ಹೊಸ ಬರಹಗಾರರನ್ನು ಕಾಡುವ ಹಳೆಯ ಪ್ರಶ್ನೆಗಳು

Published : Jul 05, 2026, 01:48 PM ISTUpdated : Jul 05, 2026, 01:49 PM IST
KPN

ಸಾರಾಂಶ

ಕುವೆಂಪು ಇಂಗ್ಲಿಷಿನಲ್ಲಿ ಕವಿತೆಗಳನ್ನು ಬರೆಯುತ್ತಿದ್ದ ದಿನಗಳಲ್ಲಿ ಐರ್ಲೆಂಡಿನ ವಿಮರ್ಶಕ, ಕವಿ ಜೇಮ್ಸ್ ಕಸಿನ್ಸ್ ‘ನೀನು ಕನ್ನಡದಲ್ಲಿ ಬರೆಯಬೇಕು’ ಅಂತ ಹೇಳಿದ ನಂತರ, ಕುವೆಂಪು ಕನ್ನಡದಲ್ಲಿ ಬರೆದರು. ಅವರ ಪ್ರತಿಭೆಗೆ ತಕ್ಕ ಭಾಷೆ ಒದಗಿಬಂದಿದ್ದರಿಂದ ಅವರು ಸರ್ವಮಾನ್ಯರಾದರು

- ಜೋಗಿ

ಕುವೆಂಪು ಇಂಗ್ಲಿಷಿನಲ್ಲಿ ಕವಿತೆಗಳನ್ನು ಬರೆಯುತ್ತಿದ್ದ ದಿನಗಳಲ್ಲಿ ಐರ್ಲೆಂಡಿನ ವಿಮರ್ಶಕ, ಕವಿ ಜೇಮ್ಸ್ ಕಸಿನ್ಸ್ ‘ನೀನು ಕನ್ನಡದಲ್ಲಿ ಬರೆಯಬೇಕು’ ಅಂತ ಹೇಳಿದ ನಂತರ, ಕುವೆಂಪು ಕನ್ನಡದಲ್ಲಿ ಬರೆದರು. ಅವರ ಪ್ರತಿಭೆಗೆ ತಕ್ಕ ಭಾಷೆ ಒದಗಿಬಂದಿದ್ದರಿಂದ ಅವರು ಸರ್ವಮಾನ್ಯರಾದರು. ಇಂಗ್ಲಿಷಿನಲ್ಲಿ ಬರೆಯುತ್ತಿದ್ದರೆ ಆ ಕಾಲದಲ್ಲಿ ಪ್ರಸಿದ್ಧರಾಗಿದ್ದ ಅಸಂಖ್ಯಾತ ಇಂಗ್ಲಿಷ್ ಕವಿಗಳಲ್ಲಿ ಕುವೆಂಪು ಕೂಡ ಒಬ್ಬರಾಗಿಬಿಡುತ್ತಿದ್ದರು ಅನ್ನುವುದನ್ನು ಓದಿದ ಪ್ರತಿಯೊಬ್ಬರಿಗೂ, ತಮಗೂ ಒಬ್ಬ ಜೇಮ್ಸ್ ಕಸಿನ್ಸ್ ಥರದವರ ಸಿಗಬೇಕು ಅಂತ ಅನ್ನಿಸುತ್ತಿರುತ್ತದೆ.

