ರೈಲೊಂದರ ರಿಯಲ್‌ ಸ್ಟೋರಿ

KannadaprabhaNewsNetwork |  
Published : Jul 19, 2026, 03:00 AM ISTUpdated : Jul 19, 2026, 11:38 AM IST
Train

ಸಾರಾಂಶ

ರೈಲು ಪ್ರಯಾಣ ಅಂದರೆ ಅದೊಂದು ಎಮೋಶನ್‌. ನೆನಪುಗಳ ಮೆರವಣಿಗೆ. ಆದರೆ ರೈಲೊಂದರ ನೆನಪಿನ ಲಹರಿ ಹೇಗಿರಬಹುದು.. ಆ ಕಲ್ಪನೆಯಲ್ಲಿ ಅರಳಿದ ಬರಹವಿದು. ಇಲ್ಲಿ ರೈಲೊಂದು ತನ್ನ ಕಥೆಯನ್ನು ಲಘು ಧಾಟಿಯಲ್ಲಿ ನಿರೂಪಿಸಿದೆ.

- ಅನಂತೇಶ ಕಾರಂತ

ನಾನೊಂದು ಬಳುಕುವ ಬಳ್ಳಿ. ನಾನು ಸೀಟಿ ಹೊಡೆಯುವುದನ್ನು ನೋಡಿ ಅಭಿಮಾನಿಗಳು ನಲಿಯುತ್ತಾರೆ. ಬ್ರಿಟನ್‌ನಲ್ಲಿ ಹುಟ್ಟಿದ ನನ್ನನ್ನು ಭಾರತಕ್ಕೆ ಕರೆತಂದರು. ಇಲ್ಲಿ ನಾನು ಎಷ್ಟರಮಟ್ಟಿಗೆ ಸ್ಥಳೀಯಳಾಗಿದ್ದೇನೆಂದರೆ, ನನ್ನ ತವರು ನೆನಪೇ ಆಗುವುದಿಲ್ಲ. ಅಷ್ಟು ಚೆನ್ನಾಗಿ ನನ್ನನ್ನು ನೋಡಿಕೊಳ್ತಾರೆ. ಎಲ್ಲರಿಗೂ ವಯಸ್ಸು ಕಳೆದಂತೆ ಮುಪ್ಪಾದರೆ, ನಾನು ತದ್ವಿರುದ್ಧ. ಇಲ್ಲಿ ವರ್ಷ ಕಳೆದಂತೆ ಚಿರ ಯುವತಿಯಾಗುತ್ತಿರುವೆ. ನನ್ನ ಆಕಾರ, ಧ್ವನಿ ಎಲ್ಲವೂ ಬದಲಾಗುತ್ತಿದೆ. ಭಾರತದ ಹೀರೋಯಿನ್‌ಗಳಿಗಿಂತಲೂ ನನಗೆ ಅಭಿಮಾನಿಗಳು ಹೆಚ್ಚು. ಅದರಲ್ಲಿಯೂ ಚಿಕ್ಕ ಮಕ್ಕಳೇ ಹೆಚ್ಚು. ಅಂದಹಾಗೆ ನಾನು ಚುಕುಬುಕು ರೈಲು. ಮುಂದಿದೆ ನನ್ನ ಕಥೆ.

