;Resize=(412,232))
ದಿಢೀರ್ ಅತಿರೇಕದ ವರ್ತನೆಗಳು ಮತ್ತು ಪಟಾಫಟ್ ಪೊಲೀಸ್ ಕಾರ್ಯಾಚರಣೆಯ ಈ ಯುಗದಲ್ಲಿ ಜನರ ಭಿನ್ನಧ್ವನಿಯನ್ನು ಕಾನೂನಿನ ಹೆಸರಲ್ಲಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಬಂಧನವನ್ನು ವಾಕ್ ಸ್ವಾತಂತ್ರ್ಯ ಹತ್ತಿಕ್ಕುವ ದಾಳವಾಗಿ ಬಳಸಲಾಗುತ್ತಿದೆ. ಇದು ದೇಶದ ಅಪರಾಧ ನ್ಯಾಯ ವ್ಯವಸ್ಥೆಗೆ ಹೇಗೆ ವಿರುದ್ಧ ಎಂಬಿತ್ಯಾದಿ ವಿಷಯಗಳ ಬಗ್ಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಂಚಿಕೊಂಡಿರುವ ಅಭಿಪ್ರಾಯ ಇಲ್ಲಿದೆ
ಡಿ.ವೈ.ಚಂದ್ರಚೂಡ್
ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ
==
ಇತ್ತೀಚಿನ ದಿನಗಳಲ್ಲಿ ತನಿಖೆಯ ಮೂಲಕ ಆರೋಪ ಸಾಬೀತುಪಡಿಸುವ ಕ್ರಮದ ಬದಲಾಗಿ ಬಂಧನದ ಮೂಲಕ ಶಿಕ್ಷೆಗೆ ಗುರಿಪಡಿಸುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಮುಕ್ತ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಬಂಧನವನ್ನು ದಾಳವಾಗಿ ಬಳಸಿಕೊಳ್ಳುವ ಕ್ರಮಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದು ನಿಜವಾಗಿಯೂ ಅಪಾಯಕಾರಿ ಬೆಳವಣಿಗೆ. ಏಕೆಂದರೆ ಬಂಧನ ಎಂದೆಂದಿಗೂ ಕೊನೆಯ ಅವಕಾಶ ಆಗಿರಬೇಕು. ಅದನ್ನು ಬಿಟ್ಟು ಇದೀಗ ಭಿನ್ನಧ್ವನಿಯನ್ನೇ ಅಪರಾಧ ಎಂಬಂತೆ ಬಿಂಬಿಸುವ ಪ್ರಯತ್ನ ನಡೆಸುತ್ತಿದೆ. ಇದು ತಪ್ಪು. ಕಾರಣ, ಪ್ರತಿಯೊಂದು ಅಪ್ರಿಯ ಅಥವಾ ಅವಮಾನಕರ ಹೇಳಿಕೆಗಳು ಕ್ರಿಮಿನಲ್ ಅಪರಾಧ ಎನ್ನಿಸಿಕೊಳ್ಳುವುದಿಲ್ಲ.
ಹೇಯವಾದ ಅಂಶಗಳು ಅಥವಾ ಅಹಸ್ಯಕರ ಪದಗಳನ್ನು ಒಳಗೊಂಡ ಮಾತು ಅಥವಾ ಭಾಷಣಗಳು ಅನಾಗರಿಕ ಎಂಬುದನ್ನು ಒಪ್ಪೋಣ. ಆದರೆ ಎಲ್ಲಾ ಅನಾಗರಿಕ ವಿಷಯಗಳು ಕೂಡಾ ಕಾನೂನಿನ ವ್ಯಾಪ್ತಿಯಲ್ಲಿ ಅಪರಾಧ ಎನ್ನಿಸಿಕೊಳ್ಳುವುದಿಲ್ಲ ಎಂಬುದನ್ನು ನಾವು ಮನಗಾಣಬೇಕು. ನಮ್ಮ ದೇಶದ ಸಂವಿಧಾನ ಇಂಥ ಮಾತುಗಳ ಕುರಿತಾದ ನಾಗರಿಕ ಹಕ್ಕುಗಳನ್ನು ರಕ್ಷಿಸಲು ಸೂಕ್ತ ಕಾನೂನಿನ ಅಂಶಗಳನ್ನು ಒಳಗೊಂಡಿದೆ.
ಸಣ್ಣ ಅನುಮಾನಕ್ಕೆ ಕೂಡಾ ಎಣೆ ಇಲ್ಲದಂತೆ ಯಾವುದೇ ವ್ಯಕ್ತಿಯನ್ನು ನ್ಯಾಯಾಲಯವು ದೋಷಿ ಎಂದು ತೀರ್ಮಾನಿಸುವವರೆಗೂ ಆತ ಆರೋಪಿಯಷ್ಟೇ ಆಗಿರುತ್ತಾನೆ ಎಂಬುದು ಸಂವಿಧಾನ ಮತ್ತು ಕಾನೂನು ನಮಗೆ ಹೇಳಿರುವ ಪಾಠ. ಆದರೆ ಇದೀಗ ದೇಶದ ಅಪರಾಧ ನ್ಯಾಯ ವ್ಯವಸ್ಥೆಯು ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ.
