8 ಕಾರಿಡಾರ್‌ಗಳಲ್ಲಿ 197 ಕಿ.ಮೀ ವಿಸ್ತರಿಸುವ ಉದ್ದೇಶದೊಂದಿಗೆ ತುಮಕೂರು, ಬಿಡದಿ, ದೇವನಹಳ್ಳಿಗೆ ಶೀಘ್ರ ಮೆಟ್ರೋ

KannadaprabhaNewsNetwork | Updated : Apr 03 2025, 07:47 AM IST

ಸಾರಾಂಶ

ನೆರೆಯ ಮೂರು ಜಿಲ್ಲೆಗಳು ಸೇರಿ ಈಗಿನ ನಮ್ಮ ಮೆಟ್ರೋವನ್ನು 8 ಕಾರಿಡಾರ್‌ಗಳಲ್ಲಿ 197 ಕಿ.ಮೀ ವಿಸ್ತರಿಸುವ ಉದ್ದೇಶದೊಂದಿಗೆ ಬೆಂಗಳೂರು ಮೆಟ್ರೋ ರೈಲು ನಿಗಮವು ಕಾರ್ಯಸಾಧ್ಯತಾ ಅಧ್ಯಯನ ನಡೆಸುತ್ತಿದ್ದು, ಜುಲೈನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ.

ಮಯೂರ್‌ ಹೆಗಡೆ

 ಬೆಂಗಳೂರು : ನೆರೆಯ ಮೂರು ಜಿಲ್ಲೆಗಳು ಸೇರಿ ಈಗಿನ ನಮ್ಮ ಮೆಟ್ರೋವನ್ನು 8 ಕಾರಿಡಾರ್‌ಗಳಲ್ಲಿ 197 ಕಿ.ಮೀ ವಿಸ್ತರಿಸುವ ಉದ್ದೇಶದೊಂದಿಗೆ ಬೆಂಗಳೂರು ಮೆಟ್ರೋ ರೈಲು ನಿಗಮವು ಕಾರ್ಯಸಾಧ್ಯತಾ ಅಧ್ಯಯನ ನಡೆಸುತ್ತಿದ್ದು, ಜುಲೈನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ.ಸದ್ಯ 76 ಕಿಮೀ ಇರುವ ಮೆಟ್ರೋವನ್ನು ನೆರೆಯ 3 ಜಿಲ್ಲೆಗಳಿಗೆ ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರಿಗೆ ಸಂಪರ್ಕಿಸುವ ಉದ್ದೇಶದಿಂದ ಈ ಅಧ್ಯಯನ ನಡೆಯುತ್ತಿದೆ. ಯೋಜನೆಗೆ ಆಗಬೇಕಾದ ಭೂಸ್ವಾದೀನ, ವೆಚ್ಚ, ಟ್ರಾಫಿಕ್, ನಿಲ್ದಾಣಗಳ ನಿರ್ಮಾಣ ಸೇರಿ ಹಲವು ಅಂಶಗಳು ಇದರಲ್ಲಿ ಸೇರಿರಲಿವೆ. ವರದಿ ಸಲ್ಲಿಕೆ ಬಳಿಕ ಹಣಕಾಸು ಒದಗಿಸುವುದು ಸೇರಿ ಇತರೆ ಅಂತಿಮ ತೀರ್ಮಾನಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಬಿಎಂಅರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

ತುಮಕೂರು:

