ಆನ್‌ಲೈನ್‌ ಬ್ಯಾಂಕಿಂಗ್‌ : ಫೋನು, ಲ್ಯಾಪ್‌ಟಾಪ್‌ - ಯಾವುದು ಸೇಫ್‌

Published : Aug 12, 2025, 01:09 PM IST
Online Banking

ಸಾರಾಂಶ

ಇಂದಿನ ಡಿಜಿಟಲ್‌ ಯುಗದಲ್ಲಿ ಹಣದ ವರ್ಗಾವಣೆ ಬಲು ಸುಲಭ. ಆದರೆ ವರ್ಗಾಯಿಸುವ ಹಣದ ಸುರಕ್ಷತೆ ದೊಡ್ಡ ತಲೆನೋವು. ಹೀಗಿರುವಾಗ ಸುರಕ್ಷಿತ ಹಣದ ವರ್ಗಾವಣೆಗೆ ಸ್ಮಾರ್ಟ್‌ಫೋನ್‌ ಮತ್ತು ಲ್ಯಾಪ್‌ಟಾಪ್ ಇವೆರಡರಲ್ಲಿ ಯಾವುದು ಬೆಸ್ಟ್ ಅನ್ನೋ ವಿವರ ಈ ಬರಹದಲ್ಲಿದೆ.

ಇಂದಿನ ಡಿಜಿಟಲ್‌ ಯುಗದಲ್ಲಿ ಹಣದ ವರ್ಗಾವಣೆ ಬಲು ಸುಲಭ. ಆದರೆ ವರ್ಗಾಯಿಸುವ ಹಣದ ಸುರಕ್ಷತೆ ದೊಡ್ಡ ತಲೆನೋವು. ಹೀಗಿರುವಾಗ ಸುರಕ್ಷಿತ ಹಣದ ವರ್ಗಾವಣೆಗೆ ಸ್ಮಾರ್ಟ್‌ಫೋನ್‌ ಮತ್ತು ಲ್ಯಾಪ್‌ಟಾಪ್ ಇವೆರಡರಲ್ಲಿ ಯಾವುದು ಬೆಸ್ಟ್ ಅನ್ನೋ ವಿವರ ಈ ಬರಹದಲ್ಲಿದೆ.

ದುಡ್ಡು ಟ್ರಾನ್ಸ್‌ಫರ್‌ ಮಾಡೋದಕ್ಕೆ ಹೆಚ್ಚಿನವರು ಬಳಸೋದು ಸ್ಮಾರ್ಟ್‌ಫೋನ್‌. ಕೆಲವರು ಲ್ಯಾಪ್‌ಟಾಪ್‌ನಿಂದಲೂ ಹಣ ವರ್ಗಾಯಿಸುತ್ತಾರೆ. ನಮ್ಮ ಮುಂದಿರುವ ಪ್ರಶ್ನೆ ಈ ಎರಡು ಡಿವೈಸ್‌ಗಳಲ್ಲಿ ಸುರಕ್ಷಿತ ಹಣದ ವರ್ಗಾವಣೆಗೆ ಯಾವುದು ಸೂಕ್ತ ಅನ್ನೋದು. ಅದರಲ್ಲೇನಿದೆ, ಡಿವೈಸ್‌ ಯಾವುದಿದ್ದರೆ ಏನು ವ್ಯತ್ಯಾಸ ಆಗುತ್ತೆ ಎಂಬ ಪ್ರಶ್ನೆ ಬರಬಹುದು. ಆದರೆ ವ್ಯತ್ಯಾಸ ಖಂಡಿತಾ ಇದೆ. ಇತ್ತೀಚಿನ ಸೈಬರ್‌ ಸೆಕ್ಯೂರಿಟಿ ಟ್ರೆಂಡ್‌ ಮತ್ತು ಅಧ್ಯಯನಗಳು ಈ ಸಂಗತಿ ಮೇಲೆ ಬೆಳಕು ಚೆಲ್ಲಿವೆ.