ಬ್ರಿಟನ್‌ ನನ್ನ ತವರು ಮನೆ

ಭಾರತದಲ್ಲಿ ಇಷ್ಟು ಜನಪ್ರಿಯವಾಗಿರುವ ನಾನು ಭಾರತದ ಮೂಲನಿವಾಸಿ ಏನಲ್ಲ. ನನ್ನ ತವರು ಮನೆ ಬ್ರಿಟನ್‌. ಆಂಗ್ಲರೇ ನನ್ನ ತಂದೆ ತಾಯಿ. 1804ರ ಫೆಬ್ರವರಿ 21ರಂದು ಬ್ರಿಟನ್‌ನ ವೇಲ್ಸ್‌ನಲ್ಲಿ ನನ್ನ ಜನನ. ನಾನು ಮನುಷ್ಯರಂತಲ್ವಲ್ಲ. ಹಾಗಾಗಿ ಮೊದಲ ದಿನವೇ ಕೆಲಸ ಶುರು ಮಾಡಿಬಿಟ್ಟೆ. ನಿಮಗೆಲ್ಲ ಬಾಲ್ಯದಲ್ಲಿ ತಾಯಿಯ ಹಾಲು, ಸೆರ್ಲ್ಯಾಕ್‌, ಮಣ್ಣಿ ಕೊಟ್ಟು ಪೋಷಕರು ಸಾಕಿದ್ರೆ, ನನಗೆ ಹುಟ್ಟಿನಿಂದಲೇ ಕಲ್ಲಿದ್ದಲು ತಿನ್ನಿಸಿದ್ರು. ಒಂದು ರುಚಿಯಿಲ್ಲ. ಚಂದವಿಲ್ಲ. ಛೇ. ಅದೂ ಒಂದು ಊಟವೇ... ‘ನಿನ್ನ ಬಾಯಿಗೆ ಬೆಂಕಿ ಹಾಕ’ ಎಂದು ಕರ್ನಾಟಕದಲ್ಲಿ ಹೇಳುವಂತೆ ನನಗೆ ಆಗಲೇ ಬಾಯಿಗೆ ಬೆಂಕಿಯೂ ಹಾಕಿದ್ರು. ನನ್ನ ಹೊಟ್ಟೆಯಲ್ಲಿ ನೀರು ಕಾಯಿಸಿ ಬಾಯಿಂದ ಹೊಗೆ ಬಂದಾಗ ಅದನ್ನು ಬಳಸಿ ನನ್ನನ್ನು ಓಡಿಸಲು ಶುರು ಮಾಡಿದ್ರು ನೋಡಿ. ಊಟಕ್ಕೆ ಕಲ್ಲಿದ್ದಲ್ಲು, ರುಚಿಗೆ ಉಪ್ಪಿನಕಾಯಿಯಂತೆ ಬೆಂಕಿ. ಇದಿಷ್ಟೇ ತಿಂದು ತಿಂದು ಜೀವನ ಬಂಡಿ ಸಾಗಿಸುತ್ತಿದ್ದೆ.

1853ರಲ್ಲಿ ಭಾರತದ ಪುಣ್ಯಭೂಮಿಗೆ ಆಗಮನ

ವಿಶ್ವದಲ್ಲಿ ಆ ಹೊತ್ತಿಗಾಗಲೇ ಹತ್ತಾರು ದೇಶಗಳಲ್ಲಿ ಕೆಲಸ ಮಾಡಿದ್ದೆ. ಅದೇ ರೀತಿ ಬ್ರಿಟೀಷರು, ಅಂದರೆ ನನ್ನ ಹೆತ್ತವರು, ‘ಭಾರತದಲ್ಲಿಯೂ ನಿನ್ನ ಅವಶ್ಯಕತೆ ಇದೆ ಬಾ’ ಎಂದು 1853ರಲ್ಲಿ ಕರೆತಂದರು. ಅಲ್ಲಿಂದ ನೋಡಿದರೆ ನಾನು ಬ್ರಿಟೀಷರವಳು ಅನ್ನೋದನ್ನೇ ಮರೆಸಿಬಿಟ್ಟರು ಪ್ರೀತಿಯ ಭಾರತೀಯರು. 1864ರಲ್ಲಿ ಮೊದಲ ಬಾರಿಗೆ ನಾನು ತಮಿಳುನಾಡಿನ ಜೋಲಾರಪೇಟೆಯಿಂದ ಬೆಂಗಳೂರಿಗೂ ಪಾದಾರ್ಪಣೆ ಮಾಡಿ, ಇಡೀ ರಾಜ್ಯವನ್ನೇ ಆಕ್ರಮಿಸಿಕೊಂಡೆ.

