ಕನ್ನಡಪ್ರಭ ವಾರ್ತೆ ಬೆಂಗಳೂರು
ಸಿಲಿಕಾನ್ ಸಿಟಿಯ ಐಟಿ ಹಬ್ ಆಗಿರುವ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಚಾಲಕ ರಹಿತ ರೈಲು ಓಡಾಡಲಿರುವ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಆ.10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದು, ಅದೇ ದಿನ ₹15,611 ಕೋಟಿ ಮೊತ್ತದ 44.65 ಕಿ.ಮೀ. ಉದ್ದದ ಮೆಟ್ರೋ ಮೂರನೇ ಹಂತದ ಯೋಜನೆಗೂ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್‌ಲಾಲ್ ಖಟ್ಟರ್ ‘ಎಕ್ಸ್’ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಶಂಕುಸ್ಥಾಪನೆ ನೆರವೇರಿಸಲಿರುವ 3ನೇ ಹಂತದ ‘ಕಿತ್ತಳೆ’ ಬಣ್ಣದ ಮಾರ್ಗ ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ ಸಂಪರ್ಕಿಸಲಿದೆ. ಪ್ರಧಾನಿ ಮೋದಿ ಉದ್ಘಾಟಿಸಲಿರುವ ಹಳದಿ ಮಾರ್ಗ ₹5,056.99 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ 19.15 ಕಿ.ಮೀ. ಸಂಪರ್ಕಿಸಲಿದೆ. 16 ನಿಲ್ದಾಣ ಹೊಂದಿರುವ ಇದು ಸದ್ಯ 3 ರೈಲುಗಳ ಮೂಲಕ ವಾಣಿಜ್ಯ ಸಂಚಾರ ಆರಂಭಿಸಲು ಸಜ್ಜಾಗಿದೆ.
3.5 ಲಕ್ಷ ಮಂದಿ ಸಂಚಾರ:ಸದ್ಯ ಆರಂಭದ ಒಂದೆರಡು ತಿಂಗಳು 20-25 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುವ ಸಾಧ್ಯತೆಯಿದೆ. ನಿತ್ಯ ಸುಮಾರು 25 ರಿಂದ 30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆಯಿದೆ. 2026ರ ಮಾರ್ಚ್ ವೇಳೆಗೆ 12 ರೈಲು ಸೇರ್ಪಡೆ ಆಗಲಿದ್ದು, ಒಟ್ಟು 15 ರೈಲುಗಳು ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಟ್ರಿಪ್‌ಗಳ ಸಂಖ್ಯೆ ಕೂಡ ಹೆಚ್ಚಾಗಲಿದ್ದು, ನಿತ್ಯ 3.5 ಲಕ್ಷ ಮಂದಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ.
ಯಾವ್ಯಾವ ನಿಲ್ದಾಣಗಳು?:ಹಳದಿ ಮಾರ್ಗವು ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲುಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್.ವಿ.ರಸ್ತೆ ನಿಲ್ದಾಣಗಳನ್ನು ಹೊಂದಿದೆ.
ಹೆಚ್ಚು ಪ್ರಯೋಜನ:ಹಳದಿ ಮಾರ್ಗ ಮೆಟ್ರೋ ರೈಲು ಸಂಚಾರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ಭಾರೀ ಸಂಚಾರ ದಟ್ಟಣೆ ನಿವಾರಣೆ ನಿರೀಕ್ಷಿಸಲಾಗಿದೆ. ಎಚ್‌ಎಸ್‌ಆರ್ ಲೇಔಟ್-ಐಟಿ ಉದ್ಯೋಗಿಗಳು ಮತ್ತು ನಿವಾಸಿಗಳು ಆಕ್ಸ್‌ಫರ್ಡ್ ಕಾಲೇಜು ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲ. ಮುಖ್ಯವಾಗಿ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ನೌಕರರಿಗೆ ಹೆಚ್ಚು ಪ್ರಯೋಜನ ಆಗಲಿದೆ. ಜಯದೇವ, ಇನ್ಫೋಸಿಸ್, ಬೊಮ್ಮಸಂದ್ರ-ಕೈಗಾರಿಕಾ ಮತ್ತು ವಸತಿ ಪ್ರದೇಶದ ಕೊನೆ ನಿಲ್ದಾಣದ ಸುತ್ತಮುತ್ತಲಿನವರಿಗೆ ಅನುಕೂಲ ಆಗಲಿದೆ.
