ಸಂಕ್ರಾಂತಿ ವೇಳೆಗೆ ಪೀಣ್ಯ ಫ್ಲೈಓವರ್‌ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತ?

KannadaprabhaNewsNetwork |  
Published : Dec 17, 2023, 01:45 AM ISTUpdated : Dec 17, 2023, 01:46 AM IST
Peenya | Kannada Prabha

ಸಾರಾಂಶ

ಪೀಣ್ಯ ಮೇಲ್ಸೇತುವೆ ಸಂಕ್ರಾಂತಿ ವೇಳೆಗೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ

-3 ತಂಡದಿಂದ 120 ಪಿಲ್ಲರ್‌ ನಡುವೆ 240 ಹೊಸ ಕೇಬಲ್‌ ಅಳವಡಿಕೆ

-ಕೇಬಲ್‌ ಅಳವಡಿಕೆ 70% ಪೂರ್ಣ । ಜ.15ಕ್ಕೆ ಕಾಮಗಾರಿ ಪೂರ್ಣ?ಕನ್ನಡಪ್ರಭ ವಾರ್ತೆ ಬೆಂಗಳೂರು

ಪೀಣ್ಯ ಮೇಲ್ಸೇತುವೆಯ 120 ಪಿಲ್ಲರ್‌ ನಡುವೆ ಹೊಸದಾಗಿ 240 ಕೇಬಲ್‌ ಅಳವಡಿಕೆ ಕಾರ್ಯ ಶೇ.70ರಷ್ಟು ಪೂರ್ಣಗೊಂಡಿದ್ದು, ಸಂಕ್ರಾಂತಿ ವೇಳೆಗೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಫ್ಲೈ ಓವರ್‌ ಮುಕ್ತವಾಗುವ ಸಾಧ್ಯತೆಯಿದೆ.

ಮೇಲ್ಸೇತುವೆಯಲ್ಲಿ 120 ಪಿಲ್ಲರ್‌ ಇದ್ದು ಎರಡು ಪಿಲ್ಲರ್‌ಗಳ ನಡುವೆ ತಲಾ 10ರಂತೆ ಒಟ್ಟು 1200 ಕೇಬಲ್‌ ಇವೆ. ಮುಂಜಾಗ್ರತೆಯಾಗಿ ಎರಡು ಪಿಲ್ಲರ್‌ ನಡುವೆ ಹೊಸದಾಗಿ ಇನ್ನೂ ಎರಡು ಕೇಬಲ್‌ ಅಳವಡಿಸಲು ಅವಕಾಶವಿದೆ. ಆದ್ದರಿಂದ ಮೊದಲಿಗೆ 240 ಕೇಬಲ್‌ಗಳನ್ನು ಹೊಸದಾಗಿ ಅಳವಡಿಸಿ ಬಳಿಕ ಎಲ್ಲ ಬಗೆಯ ವಾಹನಗಳಿಗೆ ಮೇಲ್ಸೇತುವೆಯನ್ನು ಮುಕ್ತಗೊಳಿಸಲಾಗುವುದು. ಈ ಕಾರ್ಯ ಜ.14ರ ಹೊತ್ತಿಗೆ ಪೂರ್ಣಗೊಳ್ಳಲಿದೆ.

‘ಮೂರು ತಂಡಗಳು ಹೊಸ ಕೇಬಲ್‌ ಅಳವಡಿಕೆ ಕಾರ್ಯದಲ್ಲಿ ತೊಡಗಿವೆ. ಸಂಕ್ರಾಂತಿ ಬಳಿಕ ಮೇಲ್ಸೇತುವೆ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. 240 ಹೊಸ ಕೇಬಲ್‌ ಅಳವಡಿಕೆ ಮುಗಿದ ಬಳಿಕ 1200 ಕೇಬಲ್‌ ಅನ್ನೂ ಹಂತಹಂತವಾಗಿ ಬದಲಾಯಿಸಿ ಹೊಸ ಕೇಬಲ್‌ ಅಳವಡಿಸಲಾಗುವುದು. ಈ ಕಾರ್ಯಕ್ಕೆ ಒಂದೂವರೆ ವರ್ಷ ಕಾಲಾವಕಾಶ ಬೇಕಾಗಬಹುದು’ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ತುಮಕೂರು ರಸ್ತೆಯ 8ನೇ ಮೈಲಿ ಜಂಕ್ಷನ್‌ ಸಮೀಪ 102 ಮತ್ತು 103ನೇ ಪಿಲ್ಲರ್‌ ನಡುವಿನ 3 ಕೇಬಲ್‌ ಬಾಗಿದ್ದರಿಂದ ಡಿಸೆಂಬರ್‌ 2021ರಲ್ಲಿ ಈ ಮೇಲ್ಸೇತುವೆಯ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೊದಲು ನಿಷೇಧಿಸಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಪರಿಶೀಲನೆ ನಡೆಸಿ ಭಾರೀ ವಾಹನ(ಮಲ್ಟಿ ವ್ಹೀಲ್‌ ವೆಹಿಕಲ್ಸ್‌)ಗಳ ಸಂಚಾರದಿಂದ ಕೇಬಲ್‌ಗಳು ಬಾಗಿವೆ ಎಂದು ವರದಿ ನೀಡಿದ್ದರು.

ಬಳಿಕ 2022 ಫೆಬ್ರವರಿಯಲ್ಲಿ ಲಘು ವಾಹನಗಳಿಗೆ ಮಾತ್ರ ಈ ಮೇಲ್ಸೇತುವೆ ಮೇಲೆ ಸಂಚರಿಸಲು ಅವಕಾಶ ನೀಡಲಾಗಿತ್ತು. ನಂತರ ಹಗಲು ಸಮಯದಲ್ಲಿ ಮಾತ್ರ ಲಘು ವಾಹನಗಳು ಸಂಚಾರಕ್ಕೆ ಮುಕ್ತ ಮಾಡಲಾಗಿತ್ತು. ರಾಜ್ಯದ 20ಕ್ಕೂ ಅಧಿಕ ಜಿಲ್ಲೆಗಳನ್ನು ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುತ್ತದೆ.ಕ್ಯಾಪ್ಷನ್‌: ಜಾಲಹಳ್ಳಿ ಕ್ರಾಸ್‌ ಬಳಿ ಪೀಣ್ಯ ಫ್ಲೈಓವರ್‌ಗೆ ಹೊಸ ಕೇಬಲ್‌ ಅಳವಡಿಕೆ ಕಾರ್ಯ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಹಳದಿ ಮಾರ್ಗ ಮೆಟ್ರೋಗೆ ಆ.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