ಲೇಖಕರನ್ನು ಕಾಡುವ ಪ್ರಶ್ನೆ ನಾನೇನು ಬರೆಯಬೇಕು ಅನ್ನುವುದು

ಇವತ್ತು ಬರವಣಿಗೆ ಶುರುಮಾಡುವ ಬಹುತೇಕ ಲೇಖಕರನ್ನು ಕಾಡುವ ಪ್ರಶ್ನೆ ನಾನೇನು ಬರೆಯಬೇಕು ಅನ್ನುವುದು. ಈ ಪ್ರಶ್ನೆಯ ಹಿಂದೆ ಒಂದು ಶತಮಾನದ ದುಗುಡ ಮತ್ತು ಜಿಜ್ಞಾಸೆ ಇರುವಂತಿದೆ. ನಾವು ಕಳೆದ ನೂರು ವರ್ಷಗಳಲ್ಲಿ ಸಾಹಿತ್ಯ ಹಿಡಿದ ಹಾದಿ ಮತ್ತು ತಳೆದ ರೂಪಗಳನ್ನು ನೋಡುತ್ತಾ ಬಂದಿದ್ದೇವೆ. ಈ ನೂರು ವರ್ಷಗಳಲ್ಲಿ ಸಾಹಿತ್ಯ ಅನೇಕ ಸ್ಥಿತ್ಯಂತರಗಳನ್ನು ಕಂಡಿದೆ. ಹಳೆಗನ್ನಡದಿಂದ-ಆಧುನಿಕ ಕನ್ನಡದ ತನಕ ಭಾಷೆ, ಚಂಪೂ ಕಾವ್ಯದಿಂದ ನವ್ಯ ಕಾವ್ಯದ ತನಕ ಶೈಲಿ, ಕತೆಯಿಂದ ಕಾದಂಬರಿಯ ತನಕ ಪ್ರಕಾರ, ಚಾರಿತ್ರಿಕದಿಂದ ಸಮಕಾಲೀನದ ತನಕ ಆಶಯ, ಛಂದಸ್ಸಿನಿಂದ ಮುಕ್ತತೆಯ ತನಕ ಬಂಧ- ಬದಲಾಗಿದೆ.

ಈ ಬದಲಾವಣೆಯನ್ನು ನೋಡುತ್ತಾ ಬಂದಿರುವ ಓದುಗ ಎಷ್ಟು ಕಂಗಾಲಾಗಿದ್ದಾನೋ ಅದಕ್ಕಿಂತ ನೂರು ಪಟ್ಟು ಲೇಖಕ ದಿಕ್ಕೆಟ್ಟು ಕುಳಿತಿದ್ದಾನೆ. ಇದು ಸಾಹಿತ್ಯ ಕ್ಷೇತ್ರದಲ್ಲಷ್ಟೇ ಆಗಿರುವ ಬದಲಾವಣೆ ಅಲ್ಲ. ಸಿನಿಮಾ ಮಾಡುವ ನಿರ್ದೇಶಕನಿಗೆ, ಸಂಗೀತ ಸಂಯೋಜನೆ ಮಾಡುವವನಿಗೆ, ಹಾಡು ಬರೆಯುವವನಿಗೆ, ಹೊಸ ನಾಟಕ ಕಟ್ಟುವವನಿಗೆ ಒಂದಲ್ಲ ಒಂದು ಸಲ ಇಂಥದ್ದೇ ಪ್ರಶ್ನೆ ಎದುರಾಗಿರುತ್ತದೆ. ನಾನು ಯಾರಿಗೋಸ್ಕರ ಬರೆಯುತ್ತಿದ್ದೇನೆ, ಯಾರ ಜತೆಗೆ ಮಾತಾಡುತ್ತಿದ್ದೇನೆ ಅನ್ನುವುದೇ ಗೊತ್ತಾಗದ ಪರಿಸ್ಥಿತಿ ಎಲ್ಲರ ಎದುರೂ ಇದೆ.

ಲೇಖಕನಲ್ಲಿ ಇದು ಮತ್ತಷ್ಟು ದಟ್ಟವಾಗಿದೆ. ಅವನ ಸಂದಿಗ್ಧ ಇದು. ನಾನೇನು ಓದಬೇಕು ಅಂತ ಕೇಳುವ ಪ್ರತಿಯೊಬ್ಬ ಹೊಸ ಬರಹಗಾರನಿಗೂ ಸಿಗುವ ಉತ್ತರ ಇದು: ಲೇಖಕನಿಗೆ ಪರಂಪರೆಯ ಜತೆ ಸಂಪರ್ಕ ಇರಬೇಕು. ಅವನು ಪರಂಪರೆಯ ಕೊಂಡಿ. ಹೀಗಾಗಿ ಅವನು ತನಗಿಂತ ಹಿರಿಯರೆಲ್ಲರನ್ನೂ ಓದಬೇಕು, ಆದಿಕವಿ ಪಂಪನಿಂದ ಆರಂಭಿಸಿ ಅಂತ್ಯಕವಿ ಚಂಪಾ ತನಕ ಎಲ್ಲರನ್ನೂ ಓದಿದ ನಂತರವೇ ಬರೆಯುವ ಅರ್ಹತೆ ಬರುತ್ತದೆ. ಓದದೇ ಬರೆಯುವವನು ಯಶಸ್ವೀ ಲೇಖಕ ಆಗಲಾರ.

