ಮೈಸೂರು, ಸಾಂಸ್ಕೃತಿಕ ನಗರಿ. ಓದುವ ಮನಸ್ಸುಗಳಿಗೆ ಇಲ್ಲಿ ಬರವಿಲ್ಲ. ಅನಿವಾರ್ಯತೆಗಳಿಗೆ ಪಕ್ಕಾಗಿ ಪುಸ್ತಕಗಳಿಂದ ಸಖ್ಯ ತೊರೆದುಕೊಂಡ ಮನಸುಗಳಿಗೆ ಅದೇ ವೇದನೆಯನ್ನು ಅನುಭವಿಸಿದ ಸೃಜನಶೀಲ ಮನಸು, ಒಂದು ವೇದಿಕೆ ಒದಗಿಸುವ ಸಂಕಲ್ಪ ಮಾಡಿದಾಗ ಹುಟ್ಟಿದ್ದೇ ʻಕನ್ನಡ ಓದುಗರ ಒಕ್ಕೂಟʼ.
ಕನ್ನಡಪ್ರಭ ವಾರ್ತೆ ಮೈಸೂರು
ಸಾಹಿತ್ಯದ ಪ್ರೀತಿಗೆ ಒಮ್ಮೆ ಬಿದ್ದವರಿಗೆ ಅದರ ಮೋಹದಿಂದ ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಜೀವನದುದ್ದಕ್ಕೂ ಅದರ ಸೆಳೆತ ಇದ್ದೇ ಇರುತ್ತದೆ. ಆದರೆ, ಜೀವನದ ಜಂಜಾಟದಲ್ಲಿ ಸಾಹಿತ್ಯದ ಪ್ರೀತಿ, ಓದಬೇಕೆಂಬ ಹಂಬಲ ಕೆಲವೊಮ್ಮೆ ನಾನಾ ಕಾರಣಗಳಿಗೆ ಹಿಂದೆ ಉಳಿದುಬಿಡುತ್ತದೆ. ಅದರಲ್ಲೂ ಮಹಿಳೆಯರಿಗೆ ನೂರಾರು ಅನಿವಾರ್ಯತೆಗಳು. ಮದುವೆಯಾದ ಮೇಲೆ ಸ್ತ್ರೀಯ ಪ್ರಪಂಚವೇ ಬದಲಾಗುತ್ತದೆ ಮತ್ತು ಹೊಸ ಹೊಸ ಜವಾಬ್ದಾರಿಗಳು ಅವಳನ್ನು ವ್ಯಸ್ತವಾಗಿಸಿ ಹವ್ಯಾಸಗಳಿಂದ ದೂರ ಸರಿಯುವಂತೆ ಮಾಡುತ್ತವೆ. ನಂತರ ಜೀವನದಲ್ಲಿ ಸ್ವಲ್ಪ ಬಿಡುವಾದಾಗ ಓದಿಗೆ ತೆರೆದುಕೊಳ್ಳುವ ಹಂಬಲ ಉಂಟಾಗುತ್ತದೆ, ಓದಿಯಾದಮೇಲೆ ಅದನ್ನು ಸಮಾನ ಮನಸ್ಕರೊಡನೆ ಹಂಚಿಕೊಳ್ಳುವ ಮನಸ್ಸಾಗುತ್ತದೆ. ಅಂತಹ ಹೊತ್ತಿನಲ್ಲಿಯೇ, ಮಹಿಳೆಯರಿಗೆ ಸಂಘ-ಸಮಾಜಗಳು ನೆರವಿಗೆ ಬರುವುದು.
ಮೈಸೂರು, ಸಾಂಸ್ಕೃತಿಕ ನಗರಿ. ಓದುವ ಮನಸ್ಸುಗಳಿಗೆ ಇಲ್ಲಿ ಬರವಿಲ್ಲ. ಅನಿವಾರ್ಯತೆಗಳಿಗೆ ಪಕ್ಕಾಗಿ ಪುಸ್ತಕಗಳಿಂದ ಸಖ್ಯ ತೊರೆದುಕೊಂಡ ಮನಸುಗಳಿಗೆ ಅದೇ ವೇದನೆಯನ್ನು ಅನುಭವಿಸಿದ ಸೃಜನಶೀಲ ಮನಸು, ಒಂದು ವೇದಿಕೆ ಒದಗಿಸುವ ಸಂಕಲ್ಪ ಮಾಡಿದಾಗ ಹುಟ್ಟಿದ್ದೇ ʻಕನ್ನಡ ಓದುಗರ ಒಕ್ಕೂಟʼ.