ಬಿಸಿನೀರ ಬಾಲೆ

ನೀವು ಅನಂತ್‌ನಾಗ್‌ ಅವರ ಜನಪ್ರಿಯ ಸಿನೆಮಾ ‘ಬೆಳದಿಂಗಳ ಬಾಲೆ’ ನೋಡಿರುತ್ತೀರಿ. ಆದರೆ ‘ಬಿಸಿನೀರ ಬಾಲೆ’ ಕೇಳಿದ್ದೀರಾ.. ಅದು ನನಗೆ ಅನ್ವರ್ಥನಾಮ. ಏಕೆ ಈ ರೀತಿಯ ವಿಚಿತ್ರ ಹೆಸರು ಗೊತ್ತೆ. ಹಿಂದೆ ನಾನು ಉಗಿಬಂಡಿಯಾಗಿದ್ದಾಗ, ನನ್ನಲ್ಲಿರುವ ಬಿಸಿ ನೀರಿಗೆ ಎಲ್ಲಿಲ್ಲದ ಬೇಡಿಕೆ. ನಾನು ದೂರದಲ್ಲಿಯೇ ಸೀಟಿ ಊದಿದೆನೆಂದರೆ, ಜನ ಎದ್ನೋ-ಬಿದ್ನೋ ಎಂದು ಬಕೆಟ್‌, ಹಂಡೆ, ಕೊಡಪಾನಗಳನ್ನು ಹಿಡಿದು ತರುತ್ತಿದ್ದರು. ಬಿಸಿ ನೀರು ಹೊತ್ತುಕೊಂಡು, ಮನೆಯಲ್ಲಿ ಸ್ನಾನ, ಪಾನಗಳಿಗೆ ಬಳಸುತ್ತಿದ್ದರು. ಜೊತೆಗೆ ನನ್ನ ಕೆಳಗೆ ಬಿದ್ದ ನನ್ನ ಆಹಾರವನ್ನು ಹೆಕ್ಕಿ ತಮ್ಮ ಮನೆಗೂ ಒಯ್ಯುತ್ತಿದ್ದರು. ಇದಿಷ್ಟೇ ಅಲ್ಲ. ರೈಲಿನಲ್ಲಿ ದೂರಯಾನ ಮಾಡುವವರೂ ಸಹ ಬಿಸಿ ನೀರು ಸಂಗ್ರಹಿಸಿ ‘ಸ್ಪಾಂಜ್‌’ ಮೂಲಕ ಸ್ನಾನ ಮಾಡ್ತಿದ್ರು. ಹೀಗೆ ನನ್ನ ಬಿಸಿನೀರು ಸಹ ಉಪಯೋಗ ಆಗ್ತಿದ್ದ ಸಮಯದಲ್ಲಿ ನನಗೆ ‘ಬಿಸಿನೀರ ಬಾಲೆ’ ಎಂಬ ನಾಮಾಂಕಿತವೂ ದಕ್ಕಿತು. ತದನಂತರ ‘ನೀನು ಕಲ್ಲಿದ್ದಲು ತಿಂದಿದ್ದು ಸಾಕು, ಇನ್ನು ಡೀಸೆಲ್‌ ಮಾತ್ರ ಕುಡಿ’ ಎಂದು ಸರ್ಕಾರ ನನ್ನ ಆಕಾರವನ್ನೇ ಬದಲಿಸಿತು.

ಡೀಸೆಲ್‌ ಕುಡಿಯಿರಿ, ಶಕ್ತಿಯುತರಾಗಿರಿ

ಆಗ ಕಲ್ಲಿದ್ದಲು ತಿಂದೇ ಕಟ್ಟುಮಸ್ತಾಗಿ ಬಿಸಿಲು, ಮಳೆಗೆ, ಬಿರುಗಾಳಿ, ಚಳಿಗೆ ಅಂಜದೆ ಸಾರಾಸಗಟಾಗಿ ಉದ್ದುದ್ದ ರೈಲುಗಳನ್ನು ಎಳೆದು ತಂದು ನಿಲ್ಲಿಸುತ್ತಿದ್ದೆ. ಕ್ರಮೇಣ ನನ್ನ ಆರೋಗ್ಯವೂ ಕೊಂಚ ಹದಗೆಡಲು ಶುರುವಾಗುತ್ತಿದ್ದಂತೆ 1954ರಲ್ಲಿ ಅಂದಿನ ಸರ್ಕಾರ ‘ಕಲ್ಲಿದ್ದಲು ತಿಂದಿದ್ದು ಸಾಕು, ಡೀಸೆಲ್‌ ಕುಡಿ, ನಿನ್ನ ಆರೋಗ್ಯ ಚೇತರಿಸಿಕೊಳ್ಳುತ್ತೆ’ ಎಂದು ನನ್ನ ದೇಹದಲ್ಲಿ ಭಾರಿ ಬದಲಾವಣೆಗಳನ್ನು ಮಾಡಿಸಿ ಡೀಸೆಲ್‌ ಕುಡಿಸೇ ಬಿಟ್ಟರು.