ಸ್ಮಾರ್ಟ್‌ಫೋನ್‌ಗಳಲ್ಲಿ ಹಣಕ್ಕೆಷ್ಟು ಭದ್ರತೆ ಇದೆ?

ಸ್ಮಾರ್ಟ್‌ಫೋನ್‌ಗಳ ಹೈಎಂಡ್‌ ಮಾಡೆಲ್‌ಗಳಲ್ಲಿ ಅಂದರೆ ಗ್ರ್ಯಾಫೀನ್‌ ಓಎಸ್‌ ಇರುವ ಐಫೋನ್‌ 16 ಪ್ರೊ ಮ್ಯಾಕ್ಸ್‌ ಮತ್ತು ಗೂಗಲ್‌ ಪಿಕ್ಸೆಲ್‌ 9 ಫೋನ್‌ಗಳು ಹಣದ ವರ್ಗಾವಣೆಗೆ ಸುರಕ್ಷಿತ. ಆ್ಯಪಲ್‌ ಸ್ಮಾರ್ಟ್‌ಫೋನ್‌ನ ಐಓಎಸ್‌ ಇಕೋ ಸಿಸ್ಟಮ್‌ ಡಿಜಿಟಲ್‌ ಹಣಕಾಸಿನ ವಹಿವಾಟಿಗೆ ಉತ್ತಮ ಭದ್ರತೆ ಒದಗಿಸುತ್ತದೆ. ಆ್ಯಪಲ್‌ ಏ18 ಬಯೋನಿಕ್ ಚಿಪ್‌ ಡೇಟಾಗೆ ಅಧಿಕ ಸೆಕ್ಯೂರಿಟಿ ನೀಡುತ್ತದೆ. ಜೊತೆಗೆ ಫೇಸ್‌ ಐಡಿ, ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಬಳಕೆ ಹಾಗೂ ಆಗಾಗ ಐಓಎಸ್‌ ಅನ್ನು ಅಪ್‌ಡೇಟ್‌ ಮಾಡುವುದರಿಂದ ಹಣ ವರ್ಗಾವಣೆ ಸಮಯದಲ್ಲಿ ವಂಚನೆಗೊಳಗಾಗುವುದನ್ನು ತಪ್ಪಿಸಬಹುದು. ಗ್ರ್ಯಾಫೀನ್‌ ಓಎಸ್‌ ಇರುವ ಗೂಗಲ್‌ ಪಿಕ್ಸೆಲ್‌ 9 ಸ್ಮಾರ್ಟ್‌ಫೋನ್‌ಗಳಲ್ಲೂ ದುಡ್ಡಿನ ವರ್ಗಾವಣೆ ಸೇಫು, ರಿಸ್ಕ್‌ ಕಮ್ಮಿ.

ಲ್ಯಾಪ್‌ಟಾಪ್‌ಗಳಿಗೆ ಹೋಲಿಸಿದರೆ ಸ್ಮಾರ್ಟ್‌ಫೋನ್‌ಗಳ ಬಳಕೆಯಲ್ಲಿ ಖಾಸಗಿತನ ಹೆಚ್ಚು, ಮಾಲ್‌ವೇರ್ ಅಟ್ಯಾಕ್‌ ಸಾಧ್ಯತೆ ಕಡಿಮೆ. ಕಳೆದ ವರ್ಷದ ಸೈಬರ್‌ ಸೆಕ್ಯೂರಿಟಿ ವರದಿಗಳ ಪ್ರಕಾರ ಡಿಜಿಟಲ್‌ ಹಣಕಾಸಿನ ವರ್ಗಾವಣೆ ವಿಚಾರದಲ್ಲಿ ಲ್ಯಾಪ್‌ಟಾಪ್‌ಗಳಿಗಿಂತ ಐಓಎಸ್‌ ಡಿವೈಸ್‌ಗಳು ಹೆಚ್ಚು ಸುರಕ್ಷಿತ.

