ಪ್ರಧಾನಿ ಮೋದಿ ಸೆಳೆದ ಮೈಸೂರಿನ ಬಕಾಹು ವಿದೇಶದಲ್ಲಿ ಜನಪ್ರಿಯ : ಇಲ್ಲಿದೆ ನವೀನ್ ಯಶೋಗಾಥೆ!

Published : Jul 18, 2025, 01:50 PM IST
bakahu

ಸಾರಾಂಶ

ವೀಕೆಂಡ್ ಕೃಷಿಕನೀಗ ವಾರ್ಷಿಕ ಎರಡೂವರೆ ಕೋಟಿ ರುಪಾಯಿ ವಹಿವಾಟು ನಡೆಸುವ ಉದ್ಯಮಿ ಆಗಿ ಬೆಳೆದಿದ್ದಾರೆ. ಇವರ ಆಹಾರ ಉತ್ಪನ್ನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಗುರುತಿಸಿ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ಎಂಬಿಎ ಮುಗಿಸಿ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯಾದರೂ ಕೃಷಿ ಮೇಲಿನ ಇವರ ಪ್ರೀತಿ ಹೆಚ್ಚಾಯಿತೇ ಹೊರತು ಕಮ್ಮಿಯಾಗಲಿಲ್ಲ. ಪ್ರತಿ ವಾರಂತ್ಯದಲ್ಲಿ ಬೆಂಗಳೂರಿಂದ ಮೈಸೂರಿನ ಹುಣಸೂರು ತಲುಪಿ. ಅಲ್ಲೇ ರತ್ನಪುರಿಯಲ್ಲಿರುವ ತನ್ನ ತೋಟದಲ್ಲಿ ಕಳೆಯೋದೇ ಇವರ ಅತಿ ನೆಚ್ಚಿನ ಹವ್ಯಾಸ. ಅಭ್ಯಾಸ. ಈ ವೀಕೆಂಡ್ ಕೃಷಿಕನೀಗ ವಾರ್ಷಿಕ ಎರಡೂವರೆ ಕೋಟಿ ರುಪಾಯಿ ವಹಿವಾಟು ನಡೆಸುವ ಉದ್ಯಮಿ ಆಗಿ ಬೆಳೆದಿದ್ದಾರೆ. 

ಇವರ ಆಹಾರ ಉತ್ಪನ್ನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಗುರುತಿಸಿ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಈ ವೀಕೆಂಡ್ ಕೃಷಿಕ ಉದ್ಯಮಿಯಾಗಿ ಬದಲಾಗಲು ಕಾರಣವಾಗಿದ್ದು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ಯೋಜನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಮೂಲಕ ಜಾರಿಗೊಳಿಸುತ್ತಿರುವ ಈ ಯೋಜನೆಯ ರಾಜ್ಯದ ಮೊದಲ ಫಲಾನುಭವಿ ಮೈಸೂರಿನ ನವೀನ್ ಎಚ್.ಎಂ. ಇವರ ಅಭಯ್ ನ್ಯಾಚುರಲ್ ಫುಡ್ ಪ್ರೊಸೆಸಿಂಗ್ ಯೂನಿಟಿನ ಉತ್ಪನ್ನಗಳು ಈಗ ವಿದೇಶದಲ್ಲೂ ಜನಪ್ರಿಯಗೊಂಡಿವೆ.