ವಾಹ್‌.....ಡೀಸೆಲ್‌ನಲ್ಲಿ ಸಿಕ್ಕ ಶಕ್ತಿ ಅಪರಿಮಿತ. ಅದೇನು ಆನಂದ, ಅದೇನು ಹುಮ್ಮಸ್ಸು, ಅಬ್ಬಾಬ್ಬಾ... ಅಂಥ ಶಕ್ತಿ ವರ್ಷಗಟ್ಟಲೆ ಕಲ್ಲಿದ್ದಲು ತಿಂದಾಗ ಸಿಕ್ಕಿರಲಿಲ್ಲ. ಅಲ್ಲಿಂದ ನನ್ನ ವ್ಯಾಪ್ತಿ, ನನ್ನ ಮಾರ್ಗ ಎಲ್ಲವೂ ದೊಡ್ಡದಾಗಿ, ಅವಕಾಶಗಳ ಬಾಗಿಲೇ ತೆರೆಯಿತು. ಮೀಟರ್‌ಗೇಜ್‌ನಿಂದ ನ್ಯಾರೋ ಗೇಜ್‌ಗೆ ಬಂದೆ, ನ್ಯಾರೋ ಗೇಜ್‌ನಿಂದ ಸ್ಟ್ಯಾಂಡರ್ಡ್‌ ಗೇಜ್‌, ಮತ್ತಲ್ಲಿಂದ ನೋಡಿ ಇಲ್ಲಿವರೆಗೂ ಬ್ರಾಡ್‌ಗೇಜ್‌ನಲ್ಲಿ ಕುಣಿದಾಡ್ತಿದ್ದೇನೆ.

ಅಸಲಿ ಡಬಲ್‌ ಎಂಜಿನ್‌ ಸರ್ಕಾರ ನನ್ನದು

ಚುನಾವಣೆ ಬಂದರೆ ರಾಜಕೀಯ ಪಕ್ಷಗಳು ‘ಡಬಲ್‌ ಎಂಜಿನ್‌ ಸರ್ಕಾರ’ ಎಂದು ಬೊಬ್ಬೆ ಹೊಡೆಯುತ್ತವೆ. ಯಾವ ಆಧಾರದ ಮೇಲೆ ಈ ಪಕ್ಷಗಳು ಹಾಗೆನ್ನುತ್ತವೆ ನನಗೆ ತಿಳಿದಿಲ್ಲ. ಅಸಲಿಗೆ ನಾನು ಮತ್ತು ನನ್ನ ಸೋದರಿ ಒಟ್ಟೊಟ್ಟಿಗೆ ಉದ್ದದ ಹೆಣಭಾರದ ರೈಲುಗಳನ್ನು ಎಳೆದು ಸರ್ಕಾರದ ಬೊಕ್ಕಸ ತುಂಬಿಸುತ್ತಿದ್ದೆವು. ಆದರೆ ಈ ಪಕ್ಷಗಳಿಗೆ ಕಿಂಚಿತ್ತಾದರೂ ಕರುಣೆಯಿದೆಯೇ, ನಮ್ಮ ಹೆಸರನ್ನು ಇಟ್ಟುಕೊಳ್ಳುವ ಮುನ್ನ ಕನಿಷ್ಠ ಕನಿಕರವಾದರೂ ತೋರಿಸುವುದು ಬೇಡವೇ? ಮತದಾರರೇ ದಯವಿಟ್ಟು ಮರುಳಾಗಬೇಡಿ. ನಿಜವಾದ ಡಬಲ್‌ ಎಂಜಿನ್‌ ಸರ್ಕಾರ ನಮ್ಮದು. ನಾವು ಮತಬೇಡಿಕೆಗೆ ಇಳಿಯುವುದಿಲ್ಲ.