ಲ್ಯಾಪ್‌ಟಾಪ್‌ನಲ್ಲಿ ಹಣದ ಭದ್ರತೆಗಿರುವ ಸವಾಲುಗಳು

ಡಿಜಿಟಲ್‌ ಮನಿ ಸೆಕ್ಯುರಿಟಿ ವಿಚಾರದಲ್ಲಿ ಲ್ಯಾಪ್‌ಟಾಪ್‌ಗಳಿಗೆ ಅವುಗಳ ಓಪನ್‌ ಇಕೋ ಸಿಸ್ಟಮ್‌ಗಳಿಂದಲೇ ಸಮಸ್ಯೆ. ವಿಂಡೋಸ್‌ ಮತ್ತು ಮ್ಯಾಕ್‌ ಓಎಸ್‌ ಸಿಸ್ಟಮ್‌ಗಳು ಹ್ಯಾಕರ್‌ಗಳಿಗೆ ಅಂಗೈ ಮೇಲಿನ ನೆಲ್ಲಿಕಾಯಿಯಂತೆ. 2021ರ ಸರ್ವೆ ಪ್ರಕಾರ ಲ್ಯಾಪ್‌ಟಾಪ್‌ಗಳಲ್ಲಿನ ಶೇ.77ರಷ್ಟು ಹಣಕಾಸಿಗೆ ಸಂಬಂಧಿಸಿದ ಆ್ಯಪ್‌ಗಳನ್ನು ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳಬಹುದು. ಎನ್‌ಐಎಸ್‌ಟಿ (ನ್ಯಾಶನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಸ್ಟಾಂಡರ್ಡ್ಸ್‌ ಆ್ಯಂಡ್‌ ಟೆಕ್ನಾಲಜಿ) 2024ರಲ್ಲಿ ಹೊರತಂದ ರಿಪೋರ್ಟ್‌, ಅನೇಕ ಲ್ಯಾಪ್‌ಟಾಪ್ ಪ್ರೊಸೆಸರ್‌ಗಳಲ್ಲಿನ ಸರಿಪಡಿಸಲಾಗದ ದೋಷಗಳನ್ನು ಎತ್ತಿ ತೋರಿಸಿದೆ. ಇದರಿಂದ ಹೆಚ್ಚಿನ ಅಪಾಯ ಸಂಭವಿಸುವ ಎಚ್ಚರಿಕೆ ನೀಡಿದೆ.

ಲ್ಯಾಪ್‌ಟಾಪ್‌ಗಳಲ್ಲಿ ಅಯಾಚಿತವಾಗಿ ಆಗುವ ಡೌನ್‌ಲೋಡ್‌ಗಳು, ಕೆಲವೊಂದು ಇಮೇಲ್‌ ಅಟ್ಯಾಚ್‌ಮೆಂಟ್‌ಗಳಿಂದ ಅಪಾಯ ಹೆಚ್ಚು. ಆಗಾಗ ಲ್ಯಾಪ್‌ಟಾಪ್‌ ಅನ್ನು ಅಪ್‌ಡೇಟ್‌ ಮಾಡದಿದ್ದರೆ ಕೆಲವೊಂದು ಆಂಟಿ ವೈರಸ್‌ ಸಾಫ್ಟ್‌ವೇರ್‌ಗಳನ್ನು ಕ್ರಾಸ್‌ ಮಾಡಿಕೊಂಡು ಇವು ಅಪಾಯ ತಂದೊಡ್ಡಬಹುದು.

ಇದೆಲ್ಲದರ ನಡುವೆಯೂ ವ್ಯಕ್ತಿ ತನ್ನ ಡಿವೈಸ್‌ಗಳನ್ನು ಹೇಗೆ ಬಳಸುತ್ತಾನೆ ಅನ್ನೋದು ಬಹಳ ಮುಖ್ಯವಾಗುತ್ತದೆ.

