ರಾಜಕಾರಣಿಗಳೂ ಕಲಿಯಬೇಕಿದೆ ಕೃಷ್ಣ ವಿದ್ಯೆ : ಕಠಿಣವೆನ್ನಿಸಿದರೂ ಅಪ್ರಿಯ ಸತ್ಯ ಪಾಲಿಸಬೇಕು

Published : Aug 19, 2025, 11:55 AM IST
Shashi Tharoor

ಸಾರಾಂಶ

ಶ್ರೀಕೃಷ್ಣ ಯಾವತ್ತೂ ನೇರವಾಗಿ ಯುದ್ಧ ಮಾಡಲಿಲ್ಲ. ಬದಲಾಗಿ ಅರ್ಜುನನ ಸಾರಥಿಯಾಗಿ ಕಾರ್ಯ ನಿರ್ವಹಿಸಿದ. ಕೃಷ್ಣನ ಈ ಪಾತ್ರವು ಯಾವುದೇ ವೈಯಕ್ತಿಕ ವೈಭವೀಕರಣವಿಲ್ಲದೆ ಹಿನ್ನೆಲೆಯಲ್ಲಿ ನಿಂತು, ಜ್ಞಾನ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವ ಅತ್ಯುತ್ತಮ ನಾಯಕನ ಪ್ರತೀಕ

ಶಶಿ ತರೂರ್‌,

ಕಾಂಗ್ರೆಸ್‌ ಸಂಸದ, ಮಾಜಿ ವಿದೇಶಾಂಗ ಸಚಿವ

ಧರ್ಮ(ನ್ಯಾಯಸಮ್ಮತ)ವೇ ಸರ್ವಶ್ರೇಷ್ಠ

ಶ್ರೀಕೃಷ್ಣನ ಜೀವನವು ಧರ್ಮ ಕಾರ್ಯ ಎತ್ತಿಹಿಡಿಯುವ ನಿರಂತರ ಹೋರಾಟವೇ ಆಗಿತ್ತು. ಆತ ಅಸಾಂಪ್ರದಾಯಿಕ ಅಥವಾ ಮೇಲ್ನೋಟಕ್ಕೆ ನೈತಿಕವೆಂದು ಗೋಚರಿಸದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ. ಆದರೆ ಆತನ ಅಂತಿಮ ಗುರಿ ಮಾತ್ರ ಧರ್ಮ ರಕ್ಷಣೆ ದುಷ್ಟ ಶಿಕ್ಷಣವಷ್ಟೇ ಆಗಿತ್ತು.

ಶ್ರೀಕೃಷ್ಣನಿಂದ ರಾಜಕಾರಣಿಗಳು ಕಲಿಯುವುದು ಸಾಕಷ್ಟಿದೆ. ರಾಜಕಾರಣಿಗಳು ವೈಯಕ್ತಿಕ ಲಾಭ, ಪಕ್ಷ ನಿಷ್ಠೆ, ಚುನಾವಣಾ ಗೆಲುವಿಗಿಂತ ದೇಶ ಮತ್ತು ಜನರ ಒಳಿತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೆಲವೊಮ್ಮೆ ಕಠಿಣವೆನಿಸಿದರೂ, ಜನಪ್ರಿಯವೆನಿಸದಿದ್ದರೂ ರಾಜಕಾರಣಿಗಳು ತೆಗೆದುಕೊಳ್ಳುವ ನಿರ್ಧಾರಗಳು ನೈತಿಕತೆ ಮತ್ತು ನ್ಯಾಯಕ್ಕೆ ಬದ್ಧವಾಗಿರಬೇಕು. ರಾಜಕಾರಣಿಗಳು ವೈಯಕ್ತಿಕ ಸಮಗ್ರತೆ ಕಾಯ್ದುಕೊಳ್ಳುವುದು ಯಾವತ್ತಿಗೂ ಅತ್ಯವಶ್ಯಕ.

