ಪರೀಕ್ಷೆ ಬರೆಯದೆ ಷಾಶಿಬ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork | Published : Oct 6, 2023 1:10 AM

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ವರ‍್ಲಕೊಂಡ ಬಳಿಯಿರುವ ಷಾಷಿಬ್ ಏರೋನಾಟಿಕಲ್ ಇಂಜನಿಯರಿಂಗ್ ಕಾಲೇಜು ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳು ಪಾಠಪ್ರವಚನ ಮಾಡದೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಪರೀಕ್ಷೆ ಬಹಿಷ್ಕರಿಸಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.
ಏರೋನಾಟಿಕಲ್ ಇಂಜನಿಯರಿಂಗ್ ಪರೀಕ್ಷೆಗೆ ವಿದ್ಯಾರ್ಥಿಗಳ ಬಾಯ್ಕಾಟ್ ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ವರ‍್ಲಕೊಂಡ ಬಳಿಯಿರುವ ಷಾಷಿಬ್ ಏರೋನಾಟಿಕಲ್ ಇಂಜನಿಯರಿಂಗ್ ಕಾಲೇಜು ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳು ಪಾಠಪ್ರವಚನ ಮಾಡದೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಪರೀಕ್ಷೆ ಬಹಿಷ್ಕರಿಸಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿರುವ ಷಾಶಿಬ್ ಕಾಲೇಜು ಎರಡು ಕ್ಯಾಂಪಸ್ ಹೊಂದಿದೆ. ಪ್ರಧಾನ ಕಚೇರಿ ಬೆಂಗಳೂರು ವಿದ್ಯಾನಗರದಲ್ಲಿ ಇದ್ದರೆ ಮತ್ತೊಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ವರ‍್ಲಕೊಂಡ ಬಳಿ ಇದೆ. ಇಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ಕೆಲ ಸೆಮಿಸ್ಟರ್ ಬೆಟ್ಟಹಲಸೂರು ಸಮೀಪದ ವಿದ್ಯಾನಗರದಲ್ಲಿ ನಡೆದರೆ, ಕೆಲ ಸೆಮಿಸ್ಟರ್ ಇಲ್ಲಿ ನಡೆಯುತ್ತದೆ. ಇನ್ನೂ ಕೆಲವೊಮ್ಮೆ ಪರೀಕ್ಷೆಗಾಗಿ ವಿದ್ಯಾರ್ಥಿಗಳನ್ನು ಚಿಕ್ಕಬಳ್ಳಾಪುರ ಕ್ಯಾಂಪಸ್‌ಗೆ ಕರೆದುಕೊಂಡು ಬರುತ್ತಾರೆ. ಪಾಠಗಳನ್ನೇ ಮಾಡದೆ ಏಕಾಏಕಿ ಪರೀಕ್ಷೆ ಬರೆಯಿರಿ ಎಂದರೆ ಹೇಗೆ ಬರೆಯುವುದು ಹೇಳಿ? ಎಂದು ಅಳಲು ತೋಡಿಕೊಂಡರು. ಈ ಬಗ್ಗೆ ಪ್ರಾಂಶುಪಾಲ ಸಿದ್ಧನಗೌಡ ಅವರನ್ನು ಮಾತನಾಡಿಸಿದರೆ ಅವರು ಬೇರೆಯದೇ ಕಥೆ ಹೇಳುತ್ತಾರೆ. ನಮ್ಮದು ಹೆಸರಾಂತ ಕಾಲೇಜು ಆಗಿದ್ದು, ಈ ಹಿಂದೆ ಸಾಕಷ್ಟು ರ‍್ಯಾಂಕ್ ಬಂದಿದೆ. ವಿದ್ಯಾರ್ಥಿಗಳ ಆರೋಪದಲ್ಲಿ ಹುರುಳಿಲ್ಲ. ಕೊರೋನಾ ನಂತರದಲ್ಲಿ ದಾಖಲಾತಿ ಸಂಪೂರ್ಣ ಕುಸಿದಿದ್ದು ಕಾಲೇಜು ನಡೆಸಿಕೊಂಡು ಹೋಗುವುದೇ ದೊಡ್ಡ ಸಾಹಸವಾಗಿದೆ. ನಮ್ಮಲ್ಲಿ ಎರಡು ಕ್ಯಾಂಪಸ್ ಇದ್ದು ಎರಡೂ ಕಡೆ ಸಾವಿರಾರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಎರಡನೇ ಸೆಮಿಸ್ಟರ್‌ನಲ್ಲಿ ಕೆಲ ವಿಷಯದಲ್ಲಿ ಉಪನ್ಯಾಸಕರ ಕಡೆಯಿಂದ ತೊಂದರೆ ಆಗಿದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರೂ ಪರೀಕ್ಷೆ ಬರೆಯದೆ ಪ್ರತಿಭಟನೆಗೆ ಇಳಿದಿದ್ದಾರೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ. ವಿದ್ಯಾರ್ಥಿ ಹೇಮಂತ್ ಮಾತನಾಡಿ, ನಮಗೆ ದಾಖಲಾತಿ ಸಮಯದಲ್ಲಿ ಕಾಲೇಜಿನ ಬಗ್ಗೆ, ಕ್ಯಾಂಪಸ್ ಬಗ್ಗೆ, ಪ್ಲೇಸ್‌ಮೆಂಟ್ ಬಗ್ಗೆ ಹಸಿಸುಳ್ಳು ಹೇಳಿದ್ದಾರೆ. ನಮ್ಮನ್ನು ದಾಖಲಾತಿ ಮಾಡಿಕೊಂಡವರ ಮುಖದರ್ಶನವನ್ನು ಈವರೆಗೂ ಮಾಡಿಸಿಲ್ಲ. ಪ್ರತಿ ವರ್ಷಕ್ಕೆ ಎರಡು-ಮೂರು ಲಕ್ಷ ಹಣ ಪಡೆಯುವ ಸಂಸ್ಥೆಗಳು ಅದಕ್ಕೆ ತಕ್ಕಂತೆ ಬೋಧನೆ, ಪ್ರಯೋಗಾಲಯ, ಪರೀಕ್ಷೆ ನಡೆಸಬೇಕಲ್ಲ, ಪಾಠವನ್ನೇ ಮಾಡದೆ ಹಾಲ್ ಟಿಕೆಟ್ ಕೊಟ್ಟು ಪರೀಕ್ಷೆ ಬರೆಯಿರಿ ಎಂದರೆ ಹೇಗೆ ಬರೆಯಲಾಗುತ್ತದೆ ಎಂದು ಮುಂದೆ ತಮ್ಮ ಅಸಹಾಯಕತೆ ತೋಡಿಕೊಂಡರು.

Share this article