ಇ20 ಪೆಟ್ರೋಲ್‌ನಿಂದ ಮೈಲೇಜ್‌ ತಗ್ಗಿದ ದೂರು ಬಂದಿಲ್ಲ

Published : Jul 16, 2026, 01:36 PM IST
Nithin gadkari

ಸಾರಾಂಶ

ನಿಮ್ಮ ಗಾಡಿ ಗ್ಯಾರಂಟಿ ಪಿರಿಯಡ್‌ನಲ್ಲಿದೆ, ವಿಮೆ ಕೂಡ ಇದೆ ಎಂದಾದರೆ ಏನೇ ಸಮಸ್ಯೆ ಆದರೂ ಕಂಪನಿ ಅದಕ್ಕೆ ಹೊಣೆಯಾಗಿರಲಿದೆ. ಮೊದಲು ಆ ಕಂಪನಿಯ ಡೀಲರ್‌ ಬಳಿ ಹೋಗಿ ದೂರು ದಾಖಲಿಸಿ. ಬಳಿಕ ಅದನ್ನು ನನ್ನ (ರಸ್ತೆ ಸಾರಿಗೆ ಮತ್ತು ಹೆದ್ದಾರಿ) ಸಚಿವಾಲಯಕ್ಕೆ ಇ-ಮೇಲ್‌ ಮಾಡಿ.

ನಿಮ್ಮ ಗಾಡಿ ಗ್ಯಾರಂಟಿ ಪಿರಿಯಡ್‌ನಲ್ಲಿದೆ, ವಿಮೆ ಕೂಡ ಇದೆ ಎಂದಾದರೆ ಏನೇ ಸಮಸ್ಯೆ ಆದರೂ ಕಂಪನಿ ಅದಕ್ಕೆ ಹೊಣೆಯಾಗಿರಲಿದೆ. ಮೊದಲು ಆ ಕಂಪನಿಯ ಡೀಲರ್‌ ಬಳಿ ಹೋಗಿ ದೂರು ದಾಖಲಿಸಿ. ಬಳಿಕ ಅದನ್ನು ನನ್ನ (ರಸ್ತೆ ಸಾರಿಗೆ ಮತ್ತು ಹೆದ್ದಾರಿ) ಸಚಿವಾಲಯಕ್ಕೆ ಇ-ಮೇಲ್‌ ಮಾಡಿ. ನಾನು ಅದರ ವಿಚಾರಣೆ ಮಾಡುತ್ತೇನೆ. ಆದರೆ ಈತನಕ ಇಂಥ ಯಾವುದೇ ದೂರುಗಳು ನನ್ನ ಬಳಿ ಬಂದಿಲ್ಲ.

ದೇಶದಲ್ಲಿ ಎಥನಾಲ್‌ ಮಿಶ್ರಿತ ಪೆಟ್ರೋಲ್‌ ಬಳಕೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಇಂಧನದ ಕ್ಷಮತೆ ಬಗ್ಗೆ ಹಲವು ವಾಹನ ಮಾಲೀಕರಿಗೆ ಆತಂಕವೂ ಇದೆ. ಈ ಹಿನ್ನೆಲೆಯಲ್ಲಿ ಎಬಿಪಿ ನ್ಯೂಸ್‌ನ ಪತ್ರಕರ್ತೆ ಜತೆ ಕೇಂದ್ರದ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತನ್‌ ಗಡ್ಕರಿ ಅವರು ಸಂದರ್ಶನದಲ್ಲಿ ವಿವರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

-ಇಷ್ಟು ದಿನ ಮೈಲೇಜ್‌ ಬಗ್ಗೆ ಮಾತನಾಡದವರು, ಕಳೆದ ವಾರ ಇದ್ದಕ್ಕಿದ್ದಂತೆ ಇ20 ಬಳಕೆಯಿಂದ ಅದು ತಗ್ಗುತ್ತದೆ ಎಂದಿದ್ದೇಕೆ?