ಪಾಲಿಸಲೇ ಬೇಕಾದ ಸುರಕ್ಷತೆಯ ಅಂಶಗಳು

1. ಸ್ಮಾರ್ಟ್‌ಫೋನ್‌ಗಳಿಗೆ ಮಲ್ಟಿ ಫ್ಯಾಕರ್‌ ಅಥೆಂಟಿಕೇಶನ್‌ (ಎಂಎಫ್ಎ) ಅಂದರೆ ಎರಡು ಅಥವಾ ಹೆಚ್ಚು ವೆರಿಫಿಕೇಶನ್‌ಗಳನ್ನು ನೀಡಿದ ಬಳಿಕ ಅಕೌಂಟ್ ತೆರೆದುಕೊಳ್ಳುವಂತೆ ಮಾಡುವ ವ್ಯವಸ್ಥೆ ಸೆಟ್‌ ಮಾಡಿಕೊಳ್ಳಿ.

2. ಎಸ್‌ಎಂಎಸ್‌ ಮೂಲಕ ವೆರಿಫಿಕೇಶನ್‌ ಅಪಾಯಕಾರಿ. ಸಿಮ್ ಸ್ವ್ಯಾಪ್‌ ಅಟ್ಯಾಕ್‌ (ಮೋಸದಿಂದ ಮೊಬೈಲ್‌ ನಂಬರ್ ಪಡೆದು ಆ ಫೋನ್‌ ನಂಬರ್‌ ಮೂಲಕ ಹಣಕಾಸು ವಂಚನೆ ಮಾಡುವ ಜಾಲ)ನಂಥಾ ಸನ್ನಿವೇಶದಲ್ಲಿ ವಂಚನೆಗೊಳಗಾಗುವ ಅಪಾಯವಿದೆ.

3. ನೀವು ಬಳಸುವ ಗೂಗಲ್‌ ಪೇ, ಆ್ಯಪಲ್‌ ಪೇ ಮೊದಲಾದ ಆ್ಯಪ್‌ಗಳನ್ನು ಆಗಾಗ ಅಪ್‌ಡೇಟ್‌ ಮಾಡುತ್ತಿರಿ.

4. ಲ್ಯಾಪ್‌ಟಾಪ್‌ನಲ್ಲಿ ಪವರ್‌ಫುಲ್‌ ಆ್ಯಂಟಿ ವೈರಸ್‌ ಸಾಫ್ಟ್‌ವೇರ್‌ ಬಳಸಿ.

5. ಸಾರ್ವಜನಿಕ ವೈ-ಫೈ ಅಪಾಯಕಾರಿ. ಸ್ವಂತ ವಿಪಿಎನ್‌ (ವರ್ಚ್ಯುವಲ್‌ ಪ್ರೈವೇಟ್‌ ನೆಟ್‌ವರ್ಕ್‌) ಮತ್ತು ಮೊಬೈಲ್ ಡೇಟಾ ಬಳಸಿ.

6. ಯಾವತ್ತೂ ಪಾಸ್‌ವರ್ಡ್‌ ಕೊಡುವಾಗ ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ ಅಂತ ಸರಳವಾದ ಪಾಸ್‌ವರ್ಡ್‌ ನೀಡಬೇಡಿ. ಹೊರಗಿನವರು ಊಹಿಸಲಾಗದ ಪಾಸ್‌ವರ್ಡ್‌ ಅಥವಾ ಪಿನ್‌ ಬಳಕೆ ಮಾಡಿ.

PREV
Read more Articles on

Recommended Stories

ಮಗಳ ರುಬೆಲಾ ನಿಯಂತ್ರಿಸಿದ ಸರಿ ಹಿಟ್ಟೇ ಪೋಷಕರಿಗೆ ಉದ್ಯಮವಾಯ್ತು!
ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್‌