ಶುಭಾ ಸಂಜಯ್ ಅರಸ್ ಮೈಸೂರಿನವರು. ಅವರು ಹುಟ್ಟಿದ್ದು ಬೆಳೆದಿದ್ದು, ಓದಿದ್ದು ಎಲ್ಲ ಮೈಸೂರಿನಲ್ಲಿಯೇ. ಉನ್ನತ ಶಿಕ್ಷಣ, ನಂತರ ಮದುವೆಯ ಕಾರಣದಿಂದಾಗಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಹಳ ವರ್ಷಗಳನ್ನು ಶುಭಾ ಕಳೆಯಬೇಕಾಗಿ ಬಂದಿತು. ದೂರದ ತಮಿಳು ನಾಡಿನಲ್ಲಿದ್ದರೂ ಮೈಸೂರು ಮತ್ತು ಕನ್ನಡ ಅವರ ಮನಸಿನಿಂದ ದೂರವಾಗಿರಲಿಲ್ಲ. ಆ ತುಡಿತವೇ ಅವರನ್ನು ಶಾಶ್ವತವಾಗಿ ಮೈಸೂರಿಗೆ ಸ್ಥಳಾಂತರಗೊಳ್ಳುವಂತೆ ಮಾಡಿತು.
ಮೈಸೂರಿಗೆ ಬಂದ ಮೇಲೆ, ಮೂಲತಃ ಓದುಗರಾಗಿದ್ದ ಶುಭಾ ಅವರಿಗೆ ತನ್ನಂತೆಯೇ ಓದುವ ಹವ್ಯಾಸವುಳ್ಳವರೊದಿಗೆ ಸೇರಬೇಕು, ಬೆರೆಯಬೇಕು, ಚರ್ಚೆ ಮಾಡಬೇಕು ಎನಿಸಿದಾಗ ಹುಟ್ಟಿದ ಪರಿಕಲ್ಪನೆಯೇ, ಮೈಸೂರು ಕನ್ನಡ ಓದುಗರ ಒಕ್ಕೂಟʼದ್ದು. 2010ರಲ್ಲಿ 5-6 ಜನ ಸದಸ್ಯೆಯರಿಂದ ಪ್ರಾರಂಭವಾದ ಒಕ್ಕೂಟದಲ್ಲಿ ತಿಂಗಳಿಗೊಂದರಂತೆ ಪುಸ್ತಕ ಓದುವ ಸಂಪ್ರದಾಯ ಪ್ರಾರಂಭವಾಯಿತು. ನಂತರ ನಿಧಾನವಾಗಿ ಓದಿನ ಪ್ರೀತಿಯುಳ್ಳ ಮಹಿಳೆಯರು ಸೇರುತ್ತಾ, ಬಳಗ ದೊಡ್ಡದಾಗಿ ಬೆಳೆದು, ಇಂದು 100ಕ್ಕೂ ಹೆಚ್ಚು ಸಕ್ರಿಯ ಸದಸ್ಯರನ್ನೊಳಗೊಂಡಿದೆ.
ಶುಭ ಸಂಜಯ್ ಅರಸ್ ರ ನೇತೃತ್ವದಲ್ಲಿ ಇರುವ ಈ ಒಕ್ಕೂಟದ ವಿಶೇಷತೆ ಎಂದರೆ, ಇಲ್ಲಿ ಪದಾಧಿಕಾರಿಗಳೇ ಇಲ್ಲ! ಇಲ್ಲಿ ಶುಭ ಸಂಜಯ್ ಅರಸ್ ಅಧ್ಯಕ್ಷತೆಯಲ್ಲಿ ಎಲ್ಲ ಸದಸ್ಯರೂ ಒಟ್ಟಾಗಿ ಏನೇ ಜವಾಬ್ದಾರಿ ಇದ್ದರೂ ಸಮಾನವಾಗಿ ಹಂಚಿಕೊಂಡು ನಿರ್ವಹಿಸುತ್ತಾರೆ.
ಪುಸ್ತಕದ ಆಯ್ಕೆಯನ್ನು ಮಾಡಲು 5 ಜನರ ಒಂದು ಸಮಿತಿ, ಎಲ್ಲರ ಅಭಿಪ್ರಾಯಗಳನ್ನು ಮನ್ನಿಸಿ ಪುಸ್ತಕವನ್ನು ಆರಿಸಲಾಗುತ್ತದೆ.
