ್ ಆಫ್ ಲಿವಿಂಗ್‌ನಲ್ಲಿ ಕಲಿತ ಧ್ಯಾನ ವಿಧಾನಗಳು ಅವರ ಮನಸ್ಸಿಗೆ ಬಹಳ ಅವಶ್ಯಕವಾಗಿದ್ದ ವಿರಾಮವನ್ನು ನೀಡಿ ಅತಿಯಾಗಿ ಯೋಚಿಸುವ, ಚಿಂತಿಸುವ ಪ್ರವೃತ್ತಿಯಿಂದ ಆಚೆ ಬರಲಿಕ್ಕೆ ಸಹಾಯ ಮಾಡಿದವು. ‘ಧ್ಯಾನದ ಅಭ್ಯಾಸ ಮತ್ತು ಗುರುದೇವರು ನೀಡಿರುವ ಜ್ಞಾನವನ್ನು ಅನುಸರಿಸುವುದರಿಂದ ನನಗೆ, ಜೀವನದಲ್ಲಿ ಮುಂದೆ ಹೋಗುವ ಶಕ್ತಿಯು ಬಂದಿದೆ’ ಎಂದು ಹೇಳುತ್ತಾರೆ. ಇದರಿಂದ ಅವರ ಮನಸ್ಸಿನಲ್ಲಿ ಸ್ಪಷ್ಟತೆ ಹೆಚ್ಚಾಗಿದೆ. ‘ನನ್ನ ಯೋಚನಾ ಕ್ರಮ ಸಂಪೂರ್ಣವಾಗಿ ಬದಲಾಗಿದೆ. ಹಿಂದಿನಂತೆ ಕಳವಳಪಡುವುದನ್ನು ಬಿಟ್ಟು, ಈಗ ಪರಿಸ್ಥಿತಿಯನ್ನು ಸ್ವೀಕರಿಸಿ ಮುಂದೆ ಸಾಗುವ ಮನೋಭಾವ ಬೆಳೆಸಿಕೊಂಡಿದ್ದೇನೆ.’ ಎಂದು ಹೇಳುತ್ತಾರೆ.

ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲದೇ, ಗುರುದೇವರ ಧ್ಯಾನ ಶಿಬಿರಗಳು 65 ದೇಶಗಳ ಜೈಲುಗಳಲ್ಲಿಯೂ ಸಹ ನಡೆಯುತ್ತಿವೆ. ವಿಶ್ವದಾದ್ಯಂತ 8 ಲಕ್ಷಕ್ಕೂ ಹೆಚ್ಚು ಕೈದಿಗಳು ಮತ್ತು ಸಿಬ್ಬಂದಿ ಇದರಿಂದ ಪ್ರಯೋಜನವನ್ನು ಪಡೆದಿದ್ದಾರೆ. ಭಾರತದಲ್ಲೇ 500ಕ್ಕೂ ಹೆಚ್ಚು ಜೈಲುಗಳಲ್ಲಿ ಈ ಕಾರ್ಯಕ್ರಮಗಳು ನಡೆದಿವೆ. ಡಮಾಸ್ಕಸ್ ಜೈಲಿನ ಒಬ್ಬ ಮಹಿಳಾ ಕೈದಿಯು ಧ್ಯಾನ ಮಾಡಿದ ಬಳಿಕ, ‘ಈ ಅನುಭವವು ನನಗೆ ಸಿಗದಿದ್ದರೆ, ನಾನು ಆತ್ಮಹತ್ಯೆ ಮಾಡಿಕೊಂಡುಬಿಡುತ್ತಿದ್ದೆ’ ಎಂದು ಹೇಳಿದರು.

ಕೊರೋನಾ ಸಾಂಕ್ರಾಮಿಕ ರೋಗದ ನಂತರ ಗುರುದೇವರು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ)ಯೊಂದಿಗೆ ಸಂಭಾಷಣೆ ನಡೆಸಿದರು. ಕೊರೋನಾ ನಂತರದ ದಿನಗಳಲ್ಲಿ ಮಾನಸಿಕ ಆರೋಗ್ಯವೇ ಅತಿದೊಡ್ಡ ಸವಾಲಾಗಿ ಹೊರಹೊಮ್ಮಲಿದೆ ಎಂದು ಡಬ್ಲ್ಯೂಎಚ್‌ಒ ಅಭಿಪ್ರಾಯಪಟ್ಟಿತು. ಈ ಮಾನಸಿಕ ಆರೋಗ್ಯದ ಹೊರೆಯ ವಿರುದ್ಧ ಹೋರಾಡಲು ಧ್ಯಾನವು ಅನಿವಾರ್ಯ ಎಂದು ಅವರು ಒಪ್ಪಿಕೊಂಡರು.

ಖಿನ್ನತೆ, ಆತಂಕ, ಒಂಟಿತನ ಮತ್ತು ಒತ್ತಡವು ಮುಗ್ಧ ಜೀವಗಳನ್ನು ಕಸಿದುಕೊಳ್ಳುತ್ತಿರುವ ಇಂದಿನ ಸಮಯದಲ್ಲಿ, ಧ್ಯಾನವು ಒಂದು ಅಭ್ಯಾಸವಾಗಿ, ಜಾಗತಿಕ ಮಟ್ಟದಲ್ಲಿ ಮಾನಸಿಕ ಆರೋಗ್ಯದ ಸವಾಲುಗಳನ್ನು ನಿಭಾಯಿಸಲು ಸಹಾಯ ಮಾಡುತ್ತಿದೆ. ಜನರು ತಮ್ಮ ದೇಹ ಮತ್ತು ಮನಸ್ಸುಗಳನ್ನು ಗುಣಪಡಿಸಿಕೊಂಡು, ಎಲ್ಲವೂ ಕ್ಷಣಿಕವೆಂಬ ಅರಿವಿನೊಂದಿಗೆ ಕಷ್ಟದ ಪರಿಸ್ಥಿತಿಗಳನ್ನು ಮೀರಿ ಸಂತೋಷವಾದ, ಅರ್ಥಪೂರ್ಣವಾದ ಜೀವನವನ್ನು ನಡೆಸುವ ಸಾಮರ್ಥ್ಯ ತಮಗಿದೆ ಎಂದು ಕಂಡುಕೊಳ್ಳಲು ಧ್ಯಾನವು ಸಹಾಯ ಮಾಡುತ್ತಿದೆ.

ವಿಶ್ವ ಧ್ಯಾನ ದಿನವಾದ, ಡಿಸೆಂಬರ್ 21ರಂದು ವಿಶ್ವಪ್ರಸಿದ್ಧ ಮಾನವತಾವಾದಿ ಮತ್ತು ಆಧ್ಯಾತ್ಮಿಕ ಗುರುಗಳಾದ ಗುರುದೇವ್ ಶ್ರೀ ಶ್ರೀ ರವಿ ಶಂಕರ್ ಅವರೊಂದಿಗೆ, ವಿಶ್ವದ ಅತಿದೊಡ್ಡ ಧ್ಯಾನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

PREV
Read more Articles on

Recommended Stories

ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು
ಒಬ್ಬ ವ್ಯಕ್ತಿಯ ಮಾತನ್ನು ದ್ವೇಷಭಾಷಣ ಅಂತ ಹೇಗೆ ಸಾಬೀತು ಮಾಡುತ್ತೀರಿ?