ನಾನು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶನಾಗಿದ್ದ ವೇಳೆ ಪ್ರಕರಣವೊಂದು ನನ್ನ ಪೀಠದ ಮುಂದೆ ಬಂದಿತ್ತು. ಹಿರಿಯ ರಾಜಕೀಯ ನಾಯಕರೊಬ್ಬರ ಪೋಷಕತ್ವದ ಬಗ್ಗೆ ವಿಪಕ್ಷದ ಹಿರಿಯ ನಾಯಕರೊಬ್ಬರು ಬಹಳ ಮನನೋಯಿಸುವ ಅಥವಾ ಅಮಾನಕರ ಪದಗಳನ್ನು ಬಳಸಿ ಮಾತನಾಡಿದ್ದರು. ದೂರುದಾರರ ಪರವಾಗಿ ವಾದಿಸಿದ್ದ ಹಿರಿಯ ವಕೀಲರು, ಇದು ಕ್ಷಮಿಸಲಾಗದ ಸಂಗತಿ, ಇದೊಂದು ಅನಾಗರಿಕ ವರ್ತನೆ ಎಂದು ಕಿಡಿಕಾರಿ ಆರೋಪಿಯ ಬಂಧನಕ್ಕೆ ತೀವ್ರ ಆಗ್ರಹ ಮಾಡಿದ್ದರು. ವಕೀಲರ ವಾದ ಸರಿ ಇತ್ತು. ಆ ರಾಜಕೀಯ ವ್ಯಕ್ತಿ ಆಡಿದ ಮಾತುಗಳು ಕ್ಷಮಿಸಲಾಗದ ಸಂಗತಿಯಾಗಿತ್ತು. ಆದರೆ ಹಾಗೆಂದು ಅದು ಬಂಧನಕ್ಕೆ ಅರ್ಹವಾದ ವಿಷಯವಾಗಿರಲಿಲ್ಲ. ಹೀಗಾಗಿ ನಾವು ಅವರನ್ನು ಬಂಧನದಿಂದ ರಕ್ಷಣೆ ನೀಡಿದೆವು.
ಯಾವುದೇ ವ್ಯಕ್ತಿಯ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದಾಗ, ಅದರಲ್ಲೂ ಆರೋಪಿಯು ಅಷ್ಟೇನು ಜನಪ್ರಿಯನಲ್ಲ ಅಥವಾ ಆತನ ವಿರುದ್ಧ ಪ್ರಭಾವಶಾಲಿ ಶಕ್ತಿಗಳು ಕೆಲಸ ಮಾಡುತ್ತಿವೆ ಎಂಬಂಥ ಸಂದರ್ಭದಲ್ಲಿ ನ್ಯಾಯಾಲಯಗಳು ಸಾರ್ವಜನಿಕ ಒತ್ತಡ ಮತ್ತು ರಾಜಕೀಯ ಅಭಿಪ್ರಾಯಗಳನ್ನು ಬದಿಗೊತ್ತುವ ಕೆಲಸವನ್ನು ಮಾಡಬೇಕು.
ತೀಸ್ತಾ ಸೆಟಲ್ವಾದ್ ಕೇಸಲ್ಲೂ ಹೀಗೆ ಆಗಿತ್ತು. ಅವರು ಯಾವುದೇ ಕ್ಷಣದಲ್ಲಿ ಬಂಧನದ ಭೀತಿಯಲ್ಲಿದ್ದರು. ಹೀಗಾಗಿ ಅವರು ತಡರಾತ್ರಿ ಸುಪ್ರೀಂಕೋರ್ಟ್‌ನ ಕದ ತಟ್ಟಿದ್ದರು. ಅವರಿಗೆ ಜಾಮೀನು ಸಿಗಬೇಕೋ? ಬೇಡವೋ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸ. ಅದು ಮುಂದಿನ ಹಂತದ್ದು. ಆದರೆ ನ್ಯಾಯಾಲಯದ ಕದತಟ್ಟಲು ಅವರು ಕೂಡಾ ಅರ್ಹರು ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ.