ನಾನು ಮೈಲೇಜ್‌ ತಗ್ಗುತ್ತದೆ ಎನ್ನಲಿಲ್ಲ. ಬದಲಿಗೆ ಅದರ ಕ್ಯಾಲರಿ ಮೌಲ್ಯದ(ನಿರ್ದಿಷ್ಟ ಪ್ರಮಾಣದ ಇಂಧನವು ಸಂಪೂರ್ಣವಾಗಿ ಉರಿದಾಗ ಬಿಡುಗಡೆಯಾಗುವ ಒಟ್ಟು ಉಷ್ಣ ಶಕ್ತಿಯ ಪ್ರಮಾಣ) ಬಗ್ಗೆ ಮಾತನಾಡಿದ್ದೆ. ನಗರದಲ್ಲಿ ಚಲಿಸುವಾಗ ಆಗಾಗ ಗೇರ್‌ ಬದಲಿಸಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಪೆಟ್ರೋಲ್‌ ಮತ್ತು ಇ20ಯ ಮೈಲೇಜ್‌ ಸರಾಸರಿ ಸಮವಾಗಿರುತ್ತದೆ. ಅದೇ ಹೆದ್ದಾರಿಯಲ್ಲಿ ಗಂಟೆಗೆ 100 ಕಿ.ಮೀ.ನಷ್ಟು ವೇಗದಲ್ಲಿ ಇ20 ಇರುವ ಗಾಡಿ ಓಡುತ್ತಿದ್ದಾಗ ಮೈಲೇಜ್‌ ಕೊಂಚ ಇಳಿಕೆಯಾಗುತ್ತದೆ. ಇದಕ್ಕೆ ಕಾರಣ, ಎಥನಾಲ್‌ನ ಕ್ಯಾಲರಿ ಮೌಲ್ಯ ಕಡಿಮೆ ಇರುತ್ತದೆ.

- ನನ್ನ ಪೆಟ್ರೋಲ್‌ ಗಾಡಿ ಮೊದಲು ಗಂಟೆಗೆ 10 ಕಿ.ಮೀ. ಮೈಲೇಜ್‌ ಕೊಡುತ್ತಿದ್ದು, ಈಗದು 7 ಕಿ.ಮೀ.ಗೆ ಇಳಿದಿದೆ. ಸಮಸ್ಯೆ ಆಗಿದ್ದೆಲ್ಲಿ?

ಮೈಲೇಜನ್ನು ನಾನಾಗಲಿ, ನೀವಾಗಲಿ ಪರೀಕ್ಷಿಸಲು ಆಗದು. ಡೀಲರ್‌ಗಳ ಬಳಿ ಅದಕ್ಕೆಂದೇ ಒಂದು ಉಪಕರಣವಿರುತ್ತದೆ. ಅದರಲ್ಲಿ ಪರೀಕ್ಷೆ ಮಾಡಿಸಬೇಕು. ಹೇಗಿದ್ದರೂ ನಿಮ್ಮ ಗಾಡಿ ಗ್ಯಾರಂಟಿ ಪಿರಿಯಡ್‌ನಲ್ಲಿದೆ, ವಿಮೆ ಕೂಡ ಇದೆ ಎಂದಾದರೆ ಏನೇ ಸಮಸ್ಯೆ ಆದರೂ ಕಂಪನಿ ಅದಕ್ಕೆ ಹೊಣೆಯಾಗಿರಲಿದೆ. ಮೊದಲು ಆ ಕಂಪನಿಯ ಡೀಲರ್‌ ಬಳಿ ಹೋಗಿ ದೂರು ದಾಖಲಿಸಿ. ಬಳಿಕ ಅದನ್ನು ನನ್ನ (ರಸ್ತೆ ಸಾರಿಗೆ ಮತ್ತು ಹೆದ್ದಾರಿ) ಸಚಿವಾಲಯಕ್ಕೆ ಇ-ಮೇಲ್‌ ಮಾಡಿ. ನಾನು ಅದರ ವಿಚಾರಣೆ ಮಾಡುತ್ತೇನೆ. ಆದರೆ ಈತನಕ ಇಂಥ ಯಾವುದೇ ದೂರುಗಳು ನನ್ನ ಬಳಿ ಬಂದಿಲ್ಲ.

- ಸೋರಿಕೆಯಾಗಿರುವ ಎಆರ್‌ಎಐ ವರದಿಯ ಪ್ರಕಾರ, ಇಂಧನ ಪಂಪ್‌ ಮತ್ತು ರಬ್ಬರ್‌ ಭಾಗಗಳು ಇ20 ಬಳಕೆಯಿಂದ ಹಾಳಾಗುತ್ತವೆ. ಮೈಲೇಜ್‌ ಶೇ.6ರಷ್ಟು ಕಡಿಮೆಯಾಗುತ್ತದೆ. ಈ ಬಗ್ಗೆ ಮೌನವೇಕೆ?