ರಾಜತಾಂತ್ರಿಕ ಕಲೆ ಮತ್ತು ತಂತ್ರಗಾರಿಕೆಯ ಚಿಂತನೆ

ಶ್ರೀಕೃಷ್ಣ ಒಬ್ಬ ಅತ್ಯುತ್ತಮ ತಂತ್ರನಿಪುಣ ಹಾಗೂ ಉತ್ತಮ ರಾಜತಾಂತ್ರಿಕ. ಆತ ಮಹಾಭಾರತ ಯುದ್ಧವನ್ನು ಶಾಂತಿಯುತ ಮಾತುಕತೆ ಮೂಲಕ ತಡೆಯಲೆತ್ನಿಸಿದ. ಯಾವಾಗ ರಾಜತಾಂತ್ರಿಕ ಮಾರ್ಗ ಫಲ ನೀಡಲಿಲ್ಲವೋ ಆಗ ಪಾಂಡವರ ಜತೆ ನಿಂತು ಅತ್ಯುತ್ತಮ ಸೇನಾ ತಂತ್ರಗಾರಿಕೆಯ ಮಾರ್ಗದರ್ಶನ ನೀಡಿದ. ಯುಧಿಷ್ಟೀರ, ಭೀಮ, ಅರ್ಜುನ ಮತ್ತು ಇತರರಿಗೆ ಅವರ ಬಲ ಮತ್ತು ದೌರ್ಬಲ್ಯ ತೋರಿಸಿ ಸಲಹೆ-ಸೂಚನೆಗಳನ್ನು ನೀಡಿದ.

ಆಡಳಿತ ವಿಚಾರಕ್ಕೆ ಬಂದಾಗ ರಾಜಕಾರಣಿಗಳೂ ವ್ಯೂಹಾತ್ಮಕ ಚಿಂತನೆಗಳ ಪ್ರಾಮುಖ್ಯತೆಯೇನೆಂಬುದನ್ನು ಅರಿತುಕೊಳ್ಳಬೇಕು. ಇತರೆ ಪಕ್ಷಗಳು, ರಾಜ್ಯಗಳು ಮತ್ತು ರಾಷ್ಟ್ರಗಳ ಜತೆಗೆ ಕೌಶಲ್ಯಪೂರ್ಣ ಮಾತುಕತೆ, ದೇಶದ ಅಭಿವೃದ್ಧಿಗಾಗಿ ದೀರ್ಘಕಾಲೀನ ಯೋಜನೆಗಳನ್ನು ರೂಪಿಸುವುದೂ ಈ ವ್ಯೂಹಾತ್ಮಕ ಚಿಂತನೆಯ ಭಾಗವಾಗಿದೆ. ತನ್ನ ತಂಡ ಹಾಗೂ ವಿರೋಧಿಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿತುಕೊಳ್ಳುವುದನ್ನೂ ಇದು ಒಳಗೊಂಡಿರುತ್ತದೆ.

ಸಾರಥ್ಯದ ಪ್ರಾಮುಖ್ಯತೆ

ಶ್ರೀಕೃಷ್ಣ ಯಾವತ್ತೂ ನೇರವಾಗಿ ಯುದ್ಧ ಮಾಡಲಿಲ್ಲ. ಬದಲಾಗಿ ಅರ್ಜುನನ ಸಾರಥಿಯಾಗಿ ಕಾರ್ಯ ನಿರ್ವಹಿಸಿದ. ಕೃಷ್ಣನ ಈ ಪಾತ್ರವು ಯಾವುದೇ ವೈಯಕ್ತಿಕ ವೈಭವೀಕರಣವಿಲ್ಲದೆ ಹಿನ್ನೆಲೆಯಲ್ಲಿ ನಿಂತು, ಜ್ಞಾನ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವ ಅತ್ಯುತ್ತಮ ನಾಯಕನ ಪ್ರತೀಕವಾಗಿದೆ. ಶ್ರೀಕೃಷ್ಣ ತಂತ್ರನಿಪುಣ, ಮಾರ್ಗದರ್ಶಕನ ಜತೆಗೆ ಅರ್ಜುನನ ಪಾಲಿಗೆ ಭಾವನಾತ್ಮಕ ಆಧಾರವೂ ಆಗಿದ್ದ.