ಹಳದಿ ಮಾರ್ಗದ ವಿಶೇಷಗಳು:ಡಬ್ಬಲ್ ಡೆಕ್ಕರ್:
ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಹಳದಿ ಮಾರ್ಗದಲ್ಲಿ ನಿರ್ಮಾಣ ಆಗಿದೆ. ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ (ಸಿಎಸ್‌ಬಿ) ಡಬ್ಬಲ್ ಡೆಕ್ಕರ್ (3.3 ಕಿ.ಮೀ.) ನಿರ್ಮಿಸಲಾಗಿದೆ. ಡಬ್ಬಲ್ ಡೆಕ್ಕರ್ ಫ್ಲೈಓವರ್‌ನ ಮೇಲ್ಭಾಗದಲ್ಲಿ ನಮ್ಮ ಮೆಟ್ರೋ ರೈಲು ಓಡಾಡಲಿದೆ. ಕೆಳಭಾಗ ವಾಹನಗಳ ಓಡಾಟಕ್ಕೆ ಮೀಸಲಾಗಿದೆ. ಕೆಳರಸ್ತೆಯಿಂದ ಡಬ್ಬಲ್ ಡೆಕ್ಕರ್‌ನ ಮೊದಲ ಫ್ಲೈಓವರ್ 8 ಮೀ. ಎತ್ತರದಲ್ಲಿದ್ದರೆ, ಮೆಟ್ರೋ ವಯಡಕ್ಟ್ 16 ಮೀ. ಎತ್ತರದಲ್ಲಿದೆ.ಅತೀ ಎತ್ತದ ಜಯದೇವ ಇಂಟರ್‌ಚೇಂಜ್:
ಜಯದೇವ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣದಲ್ಲಿ ಐದು ಹಂತದ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಿದೆ. ಐದನೇ ಹಂತ ನೆಲಮಟ್ಟದಿಂದ 29 ಮೀಟರ್ ಎತ್ತರದಲ್ಲಿದೆ. ಇದು ದೇಶದ ಅತಿ ಎತ್ತರದ ಮೆಟ್ರೋ ನಿಲ್ದಾಣ ಎನ್ನಿಸಿಕೊಳ್ಳಲಿದೆ. ಇಂಟರ್‌ಚೇಂಜ್ ನಿಲ್ದಾಣದಲ್ಲಿ ಅಂಡರ್‌ಪಾಸ್, ನೆಲಮಟ್ಟದಲ್ಲಿ ಸಾಮಾನ್ಯ ವಾಹನ ಸಂಚಾರ, ಅದರ ಮೇಲೆ ರಾಗಿಗುಡ್ಡ-ಸಿಲ್ಕ್ ಬೋರ್ಡ್ ಮೇಲ್ಸೇತುವೆ, ಅದರ ಮೇಲೆ ಹಳದಿ ಮಾರ್ಗ ನಿರ್ಮಾಣವಾಗಿದೆ. ಇದರ ಮೇಲೆ ಗುಲಾಬಿ ಮಾರ್ಗ ತಲೆ ಎತ್ತಲಿದ್ದು, 2026ರ ಡಿಸೆಂಬರ್‌ಗೆ ಈ ಮಾರ್ಗ ಉದ್ಘಾಟನೆ ಆಗಲಿದೆ.ಚಾಲಕ ರಹಿತ ರೈಲು:
ಈವರೆಗೆ ನಮ್ಮ ಮೆಟ್ರೋದಲ್ಲಿ ರೈಲುಗಳು ಡಿಟಿಜಿ (ಡಿಸ್ಟೆನ್ಸ್ ಟು ಗೋ ) ಸಿಗ್ನಲಿಂಗ್ ತಂತ್ರಜ್ಞಾನದಲ್ಲಿ ಸಂಚರಿಸುತ್ತಿವೆ. ಹಳದಿ ಮಾರ್ಗದಲ್ಲಿ ಚಾಲಕ ರಹಿತ ರೈಲಿಗಾಗಿ ಸಿಬಿಟಿಸಿ ( ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್) ತಂತ್ರಜ್ಞಾನ ಬಳಸಲಾಗಿದೆ. ಚೀನಾದಿಂದ ಚಾಲಕ ರಹಿತ 1 ಪ್ರೊಟೋಟೈಪ್(ಮಾದರಿ) ರೈಲು ಬಂದಿದೆ. ಅದೇ ಮಾದರಿ ನೋಡಿಕೊಂಡು ಕೋಲ್ಕತಾದ ತೀತಾಘಡ್ ರೈಲ್ ಸಿಸ್ಟಂ ಲಿ. 