ಮೆಕಾಲೆ ಶಿಕ್ಷಣ ನಿರ್ಮೂಲನಕ್ಕೆ ಎನ್‌ಇಪಿ ಜಾರಿ : ಮೋದಿ

Published : Nov 21, 2025, 01:15 PM IST
Narendra Modi

ಸಾರಾಂಶ

ಮೆಕಾಲೆ ಶಿಕ್ಷಣ ನಿರ್ಮೂಲನಕ್ಕೆ ಎನ್‌ಇಪಿ ಜಾರಿ-ಜಪಾನ್‌, ಚೀನಾ, ದಕ್ಷಿಣ ಕೊರಿಯಾಗಳು ಹಲವು ಪಾಶ್ಚಿಮಾತ್ಯ ಅಭ್ಯಾಸಗಳನ್ನು ಅಳವಡಿಸಿಕೊಂಡವು. ಆದರೆ ತಮ್ಮತನವನ್ನು ಬಿಟ್ಟು ಅದನ್ನು ಅನುಸರಿಸಲಿಲ್ಲ. ಏನೇ ಆದರೂ ತಮ್ಮ ಮಾತೃಭಾಷೆ ಹಾಗೂ ಸ್ಥಳೀಯ ಭಾಷೆಗಳನ್ನು ಮರೆಯಲಿಲ್ಲ.

 ಜಪಾನ್‌, ಚೀನಾ, ದಕ್ಷಿಣ ಕೊರಿಯಾಗಳು ಹಲವು ಪಾಶ್ಚಿಮಾತ್ಯ ಅಭ್ಯಾಸಗಳನ್ನು ಅಳವಡಿಸಿಕೊಂಡವು. ಆದರೆ ತಮ್ಮತನವನ್ನು ಬಿಟ್ಟು ಅದನ್ನು ಅನುಸರಿಸಲಿಲ್ಲ. ಏನೇ ಆದರೂ ತಮ್ಮ ಮಾತೃಭಾಷೆ ಹಾಗೂ ಸ್ಥಳೀಯ ಭಾಷೆಗಳನ್ನು ಮರೆಯಲಿಲ್ಲ. ನಾವೂ ಇದನ್ನು ನೋಡಿ ಕಲಿತರೆ, ಸ್ವಂತಿಕೆಯನ್ನು ಉಳಿಸಿಕೊಳ್ಳುವುದರ ಜತೆಗೆ, ನಮ್ಮ ಪ್ರವಾಸಿ ತಾಣಗಳನ್ನು ಇನ್ನಷ್ಟು ಮುತುವರ್ಜಿವಹಿಸಿ ಅಭಿವೃದ್ಧಿಪಡಿಸಬಹುದು.

ನರೇಂದ್ರ ಮೋದಿ, ಪ್ರಧಾನಿ

1835ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯನಾಗಿದ್ದ ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆ ಎಂಬಾತ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಹೆಸರಲ್ಲಿ, ಭಾರತೀಯತೆಯನ್ನು ಬೇರು ಸಮೇತ ಕಿತ್ತುಹಾಕುವ ಒಂದು ದೊಡ್ಡ ಅಭಿಯಾನವನ್ನು ಆರಂಭಿಸಿದ್ದ. ಭಾರತೀಯರಂತೆ ಕಾಣುವ, ಆದರೆ ಬ್ರಿಟಿಷ್‌ ಮನಃಸ್ಥಿತಿಯ ಭಾರತೀಯರನ್ನು ಸೃಷ್ಟಿಸುವುದು ಆತನ ಉದ್ದೇಶವಾಗಿತ್ತು. ಇದರ ಈಡೇರಿಕೆಗೆ ಭಾರತೀಯರ ಸ್ವಾವಲಂಬನೆಯನ್ನು ಕುಗ್ಗಿಸಿ ಕೀಳರಿಮೆ ಮೂಡುವಂತೆ ಮಾಡಿದ. ಜತೆಗೆ ವಿದೇಶಿ ವ್ಯವಸ್ಥೆಯೇ ಶ್ರೇಷ್ಠವೆಂದು ನಂಬಿ, ಎಲ್ಲದಕ್ಕೂ ಅತ್ತ ತಿರುಗುವ ಅನಿವಾರ್ಯತೆ ತಂದಿಟ್ಟಿದ್ದ. ಇದಕ್ಕೆ ಅಂತ್ಯ ಹಾಡಿ ಗುಲಾಮಿ ಮನಃಸ್ಥಿತಿಯಿಂದ ಹೊರಬರುವ ಸಮಯವೀಗ ಬಂದಿದೆ. ಈ ನಿಟ್ಟಿನಲ್ಲಿ ನಾವು ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯ ಮೂಲಕ ಹೆಜ್ಜೆಯನ್ನೂ ಇಟ್ಟಾಗಿದೆ. ಇನ್ನು 10 ವರ್ಷದಲ್ಲಿ 200 ವರ್ಷ ಪೂರೈಸಲಿರುವ ಮೆಕಾಲೆ ನೀತಿಗೆ ಮಂಗಳ ಹಾಡುವುದು ನಮ್ಮ ಉದ್ದೇಶ.

