ದಿಲ್ಲಿ-ಮೇರಠ್ ಮಾರ್ಗದ ಸಾಹಿಬಾಬಾದ್-ದುಹೈ ನಡುವೆ ರೈಲು ಆರಂಭ. ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಾಗಬಲ್ಲ ‘ನಮೋ ಭಾರತ್’ ರೈಲು ರೈಲಿನಲ್ಲಿ ಸಂಚರಿಸಿ ಪ್ರಯಾಣಿಕರೊಂದಿಗೆ ಹರಟೆ ಹೊಡೆದ ಮೋದಿ 2025ಕ್ಕೆ ದಿಲ್ಲಿ-ಮೇರಠ್ ನಡುವಿನ ಸಂಪೂರ್ಣ ಮಾರ್ಗ ಕಾರ್ಯಾರಂಭ ಮಾರ್ಗ ಸಂಪೂರ್ಣ ಆರಂಭವಾದಾಗ ನಾನು ಮತ್ತೆ ಬರುವೆ: ಮೋದಿ ಇಂದು ಆರ್‌ಆರ್‌ಟಿಎಸ್ ರೈಲಿನ ಮೊದಲ ಹಂತದ ರೈಲಿಗೆ ನಾನು ಹಸಿರು ನಿಶಾನೆ ತೋರಿಸಿದ್ದೇನೆ. ಇನ್ನು 18 ತಿಂಗಳಲ್ಲಿ ದಿಲ್ಲಿ- ಮೇರಠ್ ನಡುವಿನ ಪೂರ್ಣ ಆರ್‌ಆರ್‌ಟಿಎಸ್ ಮಾರ್ಗ ಕಾರ್ಯಾರಂಭ ಮಾಡಲಿದ್ದು, ಆ ವೇಳೆಯೂ ನಾನು ನಿಮ್ಮೊಂದಿಗೆ ಇರುವೆ. ನರೇಂದ್ರ ಮೋದಿ, ಪ್ರಧಾನಿ ಪಿಟಿಐ ಸಾಹಿಬಾಬಾದ್ (ಉ.ಪ್ರ) ಭಾರತದ ಮೊದಲ ಸೆಮಿ-ಹೈಸ್ಪೀಡ್ ಪ್ರಾದೇಶಿಕ ರೈಲು ಸೇವೆ ಎನ್ನಿಸಿಕೊಂಡಿರುವ ‘ಪ್ರಾದೇಶಿಕ ತ್ವರಿತ ಸಾರಿಗೆ ವ್ಯವಸ್ಥೆ’ (ಆರ್‌ಆರ್‌ಟಿಎಸ್) ರೈಲು ಕಾರಿಡಾರ್‌ನ 17 ಕಿ.ಮೀ. ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದರು ಮತ್ತು ಮೊದಲ ‘ನಮೋ ಭಾರತ್’ ರೈಲಿನಲ್ಲಿ ಸವಾರಿ ಮಾಡಿದರು. ದಿಲ್ಲಿ ಗಡಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶದ ಸಾಹಿಬಾಬಾದ್ ಮತ್ತು ದುಹೈ ಡಿಪೋ ನಿಲ್ದಾಣಗಳನ್ನು ಸಂಪರ್ಕಿಸುವ ರೈಲಿಗೆ ಮೋದಿ ಹಸಿರು ಬಾವುಟ ತೋರಿಸಿದರು. ಈ ಮೂಲಕ ಆರ್‌ಆರ್‌ಟಿಎಸ್ ವ್ಯವಸ್ಥೆಯನ್ನು ಇದೇ ಮೊದಲ ಬಾರಿ ಭಾರತಕ್ಕೆ ಪರಿಚಯಿಸಿದರು. ಈ ಕಾರಿಡಾರ್‌ನಲ್ಲಿ ಚಲಿಸುವ ರೈಲುಗಳು ಗಂಟೆಗೆ ಗರಿಷ್ಠ 180 ಕಿಮೀ ವೇಗದಲ್ಲಿ ಚಲಿಸಬಹುದು. ಮೋದಿ ರೈಲು ನಿಲ್ದಾಣದೊಳಗೆ ಪ್ರವೇಶಿಸಲು ಯುಪಿಐ ಪಾವತಿ ವಿಧಾನ ಬಳಸಿಕೊಂಡು ಸ್ಮಾರ್ಟ್ ಕಾರ್ಡ್ ಖರೀದಿಸಿದರು. ಇದೇ ವೇಳೆ, ನಿಲ್ದಾಣದಲ್ಲಿನ ವಸ್ತುಪ್ರದರ್ಶನವನ್ನೂ ವೀಕ್ಷಿಸಿದರು. ಮೊದಲ ''''ನಮೋ ಭಾರತ್'''' ರೈಲಿಗೆ ಫ್ಲ್ಯಾಗ್‌ಆಫ್ ಮಾಡಿದ ನಂತರ, ಮೋದಿ ಅವರು ಸಾಹಿಬಾಬಾದ್‌ನಿಂದ ರೈಲು ಏರಿ ಗುಲ್ಧರ್‌ಗೆ ಪ್ರಯಾಣಿಸಿದರು. ಪ್ರಯಾಣದ ಸಮಯದಲ್ಲಿ, ಅವರು ಕೆಲವು ಶಾಲಾ ವಿದ್ಯಾರ್ಥಿಗಳು ಮತ್ತು ರೈಲಿನ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ನಂತರ ಸಾಹಿಬಾಬಾದ್ ನಿಲ್ದಾಣಕ್ಕೆ ಹಿಂತಿರುಗಿ ಅಲ್ಲಿಂದ ನಿರ್ಗಮಿಸಿದರು. ಸಾಹಿಬಾಬಾದ್ ಮತ್ತು ದುಹೈ ಡಿಪೋ ನಡುವಿನ ಆದ್ಯತೆಯ ವಿಭಾಗವು 5 ನಿಲ್ದಾಣಗಳನ್ನು ಹೊಂದಿದೆ. ಅವು: ಸಾಹಿಬಾಬಾದ್, ಗಾಜಿಯಾಬಾದ್, ಗುಲ್ಧರ್, ದುಹೈ ಮತ್ತು ದುಹೈ ಡಿಪೋ. ದೆಹಲಿ-ಗಾಜಿಯಾಬಾದ್-ಮೇರಠ್ ಆರ್‌ಆರ್‌ಟಿಎಸ್ ಕಾರಿಡಾರ್ ಒಮ್ಮೆ ಸಂಪೂರ್ಣವಾಗಿ ಪೂರ್ಣಗೊಂಡರೆ ದೆಹಲಿ ಮತ್ತು ಮೀರಠ್ ನಡುವಿನ 83 ಕಿ.ಮೀ. ಪ್ರಯಾಣದ ಸಮಯ ಕೇವಲ 1 ಗಂಟೆ ಆಗಲಿದೆ. ಈಗ ಸುಮಾರು 2.30 ಗಂಟೆ ಬೇಕು. ಈ ಸಂಪೂರ್ಣ ಮಾರ್ಗ 2025ಕ್ಕೆ ಆರಂಭವಾಗುವ ನಿರೀಕ್ಷೆಯಿದೆ. 30,000 ಕೋಟಿ ರು. ವೆಚ್ಚದಲ್ಲಿ ಸಿದ್ಧವಾಗುತ್ತಿದೆ. ಅ.21ರಿಂದ ಸೇವೆಗೆ: ಭಾರತದ ಮೊದಲ ಸೆಮಿ-ಹೈಸ್ಪೀಡ್ ಪ್ರಾದೇಶಿಕ ರೈಲು ಸೇವೆ ಎನ್ನಿಸಿಕೊಂಡಿರುವ ಆರ್‌ಆರ್‌ಟಿಎಸ್, ಹೈಟೆಕ್ ವೈಶಿಷ್ಟ್ಯಗಳು ಮತ್ತು ಹಲವಾರು ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದ್ದು ರೈಲುಗಳು ಅ.21 ರಿಂದ ಜನರಿಗೆ ತೆರೆಯಲ್ಪಡುತ್ತವೆ. ನಿತ್ಯ ಬೆಳಗ್ಗೆ 6ರಿಂದ ರಾತ್ರಿ 11 ಗಂಟೆಯವರೆಗೆ ಸಂಚರಿಸಲಿವೆ.