ತಾನೇನು ಬರೆಯಬೇಕು ಎಂಬ ಪ್ರಶ್ನೆ ಹುಟ್ಟುವುದು ಇಂಥ ಸಂದರ್ಭದಲ್ಲೇ

ಈಗಷ್ಟೇ ಸಾಹಿತ್ಯಕ್ಕೆ ತೆರೆದುಕೊಳ್ಳುವ ಪ್ರತಿಯೊಬ್ಬನ ಎದುರಿಗೂ ತಾನೇನು ಬರೆಯಬೇಕು ಎಂಬ ಪ್ರಶ್ನೆ ಹುಟ್ಟುವುದು ಇಂಥ ಸಂದರ್ಭದಲ್ಲೇ. ಆತ ಎಲ್ಲಿಗೇ ಹೋದರೂ, ಯಾರನ್ನೇ ಭೇಟಿಯಾದರೂ, ಯಾವುದೇ ಓದುಗನನ್ನಾಗಲೀ, ಓದದೇ ಇರುವವರನ್ನು ಮಾತಾಡಿಸಿದರೂ ಕನ್ನಡ ಸಾಹಿತ್ಯದ ಉದ್ಧಾಮ ಲೇಖಕರ ಹೆಸರು ಹೇಳಿ ಅವನನ್ನು ಹೆದರಿಸಿಬಿಡುತ್ತಾರೆ. ಕುವೆಂಪು, ಬೇಂದ್ರೆ ಮಾಸ್ತರ, ಗಿರೀಶ ಕಾರ್ನಾಡ, ಅನಂತಮೂರ್ತಿ, ಶಿವರಾಮ ಕಾರಂತ- ಈ ಐದು ಮಂದಿಯ ಹೆಸರನ್ನು ಜ್ಞಾನಪೀಠ ಚಿರಸ್ಥಾಯಿಯನ್ನಾಗಿ ಮಾಡಿದೆ. ಅವರು ಬರೆದುದನ್ನು ಓದದೇ ಇದ್ದವರೂ ಕೂಡ ಲೇಖಕರೆಂದರೆ ಅವರಂತೆ ಬರೆಯುವವರು ಎಂಬ ತೀರ್ಮಾನಕ್ಕೆ ಬಂದಿರುತ್ತಾರೆ. ನಟನೆ ಅಂದಾಕ್ಷಣ ಎಲ್ಲರೂ ರಾಜ್‌ಕುಮಾರ್ ಥರ ನಟಿಸಬೇಕು ಎನ್ನುವಂತೆ, ಕತೆಗಾರ ಅಂದಾಕ್ಷಣ ಶಿವರಾಮ ಕಾರಂತರಂತೆ, ಕವಿ ಅಂದಾಕ್ಷಣ ಬೇಂದ್ರೆಯಂತೆ ಬರೆಯಬೇಕು ಎಂದು ಹುಕುಂ ಹೊರಡಿಸಿಬಿಡುತ್ತಾರೆ.

ತಲೆಯೆತ್ತಿ ನೋಡಿದರೂ ತುದಿ ಕಾಣದಷ್ಟು ಎತ್ತರದಲ್ಲಿ ಕುಳಿತ ಮೇರು ಸಾಹಿತಿಗಳ ಮುಂದೆ ಕಿರುಹುಲ್ಲಿನಂತೆ ನಿಂತಿರುವ ಲೇಖಕನ ಮುಂದೆ ಎರಡು ಕಾಲಗಳು ಗೂಳಿಗಳಂತೆ ಡಿಕ್ಕಿ ಹೊಡೆಯುತ್ತಿರುತ್ತವೆ. ತಾನು ತನ್ನ ಕಾಲದ ಕುರಿತು, ತನ್ನ ಭಾಷೆಯಲ್ಲಿ ಬರೆದು ಗೆಲ್ಲಬೇಕೋ, ಹಿರಿಯ ಲೇಖಕರಂತೆ ತಲೆಮಾರುಗಳ ಕುರಿತು, ಬದುಕಿನ ಕುರಿತು ಬರೆಯಬೇಕಾ ಎಂಬ ಪ್ರಶ್ನೆಯಿಂದ ಹಿಡಿದು ತಾನು ಬಂಡಾಯ ಸಾಹಿತಿಯೋ ನವ್ಯ ಸಾಹಿತಿಯೋ ಆಧುನಿಕೋತ್ತರ ಲೇಖಕನೋ ನವೋದಯವನ್ನು ಮುಂದುವರಿಸಬೇಕೋ ಅನ್ನುವುದು ಕೊನೆಗೂ ಬಗೆಹರಿಯದ ಪ್ರಶ್ನೆಯಾಗುತ್ತದೆ.

ಅದಕ್ಕೆ ಕಾರಣವೂ ಇದೆ. ಯಾರ ಮುಂದಾದರೂ ಕವಿತೆ ಓದಿದರೆ ಅವರು ಇದಕ್ಕೆ ಪ್ರಾಸವಿಲ್ಲ, ಛಂದಸ್ಸಿಲ್ಲ, ಇದು ಕವಿತೆಯೇ ಅಲ್ಲ ಅನ್ನುತ್ತಾರೆ. ಅನೇಕ ಓದುಗರು ಕತೆ, ಕಾದಂಬರಿಯನ್ನು ಪ್ರೀತಿಸುವಷ್ಟು ಕವಿತೆಯನ್ನು ಮೆಚ್ಚುವುದಿಲ್ಲ. ತಾವು ಬಾಲ್ಯದಲ್ಲಿ ಓದಿದ, ಕೇಳಿದ ಗೇಯತೆ ಇರುವ ಹಾಡುಗಳೇ ಅವರ ಪ್ರಕಾರ ಅತ್ಯುತ್ತಮ ಕವಿತೆ. ಅದನ್ನು ಬರೆಯುವ ಲೇಖಕನನ್ನು ಈ ಕಾಲದ ಪ್ರಕಾಶಕ, ವಿಮರ್ಶಕ ಮತ್ತು ನಿಜವಾದ ಕವಿತೆಯ ಆಸಕ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಅವನು ಕಾಲಾಂತರದಲ್ಲಿ ಕಳೆದುಹೋದ ಪಳಯುಳಿಕೆಯಂತೆ ಕಾಣುತ್ತಿರುತ್ತಾನೆ.

ಕತೆಗಾರನ ಸ್ಥಿತಿಯೂ ಇದಕ್ಕಿಂತ ಬಹಳ ಭಿನ್ನವಾಗಿಯೇನಿಲ್ಲ. ಕಾದಂಬರಿ ಓದುವವರು ಎಸ್.ಎಲ್. ಭೈರಪ್ಪರನ್ನೂ ಶಿವರಾಮ ಕಾರಂತರನ್ನೂ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಪಕ್ಕದಲ್ಲಿಟ್ಟುಕೊಂಡು ಹೊಸ ಲೇಖಕನತ್ತ ಅಸಮಾಧಾನದಿಂದ ನೋಡುತ್ತಿರುತ್ತಾರೆ. ಸಣ್ಣ ಕತೆಗಾರರನ್ನು ಲಂಕೇಶ್, ಅನಂತಮೂರ್ತಿ, ವೈದೇಹಿ ಮುಂತಾದವರ ಜತೆ ಹೋಲಿಸಲಾಗುತ್ತದೆ. ಇಂಥ ಹೊತ್ತಲ್ಲಿ ಏನು ಬರೆದು ಸಾಯೋಣ ಅಂತ ಗೊತ್ತಾಗದೇ ತರುಣ ಲೇಖಕರು ಈ ಸಹವಾಸವೇ ಬೇಡ ಅಂತ ಸುಮ್ಮನಾಗುತ್ತಾರೆ.