ನೈಜ ನಾಯಕ ತನ್ನ ತಂಡದ ಸದಸ್ಯರಿಗೆ ಸದಾ ಬೆಂಬಲವಾಗಿ ನಿಲ್ಲುವುದಷ್ಟೇ ಅಲ್ಲದೆ, ಅವರ ಯಶಸ್ಸಿಗೆ ನಿರಂತರ ಮಾರ್ಗದರ್ಶನ ನೀಡುತ್ತಾನೆ. ಇದಕ್ಕಾಗಿ ಅವರು ಎಲ್ಲಾ ಸಮಯದಲ್ಲೂ ಪ್ರಚಾರದಲ್ಲಿರಬೇಕೆಂದೇನೂ ಇಲ್ಲ. ಬದಲಾಗಿ ತಂಡವನ್ನು ಗುರಿಮುಟ್ಟಿಸುವ ಜವಾಬ್ದಾರಿ ಹೊತ್ತುಕೊಂಡು ಸದಾ ಕಾಲ ಬೆನ್ನಿಗೆ ನಿಲ್ಲುವ, ಮಾರ್ಗದರ್ಶನ ನೀಡುವವನಾಗಿರಬೇಕು. ಒಂದು ವೇಳೆ ಅವರು ತಮ್ಮ ಈ ಕಾರ್ಯದಲ್ಲಿ ಯಶಸ್ವಿಯಾದರೆ ಇದರ ಶ್ರೇಯ ನಾಯಕನೊಬ್ಬನಿಗೇ ಸೀಮಿತವಲ್ಲ, ಅದರಲ್ಲಿ ನಮ್ಮದೂ ಪಾಲಿದೆ ಎಂಬ ಭಾವನೆ ಬರುವಂತಾಗಬೇಕು. ಇದು ನೈಜ ನಾಯಕನ ಲಕ್ಷಣ.

ನಿಷ್ಕಾಮ ಕರ್ಮದ ತತ್ವ

ಭಗವದ್ಗೀತೆಯ ಮೂಲ ಸಾರವೇ ನಿಷ್ಕಾಮ ಕರ್ಮ ಅಥವಾ ಪ್ರತಿಫಲಾಪೇಕ್ಷೆಯಿಲ್ಲದೆ ಕರ್ತವ್ಯ ನಿರ್ವಹಿಸು ಎಂಬುದು. ಶ್ರೀಕೃಷ್ಣನು ಅರ್ಜುನನಿಗೆ ಆತನ ಗುರಿ ಕೇವಲ ಕ್ರಿಯೆ ಮೇಲಷ್ಟೇ ಇರಬೇಕು, ಆ ಕ್ರಿಯೆಯ ಫಲಾಫಲದ ಮೇಲಲ್ಲ(ಯಶಸ್ಸು, ವೈಫಲ್ಯ, ಹೊಗಳಿಕೆ, ಟೀಕೆ) ಎಂದು ಬೋಧನೆ ಮಾಡುತ್ತಾನೆ.

