ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ಪ್ರಮೋದಾದೇವಿ ಒಡೆಯರ್

KannadaprabhaNewsNetwork |  
Published : Oct 06, 2023, 01:11 AM IST
೫ಕೆಎಂಎನ್‌ಡಿ-೧ಮಂಡ್ಯದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶ್ರೀರಂಗಪಟ್ಟಣ ದಸರಾ ಲಾಂಛನವನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಿಡುಗಡೆಗೊಳಿಸಿದರು. ಶಾಸಕರಾದ ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಇದ್ದರು. | Kannada Prabha

ಸಾರಾಂಶ

ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ಪ್ರಮೋದಾದೇವಿ ಒಡೆಯರ್, ಮೈಸೂರು ರಾಜವಂಶಸ್ಥರಿಂದ ಮೊದಲ ಬಾರಿಗೆ ಚಾಲನೆ

- ಮೈಸೂರು ರಾಜವಂಶಸ್ಥರಿಂದ ಮೊದಲ ಬಾರಿಗೆ ಚಾಲನೆ - ಉಸ್ತುವಾರಿ ಸಚಿವರಿಂದ ಪಾರಂಪರಿಕ ದಸರಾ ಲಾಂಛನ ಬಿಡುಗಡೆ ಕನ್ನಡಪ್ರಭ ವಾರ್ತೆ ಮಂಡ್ಯ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ಈ ಬಾರಿ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಆಹ್ವಾನಿಸಲಾಗಿದೆ. ಇದುವರೆಗೆ ಮುತ್ಸದ್ಧಿ ರಾಜಕಾರಣಿಗಳು, ಸಾಹಿತಿಗಳು, ನಾಡಿಗೆ ಅನುಪಮ ಸೇವೆ ಸಲ್ಲಿಸಿದವರಿಂದ ದಸರಾ ಉದ್ಘಾಟನೆ ಮಾಡಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಮೈಸೂರು ರಾಜವಂಶಸ್ಥರಿಂದ ದಸರಾಗೆ ಚಾಲನೆ ದೊರಕಿಸುತ್ತಿರುವುದು ವಿಶೇಷವಾಗಿದೆ. ಜಿಲ್ಲಾ ಪಂಚಾಯ್ತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಶ್ರೀರಂಗಪಟ್ಟಣ ದಸರಾ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು. ಮೈಸೂರು ರಾಜವಂಶಸ್ಥರು ಸಾಂಸ್ಕೃತಿಕ ದಸರಾಗೆ ವೈಭವ ಹಾಗೂ ಮೆರುಗನ್ನು ತಂದುಕೊಟ್ಟವರು. ಅವರಿಂದ ಶ್ರೀರಂಗಪಟ್ಟಣ ದಸರಾಗೆ ಎಂದೂ ಚಾಲನೆ ಕೊಡಿಸಿರಲಿಲ್ಲ. ಈ ನಾಡಿಗೆ ಮೈಸೂರು ಅರಸರ ಕೊಡುಗೆ ಅವಿಸ್ಮರಣೀಯ. ಹಾಗಾಗಿ ರಾಜವಂಶಸ್ಥ ಕುಟುಂಬದವರಿಂದಲೇ ದಸರಾಗೆ ಚಾಲನೆ ಕೊಡಿಸುವ ಆಶಯದೊಂದಿಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಆಹ್ವಾನ ನೀಡಿದ್ದೇವೆ. ಅವರು ಒಪ್ಪಿಗೆ ಸೂಚಿಸಿದ್ದು, ಅ.೧೬ರ ಮಧ್ಯಾಹ್ನ ೩ ಗಂಟೆಗೆ ಶ್ರೀರಂಗಪಟ್ಟಣ ದಸರಾಗೆ ಚಾಲನೆ ನೀಡಲಿದ್ದಾರೆ ಎಂದರು. ರಾಜ್ಯದಲ್ಲಿ ಬರಪರಿಸ್ಥಿತಿ ನೆಲೆಯೂರಿರುವುದರಿಂದ ಶ್ರೀರಂಗಪಟ್ಟಣ ದಸರಾವನ್ನು ಅದ್ಧೂರಿಯಾಗಿ ಆಚರಿಸದೆ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ದಸರಾ ನಮ್ಮ ಸಾಂಸ್ಕೃತಿಕ ಪರಂಪರೆ. ಆ ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಆದ ಕಾರಣ ಸರಳವಾಗಿ ದಸರಾ ಆಚರಿಸಲಾಗುವುದು. ಮೈಸೂರು ರಾಜವಂಶಸ್ಥರು ದಸರಾ ಉದ್ಘಾಟನೆ ಮಾಡುವುದರಿಂದ ಉತ್ತಮ ಮಳೆಯಾಗಬಹುದೆಂಬ ನಂಬಿಕೆ ನಮ್ಮದಾಗಿದೆ. ಅಂತಹ ಸನ್ನಿವೇಶ ಸೃಷ್ಟಿಯಾಗಲಿ ಎಂದು ಆಶಿಸಿದರು. ಈಗಾಗಲೇ ರಾಜ್ಯದ ೧೯೪ ತಾಲೂಕುಗಳಲ್ಲಿ ಬರಗಾಲ ಘೋಷಿಸಲಾಗಿದೆ. ಕೇಂದ್ರದಿಂದ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದೆ. ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದ ಬಳಿಕ ಅಧ್ಯಯನ ಕಾರ್ಯ ಕೈಗೊಂಡು ಕೇಂದ್ರಕ್ಕೆ ವರದಿ ಸಲ್ಲಿಸಲಿದೆ ಎಂದು ಸಚಿವರು ತಿಳಿಸಿದರು. ಕಾವೇರಿ ನೀರಿನ ವಿಚಾರದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ, ನೀರು ನಿರ್ವಹಣಾ ಪ್ರಾಧಿಕಾರ, ಸುಪ್ರೀಂ ಕೋರ್ಟ್‌ನಲ್ಲೂ ನಮ್ಮ ಭಾಗದ ರೈತರ ರಕ್ಷಣೆಗಾಗಿ ಹೋರಾಟ ಮಾಡಿದ್ದೇವೆ. ವಿರೋಧಪಕ್ಷಗಳು ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿವೆ. ಅವರು ಏನೇ ಮಾಡಿದರೂ ಜನಸಾಮಾನ್ಯರು ಹಾಗೂ ರೈತರ ಸಮಸ್ಯೆ ಬಗೆಹರಿಸುವುದು ನಮ್ಮ ಕರ್ತವ್ಯ ಎಂದರು. ನೀರಿಗಾಗಿ ರೈತರು ಹಾಗೂ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಪ್ರತಿಭಟನೆ ನಡೆಸುವುದು ಅವರ ಹಕ್ಕು. ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ. ಅದಕ್ಕೆ ನಮ್ಮ ಯಾವುದೇ ಆಕ್ಷೇಪಣೆ ಇಲ್ಲ. ನಾವು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಇದ್ದರು.

PREV

Recommended Stories

ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಅತ್ಯಂತ ಮನಮೋಹಕ ಬೈಕ್‌ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 650