ಪುಸ್ತಕಗಳ ಆಯ್ಕೆ ಬಹು ವಿಶಿಷ್ಟವಾಗಿರುತ್ತದೆ. ಕಾವ್ಯ, ನಾಟಕ, ಕಾದಂಬರಿ, ಪ್ರಬಂಧ ಸಂಕಲನ, ಅನುವಾದ ಹೀಗೆ ಎಲ್ಲ ಪ್ರಕಾರಗಳ ಪುಸ್ತಕಗಳನ್ನು ಇಲ್ಲಿನ ಸದಸ್ಯರು ಓದುತ್ತಾರೆ. ಲೇಖಕರ ಆಯ್ಕೆಯ ವಿಷಯ ಬಂದಾಗಲೂ ಇಲ್ಲಿ ಅದೇ ನಿಷ್ಪಕ್ಷಪಾತ ಧೋರಣೆ. ಕುವೆಂಪು ,ಬೇಂದ್ರೆ, ಮಾಸ್ತಿ, ಕಾರಂತ, ಕಾರ್ನಾಡ್, ನಾಗತಿಹಳ್ಳಿ ಚಂದ್ರಶೇಖರ್, ರಹಮತ್ ತರೀಕೆರೆ, ಜೋಗಿ, ವಸುಧೇಂದ್ರ, ವಿವೇಕ ಶಾನುಭಾಗ, ಬಾನು ಮುಷ್ತಾಕ್, ಕಾಯ್ಕಿಣಿ, ಕೆ ಎನ್ ಗಣೇಶಯ್ಯ, ತ್ರಿವೇಣಿ, ನೇಮಿಚಂದ್ರ, ವಸುಮತಿ ಉಡುಪ, ವೈದೇಹಿ ಇನ್ನೂ ಮುಂತಾದ ಪ್ರಸಿದ್ಧ ಲೇಖಕರಲ್ಲದೆ, ಹೊಸ ತಲೆಮಾರಿನ ಪ್ರಸನ್ನ ಸಂತೇಕಡೂರು, ಎಂ.ಬಿ. ಜವರಾಜ್, ಕುಸುಮಾ ಆಯರಹಳ್ಳಿ, ಅಲಕಾ ಕಟ್ಟೆಮನೆ, ಉಷಾ ನರಸಿಂಹನ್ ಹಾಗೂ ಇನ್ನೂ ಮುಂತಾದ ಲೇಖಕರ ಪುಸ್ತಕಗಳನ್ನು ಓದಿ ಚರ್ಚೆ ಮಾಡಲಾಗಿದೆ.
ಪುಸ್ತಕದ ಓದಿನ ಜೊತೆಗೆ, ಕನ್ನಡ ಓದುಗರ ಒಕ್ಕೂಟದ ವತಿಯಿಂದ ಪ್ರತಿವರ್ಷ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಮಹಿಳೆಯರಿಗಾಗಿ ಮಹಿಳೆಯರ ಮಾಸ ಮಾರ್ಚ್ ನಲ್ಲಿ ರಸಪ್ರಶ್ನೆ ಸ್ಫರ್ಧೆಯನ್ನು ನಡೆಸಲಾಗುತ್ತದೆ. ಮೈಸೂರು ಮಾತ್ರವಲ್ಲದೆ, ಮಂಡ್ಯ, ನಂಜನಗೂಡು, ಕೆ.ಆರ್.ನಗರ, ಹುಣಸೂರು, ಚಾಮರಾಜನಗರದಿಂದಲೂ ಸ್ಫರ್ಧಿಗಳು ಬಂದು ಪಾಲ್ಗೊಳ್ಳುತ್ತಾರೆ.
ಪ್ರತಿ ವರ್ಷ ಜುಲೈನಲ್ಲಿ ನಡೆಯುವ ಮೈಸೂರು ಲಿಟರೇಚರ್ ಫೆಸ್ಟಿವಲ್- ಮೈಸೂರು ಸಾಹಿತ್ಯ ಸಂಭ್ರಮ ಓದುಗರ ಒಕ್ಕೂಟದ ಅತಿ ದೊಡ್ಡ ಕಾರ್ಯಕ್ರಮ. ಈ ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ಇಡೀ ಕರ್ನಾಟಕದಾದ್ಯಂತದಿಂದ ಸಾಹಿತ್ಯಾಸಕ್ತರು ಭಾಗವಹಿಸುತ್ತಾರೆ. 2026ರಲ್ಲಿ ಮೈಸೂರು ಸಾಹಿತ್ಯ ಸಂಭ್ರಮಕ್ಕೆ ದಶಮಾನೋತ್ಸವದ ಗರಿ!
ಇದೀಗ ಕನ್ನಡ ಓದುಗರ ಒಕ್ಕೂಟಕ್ಕೆ 15 ವರುಷಗಳು ತುಂಬಿದ ಸಂಭ್ರಮ. ಹೊಸ ಹೊಸ ಸದಸ್ಯರು ಸೇರ್ಪಡೆಯಾಗುತ್ತಾ ಒಕ್ಕೂಟ ಬೆಳೆಯುತ್ತಿದೆ. ಹಾಗೆಯೇ ಇದರ ಚಟುವಟಿಕೆಗಳೂ ವಿಸ್ತಾರಗೊಳ್ಳುತ್ತಿದೆ. ಇನ್ನೂ ಈ ಒಕ್ಕೂಟ ಹೀಗೆಯೇ ಬೆಳೆಯಲಿ, ಕನ್ನಡ ಸಾಹಿತ್ಯದ ಕಂಪನ್ನು ಪಸರಿಸುತ್ತಲೇ ಇರಲಿ ಎಂಬುದು ಇದರ ಎಲ್ಲ ಸದಸ್ಯೆಯರ ಆಶಯ.