ಇವೆಲ್ಲದರ ನಡುವೆ ಈ ದಿನಗಳಲ್ಲಿ ಮತ್ತೊಂದು ಅನಾಹುತಕಾರಿ ಘಟನೆಯೂ ನಡೆಯುತ್ತಿರುತ್ತದೆ. ಸೈದ್ಧಾಂತಿಕ ಕಾರಣಕ್ಕೆ, ರಾಜಕೀಯ ಕಾರಣಕ್ಕೆ ಮತ್ತು ಒಂದು ಪಂಥವನ್ನು ಓಲೈಸುವ ಕಾರಣಕ್ಕೆ ಬರೆದ ಪುಸ್ತಕಗಳು ಅಸಂಖ್ಯ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಅದನ್ನು ನೋಡುತ್ತಿದ್ದಂತೆ ಲೇಖಕನ ಒಳಗಿರುವ ಖ್ಯಾತಿಯಲ್ಲಿ ಆಸಕ್ತಿಯಿರುವ ಬರಹಗಾರ ಎಚ್ಚೆತ್ತುಕೊಳ್ಳುತ್ತಾನೆ. ಹೊಸ ಲೇಖಕ ಒಂಚೂರು ಗಮನಿಸಿದರೆ, ಕಳೆದ ಏಳೆಂಟು ವರ್ಷಗಳಲ್ಲಿ ಇನ್ನಿಲ್ಲದಂತೆ ಐತಿಹಾಸಿಕ ಕಾದಂಬರಿಗಳೂ ಪೌರಾಣಿಕ ಕಾದಂಬರಿಗಳೂ ಪ್ರಕಟವಾಗುತ್ತಿರುವುದನ್ನು ಕಾಣಬಹುದು. ಇದು ಟ್ರೆಂಡು ಲೇಖಕನನ್ನು ನಿಯಂತ್ರಿಸುವ ರೀತಿ. ಈ ಟ್ರೆಂಡೇ ಲೇಖಕನನ್ನು ನಿರ್ನಾಮ ಮಾಡುತ್ತದೆ ಅನ್ನುವುದೂ ಸತ್ಯ.