ಕರೆಂಟ್‌ ಶಾಕ್‌ಗೂ ಸೈ, ಹೈಡ್ರೋಜನ್‌ಗೂ ಜೈ

ಬದಲಾವಣೆ ಜಗದ ನಿಯಮ. ನಾನೂ ಸಹ ಬದಲಾವಣೆಗೆ ಒಗ್ಗಿಕೊಳ್ತಿದ್ದೇನೆ. ನಿಮಗೆ ಗೊತ್ತಾ, ವಯಸ್ಸು ಆಗುತ್ತಿದ್ದಂತೆ ನಾನು ಇನ್ನಷ್ಟು ಸಣ್ಣವಳಾಗ್ತಿದ್ದೇನೆ. ಡೀಸೆಲ್‌ಗೆ ಬೆಲೆ ಹೆಚ್ಚಾಗ್ತಿದ್ದಂತೆ ಸರ್ಕಾರ, ‘ನೀನಿನ್ನು, ಡೀಸೆಲ್‌ ಕುಡಿಯುವುದು ಕಡಿಮೆ ಮಾಡಿ, ಕರೆಂಟ್‌ ಶಾಕ್‌ ತೆಗೆದುಕೋ’ ಎಂದು 1925ರ ಫೆ.3ಕ್ಕೆ ಎಲೆಕ್ಟ್ರಿಕ್‌ ಶಾಕ್‌ ಕೊಟ್ರು. ಅಂದರೆ ಸ್ವಿಜರ್ಲೆಂಡ್‌ನಿಂದ ತಂತ್ರಜ್ಞಾನ ತರಿಸಿ ನನ್ನನ್ನು ಪರಿಪೂರ್ಣವಾಗಿ ಬದಲಾಯಿಸ್ಬಿಟ್ರು. ಪ್ರಸ್ತುತ ಶೇ.99ರಷ್ಟು ವಿದ್ಯುದ್ದೀಕರಣಗೊಂಡಿದೆ. ನನ್ನ ತಲೆ ಮೇಲೆ ಕರೆಂಟ್‌ ವೈರ್‌ ಎಳೆದು ನನಗೊಂದು ‘ಕೋಡು’ ತಗಲು ಹಾಕಿ ಓಡಿಸ್ತಿದ್ದಾರೆ. ಇದರಿಂದ ನನ್ನ ಮಾಲೀಕರಿಗೆ ಭಾರೀ ಪ್ರಮಾಣದಲ್ಲಿ ಹಣ ಉಳಿಸುತ್ತಿದ್ದೇನೆ ಎಂಬ ತೃಪ್ತಿ ನನ್ನಲ್ಲಿದೆ.

ಅದರ ಜೊತೆಗೆ ಹೈಡ್ರೋಜನ್‌ ರೈಲು ಸಹ ಜುಲೈ 17ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಇದು ನನ್ನ 4ನೇ ಅವತಾರ. ನಾನು ಹೊಗೆ ಉಗುಳುವುದಿಲ್ಲ. ಇನ್ನೇನಿದ್ರು ನೀರು ಬಿಡ್ತಾ ಹೋಗ್ತೇನೆ.