ಎಆರ್‌ಎಐ ವರದಿಯನ್ನು ನಾವ್ಯಾರೂ ಗೌಪ್ಯವಾಗಿಟ್ಟಿಲ್ಲ. ಯಾವೆಲ್ಲಾ ಸಚಿವಾಲಯಗಳಿಗೆ ಅದು ಸಂಬಂಧಿಸಿದ್ದಾಗಿದೆಯೋ, ಅಲ್ಲಿಗೆಲ್ಲಾ ತಲುಪಿದೆ.

- ರಸ್ತೆ ಸಚಿವರಾಗಿದ್ದುಕೊಂಡು ಇಂಧನದ ಬಗ್ಗೆ ಮಾತೇಕೆ?

ಭಾರತವು 22 ಲಕ್ಷ ಕೋಟಿ ರು. ಮೌಲ್ಯದ ಪೆಟ್ರೋಲ್‌ ಮತ್ತು ಡೀಸೆಲ್‌ ಆಮದು ಮಾಡಿಕೊಳ್ಳುತ್ತದೆ. ಇವುಗಳಿಂದಾಗಿಯೇ ಶೇ.40ರಷ್ಟು ವಾಯು ಮಾಲಿನ್ಯವಾಗುತ್ತಿದೆ ಹಾಗೂ ಜನರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಉಂಟಾಗುತ್ತಿದೆ. ಹೀಗಿರುವಾಗ, ಮಾಲಿನ್ಯಕಾರಕ ಇಂಧನಕ್ಕಾಗಿ ದುಡ್ಡನ್ನು ವಿದೇಶಗಳಲ್ಲಿ ಸುರಿಯುವ ಬದಲು ಅದನ್ನು ರೈತರ ಕೈಗೆ ನೀಡಲು ಸರ್ಕಾರ ನಿರ್ಧರಿಸಿತು. ಆದ್ದರಿಂದಲೇ ಮೆಕ್ಕೆ ಜೋಳದಿಂದ ಎಥನಾಲ್‌ ಉತ್ಪಾದಿಸಲು ನಿರ್ಧರಿಸಲಾಯಿತು. ಈ ಜೋಳದ ಬೆಲೆ ಕ್ವಿಂಟಾಲ್‌ಗೆ 1,200 ರು. ಇತ್ತು ಹಾಗೂ ಕನಿಷ್ಠ ಬೆಂಬಲ ಬೆಲೆ 1,800 ರು. ಇತ್ತು. ಇದೀಗ 2,600 ರು.ನಿಂದ 2,800 ರು. ಆಗಿದೆ.

2004ರಲ್ಲಿ ನಾನು ಮಂತ್ರಿಯಾಗಿರಲಿಲ್ಲ. ಆಗಿನಿಂದಲೂ ಸ್ವದೇಶಿ ಮತ್ತು ಆತ್ಮನಿರ್ಭರತೆಯ ಬಗ್ಗೆ ಮಾತನಾಡುತ್ತಿದ್ದೇನೆ. ರೈತ ಕೇವಲ ಅನ್ನದಾತನಲ್ಲ. ವಿದ್ಯುತ್‌ ದಾತ, ಇಂಧನ ದಾತ, ವೈಮಾನಿಕ ಇಂಧನ ದಾತ, ವಿಟಮಿನ್‌ ದಾತ ಆಗಬೇಕು ಎಂಬ ಆಸೆ ನನ್ನದು. ಇದೀಗ ಎಥನಾಲ್‌ನಿಂದ ರೈತರ ಜೇಬಿಗೆ 2 ಲಕ್ಷ ಕೋಟಿ ರು. ತಲುಪಿದೆ.

ನಾನು ಎಥನಾಲ್‌, ಮಿಥನಾಲ್‌, ಹೈಡ್ರೋಜನ್‌, ವಿದ್ಯುತ್‌ ಮತ್ತು ಜೈವಿಕ ಇಂಧನದಿಂದ ಓಡುವ ವಾಹನಗಳ ಬಗ್ಗೆ ಮಾತನಾಡುತ್ತೇನೆ. ನನ್ನ ಸಚಿವಾಲಯವು ಎಂಜಿನ್‌ನಲ್ಲಿರುವ ಯಂತ್ರಗಳ ಮಾನದಂಡಗಳನ್ನು ನಿರ್ಧರಿಸುತ್ತದೆ. ಆದರೆ ಇಂಧನದ ಬಗ್ಗೆ ಮಾತನಾಡಬೇಕಾಗಿರುವುದು ಆ ಸಚಿವಾಲಯ.