ಬೆಂಗಳೂರಿನ ದಕ್ಷಿಣದಿಂದ ಉತ್ತರಕ್ಕೆ 33 ಕಿಮೀ ವಿಸ್ತರಿಸಿರುವ ಹಸಿರು ಮಾರ್ಗವನ್ನು ತುಮಕೂರಿಗೆ ಕೊಂಡೊಯ್ಯುವ ಅಧ್ಯಯನವೂ ನಡೆದಿದೆ. ಈ ಮಾರ್ಗ ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆಯಿಂದ (ಸಿಲ್ಕ್‌ ಇನ್‌ಸ್ಟಿಟ್ಯೂಟ್‌) ಮಾದಾವರದವರೆಗೂ ರೈಲು ಸಂಚಾರ ನಡೆಸುತ್ತಿದೆ. ಮಾದಾವರದಿಂದ ತುಮಕೂರಿಗೆ ವಿಸ್ತರಣೆ ಮಾಡಲು ಕಳೆದ ವರ್ಷದ ಬಜೆಟ್‌ನಲ್ಲಿಯೂ ಘೋಷಣೆ ಮಾಡಲಾಗಿತ್ತು. ಪ್ರಾಥಮಿಕವಾಗಿ ಈ ಮಾರ್ಗದಲ್ಲಿ 19 ನಿಲ್ದಾಣವನ್ನು ಗುರುತಿಸಲಾಗಿದೆ.

ರಾಮನಗರ:

ಪೂರ್ವ-ಪಶ್ಚಿಮ ಕಾರಿಡಾರ್ 43.49 ಕಿಮೀ ಉದ್ದದ ನೇರಳೆ ಮಾರ್ಗ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ಸದ್ಯ ಕಾರ್ಯಾಚರಣೆ ನಡೆಯುತ್ತಿದೆ. ಈ ಮಾರ್ಗವನ್ನು ಚಲ್ಲಘಟ್ಟದಿಂದ ಬಿಡದಿ ಕೈಗಾರಿಕಾ ಪ್ರದೇಶಕ್ಕೆ ವಿಸ್ತರಿಸಿದರೆ ಈ ಭಾಗದ ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ಹೆಚ್ಚು ಅನುಕೂಲ ಆಗಲಿದೆ. ಇಲ್ಲಿ ಜಾಗತಿಕ ಮಟ್ಟದ ಟೊಯೋಟಾ ಸೇರಿದಂತೆ ಹಲವು ಕಂಪನಿಗಳಿವೆ.

ಬೆಂ.ಗ್ರಾಮಾಂತರ:

ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದಂತೆ ನಿರ್ಮಾಣ ಹಂತದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗವನ್ನು (2-ಬಿ) ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಗೆ ವಿಸ್ತರಿಸುವ ಯೋಜನೆ ಕೂಡ ಇದರಲ್ಲಿ ಸೇರಿದೆ. ಇದರಿಂದ ಈ ಭಾಗದ ರಿಯಲ್‌ ಎಸ್ಟೇಟ್‌ ಉದ್ಯಮದ ಮೌಲ್ಯ ಮತ್ತಷ್ಟು ಹೆಚ್ಚುವ ಸಾಧ್ಯತೆ ಹೆಚ್ಚಾಗಿದೆ. ಇದರ ಜೊತೆಗೆ ಕಾರ್ಯಾರಂಭಕ್ಕೆ ಸಿದ್ಧವಾಗಿರುವ ಎಲೆಕ್ಟ್ರಾನಿಕ್‌ ಸಿಟಿಯ ಹಳದಿ ಕಾರಿಡಾರ್‌ (19.15ಕಿಮೀ) ಆರ್‌.ವಿ ರಸ್ತೆ - ಬೊಮ್ಮಸಂದ್ರ ಮಾರ್ಗವನ್ನು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ವಿಸ್ತರಿಸಲು ಅಧ್ಯಯನ ನಡೆದಿದೆ. ಇದರಿಂದ ಇನ್ನಷ್ಟು ಕೈಗಾರಿಕಾ ಪ್ರದೇಶಕ್ಕೆ ಅನುಕೂಲವಾಗಲಿದೆ. ಇದೇ ಮಾರ್ಗವನ್ನು ಹೊಸೂರಿಗೆ ವಿಸ್ತರಿಸಿ ತಮಿಳುನಾಡಿಗೆ ಸಂಪರ್ಕಿಸುವಂತೆ ಚೆನ್ನೈ ಮೆಟ್ರೋ ರೈಲ್‌ ಲಿ. ನಿಂದ ಪ್ರಸ್ತಾಪ ಇದೆ. ಹಾಗೂ ಕೆ.ಆರ್.ಪುರಂನಿಂದ ಹೊಸಕೋಟೆ, ಕಡಬಗೆರೆಯಿಂದ ತಾವರೆಕೆರೆಗೆ ಸಂಪರ್ಕಿಸುವ ಯೋಜನೆ ಇದೆ.