*ಅಭಿಮಾನಿಗಳ ಪ್ರೀತಿ

ಚಿತ್ರನಟರು, ರಾಜಕಾರಣಿಗಳಿಗೆ ಅಭಿಮಾನಿಗಳ ಸಂಘ ಸಾಮಾನ್ಯ. ನನಗೂ ಸಂಘವಿದೆ, ನನ್ನ ಪ್ರೀತಿಸುವವರು ಸದಾ ಹಿಂಬಾಲಿಸುತ್ತಾರೆ ಎಂಬುದು ನನಗೆ ಖುಷಿ. ನನ್ನ ಅಭಿಮಾನಿಗಳು ಯೂಟ್ಯೂಬ್‌ ಇನ್‌ಸ್ಟಾಗ್ರಾಂಗಳಲ್ಲಿ ನನ್ನ ಚಲನವಲನಗಳನ್ನು ಸೆರೆ ಹಿಡಿದು ಹಂಚಿಕೊಂಡು, ಪ್ರೀತಿ ಹರಡುತ್ತಾರೆ. ನಾನು ಹೋಗುವಾಗ ಬರುವ ‘ಡಗ್‌ಡಗ್‌ ಟಕ್‌ಟಕ್‌’ ಸದ್ದು, ಎಷ್ಟೋ ಮನಸುಗಳನ್ನು ಕದ್ದಿದೆ. ಇನ್ನು ಎಂಜಿನ್‌ ಚಾಲು ಆಗುವ ಸದ್ದಿದೆ ಇದು ಅಸಲಿ ರೈಲು ಅಭಿಮಾನಿಯ ನಾಡಗೀತೆ ಎಂದರೆ ತಪ್ಪಾಗದು. ಸಂಗೀತ ಶಾರದೆಯನ್ನೇ ಅಭಿಮಾನಿಗಳು ನನ್ನಲ್ಲಿ ನೋಡುತ್ತಾರೆ. ಅಷ್ಟು ಪ್ರೀತಿ. ಇನ್ನೊಂದೆಡೆ ಮಳೆಗಾಲದಲ್ಲಿ ಕರಾವಳಿ, ಶಿರಾಡಿ ಘಾಟಿ, ದೂದ್‌ ಸಾಗರ, ಲೋನಾವಾಲದಂತಹ ಸ್ಥಳಗಳಲ್ಲಿ ನನ್ನ ಸಂಚಾರ ‘ಹಸಿರೆಲೆಗಳ ರಾಶಿಯಲ್ಲಿ ಇರುವ ಹಾವಿನಂತೆ’ .

ನನ್ನ ಕರ್ವ್‌ ಸಕತ್‌ ಹಾಟ್‌

ಯುವತಿಯರು, ಹೀರೋಯಿನ್‌ಗಳ ಥಳುಕು, ಬಳುಕಿನ ಕರ್ವ್‌ಗಳನ್ನು ನೋಡಿ ಯುವಕರು ಮನಸೋಲುವುದು ತಲತಲಾಂತರಗಳಿಂದಲೂ ನಡೆಯುತ್ತಾ ಬಂದಿದೆ. ಆದರೆ ನನ್ನ ಕರ್ವ್‌ ಇದಕ್ಕಿಂತ ಹೆಚ್ಚು ಆಕರ್ಷಕವೆಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ದೊಡ್ಡ ದೊಡ್ಡ ತಿರುವುಗಳಲ್ಲಿ ನಾನು ಮತ್ತು ನನ್ನ ಬೋಗಿಗಳು ಹೋಗುತ್ತಿದ್ದರೆ ಇದೆಯಲ್ಲ. ವಾಹ್‌ ಅದೆಂತಹ ಕರ್ವ್‌, ಅಭಿಮಾನಿಗಳು ಫೋನ್‌, ಕ್ಯಾಮೆರಾ ಹಿಡಿದು ಕಿಟಕಿ, ಬಾಗಿಲುಗಳಲ್ಲೇ ನಿಂತುಬಿಡುತ್ತಾರೆ. ನನ್ನ ಕರ್ವ್‌ ಕಂಡು ಯುವತಿಯರಿಗೆ ಅಸೂಯೆ. ಇದಕ್ಕೇ ನನಗೆ ಅಭಿಮಾನಿಗಳು ಹೆಚ್ಚು.

ಕಲ್ಲು ಹೊಡೆಯಬೇಡಿ, ಕಸ ಬಿಸಾಡಬೇಡಿ

ಕೆಲ ವಿಕೃತ ಮನೋಭಾವದವರು ನನ್ನ ಸೌಂದರ್ಯ, ಏಳ್ಗೆಯನ್ನು ಸಹಿಸಲಾಗದೆ, ಕಲ್ಲು, ಕಬ್ಬಿಣದ ರಾಡುಗಳನ್ನು ನನ್ನತ್ತ ತೂರಿ ನನಗೆ ನೋವುಂಟು ಮಾಡುತ್ತಿದ್ದಾರೆ. ನನ್ನ ಮಾರ್ಗದಲ್ಲಿ ಕಲ್ಲು, ತಡೆಗಳನ್ನು ಹಾಕಿ ನನ್ನನ್ನು ಬೀಳಿಸಲು ಯತ್ನಿಸುತ್ತಾರೆ. ಎಷ್ಟೋ ಬಾರಿ ನಾನು ಬಿದ್ದು, ಹಲವರು ನನ್ನಿಂದಾಗಿ ಅಸುನೀಗಿದ್ದಾರೆ ಎಂಬ ನೋವು ನನ್ನ ಮನಸ್ಸಿನಲ್ಲಿ ಅಳಿಸಲಾಗದಂತಾಗಿದೆ.

