ಸಿಸಿಆರ್‌ಟಿ ಸ್ಕಾಲರ್‌ಶಿಪ್‌ಗೆ ಪುತ್ತೂರು ನೃತ್ಯೋಪಾಸನಾ ಕಲಾ ಅಕಾಡೆಮಿ ವಿದ್ಯಾರ್ಥಿ ತೇಜಸ್ವಿರಾಜ್‌ ಆಯ್ಕೆ

Published : May 25, 2025, 09:11 AM IST
Bharathanatyam

ಸಾರಾಂಶ

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳ ಯುವ ಕಲಾವಿದರಿಗೆ ನೀಡುವ ಸಿಸಿಆರ್‌ಟಿ  2022-23ನೇ ಸಾಲಿನ ಸ್ಕಾಲರ್‌ಶಿಪ್‌ಗೆ ಭರತನಾಟ್ಯ ವಿಭಾಗದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಇದರ ವಿದ್ಯಾರ್ಥಿ ತೇಜಸ್ವಿರಾಜ್‌ ಆಯ್ಕೆ 

 ಪುತ್ತೂರು:  ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳ ಯುವ ಕಲಾವಿದರಿಗೆ ನೀಡುವ ಸಿಸಿಆರ್‌ಟಿ (ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ) 2022-23ನೇ ಸಾಲಿನ ಸ್ಕಾಲರ್‌ಶಿಪ್‌ಗೆ ಭರತನಾಟ್ಯ ವಿಭಾಗದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಇದರ ವಿದ್ಯಾರ್ಥಿ ತೇಜಸ್ವಿರಾಜ್‌ ಆಯ್ಕೆಯಾಗಿದ್ದಾರೆ. 

ಕರ್ನಾಟಕ ಕರಾವಳಿಯಲ್ಲಿ ಭರತನಾಟ್ಯ ವಿಭಾಗದಲ್ಲಿ ಸಿಸಿಆರ್‌ಟಿ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಇವರಾಗಿದ್ದಾರೆ. ಕಳೆದ 10 ವರ್ಷಗಳಿಂದ ಭರತನಾಟ್ಯ ಶಾಸ್ತ್ರೀಯ ನೃತ್ಯ ಅಭ್ಯಾಸ ಮಾಡುತ್ತಿರುವ ತೇಜಸ್ವಿರಾಜ್‌, 2018ರಲ್ಲಿ ಜೂನಿಯರ್‌, 2021ರಲ್ಲಿ ಸೀನಿಯರ್‌ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಈ ವರ್ಷ ವಿದ್ವತ್‌ ಪೂರ್ವ ಪರೀಕ್ಷೆ ಬರೆಯುತ್ತಿದ್ದಾರೆ. 

ತೇಜಸ್ವಿರಾಜ್‌ ಅವರು ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ. ಈ ಕಲಾ ಅಕಾಡೆಮಿಯ ನೃತ್ಯ ಕಲಾವಿದರಾದ ತೇಜಸ್ವಿರಾಜ್‌, ದಕ್ಷಿಣ ಕನ್ನಡ, ಕೇರಳ ಹಾಗೂ ಹೊರ ರಾಜ್ಯಗಳಲ್ಲೂ ಕಲಾ ತಂಡದೊಂದಿಗೆ ಹಲವು ನೃತ್ಯ ಪ್ರದರ್ಶನ ನೀಡಿದ್ದಾರೆ. 

ಕಡಬ ತಾಲೂಕಿನ ಮರ್ದಾಳದ ಕೋಲಂತಾಡಿ ನಿವಾಸಿಯಾದ ತೇಜಸ್ವಿರಾಜ್‌ ಅವರ ತಂದೆ ದಿವಂಗತ ಶಾಂತರಾಮ ಗೌಡ, ತಾಯಿ ಲಕ್ಷ್ಮಿ. ಮರ್ದಾಳ ತುಂಬ್ಯ ಗುಡ್‌ಶೆಫರ್ಡ್‌ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ, ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಪ್ರೌಢ, ರಾಮಕುಂಜದ ಶ್ರೀರಾಮಕುಂಜೇಶ್ವರ ಪಿಯು ಕಾಲೇಜಿನಲ್ಲಿ ಪಿಯುಸಿ(ಶೇ.93), ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ವಾಣಿಜ್ಯ ಪದವಿ(ಶೇ.91) ವ್ಯಾಸಂಗ ಪೂರೈಸಿದ್ದಾರೆ. ಪ್ರಸಕ್ತ ಸಿಎ ಆರ್ಟಿಕಲ್‌ಶಿಪ್‌ನ್ನು ಪುತ್ತೂರಿನಲ್ಲಿ ಸಿಎ ಅರವಿಂದಕೃಷ್ಣ ಅವರಲ್ಲಿ ಮಾಡುತ್ತಿದ್ದು, ಅಂತಿಮ ಸಿಎ ಕೂಡ ಕಲಿಯುತ್ತಿದ್ದಾರೆ. 

ಭಾರತ ಸರ್ಕಾರದ ಸಾಂಸ್ಕೃತಿಕ ಸಚಿವಾಲಯ ವಿವಿಧ ಸಾಂಸ್ಕೃತಿಕ ಕ್ಷೇತ್ರದ ಯುವ ಕಲಾವಿದರನ್ನು ಪ್ರೋತ್ಸಾಹಿಸಲು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿ, ಸಂದರ್ಶನ ನಡೆಸಿ ಸ್ಕಾಲರ್‌ಶಿಪ್‌ಗೆ ಆಯ್ಕೆ ನಡೆಸುತ್ತದೆ. 2022-23ನೇ ಸಾಲಿನ ಆಯ್ಕೆ ಪ್ರಕ್ರಿಯೆ ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದು, ಈಗ ಫಲಿತಾಂಶ ಪ್ರಕಟಿಸಲಾಗಿದೆ. ಕರ್ನಾಟಕದಲ್ಲಿ ಭರತನಾಟ್ಯದಲ್ಲಿ ಒಟ್ಟು ಏಳು ಮಂದಿ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಿದ್ದು, ಬೆಂಗಳೂರಲ್ಲಿ ಐವರು, ಶಿವಮೊಗ್ಗದಲ್ಲಿ ಓರ್ವ ಮತ್ತು ದ.ಕ.ದಲ್ಲಿ ತೇಜಸ್ವಿರಾಜ್‌ ಸೇರಿದ್ದಾರೆ.

PREV
Read more Articles on

Recommended Stories

ಸೆ. 18ರಿಂದ ಎರಡು ದಿನ ಬೆಂಗಳೂರು ಮಾಹೆಯಲ್ಲಿ ಅಲೆ ಸಾಹಿತ್ಯ ಉತ್ಸವ
ರಸ್ತೆ ಗುಂಡಿಗಳ ಆದ್ಯತೆ ಮೇರೆಗೆ ಮುಚ್ಚಿ : ಅಧಿಕಾರಿಗಳಿಗೆ ಮಹೇಶ್ವರ್ ರಾವ್ ಸೂಚನೆ