ಈ ದೇಶವನ್ನು ಆತ್ಮನಿರ್ಭರವಾಗಿಸುವುದು, ರೈತರ ಜೇಬು ತುಂಬಿಸುವುದು, ಗ್ರಾಮಗಳ ಕಲ್ಯಾಣ ಮಾಡುವುದು, ಹಳ್ಳಿಗಳ ಯುವಕರಿಗೆ ಉದ್ಯೋಗ ಕೊಡಿಸುವುದು, ದೆಹಲಿಯಂತಹ ಪ್ರದೇಶಗಳಲ್ಲಿ ಮಾಲಿನ್ಯ ಸಮಾಪ್ತಿ ಮಾಡುವುದನ್ನು ನಾನು ದೇಶದ ಹಾಗೂ ಜನರ ಹಿತಕ್ಕಾಗಿ ಸಾಮಾಜಿಕ ಕಾರ್ಯಕರ್ತನಾಗಿ ಮಾಡುತ್ತಿದ್ದೇನೆ. ಇಂಧನದ ಬಗ್ಗೆಯೂ ಇದೇ ಉದ್ದೇಶದಿಂದ ಮಾತನಾಡುತ್ತಿದ್ದೇನೆ.

- ನಿಮ್ಮ ಪುತ್ರ ನಿಖಿಲ್‌ ಗಡ್ಕರಿಯವರ ಲಾಭಕ್ಕಾಗಿ ಎಥನಾಲ್‌ಗೆ ಮನ್ನಣೆ ನೀಡಲಾಗುತ್ತಿದೆ. ಆ ಕಂಪನಿಯ ಲಾಭ 5 ವರ್ಷಗಳಲ್ಲಿ ಶೇ.4500ರಷ್ಟು ಏರಿದೆ ಎನ್ನಲಾಗುತ್ತಿದೆಯಲ್ಲ?

ಎಥನಾಲ್‌ ಬರುವುದಕ್ಕೆ ಮೊದಲೇ ನಮ್ಮ ಸಕ್ಕರೆ ಕಾರ್ಖಾನೆ ಅಸ್ತಿತ್ವದಲ್ಲಿತ್ತು. ಅಲ್ಲಿ ಆಲ್ಕೊಹಾಲ್‌ ಸಹಜವಾಗಿ ತಯಾರಾಗುತ್ತಿತ್ತು. ನನ್ನ ಮಗನ ಕಂಪನಿಯ ಮುಖ್ಯ ಗಮನ ವಿದ್ಯುತ್‌, ಸಕ್ಕರೆ, ರಫ್ತಿನ ಕಡೆ ಇದೆ. ಇವುಗಳ ಜತೆಗೆ ಇನ್ನೂ ಕೆಲ ಸಣ್ಣಸಣ್ಣ ಉದ್ಯೋಗಗಳಿವೆ. ಅವೆಲ್ಲವುಗಳ ಒಟ್ಟು ಆದಾಯದಲ್ಲಿ ಎಥನಾಲ್‌ನಿಂದ ಶೇ.10ರಷ್ಟೂ ಬಂದಿಲ್ಲ. ಜತೆಗೆ ಸಕ್ಕರೆ ಕಂಪನಿಯ ಮೇಲೆ 1600 ಕೋಟಿ ರು.ನಷ್ಟು ಸಾಲವಿದೆ. ಆ ಕಂಪನಿ ಸೆಬಿ ಅಡಿಯಲ್ಲಿ ನೋಂದಣಿಯಾಗಿದೆ. ಅದರ ಷೇರು ಬೆಲೆ ಏರಿಕೆ-ಇಳಿಕೆ ಆಗುತ್ತಿರುತ್ತದೆ. ಹೀಗಾದಾಗ ಲಾಭ-ನಷ್ಟ ಸಹಜವಲ್ಲವೇ.

- ಎಥನಾಲ್‌ ಮಿಶ್ರಣದಿಂದಾಗಿ 1.5 ಲಕ್ಷ ಕೋಟಿ ರು.ನಷ್ಟು ವಿದೇಶಿ ವಿನಿಮಯ ಉಳಿತಾಯವಾಗಿದೆ. 4.5 ಕೋಟಿ ಬ್ಯಾರಲ್‌ ಕಚ್ಚಾತೈಲವೂ ಉಳಿತಾಯವಾಗಿದೆ. ಇಷ್ಟಾದರೂ ಪೆಟ್ರೋಲ್‌ ಬೆಲೆಯೇಕೆ ಕಡಿಮೆ ಆಗಿಲ್ಲ?