ಇನ್ನೊಂದಷ್ಟು ಜನರು ಬೀಡ, ಗುಟ್ಕಾ, ಎಂಜಲುಗಳನ್ನು ನನ್ನ ಮೇಲೆ ಉಗಿದು ವಿಕಾರಗೊಳಿಸುತ್ತಿದ್ದಾರೆ. ಕಸವನ್ನು ನನ್ನ ಹಳಿಗಳ ಮೇಲೆ ಬಿಸಾಡಿ ದುರ್ನಾತ ಎಬ್ಬಿಸುತ್ತಿದ್ದಾರೆ. ನನ್ನ ಮನೆಯನ್ನು (ರೈಲ್ವೇ ಸ್ಟೇಷನ್‌) ಗಲೀಜು ಮಾಡಿ ನನ್ನ ಸಹಾಯಕರಿಗೆ ತೊಂದರೆ ಕೊಡುತ್ತಾರೆ. ಇಷ್ಟೆಲ್ಲವನ್ನು ಹೇಗೆ ಸಹಿಸಲಿ ನೀವೇ ಹೇಳಿ.

ವಂದೇ ಭಾರತ್‌, ರಾಜಧಾನಿ, ಶತಾಬ್ದಿಗಳಂತಹ ನನ್ನ ಉನ್ನತ ರೈಲುಗಳಲ್ಲಿಯೂ ಹೊಲಸು ಮನಸ್ಥಿತಿಯನ್ನು ತೋರಿಸುತ್ತಾರೆ. ಇನ್ನಾದರೂ ಈ ಮನಸ್ಥಿತಿ ಬದಲಿಸಿ ನನ್ನನ್ನು ನಿಮ್ಮ ಮಗಳಂತೆ ಕಂಡು ಸ್ವಚ್ಛವಾಗಿಟ್ಟುಕೊಳ್ಳಿ ಎಂಬುದೇ ನನ್ನ ಮನವಿ.ರೈಲೆಂಬ ನಾನು ಕೇವಲ ಒಂದು ಸಾರಿಗೆ ಮಾಧ್ಯಮವಷ್ಟೇ ಅಲ್ಲ. ನಾನೊಂದು ಭಾವನೆ, ನನ್ನನ್ನು ನಂಬಿ ಸಾವಿರಾರು ಜನ ದಿನಂಪ್ರತಿ ಅನ್ನ ತಿನ್ನುತ್ತಿದ್ದಾರೆ. ಎಷ್ಟೋ ಮಕ್ಕಳು ನನ್ನನ್ನು ಕಂಡು ಕುಣಿದು ಆನಂದ ಪಡುತ್ತಾರೆ. ಈ ಎಲ್ಲ ಭಾವನೆಗಳಿಗೂ ನಾನು ಚಿರಋಣಿ. ನಿಮ್ಮ ಪ್ರೀತಿ ಹೀಗೆ ನನ್ನ ಮೇಲಿರಲಿ. ಇದಿಷ್ಟಿತ್ತು ನೋಡಿ ನನ್ನ ಕಹಾನಿ.. ಮರೆಯದಿರಿ ನಾ ನಿಮ್ಮ ದೊರೆಸಾನಿ.

PREV
Read more Articles on

Recommended Stories

ಏರ್‌ಟೆಲ್‌ ಪೋಸ್ಟ್‌ಪೇಯ್ಡ್‌ ಗ್ರಾಹಕರಿಗೆ ಆ್ಯಪಲ್‌ ಬಂಪರ್‌ ಆಫರ್‌ : ಐಕ್ಲೌಡ್‌+, ಆ್ಯಪಲ್‌ ಟಿವಿ, ಆರ್ಕೇಡ್‌ ಉಚಿತ
ಯುವಕರಲ್ಲಿ ಹೆಚ್ಚುತ್ತಿರುವ ಸ್ಟ್ರೋಕ್ ಬಗ್ಗೆ ತುರ್ತು ಗಮನ ಹರಿಸಲು ಸರ್ಕಾರಕ್ಕೆ ಪತ್ರ