ಭಾರತೀಯ ಶಿಕ್ಷಣ ವ್ಯವಸ್ಥೆ ಹೇಗಿತ್ತು?:

ನಮ್ಮ ನೆಲದ ಶಿಕ್ಷಣ ವ್ಯವಸ್ಥೆಯಲ್ಲಿ, ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಲು ಕಲಿಸಲಾಗುತ್ತಿತ್ತು. ಅದನ್ನು ಬರೀ ಜ್ಞಾನಾರ್ಜನೆಗೆ ಸೀಮಿತವಾಗಿರಿಸದೆ, ಕೌಶಲ್ಯಾಭಿವೃದ್ಧಿಗೂ ಮಹತ್ವ ಕೊಡಲಾಗುತ್ತಿತ್ತು. ಜ್ಞಾನ, ವಿಜ್ಞಾನ, ಕಲೆ, ಸಂಸ್ಕೃತಿ ಮತ್ತು ಜೀವನ ವಿಧಾನ ಸೇರಿದಂತೆ ಹಲವು ವಿಷಯಗಳಲ್ಲಿ ಶ್ರೀಮಂತವಾಗಿತ್ತು. ‘ಭಾರತದ ಪುರಾತನ ಶಿಕ್ಷಣ ವ್ಯವಸ್ಥೆ ಒಂದು ಸುಂದರ ವೃಕ್ಷವಾಗಿದೆ’ ಎಂದು ಮಹಾತ್ಮಾ ಗಾಂಧಿ ಅವರು ಹೇಳುತ್ತಿದ್ದರು. ಅಂತೆಯೇ, ‘ಅದನ್ನು ಬ್ರಿಟಿಷ್‌ ವ್ಯವಸ್ಥೆಯಿಂದ ಕಿತ್ತುಹಾಕಲಾಯಿತು’ ಎಂದೂ ಬೇಸರಿಸುತ್ತಿದ್ದರು.

ಮೆಕಾಲೆ ಮಹಾಮೋಸ:

ಶಿಕ್ಷಣ ವ್ಯವಸ್ಥೆ ಸುಧಾರಣೆ ಹೆಸರಲ್ಲಿ ಮೆಕಾಲೆ ಮಾಡಿದ ಮೊದಲ ಕೆಲಸವೆಂದರೆ, ಭಾರತೀಯರ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ಕೊಟ್ಟು ಕೀಳರಿಮೆ ಬೆಳೆಯುವಂತೆ ಮಾಡಿದ. ಬ್ರಿಟಿಷ್‌ ಭಾಷೆ(ಇಂಗ್ಲಿಷ್‌) ಮತ್ತು ಮನಃಸ್ಥಿತಿಯೇ ಶ್ರೇಷ್ಠ ಎಂಬುದನ್ನು ಪ್ರತಿಪಾದಿಸಿದ್ದಲ್ಲದೆ, ದೇಶ ಅಭಿವೃದ್ಧಿ ಹೊಂದಲು ವಿದೇಶಿ ಮಾದರಿಯನ್ನು ಪಾಲಿಸಬೇಕು ಎಂದು ನಂಬಿಸಿದ. ಗಾಂಧೀಜಿಯವರು ಸ್ವದೇಶಿ ಸಿದ್ಧಾಂತವನ್ನು ವ್ಯಾಪಕವಾಗಿ ಪ್ರಚಾರ ಮಾಡಿದರೂ, ಮೆಕಾಲೆಯ ಅಬ್ಬರದ ಮುಂದೆ ಅದು ಮುನ್ನೆಲೆಗೇ ಬರಲಿಲ್ಲ.

ಸ್ವಾತಂತ್ರ್ಯಾನಂತರವೂ ಮುಂದುವರಿಕೆ:

ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ ಸಿಕ್ಕಿತಾದರೂ, ಸೈದ್ಧಾಂತಿಕ ದಾಸ್ಯ ಮುಂದುವರೆಯಿತು. ಉತ್ತಮ ಆಡಳಿತ ಮಾದರಿ, ನಾವೀನ್ಯತೆಗಾಗಿ ನಾವು ವಿದೇಶಗಳ ಕಡೆಗೆ ನೋಡಲಾರಂಭಿಸಿದೆವು. ಪರದೇಶದಿಂದ ಆಮದು ಮಾಡಿದ ಉತ್ಪನ್ನ, ಸೇವೆ, ವಿಚಾರಗಳನ್ನು ಶ್ರೇಷ್ಠವೆಂದು ಪರಿಗಣಿಸಲು ಪ್ರಾರಂಭಿಸಿದೆವು. ಇದು ಇನ್ನೂ ಮುಂದುವರೆದಿದೆ. ಇದರಿಂದ ‘ಮೇಡ್‌ ಇನ್‌ ಇಂಡಿಯಾ’ ಯೋಜನೆಯನ್ನೂ ತಿರಸ್ಕರಿಸಿದಂತಾಗುತ್ತದೆ.