14 ರೈಲುಗಳನ್ನು ಈ ಮಾರ್ಗಕ್ಕೆ ಒದಗಿಸುತ್ತಿದೆ. ಇದು ಚಾಲಕ ರಹಿತ ರೈಲಾದರೂ ಅರಂಭದಲ್ಲಿ ಚಾಲಕ ಸಹಿತವಾಗಿ ಸಂಚರಿಸಿ ಬಳಿಕ ಚಾಲಕರಹಿತವಾಗಿ ರೈಲು ಓಡಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.ವಿಳಂಬಕ್ಕೆ ಸಾರ್ಜಜನಿಕರ ಬೇಸರ:
ಹಳದಿ ಮಾರ್ಗ ಎರಡು ವರ್ಷದ ಹಿಂದೆಯೇ ಜನಸಂಚಾರಕ್ಕೆ ಮುಕ್ತವಾಗಬೇಕಿತ್ತು. ಕೋವಿಡ್‌ನಿಂದ ಸಿವಿಲ್ ಕಾಮಗಾರಿಗಳು ವಿಳಂಬವಾಗಿತ್ತು. ಕಳೆದ ವರ್ಷ ಸಿವಿಲ್ ಕಾಮಗಾರಿ ಮುಗಿದರೂ ರೈಲುಗಳ ಕೊರತೆ ಹೆಚ್ಚಾಗಿ ಕಾಡಿತು. ಸಾರ್ವಜನಿಕರು ಈ ಮಾರ್ಗ ಆರಂಭಿಸುವಂತೆ ಬಿಎಂಆರ್‌ಸಿಎಲ್ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದರು. ಈಗಲೂ ಕೇವಲ ಮೂರು ರೈಲುಗಳ ಮೂಲಕ ವಾಣಿಜ್ಯ ಸಂಚಾರ ಆರಂಭಿಸಲಾಗುತ್ತಿದೆ. ಆಗಸ್ಟ್ ಅಂತ್ಯದೊಳಗೆ ನಾಲ್ಕನೇ ರೈಲು ಸೇರ್ಪಡೆ ಆಗುವ ನಿರೀಕ್ಷೆಯಿದೆ.ಹಳದಿ ಮಾರ್ಗದಲ್ಲಿವೆ ಮೂರು ಇಂಟರ್‌ಚೇಂಜ್
ನಿಲ್ದಾಣಮಾರ್ಗಎಲ್ಲಿಂದ - ಎಲ್ಲಿಗೆಆರ್.ವಿ. ರೋಡ್‌ಹಸಿರು ಮಾರ್ಗರೇಷ್ಮೆ ಸಂಸ್ಥೆ - ಮಾದಾವರ
ಜಯದೇವ ಆಸ್ಪತ್ರೆಗುಲಾಬಿ ಮಾರ್ಗನಾಗಾವರ - ಕಾಳೇನ ಅಗ್ರಹಾರಸಿಲ್ಕ್ ಬೋರ್ಡ್‌ನೀಲಿ ಮಾರ್ಗ (2ಎ)ಸಿಲ್ಕ್‌ಬೋರ್ಡ್ - ಕೆಆರ್ ಪುರಂ
ಪ್ರಧಾನಿ ನರೇಂದ್ರ ಮೋದಿ ಅವರು ಆ.10ರಂದು ಬೆಂಗಳೂರಿನ ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಲಿದ್ದಾರೆ. ಜೊತೆಗೆ 44.65 ಕಿಮೀ ಉದ್ದದ ಮೆಟ್ರೋ ಮೂರನೇ ಹಂತದ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸುವರು.-ಮನೋಹರ್‌ಲಾಲ್ ಖಟ್ಟರ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