ಕೈ ಹಿಡಿದ ಬಾಳೆ ಕಾಯಿ ಹುಡಿ: ಅಭಯ್ ನ್ಯಾಚುರಲ್ ಫುಡ್ಸ್‌ನ ಅತೀ ಜನಪ್ರಿಯ ಉತ್ಪನ್ನ ಎಂದರೆ ಬಕಾಹು. ಬಕಾಹು ಅಂದ್ರೆ ಬಾಳೆ ಕಾಯಿ ಹುಡಿ ಎಂದರ್ಥ. ಈ ಬಕಾಹು ಅನ್ನು ಮೈದಾಹಿಟ್ಟಿಗೆ ಪರ್ಯಾಯವಾಗಿ ಬಳಸಬಹುದು. ರುಚಿ ಹೆಚ್ಚುವ ಜೊತೆಗೆ ಪೌಷ್ಠಿಕಾಂಶ ಭರಿತವಾಗಿಯೂ ಇದೆ. ಗೋಧಿ ಹಿಟ್ಟು, ಅಕ್ಕಿ ಹಿಟ್ಟಿಗೆ ಬೆರಸಿ ಬಳಸಿದರೆ ಇದರ ರುಚಿ ಹೆಚ್ಚು. ಇದರ ಬಳಕೆ ಈಗಾಗಲೇ ಕರಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಇದನ್ನು ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ ಮೇಲೆ ಇದನ್ನು ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 2012-13ರಿಂದಲೇ ಹುಣಸೂರು ತಾಲೂಕಿನ ರತ್ನಪುರಿಯಲ್ಲಿ 12 ಎಕರೆ ಜಮೀನಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನವೀನ್ ಕುಟುಂಬವು ಕೊರೊನಾ ಸಂದರ್ಭದಲ್ಲಿ ತಮ್ಮ ಕೃಷಿ ಹವ್ಯಾಸಕ್ಕೆ ಉದ್ಯಮದ ರೂಪ ನೀಡಲು ನಿರ್ಧರಿಸಿತು. 40 ಬಗೆಯ ಹಣ್ಣುಗಳ ಅರಣ್ಯವನ್ನೇ ಬೆಳೆಸಿದ್ದಾರೆ. ಅಲ್ಲಿ ಬೆಳೆಯುವ ಹಣ್ಣುಗಳನ್ನು ಸಂಸ್ಕರಿಸಿ ಉತ್ಪನ್ನದ ರೂಪ ನೀಡಿ, ಅದಕ್ಕೆ ಬ್ರ್ಯಾಂಡಿಂಗ್ ಮಾಡೊ ಆಲೋಚನೆ ಕೊರೊನಾ ಕಾಲದಲ್ಲಿ ಬಂತು. ಅದಕ್ಕೆ ಸರಿಯಾಗಿ ಕಪೆಕ್ ಮೂಲಕ ಪ್ರಧಾನಮಂತ್ರಿಗಳ ಕಿರು ಆಹಾರ ಉದ್ದಿಮೆ ಅಭಿವೃದ್ಧಿ ಯೋಜನೆಯ ನೆರವು ದೊರೆತು ಬೃಹತ್ ಉದ್ಯಮವಾಗಿ ಬೆಳೆಯತೊಡಗಿದೆ.

ಪ್ರಾರಂಭದಲ್ಲಿ ₹36 ಲಕ್ಷ ಬಂಡವಾಳ ಹೂಡಲಾಯಿತು. ಇದಕ್ಕೆ ಕಪೆಕ್‌ನಿಂದ ₹15 ಲಕ್ಷ ಸಬ್ಸಿಡಿ ದೊರೆಯಿತು. ಇದಾದ ನಂತರ ಅಗತ್ಯಕ್ಕೆ ತಕ್ಕಂತೆ ಬಂಡವಾಳ ಹೆಚ್ಚಿಸಲಾಗಿದೆ. ಕಳೆದ ವರ್ಷ ₹2.5 ಕೋಟಿ ರುಪಾಯಿ ವಹಿವಾಟು ನಡೆಸಿದ್ದೇವೆ. ಮೈದಾ ಹಿಟ್ಟು ಬಳಕೆ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಆದರೆ ಬಕಾಹು ಬಳಕೆಯಿಂದ ಅಂತಹ ಆರೋಗ್ಯ ಅಡ್ಡ ಪರಿಣಾಮಗಳಿಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಉದ್ಯಮವನ್ನು ಬೆಳೆಸುತ್ತಿದ್ದೇವೆ ಎನ್ನುತ್ತಾರೆ ನವೀನ್ ಎಚ್.ಎಂ. ಮೈಸೂರಿನ ಸಿಎಫ್‌ಟಿಆರ್‌ಐ ಹಾಗೂ ತಮಿಳುನಾಡಿನ ತಿರುಚಿನಾಪಳ್ಳಿಯ ರಾಷ್ಟ್ರೀಯ ಸಂಶೋಧನಾ ಕೇಂದ್ರದಿಂದ ತರಬೇತಿ ಪಡೆದು ಆಹಾರ - ಹಣ್ಣುಗಳ ಸಂಸ್ಕರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೈಸೂರಿನ ಸಿಎಫ್ಟಿಆರ್‌ಐನಲ್ಲಿ ಬಾಳೆ ಬೆಳೆಗಾರರಿಗೆಂದೇ ಸಂಶೋಧನಾ ಕೇಂದ್ರ ಇದೆ. ಅಲ್ಲಿ ಇವರೀಗ ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