ರಾಜಕಾರಣಿಗಳು ಕೂಡ ಅಧಿಕಾರ ಲಾಲಸೆ, ಹೆಸರು ಅಥವಾ ಸಂಪತ್ತಿನ ಅಪೇಕ್ಷೆಯಿಲ್ಲದೆ ಜನರ ಕಲ್ಯಾಣಕ್ಕಾಗಿ ದುಡಿಯುವಂತಾಗಬೇಕು. ರಾಜಕಾರಣಿಗಳ ಪ್ರತಿಯೊಂದು ಕಾರ್ಯಕ್ಕೂ ಕರ್ತವ್ಯ ಪ್ರಜ್ಞೆ ಮತ್ತು ಸೇವಾ ಮನೋಭಾವ ಪ್ರೇರಣೆಯಾಗಬೇಕೇ ಹೊರತು ಪ್ರತಿಫಲ ಅಥವಾ ಆ ಕಾರ್ಯದಿಂದ ಸಿಗುವ ರಾಜಕೀಯ ಲಾಭ ಅಲ್ಲ. ಈ ರೀತಿಯ ಗುಣ ಸಾರ್ವಜನಿಕರ ಒಳಿತಿಗೆ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚಿನ ರಾಜಕೀಯ ನಾಯಕರು ದುರ್ದೈವವಶಾತ್‌ ವೈಯಕ್ತಿಕ ಲಾಭದಿಂದಷ್ಟೇ ಪ್ರೇರೇಪಿತರಾಗಿರುತ್ತಾರೆ. ಶ್ರೀಕೃಷ್ಣ ಇಂಥದ್ದಕ್ಕೆ ಯಾವತ್ತೂ ಅವಕಾಶ ನೀಡುತ್ತಿರಲಿಲ್ಲ.

ಮನುಷ್ಯರ ಸ್ವಭಾವ ಅರಿಯುವುದು

ಶ್ರೀಕೃಷ್ಣನು ಮಾನವ ಮನೋವಿಜ್ಞಾನ ಹಾಗೂ ಸತ್ವ(ಒಳ್ಳೆಯತನ), ರಾಜಸ(ಚೈತನ್ಯ) ಮತ್ತು ತಾಮಸ(ಅಜ್ಞಾನ) ಈ ಮೂರು ಗುಣಗಳ ಕುರಿತು ಆಳವಾದ ಅರಿವು ಹೊಂದಿದ್ದ. ನೀತಿವಂತ ಯುದಿಷ್ಠೀರನಿಂದ ಹಿಡಿದು ಅಹಂಕಾರಿ ದುರ್ಯೋಧನನವರೆಗೆ ವಿಭಿನ್ನ ರೀತಿಯ ಜನರ ಜತೆಗಿನ ಸಂವಹನಕ್ಕೆ ಈ ಜ್ಞಾನ ಬಳಸಿಕೊಂಡ.

ಒಬ್ಬ ಒಳ್ಳೆಯ ನಾಯಕನಾದವನಿಗೆ ಮಾನವ ಸ್ವಭಾವದ ಸೂಕ್ಷ್ಮ ಅರಿವಿರಬೇಕು. ಈ ಗುಣ ವೈವಿಧ್ಯ ಮತ್ತು ಪರಿಣಾಮಕಾರಿ ತಂಡದ ನಿರ್ಮಾಣ, ಮತದಾರರ ಅಪೇಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವಿರೋಧಗಳನ್ನು ಎದುರಿಸಲು ಅನುಕೂಲ ಮಾಡಿಕೊಡುತ್ತದೆ. ಸಾಮಾಜಿಕ ಸಮಸ್ಯೆಯೊಂದರ ಮೂಲವನ್ನು ಗುರುತಿಸಲು ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಲೂ ಇದು ನೆರವು ನೀಡುತ್ತದೆ. ಒಬ್ಬ ಒಳ್ಳೆಯ ನೋಡುಗ ಒಳ್ಳೆಯ ಕೇಳುಗನೂ ಆಗಿರಬೇಕು. ಇಂಥ ರಾಜಕಾರಣಿಗಳು ನಮ್ಮಲ್ಲಿ ಅತ್ಯಪರೂಪ.

ಲೋಕಸಂಗ್ರಹದ ಪರಿಕಲ್ಪನೆ(ವಿಶ್ವ ಕಲ್ಯಾಣ)