2 ಪ್ಯಾಕೇಜ್‌ನಲ್ಲಿ ವರದಿ ಸಲ್ಲಿಕೆ:

ಮೆಟ್ರೋ ವಿಸ್ತರಣೆ ಸಂಬಂಧ ಸರ್ಕಾರಕ್ಕೆ 2 ಪ್ಯಾಕೇಜ್‌ನಲ್ಲಿ ವರದಿ ಸಲ್ಲಿಕೆ ಆಗಲಿದೆ. ಮೊದಲ ಪ್ಯಾಕೇಜ್‌ನಲ್ಲಿ ಮೂರು ಕಾರಿಡಾರ್‌ಗಳ ಚಲ್ಲಘಟ್ಟ-ಬಿಡದಿ, ಸಿಲ್ಕ್ ಇನ್‌ಸ್ಟಿಟ್ಯೂಟ್‌-ಹಾರೋಹಳ್ಳಿ ಮತ್ತು ಬೊಮ್ಮಸಂದ್ರ-ಅತ್ತಿಬೆಲೆ ಮಾರ್ಗದ ವರದಿ ಇರಲಿದೆ. 2ನೇ ಪ್ಯಾಕೇಜ್‌ನಲ್ಲಿ ಕಾಳೇನ ಅಗ್ರಹಾರದಿಂದ (ಗೊಟ್ಟಿಗೆರೆ) ಜಿಗಣಿ-ಆನೇಕಲ್‌- ಅತ್ತಿಬೆಲೆ- ಸರ್ಜಾಪುರ-ವರ್ತೂರು- ಕಾಡುಗೋಡಿ ವೃಕ್ಷ ಉದ್ಯಾನ ಮಾರ್ಗದ ಕುರಿತು ಬಿಎಂಆರ್‌ಸಿಎಲ್‌ ವರದಿ ಸಲ್ಲಿಸಲಿದೆ. ಹೈದರಾಬಾದ್‌ ಮೂಲದ ಆರ್‌.ವಿ.ಅಸೋಸಿಯೇಟ್ಸ್‌ ಆರ್ಕಿಟೆಕ್ಟ್ ಎಂಜಿನಿಯರ್ಸ್‌ ಮತ್ತು ಕನ್ಸಲ್ಟೆಂಟ್ಸ್‌ ಪ್ರೈವೆಟ್‌ ಲಿಮಿಟೆಡ್‌ ಕಾರ್ಯಸಾಧ್ಯತಾ ಅಧ್ಯಯನ ಕೈಗೊಂಡಿವೆ. 

ಮಾರ್ಗಕಿ.ಮೀ

ಮಾದವಾರ- ತುಮಕೂರು 52 

ಚಲ್ಲಘಟ್ಟ - ಬಿಡದಿ (ರಾಮನಗರ ಜಿಲ್ಲೆ)15 

ಸಿಲ್ಕ್ ಇನ್‌ಸ್ಟಿಟ್ಯೂಟ್‌ - ಹಾರೋಹಳ್ಳಿ (ಕನಕಪುರ)24 

ಕಾಳೇನ ಅಗ್ರಹಾರ - ಕಾಡುಗೋಡಿ ಟ್ರೀ ಪಾರ್ಕ್68 

ಬೊಮ್ಮಸಂದ್ರ - ಅತ್ತಿಬೆಲೆ11 

ಕಡಬಗೆರೆ - ತಾವರೆಕೆರೆ(3ನೇ ಹಂತದ ವಿಸ್ತರಣೆ)6 

ದೊಡ್ಡಜಾಲ - ದೇವನಹಳ್ಳಿ6 

ಕೆ.ಆರ್.ಪುರಂ - ಹೊಸಕೋಟೆ15.8

Share this article