ಇದೆಲ್ಲಕ್ಕಿಂತ ಹೆಚ್ಚಿನ ಆಘಾತಕಾರಿ ಪ್ರಕರಣವೆಂದರೆ ಇಕ್ರಂ ಎಂಬ ವ್ಯಕ್ತಿಯದ್ದು. ಆತ ವಿದ್ಯುತ್ ಕಳ್ಳತನದ 9 ಬೇರೆ ಬೇರೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ಆತನಿಗೆ ಒಟ್ಟು 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದು ಬಹಳಷ್ಟು ಕೊಲೆ ಪ್ರಕರಣದಲ್ಲಿ ದೋಷಿಗಳಿಗೆ ವಿಧಿಸುವ ಶಿಕ್ಷೆಯ ಪ್ರಮಾಣಕ್ಕಿಂತಲೂ ಹೆಚ್ಚಿನದ್ದು. ವೈಯಕ್ತಿಕ ಸ್ವಾತಂತ್ರ್ಯ ಎನ್ನುವುದು ಮೂಲಭೂತ ಹಕ್ಕು. ವಿದ್ಯುತ್ ಕಳ್ಳತನದಂಥ ಪ್ರಕರಣದಲ್ಲಿ ನೀವು ಯಾರನ್ನಾದರೂ 18 ವರ್ಷ ಶಿಕ್ಷೆಗೆ ಗುರಿಪಡಿಸುವುದು ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿತು. ಆದರೆ ಇಂಥ ಪ್ರಕರಣಗಳು ಹೆಚ್ಚು ಸುದ್ದಿಯಾಗುವುದಿಲ್ಲ. ಆದರೆ ನಮ್ಮ ಪಾಲಿಗೆ ಇಂಥ ಪ್ರಕರಣಗಳು ಕೂಡಾ ಅತ್ಯಂತ ಮಹತ್ವದ್ದು.
ಆರೋಪಿಗಳಿಗೆ ಜಾಮೀನು ನೀಡುವಲ್ಲಿ ನ್ಯಾಯಾಲಯಗಳು ನ್ಯಾಯಾಲಯಗಳು ಒಂದೇ ತೆರನಾದ ನೀತಿ ಅನುಸರಿಸುತ್ತಿಲ್ಲ ಎಂಬ ವಾದ ತಪ್ಪು. ಸುಪ್ರೀಂಕೋರ್ಟ್ ಬಹುಧ್ವನಿ ಒಳಗೊಂಡ ಸ್ಥಳ. ಅಂದರೆ ಇದನ್ನು ವಿವಿಧ ಹಿನ್ನೆಲೆಯಿಂದ ಬಂದ, ಜೀವನದ ವಿವಿಧ ಅನುಭವಗಳನ್ನು ಹೊಂದಿದ ಬೇರೆ ಬೇರೆ ನ್ಯಾಯಾಧೀಶರು ರೂಪಿಸುತ್ತಾರೆ. ಹೀಗಾಗಿ ಇಲ್ಲಿ ವ್ಯಕ್ತವಾಗುವ ಭಿನ್ನಾಭಿಪ್ರಾಯವನ್ನು ತಾರತಮ್ಯ ಎಂದಾಗಲೀ ಅಥವಾ ನ್ಯೂನತ ಎಂದಾಗಲೀ ಪರಿಗಣಿಸಬಾರದು. ಅದರ ಬದಲಿಗೆ ಇದನ್ನು ನಾವು ಪ್ರಜಾಪ್ರಭುತ್ವ ಸಂಸ್ಥೆಯೊಂದರ ವಿಶಿಷ್ಟತೆ ಎಂದು ಅರಿಯಬೇಕು. ಏಕೆಂದರೆ ನ್ಯಾಯದಾನ ಎಂದರೆ ಅದು ಜನಪ್ರಿಯತೆಗೆ ದಾಳವಲ್ಲ. ನ್ಯಾಯದಾನವೆಂದರೆ ಹಕ್ಕುಗಳನ್ನು ರಕ್ಷಿಸುವುದು.
ಯಾವುದೇ ವ್ಯಕ್ತಿಗೆ ಮೂರು ಸಂದರ್ಭಗಳಲ್ಲಿ ಮಾತ್ರವೇ ಜಾಮೀನು ನಿರಾಕರಿಸುವುದನ್ನು ಸಮರ್ಥಿಸಿಕೊಳ್ಳಬಹುದು. ಮೊದಲನೆಯದ್ದು, ಯಾವುದೇ ವ್ಯಕ್ತಿಯನ್ನು ನೀವು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಆತ ಹಳೆಯ ಅಪರಾಧ ಪುನರಾವರ್ತನೆ ಮಾಡಬಹುದಾದ ಸಾಧ್ಯತೆ, ಎರಡನೆಯದ್ದು, ಆತ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇದ್ದರೆ, ಮೂರನೆಯದ್ದು, ಆತ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ ಎಂದಾದಲ್ಲಿ. ಇದನ್ನು ಹೊರತುಪಡಿಸಿದರೆ ಬೇರೆ ಯಾವುದೇ ವಿಷಯದಲ್ಲೂ ಜಾಮೀನು ಎನ್ನುವುದು ನಿಯಮವಾಗಬೇಕೇ ಹೊರತೂ ಅದೊಂದು ಅವಕಾಶವಲ್ಲ.