ಬೃಂದಾವನದಲ್ಲಿನ ಗೋಪಾಲಕನಾಗಿ ಅಥವಾ ದ್ವಾರಕೆಯ ರಾಜನಾಗಿ ಶ್ರೀಕೃಷ್ಣನಿಗೆ ಸಮಾಜದ ಕಲ್ಯಾಣವೇ ಮುಖ್ಯಗುರಿಯಾಗಿತ್ತು. ಭಗವದ್ಗೀತೆಯಲ್ಲಿ ಆತನ ಬೋಧನೆಗಳು ನಾಯಕನೊಬ್ಬ ಸಾಮಾಜಿಕ ಸ್ವಾಸ್ಥ್ಯಅಥವಾ ವ್ಯವಸ್ಥೆಯನನ್ನು ಕಾಪಾಡುವ ಮತ್ತು ಜನರಿಗೆ ಒಳಿತಿನ ಕರ್ತವ್ಯವನ್ನು ನಿರ್ವಹಿಸುವುದು ಹೇಗೆಂಬುದನ್ನು ಹೇಳುತ್ತದೆ.

ಅದೇ ರೀತಿ ರಾಜಕಾರಣಿಗಳ ಪ್ರಾಥಮಿಕ ಕರ್ತವ್ಯ ಸಮಾಜದ ಎಲ್ಲಾ ವರ್ಗದ ಕಲ್ಯಾಣವೇ ಹೊರತು ತನ್ನ ಬೆಂಬಲಿಗರು ಮತ್ತು ಮತದಾರ ಉದ್ಧಾರವಷ್ಟೇ ಅಲ್ಲ. ಎಲ್ಲರಿಗೂ ಪ್ರಗತಿಗೆ ಅವಕಾಶ ನೀಡುವ ಸಮಸಮಾಜ ನಿರ್ಮಿಸುವುದು, ಸಾಮಾಜಿಕ ನ್ಯಾಯ ಕಾಯ್ದುಕೊಳ್ಳುವುದು ರಾಜಕಾರಣದ ಮೂಲಗುರಿಯಾಗಿರಬೇಕು.

ಅಹಂಕಾರ ಮತ್ತು ಅಧರ್ಮದ ಅಪಾಯ

ಕೃಷ್ಣನ ಜೀವನಗಾಥೆಯು ಅಹಂಕಾರಿಗಳು ಮತ್ತು ಅಧರ್ಮದ ಹಾದಿಯಲ್ಲಿ ಸಾಗುವ ದುರ್ಯೋಧನ ಮತ್ತು ಆತನ ಮಿತ್ರರ ಪತನದ ಹಾದಿಯನ್ನು ಎಚ್ಚರಿಸುವ ಕಥೆಯಾಗಿದೆ. ಮದ ಮತ್ತು ಧರ್ಮದ ಅವಹೇಳನವು ಅಂತಿಮವಾಗಿ ಅವರನ್ನು ಪತನದ ಹಾದಿಗೆ ಕರೆದೊಯ್ದಿತು.

ಇದು ರಾಜಕಾರಣಿಗಳಿಗೂ ಪಾಠ. ರಾಜಕಾರಣಿಗಳು ಯಾವತ್ತೂ ವಿನಮ್ರರಾಗಿರಬೇಕು, ನೆಲದ ಗುಣ ಹೊಂದಿರಬೇಕು. ದುರಹಂಕಾರ, ಅಧಿಕಾರದ ದುರ್ಬಳಕೆ ಮತ್ತು ಕಾನೂನು ನಿಯಮಗಳ ಮೇಲಿನ ಗೌರವದ ಕೊರತೆಯು ಖಂಡಿತವಾಗಿಯೂ ನೈತಿಕವಾಗಿ ಮತ್ತು ರಾಜಕೀಯವಾಗಿ ನಾಯಕನ ಪತನಕ್ಕೆ ಕಾರಣವಾಗುತ್ತದೆ.

PREV
Read more Articles on

Recommended Stories

ಆದಾಯ ತೆರಿಗೆ : ಬೇಗ ರಿಫಂಡ್‌ ಪಡೆಯುವ ಬಗೆ ಹೇಗೆ!
ಮಧುಮೇಹ, ಹೃದಯರೋಗ, ಅಧಿಕ ರಕ್ತದೊತ್ತಡ ನಿರ್ವಹಣೆ ಹೇಗೆ : ವಿಶೇಷ ಲೇಖನ