ಪ್ರವಾಸೋದ್ಯಮಕ್ಕೂ ಹೊಡೆತ:

ಒಂದು ದೇಶದ ಪ್ರವಾಸೋದ್ಯಮ ಬೆಳವಣಿಗೆಗೆ, ಅಲ್ಲಿನ ಪರಂಪರೆಯ ಬಗ್ಗೆ ಅಪಾರ ಹೆಮ್ಮೆ ಇರುವುದು ಅತ್ಯಗತ್ಯ. ನಮ್ಮ ಪರಂಪರೆಯ ಬಗ್ಗೆ ನಮಗೇ ಹೆಮ್ಮೆ ಇಲ್ಲದಿದ್ದರೆ, ಅದನ್ನು ಸಂರಕ್ಷಿಸಲು ಯಾವುದೇ ಪ್ರೇರಣೆ ಇರುವುದಿಲ್ಲ. ಹೀಗಾದರೆ, ಪಾರಂಪರಿಕ ತಾಣಗಳು ಬರೀ ಕಲ್ಲು, ಇಟ್ಟಿಗೆಗಳ ರಾಶಿಯಂತೆ ಕಾಣತೊಡಗುತ್ತವೆ.

ಒಮ್ಮೆ ಬೇರೆ ದೇಶಗಳನ್ನು ನೋಡಿ. ಜಪಾನ್‌, ಚೀನಾ, ದಕ್ಷಿಣ ಕೊರಿಯಾಗಳು ಹಲವು ಪಾಶ್ಚಿಮಾತ್ಯ ಅಭ್ಯಾಸಗಳನ್ನು ಅಳವಡಿಸಿಕೊಂಡವು. ಆದರೆ ತಮ್ಮತನವನ್ನು ಬಿಟ್ಟು ಅದನ್ನು ಅನುಸರಿಸಲಿಲ್ಲ. ಏನೇ ಆದರೂ ತಮ್ಮ ಮಾತೃಭಾಷೆ ಹಾಗೂ ಸ್ಥಳೀಯ ಭಾಷೆಗಳನ್ನು ಮರೆಯಲಿಲ್ಲ. ನಾವೂ ಇದನ್ನು ನೋಡಿ ಕಲಿತರೆ, ಸ್ವಂತಿಕೆಯನ್ನು ಉಳಿಸಿಕೊಳ್ಳುವುದರ ಜತೆಗೆ, ನಮ್ಮ ಪ್ರವಾಸಿ ತಾಣಗಳನ್ನು ಇನ್ನಷ್ಟು ಮುತುವರ್ಜಿವಹಿಸಿ ಅಭಿವೃದ್ಧಿಪಡಿಸಬಹುದು.

ಎನ್‌ಇಪಿಯಿಂದ ಸುಧಾರಣೆ:

ಮೆಕಾಲೆ ವ್ಯವಸ್ಥೆ ಜಾರಿಗೆ ಬಂದು 190 ವರ್ಷಗಳಾಗಿವೆ. ಇದಕ್ಕೆ 2035ರಲ್ಲಿ 200 ವರ್ಷ ಪೂರ್ತಿಯಾಗುವುದರೊಳಗೆ ನಾವು ಗುಲಾಮ ಮನೋಭಾವವನ್ನು ಬಿಡಬೇಕು. ಈ ಅವಧಿಯಲ್ಲಿ ಇದೇ ನಮ್ಮ ಗುರಿಯಾಗಿರಬೇಕು ಮತ್ತು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯನೂ ಶ್ರಮಿಸಬೇಕು. ಇದಕ್ಕಾಗಿ ಮುಂದಿನ 10 ವರ್ಷ ನಮಗೆ ಅತ್ಯಮೂಲ್ಯ.

ಸರ್ಕಾರ ಇಂಗ್ಲಿಷ್‌ ಕಲಿಕೆಯ ವಿರೋಧಿಯಲ್ಲ. ಆದರೆ ಸ್ಥಳೀಯ ಭಾಷೆಗಳಿಗೆ ಮಾನ್ಯತೆ, ಸೂಕ್ತ ಸ್ಥಾನಮಾನ ಸಿಗಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕಾಗಿಯೇ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ಜಾರಿಗೆ ತಂದಿದ್ದೇವೆ. ಇದರಡಿಯಲ್ಲಿ ಮಾತೃಭಾಷೆಯಲ್ಲೇ ಕಲಿಕೆಗೆ ಆದ್ಯತೆ ನೀಡಲಾಗುವುದು.

PREV
Read more Articles on

Recommended Stories

ಪುಣೆ ಉತ್ಪಾದನಾ ಘಟಕ ವಿಸ್ತರಣೆಗೆ ಜಿಇ ಏರೋಸ್ಪೇಸ್‌ನಿಂದ 14 ಮಿಲಿಯನ್ ಡಾಲರ್ ಹೂಡಿಕೆ
ಬೆಂಗಳೂರಿನಲ್ಲಿ ಹೊಸ ಗ್ಲೋಬಲ್ ಕೆಪಾಸಿಟಿ ಸೆಂಟರ್ ಉದ್ಘಾಟಿಸಿದ ಡೀಪ್‌ವಾಚ್