ಇಂಧನ ಮಾರುಕಟ್ಟೆ ಅನಿಶ್ಚಿತವಾಗಿದೆ. ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 120 ಡಾಲರ್‌ಗೆ ತಲುಪಿದಾಗ ನಾವು ಬೆಲೆ ಏರಿಸುವುದಿಲ್ಲ. ಆದರೆ ಅದು ಇಳಿದಾಗ ಬೆಲೆ ತಗ್ಗಿಸುವುದಿಲ್ಲ. ದರ ಹೆಚ್ಚಿದ್ದಾಗ ಆದ ನಷ್ಟವನ್ನು ಅದು ಇಳಿಕೆಯಾದಾಗ ಭರಿಸಿಕೊಳ್ಳುತ್ತೇವೆ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಇದನ್ನು ನಿರ್ಧರಿಸುವುದು ಇಂಧನ ಸಚಿವಾಲಯದ ಕೆಲಸ.

- ನೀತಿ ಅಯೋಗದ ಪ್ರಕಾರ, ಇ20 ಜಾರಿಗೆ 2030ರ ಗಡುವು ಹಾಕಿಕೊಳ್ಳಲಾಗಿತ್ತು. ಆದರೀಗ 5 ವರ್ಷಗಳ ಮೊದಲೇ ಜಾರಿಗೆ ತಂದದ್ದೇಕೆ?

ಮೊದಲು ಎಥನಾಲ್‌ ಲಭ್ಯತೆ ಇರಲಿಲ್ಲ. ಇತ್ತೀಚೆಗೆ ಅದು ಲಭಿಸಲು ಶುರುವಾಯಿತು ಹಾಗೂ ಹೆಚ್ಚುತ್ತಾ ಹೋಯಿತು. ಅದರಂತೆ ನಾವೂ ಸಹ ಪೆಟ್ರೋಲ್‌ ಜತೆ ಮಿಶ್ರಣ ಮಾಡತೊಡಗಿದೆವು. ದೇಶದ (ತೈಲ) ಆಮದನ್ನು ಬೇಗ ಕಡಿಮೆ ಮಾಡುವುದರಲ್ಲಿ ತಪ್ಪೇನಿದೆ? ಶೇ.20ರಷ್ಟು ಎಥನಾಲ್‌ ಬಳಸುವುದರಿಂದ ಮಾಲಿನ್ಯವೂ ತಗ್ಗುತ್ತದೆ. ವಿಶ್ವದ 13 ದೇಶಗಳಲ್ಲಿ ಸುಜುಕಿ, ಟೊಯೊಟಾ, ಹೀರೊ ಹೊಂಡಾ, ಬಜಾಜ್, ಟಿವಿಎಸ್‌ ಕಾರುಗಳಿಗೆ ಎಥನಾಲ್‌ ಹಾಕಲಾಗುತ್ತಿದೆ. 4 ವರ್ಷ ಪರೀಕ್ಷೆಯ ಬಳಿಕವೇ ಅದರ ಬಳಕೆ ಮಾಡಲಾಗುತ್ತದೆ.

- ಬರ್ನಿಹಾಟ್‌ ಎಂಬಲ್ಲಿ ಎಥನಾಲ್‌ ಉತ್ಪಾದನೆಯಿಂದ ಬಹಳಷ್ಟು ಮಾಲಿನ್ಯವಾಗುತ್ತಿದೆಯಲ್ಲಾ?

ಈ ಬಗ್ಗೆ ಇಲ್ಲಿಯ ವರೆಗೆ ನನ್ನ ಬಳಿ ಯಾರೂ ದೂರು ನೀಡಿಲ್ಲ. ಎಥನಾಲ್‌ ಉತ್ಪಾದನೆಯಲ್ಲಿ ನೀರಿನ ಬಳಕೆ ಆಗುವುದು ನಿಜ. ನೀರು ಆವಿ ಆಗುವುದು, ತಣ್ಣಗಾಗುವುದು, ಮತ್ತೆ ಆವಿಯಾಗುವುದು.. ಈ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಅದೇ ನೀರನ್ನು ಮತ್ತೆಮತ್ತೆ ಬಳಸಲಾಗುತ್ತದೆ.

PREV
Read more Articles on

Recommended Stories

ಮಹಾಪ್ರಭು ಪುರಿ ಜಗನ್ನಾಥರ ಮಹಾ ಮಾರ್ಗದಲ್ಲಿ
ಸಪ್ತ ಮಂತ್ರಿಗಿರಿ ಪ್ರಶ್ನೆಗೆ ಸೈಲೆಂಟ್‌ ಆದ ಸಿಎಂ!