ಇನ್ನೊಂದು ವಿದ್ಯಮಾನವೂ ಸಾಕಷ್ಟು ಲೇಖಕರ ದಿಕ್ಕುಗೆಡಿಸುತ್ತಿದೆ. ಅದು ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರುಗಳ ರೂಪದಲ್ಲಿ ಪ್ರತ್ಯಕ್ಷವಾಗುತ್ತದೆ. ಆರಂಭದಲ್ಲಿ ಇನ್‌ಸ್ಟಾಗ್ರಾಮ್ ಕೂಡ ಫೇಸ್‌ಬುಕ್ಕಿನಂತೆಯೇ ಓದುಗರ ಬಳಗ ಎಂದು ಎಲ್ಲರೂ ಅಂದುಕೊಂಡಿದ್ದರು. ಕ್ರಮೇಣ ಅಲ್ಲಿ ಪುಸ್ತಕದ ಕುರಿತು ಬರೆಯುವವರು ಪುಸ್ತಕ ಓದುಗರಲ್ಲ, view mongers ಎನ್ನುವುದು ಎಲ್ಲರಿಗೂ ಅರಿವಾಗುತ್ತಾ ಹೋಯಿತು. ಇದ್ದಕ್ಕಿದ್ದಂತೆ ಮರೆಗೆ ಸರಿದವರ ಪುಸ್ತಕಗಳಿಗೆ ಬೇಡಿಕೆ ಬರತೊಡಗಿತು. ಪುಸ್ತಕಗಳ ಗುಣಮಟ್ಟಕ್ಕಿಂತ ಪ್ರಚಾರವೇ ಮುಖ್ಯವಾಯಿತು. ಇಲ್ಲಿಯ ಬಹುದೊಡ್ಡ ಅಧ್ವಾನವೆಂದರೆ ಈ ಪುಸ್ತಕ ಚೆನ್ನಾಗಿದೆ ಓದಿ ಅಂತ ಹೇಳಿದವರ ಪೈಕಿ ಹೆಚ್ಚಿನವರು ಪುಸ್ತಕದ ಓದುಗರೇ ಅಲ್ಲದೇ ಇದ್ದದ್ದು. ಅವರೆಲ್ಲ ಪುಸ್ತಕದಲ್ಲಿ ಬರುವ ನಾಲ್ಕಾರು ಅತ್ಯುತ್ತಮ ಸಾಲುಗಳನ್ನು ಹೆಕ್ಕಿಕೊಂಡು ಅದನ್ನಿಟ್ಟುಕೊಂಡು ಮಂದಿಯನ್ನು ಸೆಳೆಯುವ ಪ್ರಭಾವಶಾಲಿಗಳಾಗಿ ರೂಪುಗೊಂಡದ್ದು. ಇದರಿಂದ ಆದ ಬಹುದೊಡ್ಡ ಅಪಾಯ ಎಂದರೆ ಯಾರು ನಿಜವಾದ ಓದುಗರು, ಯಾವುದು ಈಗ ಓದಿಸಿಕೊಳ್ಳುತ್ತಿರುವ ಪುಸ್ತಕ ಎನ್ನುವುದು ಗೊತ್ತಾಗುವ ಬದಲು, ಯಾವುದು ಈಗ ಹೆಚ್ಚು ಮಾರಾಟವಾಗುವ ಪುಸ್ತಕ ಎನ್ನುವುದು ತಿಳಿಯತೊಡಗಿ, ಅದೇ ಬರಹಗಾರರನ್ನು ಕಾಡುವ ಸಂಗತಿಯೂ ಆದದ್ದು.

ಈಗ ಅನೇಕ ಪ್ರಕಾಶಕರು ಇನ್‌ಸ್ಟಾಗ್ರಾಮ್ ಮಾನದಂಡವನ್ನು ಮುಂದಿಟ್ಟುಕೊಂಡು ಪತ್ತೇದಾರಿ ಬರೆಯಿರಿ, ಪ್ರೇಮಕತೆಗಳನ್ನು ಬರೆಯಿರಿ, ಹಾರರ್ ಸ್ಟೋರಿಗಳನ್ನು ಬರೆಯಿರಿ ಎಂದು ಲೇಖಕರ ಬೆನ್ನು ಬಿದ್ದಿರುವುದು ಇತ್ತೀಚಿನ ಸುದ್ದಿಯೇನಲ್ಲ. ಕಳೆದ ಆರೇಳು ತಿಂಗಳುಗಳಿಂದ ಇಂಥದ್ದೊಂದು ವಿದ್ಯಮಾನ ಸಾಹಿತ್ಯ ಜಗತ್ತಿನಲ್ಲಿ ನಡೆಯುತ್ತಿದೆ. ಅದರಿಂದಾಗಿಯೇ ತಿಂಗಳಿಗೆ ಐದಾರು ಹೊಸ ಪತ್ತೇದಾರಿ, ಪ್ರೇಮ, ಭೀಬತ್ಸ ಮತ್ತು ಐತಿಹಾಸಿಕ ಕಾದಂಬರಿಗಳು ಬಿಡುಗಡೆ ಆಗುತ್ತಿವೆ. ಮತ್ತೆ ಲೇಖಕರು ರವಿ ಬೆಳಗೆರೆಯ ಥರ, ಎಂ ನರಸಿಂಹಯ್ಯನವರ ಥರ, ಮಾಭೀಶೇ, ಜಿಂದೆ ನಂಜುಂಡಸ್ವಾಮಿ ಥರ ಬರೆಯತೊಡಗಿದ್ದಾರೆ. ಮತ್ತೆ ಅಘೋರಿಗಳ ಗೋರಿ ಅಲ್ಲಾಡಿದೆ. ಮತ್ತೆ ದೆವ್ವಗಳು ರೆಕ್ಕೆ ಫಟಫಟಿಸುತ್ತಾ ಒಂಟಿಮನೆಯ ಮೇಲಿನಿಂದ ಹಾರಿ ಹೋಗುತ್ತಿವೆ. ಒಬ್ಬಂಟಿ ದಾರಿಹೋಕನನ್ನು ಬೆದರಿಸುತ್ತಿವೆ.