100 ಸಿರಿಧಾನ್ಯ, ಹಣ್ಣುಗಳ ಉತ್ಪನ್ನ: ಅಭಯ್ ನ್ಯಾಚುರಲ್ ಫುಡ್ಸ್ ಬ್ರ್ಯಾಂಡಿನಡಿ ಸಿರಿಧಾನ್ಯ ಹಾಗೂ ಹಣ್ಣುಗಳನ್ನು ಬಳಸಿ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್‌ನ ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ಮಿಲೆಟ್ ಅಡ್ಡಾ ಎಂಬ ಅಂಗಡಿ ತೆರೆದಿದ್ದಾರೆ. ಆನ್‌ಲೈನ್‌ನಲ್ಲೂ ಅಭಯ್ ನ್ಯಾಚುರಲ್ ಫುಡ್ ಖರೀದಿಸಲು ಅವಕಾಶವಿದೆ. ಜನಪ್ರಿಯ ಆನ್‌ಲೈನ್ ಖರೀದಿ ತಾಣಗಳಲ್ಲೂ ಉತ್ಪನ್ನಗಳು ಲಭ್ಯವಿದೆ. ಕಳೆದ ವರ್ಷ ಅಮೆರಿಕ ಮತ್ತು ಆಸ್ಟ್ರೇಲಿಯಾಗೆ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಉತ್ಪನ್ನಗಳ ಮಾರುಕಟ್ಟೆ ಮತ್ತು ಬ್ರ್ಯಾಂಡಿಂಗ್‌ಗೆ ಕಪೆಕ್‌ನಿಂದ ತುಂಬಾ ನೆರವಾಗಿದೆ ಎಂದು ನವೀನ್ ಸಂತಸ ವ್ಯಕ್ತಪಡಿಸಿದರು.

ಇವರ ಪತ್ನಿ ಕೆ.ಎಸ್.ವೀಣಾ ಕೂಡ ಇವರ ಜೊತೆಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ.

 ಪ್ರಧಾನಮಂತ್ರಿಗಳ ಕಿರು ಆಹಾರ ಉದ್ದಿಮೆಗಳ ಅಭಿವೃದ್ಧಿ ಯೋಜನೆಯ ಮೈಸೂರು ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ವೀಣಾ ಕೆಲಸ ಮಾಡುತ್ತಿದ್ದಾರೆ. ಈವರೆಗೆ 40 ರಿಂದ 45 ರೈತರಿಗೆ ಬೆಳೆ, ಸಂಸ್ಕರಣೆ ಕುರಿತು ಮಾರ್ಗದರ್ಶನ ಮಾಡಿದ್ದಾರೆ. ಖ್ಯಾತ ಕೃಷಿ ತಜ್ಞ, ಲೇಖಕ ಶ್ರೀ ಪಡ್ರೆ ಅವರ ಮಾರ್ಗದರ್ಶನದಲ್ಲಿ ಸಮಿತಿ ಮಾಡಿಕೊಂಡು ಉಳಿದ ರೈತರನ್ನು ಸಂಘಟಿಸಿ ಕೆಲಸ ಮಾಡುತ್ತಿದ್ದಾರೆ ನವೀನ್. ಅಭಯ್ ನ್ಯಾಚುರಲ್ ಫುಡ್ಸ್ ಉತ್ಪನ್ನಗಳಿಗೆ ಸಂಪರ್ಕಿಸಿ - 9008005521.

PREV
Read more Articles on

Latest Stories

ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ
ಲಾಸಲ್ಲೇ ಲಾಭ ಸೂತ್ರ ಕಂಡುಕೊಂಡ ದಂಪತಿಗೆ ಅಮ್ಮನ ಆಶೀರ್ವಾದ : ಮಜಾ ಉಪ್ಪಿನಕಾಯಿ ಯಶೋಗಾಥೆ!
ನಗರದಲ್ಲಿ ಜಾಹೀರಾತು ಉಪ ವಿಧಿ ಶೀಘ್ರದಲ್ಲಿ ಜಾರಿ : ಬಿಬಿಎಂಪಿ ಅಧಿಸೂಚನೆಗೆ ಹೈಕೋರ್ಟ್‌ ಸಮ್ಮತಿ