ತನ್ನ ಅನುಭವ, ಓದು, ಪರಿಸರ, ಪ್ರಜ್ಞೆ- ಇವುಗಳೇ ಒಬ್ಬ ಲೇಖಕನ ಬರೆವಣಿಗೆಯನ್ನು ನಿರ್ದೇಶಿಸಬೇಕು. ಹಾಗಾದಾಗ ಹುಟ್ಟುವ ಸಾಹಿತ್ಯವೇ ಕೊನೆಗೂ ಮನಸ್ಸಿನಲ್ಲಿ ಉಳಿಯುವುದು. ಆದರೆ ಅಂಥದ್ದಕ್ಕೆ ಕ್ರಮೇಣ ತಾವು ಕಡಿಮೆ ಆಗುತ್ತಿದೆ. ಮಾರಾಟವೇ ಮಾನದಂಡವಾಗುತ್ತಿದೆ. ಹಣ ಮಾಡುವುದು ಹೇಗೆ, ಸಂತೋಷ ಪಡೆಯುವುದು ಹೇಗೆ, ಆರೋಗ್ಯ ಉಳಿಸಿಕೊಳ್ಳುವುದು ಹೇಗೆ –ಎಂಬ ಬಹು ಜನಪ್ರಿಯ ಸೆಲ್ಫ್ ಹೆಲ್ಫ್ ಶೈಲಿಯ ಪುಸ್ತಕಗಳ ಸಾಲಿಗೆ ಪ್ರಕಾಶಕರು ಹೇಳಿ ಬರೆಸುವ ಚಾರಿತ್ರಿಕ, ಪೌರಾಣಿಕ, ಕೊಲೆಗಡುಕ, ದೆವ್ವಾತ್ಮಕ ಕಾದಂಬರಿಗಳೂ ಸೇರಿಕೊಂಡು, ನಾನೇನು ಬರೆಯಬೇಕು ಎಂಬ ಪ್ರಶ್ನೆ ಮತ್ತಷ್ಟು ಜಟಿಲವಾಗುವಂತೆ ಮಾಡಿವೆ.

ಇದರಿಂದ ಪ್ರಜ್ಞಾವಂತ ಲೇಖಕ ಪಾರಾಗುತ್ತಾನೆ. ಜಾಣ ಲೇಖಕ ಇದರ ಲಾಭ ಪಡೆದುಕೊಳ್ಳುತ್ತಾನೆ. ಹುಂಬ ಲೇಖಕ ಕಂಗಾಲಾಗಿ ತನ್ನೊಳಗಿನ ಓದುಗನಿಗೆ ಅತಿದೊಡ್ಡ ಅನ್ಯಾಯ ಮಾಡುತ್ತಿರುತ್ತಾನೆ.

PREV
Read more Articles on

Recommended Stories

ಡಿಜಿಟಲ್ ಭಾರತದಲ್ಲಿ ಗ್ರಾಹಕರ ನ್ಯಾಯಕ್ಕಾಗಿ ಇ-ಜಾಗೃತಿ
ಸ್ವಾಭಿಮಾನಿ, ದೇಶಪ್ರೇಮಿ, ಕೆಚ್ಚೆದೆಯ ಪರಾಕ್ರಮಿ ಅಲ್ಲೂರಿ